ಶನಿವಾರ, ಜೂನ್ 19, 2021
23 °C

ಜಿಲ್ಲಾ ವ್ಯಾಪ್ತಿ ಕುಡಿಯುವ ನೀರಿಗೆ ತತ್ವಾರ: 350 ಸಮಸ್ಯಾತ್ಮಕ ಗ್ರಾಮಗಳ ಪಟ್ಟಿ ತಯಾರಿಕೆ

ಪ್ರಜಾವಾಣಿ ವಾರ್ತೆ/ಕೆ.ಎಚ್. ಓಬಳೇಶ್ Updated:

ಅಕ್ಷರ ಗಾತ್ರ : | |

ಚಾಮರಾಜನಗರ:ಕಿರುನೀರು ಸರಬರಾಜು ಟ್ಯಾಂಕ್ ಮುಂದೆ ಸಾಲಾಗಿ ಇಟ್ಟಿರುವ ಬಿಂದಿಗೆಗಳ ಸಾಲು. ಸರದಿಗಾಗಿ ಕಾದುಕುಳಿತು ಸೂರ್ಯನ ಕೋಪಕ್ಕೆ ತುತ್ತಾಗಿ ಬಳಲಿ ಬೆಂಡಾದ ಹೆಂಗಳೆಯರು, ಮಕ್ಕಳು. ಮನೆಯಿಂದ ತಂದಿರುವ ಬಿಂದಿಗೆ ತುಂಬುತ್ತವೆ ಎಂಬ ನಂಬಿಕೆ ಅವರಿಗಿಲ್ಲ.

 

ಆ ನಡುವೆಯೇ ವಿದ್ಯುತ್‌ನ ಕಣ್ಣಾಮುಚ್ಚಾಲೆ ಆಟ. ಟ್ಯಾಂಕ್ ಭರ್ತಿಯಾಗುವುದು ಕೂಡ ಅಪರೂಪ. ಆಗ ಕುಡಿಯುವ ನೀರು ಸಂಗ್ರಹಿಸಲು ಬಂದವರಿಂದ ಅಧಿಕಾರಶಾಹಿ, ಜನಪ್ರತಿನಿಧಿಗಳಿಗೆ ಹಿಡಿಶಾಪ!ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ತಲೆದೋರಿದೆ. ಗ್ರಾಮದಲ್ಲಿರುವ ಕೊಳವೆಬಾವಿಗಳಲ್ಲಿ ಅಂತರ್ಜಲಮಟ್ಟವೂ ಕುಸಿದಿದೆ. ತೆರೆದಬಾವಿಗಳು ಅಕ್ಷರಶಃ ಬತ್ತಿಹೋಗಿವೆ. ಬರಗಾಲಕ್ಕೆ ತುತ್ತಾಗಿರುವ ಜನರು ಈಗ ನೀರಿಗಾಗಿ ತೊಂದರೆ ಅನುಭವಿಸುತ್ತಿದ್ದಾರೆ.ಹಳ್ಳಿಗಳಿಗೆ ಭೇಟಿ ನೀಡಿದರೆ ಕುಡಿಯುವ ನೀರಿಗಾಗಿ ಗ್ರಾಮೀಣರು ಬೈಸಿಕಲ್‌ನಲ್ಲಿ ಬಿಂದಿಗೆ ಕಟ್ಟಿಕೊಂಡು ಕೃಷಿ ಪಂಪ್‌ಸೆಟ್ ಬಳಿಗೆ ತೆರಳುವ ದೃಶ್ಯ ಕಾಣಿಸುತ್ತದೆ. ಗ್ರಾಮದಲ್ಲಿರುವ ಕೊಳವೆಬಾವಿಗಳಲ್ಲಿ ಸಮರ್ಪಕವಾಗಿ ನೀರು ಪೂರೈಕೆ ಇಲ್ಲದಿರುವ ಪರಿಣಾಮ ಪಂಪ್‌ಸೆಟ್ ಬಳಿಗೆ ತೆರಳುತ್ತಿದ್ದಾರೆ. ಜಮೀನಿನ ರೈತ ಒಪ್ಪಿಗೆ ನೀಡಿದರಷ್ಟೇ ನೀರು ಲಭ್ಯ. ಇಲ್ಲವಾದರೆ ಸಂಕಷ್ಟ ಕಟ್ಟಿಟ್ಟಬುತ್ತಿ.ಪಂಚಾಯತ್‌ರಾಜ್ ಎಂಜಿನಿಯರಿಂಗ್ ವಿಭಾಗದಿಂದ ಜಿಲ್ಲಾ ವ್ಯಾಪ್ತಿ ಮುಂದಿನ ಮೂರು ತಿಂಗಳ ಅವಧಿಯಲ್ಲಿ ಕುಡಿಯುವ ನೀರಿಗೆ ತತ್ವಾರ ಉಂಟಾಗುವ ಗ್ರಾಮಗಳ ಪಟ್ಟಿ ಸಿದ್ಧಪಡಿಸಲಾಗಿದೆ. ಪ್ರಥಮ ಹಂತದಲ್ಲಿ 175 ಸಮಸ್ಯಾತ್ಮಕ ಗ್ರಾಮಗಳಲ್ಲಿ ನೀರಿನ ಸಮಸ್ಯೆ ತಲೆದೋರಬಹುದೆಂದು ಅಂದಾಜಿಸಲಾಗಿತ್ತು. ಪ್ರಸ್ತುತ ಈ ಗ್ರಾಮಗಳ ಸಂಖ್ಯೆ 350ಕ್ಕೆ ಮುಟ್ಟಿದೆ.ಬರಪರಿಹಾರ ಯೋಜನೆಯಡಿ ಕುಡಿಯುವ ನೀರಿನ ಪೂರೈಕೆಯ 294 ಕಾಮಗಾರಿಗಳಿಗೆ ಅನುಮೋದನೆ ನೀಡಿ ಚಾಲನೆ ನೀಡಲಾಗಿದೆ. ಇದಕ್ಕಾಗಿ 4.68 ಕೋಟಿ ರೂ ನಿಗದಿಪಡಿಸಲಾಗಿದ್ದು, ಇಲ್ಲಿಯವರೆಗೆ 93 ಕಾಮಗಾರಿ ಪೂರ್ಣಗೊಂಡಿವೆ.

 

ಪೈಪ್‌ಲೈನ್, ಮೋಟಾರ್ ದುರಸ್ತಿ, ಹೊಸದಾಗಿ ಕೊಳವೆಬಾವಿ ಕೊರೆಯಲು ಈ ಅನುದಾನ ನಿಗದಿಯಾಗಿದೆ. ಪ್ರಸ್ತುತ ಹೆಚ್ಚುವರಿ 12 ಕೋಟಿ ರೂ ಅನುದಾನ ಬಿಡುಗಡೆಗೂ ಜಿಲ್ಲಾಡಳಿತದಿಂದ ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಆದರೆ, ಅನುದಾನ ಬಿಡುಗಡೆಯಾಗಿಲ್ಲ.ಅಂತರ್ಜಲಮಟ್ಟ ಕುಸಿತ:ಲಭ್ಯವಿರುವ ಅನುದಾನ ಬಳಸಿಕೊಂಡು ಕುಡಿಯುವ ನೀರಿನ ಕಾಮಗಾರಿಗಳಿಗೆ ಚಾಲನೆ ನೀಡಿದ್ದರೂ, ಅಂತರ್ಜಲಮಟ್ಟ ಕುಸಿಯುತ್ತಿರುವುದು ಗ್ರಾಮೀಣರಿಗೆ ತಲೆನೋವಾಗಿ ಪರಿಣಮಿಸಿದೆ.ಚಾಮರಾಜನಗರ ತಾಲ್ಲೂಕಿನ ಹರವೆ, ಕಸಬಾ, ಸಂತೇಮರಹಳ್ಳಿ ಹೋಬಳಿ, ಕೊಳ್ಳೇಗಾಲ ತಾಲ್ಲೂಕಿನ ಕುರಟ್ಟಿಹೊಸೂರು, ಮಾರ್ಟಳ್ಳಿ, ಹನೂರು ಹಾಗೂ ಗುಂಡ್ಲುಪೇಟೆ ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಅಂತರ್ಜಲಮಟ್ಟ ತೀವ್ರವಾಗಿ ಕುಸಿದಿದೆ. ಈ ಪ್ರದೇಶದಲ್ಲಿ 700 ಅಡಿವರೆಗೆ ಕೊಳವೆಬಾವಿ ಕೊರೆದರೂ ನೀರು ಲಭಿಸುತ್ತಿಲ್ಲ. ಹೀಗಾಗಿ, ಸಾರ್ವಜನಿಕರು ದಿಕ್ಕೆಟ್ಟಿದ್ದಾರೆ.ತೀವ್ರವಾಗಿ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಈ ಪ್ರದೇಶದ ಹಳ್ಳಿಗಳಿಗೆ ನದಿಮೂಲದಿಂದ ಶಾಶ್ವತ ಕುಡಿಯುವ ನೀರು ಪೂರೈಕೆಯ ಯೋಜನೆಗಳು ಅನುಷ್ಠಾನಗೊಂಡಿಲ್ಲ. ಇದರ ಪರಿಣಾಮ ಪ್ರತಿವರ್ಷವೂ ಬೇಸಿಗೆ ವೇಳೆ ಗ್ರಾಮೀಣರು ತೊಂದರೆ ಅನುಭವಿಸುವುದು ತಪ್ಪಿಲ್ಲ.`ಶಾಶ್ವತವಾಗಿ ಕುಡಿಯುವ ನೀರು ಪೂರೈಕೆ ಯೋಜನೆ ಅನುಷ್ಠಾನಗೊಂಡರೆ ಮಾತ್ರವೇ ಸಮಸ್ಯೆ ಪರಿಹಾರ ಕಾಣಲಿದೆ. ಆದರೆ,  ಸರ್ಕಾರ ಮತ್ತು ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ನೀರಿಗೆ ತೊಂದರೆ ಅನುಭವಿಸುವಂತಾಗಿದೆ. ಚುನಾವಣಾ ವೇಳೆ ಮಾತ್ರವೇ ನದಿಮೂಲದಿಂದ ನೀರು ಪೂರೈಸುವ ಮಾತು ಕೇಳಿಬರುತ್ತವೆ. ನಂತರ, ಆ ಬಗ್ಗೆ ಜನಪ್ರತಿನಿಧಿಗಳು ತುಟಿ ಬಿಚ್ಚುವುದಿಲ್ಲ~ ಎಂಬುದು ಕಗ್ಗಳದ ಶಿವಪ್ಪ ಅವರ ಅಳಲು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.