ಶನಿವಾರ, ಮೇ 28, 2022
28 °C

ಜಿಲ್ಲಾ ಜೈನ ಸಮಾವೇಶ ನಾಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: ಜಿಲ್ಲಾ ಜೈನ ಎರಡನೇ ಬೃಹತ್ ಸಮಾವೇಶ, ಜೈನ ಸಮುದಾಯ ಭವನ ಮತ್ತು ಜೈನ ವಿದ್ಯಾರ್ಥಿ ನಿಲಯ ಶಂಕುಸ್ಥಾಪನೆ ಕಾರ್ಯಕ್ರಮ ಜೂ. 3ರಂದು ನಗರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಉತ್ತರ ಕರ್ನಾಟಕ ಜೈನ ಸಂಘದ ಉಪಾಧ್ಯಕ್ಷ ಬಿ.ಎ. ಪಾಟೀಲ ತಿಳಿಸಿದರು.ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಮಧ್ಯಾಹ್ಮ 1.30ಕ್ಕೆ ಇಲ್ಲಿನ ಶಿವಬಸವೇಶ್ವರ ಕಲ್ಯಾಣ ಮಂಟಪದಲ್ಲಿ ನಡೆಯುವ ಕಾರ್ಯಕ್ರಮವನ್ನು ಸಚಿವ ಸಿ.ಎಂ. ಉದಾಸಿ ಉದ್ಘಾಟಿಸಲಿದ್ದಾರೆ. ಸಚಿವ ಬಸವರಾಜ ಬೊಮ್ಮಾಯಿ ಸಮುದಾಯ ಭವನದ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಶಾಸಕ ಡಿ. ಸುಧಾಕರ ಹಾಗೂ ಸಂಸದ ಶಿವಕುಮಾರ ಉದಾಸಿ ವಿದ್ಯಾರ್ಥಿನಿಲಯದ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ  ಎಂದರು.ಕಾರ್ಯಕ್ದರಮದ ಸಾನ್ನಿಧ್ಯವನ್ನು ಅಮೃತಸೇನ ಮಹಾರಾಜರು, ಪುಣ್ಯಸಾಗರ ಮಹಾರಾಜರು, ವೀರಮತಿ ಮಾತಾಜಿ, ವರೂರು ನವಗ್ರಹ ತೀರ್ಥ ಕ್ಷೇತ್ರದ ಧರ್ಮಸೇನ್ ಭಟ್ಟಾರಕ ಸ್ವಾಮೀಜಿ, ಹುಕ್ಕೇರಿಮಠದ ಸದಾಶಿವ ಶ್ರೀಗಳು ವಹಿಸಲಿದ್ದಾರೆ ಎಂದ ಅವರು, ಶಾಸಕರಾದ ನೆಹರೂ ಓಲೇಕಾರ, ಶ್ರೀನಿವಾಸ ಮಾನೆ, ಸುರೇಶಗೌಡ ಪಾಟೀಲ, ಜಿ.ಶಿವಣ್ಣ, ಬಿ.ಸಿ. ಪಾಟೀಲ, ಮಾಜಿ ಸಚಿವ ಬಸವರಾಜ ಶಿವಣ್ಣನವರ, ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಪಿ.ಎಸ್. ಧರಣೆಪ್ಪನವರ, ಕರ್ನಾಟಕ ಜೈನ ಅಸೋಸಿಯೇಶನ್ ಕಾರ್ಯದರ್ಶಿ ಟಿ.ಜಿ. ದೊಡ್ಡಮನಿ, ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ನಿರ್ದೇಶಕಿ ಕವಿತಾ ಜೈನ ಆಗಮಿಸಲಿದ್ದಾರೆ ಎಂದರು.ಇದಕ್ಕೂ ಮುನ್ನ ಅಂದು ಬೆಳಗ್ಗೆ 10 ಗಂಟೆಗೆ ಜೈನ ಸಮುದಾಯದ ಬೃಹತ್ ಮೆರವಣಿಗೆ ನಡೆಯಲಿದೆ. ನಗರದ ಭಗವಾನ್ ನೇಮಿನಾಥ ಜೈನ ಮಂದಿರದಿಂದ ಆರಂಭವಾಗುವ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಶಿವಬಸವ ಕಲ್ಯಾಣ ಮಂಟಪಕ್ಕೆ ಆಗಮಿಸಲಿದೆ. ಶಾಸಕ ಶಿವರಾಜ ಸಜ್ಜನರ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ.ಸಮಾವೇಶದ ಬಳಿಕ ದಾವಣಗೆರೆ ವಲಯದ ನೂತನ ಜೈನ ಮಿಲನಗಳ ಉದ್ಘಾಟನೆ ನಡೆಯಲಿದ್ದು, ಹೊಸದುರ್ಗ ಶಾಸಕ ಇ.ವಿ. ವಿಜಯಕುಮಾರ ಕಾರ್ಯಕ್ರಮ ಉದ್ಘಾಟಿಸುವರು. ದಾವಣಗೆರೆ ವಲಯದ ಜೈನ ಮಿಲನ್ ಉಪಾಧ್ಯಕ್ಷ ಇ.ವಿ. ಅಜ್ಜಪ್ಪ, ಕಾರ್ಯದರ್ಶಿ ಎಚ್.ಪಿ. ಸಮತಿಕುಮಾರ ಪಾಲ್ಗೊಳ್ಳುವರು ಎಂದು ತಿಳಿಸಿದರು.ಸ್ಥಳೀಯ ದಾನೇಶ್ವರ ನಗರದಲ್ಲಿರುವ ನಿವೇಶನದಲ್ಲಿ ಸಮಾಜದ ಸಮುದಾಯ ಭವನ ನಿರ್ಮಿಸಲಾಗುವುದು. ಅದೇ ರೀತಿ ಇಲ್ಲಿಯೇ ಶೇ 50ರ ಸರ್ಕಾರದ ಅನುದಾನದಲ್ಲಿ ವಿದ್ಯಾರ್ಥಿನಿಲಯ ನಿರ್ಮಿಸಲಾಗುವುದು ಎಂದು ಹೇಳಿದರು.ಜೈನ ಸಮಾಜವನ್ನು ಪ್ರವರ್ಗ 3ಬಿಯಿಂದ ಪ್ರವರ್ಗ 2ಬಿ ಎಂದು ಪರಿಗಣಿಸಬೇಕು. ಜಿಲ್ಲೆಯ ಎಲ್ಲ ಪ್ರಮುಖ ಸ್ಥಳಗಳಲ್ಲಿ ಜೈನ ಸಮುದಾಯ ಭವನ ಹಾಗೂ ವಿದ್ಯಾರ್ಥಿನಿಲಯ ಮಂಜೂರಾತಿಗೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಅಲ್ಪಸಂಖ್ಯಾತರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳಲ್ಲಿ ಜೈನರಿಗೆ ಶೇಕಡಾವಾರು ಕಾಯ್ದಿರಿಸುವಂತೆ ಸಮಾವೇಶದ ಮೂಲಕ ಒತ್ತಾಯಿಸಲಾಗುವುದು ಎಂದು ಹೇಳಿದರು.ಜೈನರಿಗೆ ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಪ್ರಾಮುಖ್ಯತೆ ಸಿಗುವಂಥ ಕ್ರಮ ಕೈಗೊಳ್ಳಬೇಕು. ಜೈನ ಸಮುದಾಯದ ಶಾಸಕರಿಗೆ ಸಚಿವ ಸ್ಥಾನ ನೀಡಬೇಕು. ಜೈನರಲ್ಲಿ ಶೇ 90ರಷ್ಟು ಜನರು ಕೃಷಿ ಅವಲಂಬಿತರಾಗಿದ್ದು, ಬಡವರಾಗಿದ್ದು, ಸರ್ಕಾರ ನೆರವಾಗಬೇಕು ಎಂದು ಒತ್ತಾಯಿಸಿದರು.ಪತ್ರಿಕಾಗೋಷ್ಠಿಯಲ್ಲಿ ಜೈನ ಸಮಾಜದ ಜಿಲ್ಲಾ ಅಧ್ಯಕ್ಷ ಅನಂತಪ್ಪ ಛಬ್ಬಿ, ಖಜಾಂಚಿ ಎಸ್.ಎ. ವಜ್ರಕುಮಾರ, ಮುಖಂಡರಾದ ಪಿ.ಎಸ್. ಧರಣೆಪ್ಪನವರ, ಭರತರಾಜ ಹಜಾರಿ, ಮಾಣಿಕಚಂದ ಲಾಡರ, ಚೆನ್ನಪ್ಪ ಧಾರವಾಡ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.