ಶನಿವಾರ, ಮೇ 15, 2021
24 °C

ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಕ್ಷಣಗಣನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ಜಿಲ್ಲಾ ಮಟ್ಟದ ಹನ್ನೊಂದನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪಟ್ಟಣವು ನವ ವಧುವಿನಂತೆ ಶೃಂಗಾರಗೊಂಡಿದೆ. ಎಲ್ಲೆಡೆ ಕನ್ನಡದ ಬಾವುಟಗಳು ಹಾರಾಡುತ್ತಿವೆ. ಪ್ರಮುಖ ವೃತ್ತಗಳು ವಿದ್ಯುತ್ ದೀಪದಿಂದ ಕಂಗೊಳಿಸುತ್ತಿವೆ.ಜೂನ್ 8 ಮತ್ತು 9 ರಂದು ನಡೆಯುವ ಸಮ್ಮೇಳನಕ್ಕೆ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಬೃಹತ್ ವೇದಿಕೆ ಸಿದ್ದಪಡಿಸಲಾಗಿದೆ. ಮೂರು ಸಾವಿರಕ್ಕೂ ಹೆಚ್ಚು ಜನರಿಗೆ ಆಸನ ವ್ಯವಸ್ಥೆ ಮಾಡಲಾಗಿದೆ. ಸಾಹಿತ್ಯಾಸಕ್ತರನ್ನು ಪಟ್ಟಣವು ಕೈಬೀಸಿ ಕರೆಯುತ್ತಿದೆ.ಸಮ್ಮೇಳನಕ್ಕೆ ಆಗಮಿಸುವವರ ಸ್ವಾಗತಕ್ಕೆ ತಾಲ್ಲೂಕಿನಾದ್ಯಂತ ಬ್ಯಾನರ್‌ಗಳನ್ನು ಹಾಕಲಾಗಿದೆ. ಭುವನೇಶ್ವರಿ ದೇವಿ ಹಾಗೂ ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಸಿಂಗಾರಗೊಂಡಿದೆ ಎತ್ತಿನಗಾಡಿ. ಜಿಲ್ಲೆಯ ಸಾಹಿತಿಗಳು ಹಾಗೂ ಪ್ರಮುಖ ಸ್ಥಳಗಳನ್ನು ಪರಿಚಯಿಸುವ ಫಲಕಗಳನ್ನು ವೇದಿಕೆ ವಿವಿಧೆಡೆ ಹಾಕಲಾಗಿದೆ.ಕನ್ನಡ ಬಾವುಟಗಳ ಹಾರಾಟ, ಅಲ್ಲಲ್ಲಿ ಬ್ಯಾನರ್ ಹಾಗೂ ಗೋಡೆ ಬರಹದಿಂದಾಗಿ ಪಟ್ಟಣವೇ ಕನ್ನಡಮಯಗೊಂಡಿದೆ. ಕಸಾಪ ಹಾಗೂ ಕನ್ನಡದ ಮನಗಳು ಸಮ್ಮೇಳನದ ಯಶಸ್ಸಿಗೆ ಶ್ರಮಿಸುತ್ತಿವೆ.ಪ್ರವೇಶ ದ್ವಾರಕ್ಕೆ ಬಾಲಗಂಗಾಧರನಾಥ ಸ್ವಾಮೀಜಿ ಹೆಸರಿಟ್ಟಿದ್ದರೆ, ಮಹಾಮಂಟಪಕ್ಕೆ ಮಲ್ಲಿಗೆಯ ಕವಿ ಕಿಕ್ಕೇರಿಯ ಕೆ.ಎಸ್. ನರಸಿಂಹಸ್ವಾಮಿ ಮತ್ತು ಡಾ. ಸುಜನಾ ಮಹಾ ಅವರ ಹೆಸರಿಡಲಾಗಿದೆ. ವೇದಿಕೆ ಆಲಂಬಾಡಿಯ ವೀರಯೋಧ   ಎನ್. ಸತೀಶ್ ಅವರ ಹೆಸರನ್ನು ಇಡಲಾಗಿದೆ.ನಾಡು, ನುಡಿ, ಸಾಹಿತ್ಯ, ಸಂಸ್ಕೃತಿ, ಜಿಲ್ಲೆಯ ಸಮಸ್ಯೆ, ಸವಾಲು, ಪರಿಹಾರೋಪಾಯಗಳ ಬಗೆಗೆ ವಿವಿಧ ಗೋಷ್ಠಿಗಳಲ್ಲಿ ಚಿಂತನ-ಮಂಥನ ನಡೆಯಲಿದೆ. ಮಕ್ಕಳ ಹಾಗೂ ಹಿರಿಯ ಕವಿಗಳು ತಮ್ಮ ಕವನಗಳನ್ನು ವಾಚಿಸಲಿದ್ದಾರೆ.ಸಮ್ಮೇಳನಕ್ಕೆ ಆಗಮಿಸುವ ಸಾಹಿತ್ಯಾಸಕ್ತರ ಉಪಾಹಾರ ಹಾಗೂ ಊಟದ ವ್ಯವಸ್ಥೆಗಾಗಿ 20 ಕೌಂಟರ್‌ಗಳನ್ನು ತೆರೆಯಲಾಗಿದೆ. ಐದು ಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಹಾಗೆಯೇ ಪಟ್ಟಣದ ಸಮುದಾಯ ಭವನದಲ್ಲಿ ವಸತಿ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದು ತಾಲ್ಲೂಕು ಘಟಕದ ಅಧ್ಯಕ್ಷ ಶ್ಯಾಮೇಶ್ ಅತ್ತಿಗುಪ್ಪೆ ತಿಳಿಸಿದರು.ಪುಸ್ತಕ ಪ್ರೇಮಿಗಳಿಗಾಗಿ ವಿವಿಧೆಡೆಯ 20 ಪ್ರಕಾಶಕರು ಸಮ್ಮೇಳನದಲ್ಲಿ ಪಾಲ್ಗೊಂಡು, ಮಾರಾಟ ಮಳಿಗೆಯನ್ನು ತೆರೆಯಲಿದ್ದಾರೆ. ಸರ್ಕಾರದ ವಿವಿಧ ಇಲಾಖೆಗಳು ವಿವಿಧ  ಯೋಜನೆಗಳ ಬಗೆಗೆ ಮಾಹಿತಿ ನೀಡಲು ಮಳಿಗೆಗಳನ್ನು ತೆರೆಯುತ್ತಿದ್ದಾರೆ.

ಸಮ್ಮೇಳಾನಧ್ಯಕ್ಷರ ಪರಿಚಯ

ಮಂಡ್ಯ: ತಮ್ಮ ಮೊನಚಾದ ಬರಹಗಳಿಂದ ಹೆಸರಾದ   ಪ್ರೊ.ಎಚ್.ಎಲ್. ಕೇಶವಮೂರ್ತಿ ಅವರು `ಎಚ್‌ಎಲ್‌ಕೆ' ಎಂದೇ ಹೆಸರಾದವರು. ನಾಗಮಂಗಲ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿದ್ದ   ಎಚ್‌ಎಲ್‌ಕೆ ಅವರು, ಈಗ ಜಿಲ್ಲಾ ಮಟ್ಟದ `ನುಡಿ ಹಬ್ಬ'ದ ಅಧ್ಯಕ್ಷರಾಗಿದ್ದಾರೆ.ನಾಗಮಂಗಲ ತಾಲ್ಲೂಕಿನ ಹರಗನಹಳ್ಳಿಯವರಾಗಿದ್ದಾರೆ. 1939ರ ಡಿ.28ರಂದು ಜನನ. ತಂದೆ ಎಚ್.ಎಂ. ಲಿಂಗೇಗೌಡ, ತಾಯಿ ಚೆನ್ನಮ್ಮ. ಪ್ರಾಥಮಿಕ ಮತ್ತು ಪ್ರೌಢ ವಿದ್ಯಾಭ್ಯಾಸವನ್ನು ಬೆಳ್ಳೂರು, ನಾಗಮಂಗಲ, ಮೇಲುಕೋಟೆಯಲ್ಲಿ ಮಾಡಿದ್ದಾರೆ. ಬೆಂಗಳೂರಿನ ಸೆಂಟ್ರಲ್ ಕಾಲೇಜಿನಿಂದ ಬಿ.ಎಸ್ಸಿ; ಹಾಸನದ ಮಲ್ನಾಡ್ ಎಂಜಿನಿಯರಿಂಗ್ ಕಾಲೇಜಿನಿಂದ ಬಿ.ಇ; ತಿರುಪತಿಯ ವೆಂಕಟೇಶ್ವರ ವಿ.ವಿ.ಯಿಂದ ಎಂ.ಇ. ಪದವಿ ಪಡೆದಿದ್ದಾರೆ.ವಿಡಂಬನೆ, ಹಾಸ್ಯ, ವ್ಯಂಗ್ಯ, ಅಣಕು ಬರಹಗಳ ಮೂಲಕ ಗಮನ ಸೆಳೆದಿದ್ದಾರೆ.`ನಿನ್ಯಾಕೋ ನಿನ್ನ ಹಂಗ್ಯಾಕೋ ಮಾವ?, ಎಂಗಾರ ಟಿಕೆಟ್ ಕೊಡಿ, ಹರಕುತುಟಿ ಮಹಾತ್ಮೆ, ಇಸ್ಟೀಟ್ ನ್ಯಾಯ, (ಅ)ನೀತಿಕಥೆಗಳು, ಹನುಮ ನಿನ್ನ ನಾಮ ಒಂದೇ, ಥೂ! ಹಲ್ಕಾ! ಸೇರಿದಂತೆ ಅನೇಕ ನಗೆ ಬರಹ ಸಂಕಲನಗಳು; ಗೌರವಾನ್ವಿತ ದಗಾಕೋರರು, ಗಾಂಧಿ ಅವತ್ತು ಹುಟ್ಟಬಾರದಿತ್ತು!, ದೇವರುಗಳ ಟೈಮೇ ಸರಿಯಿಲ್ಲ, ಪಾತಕಿಯೇ ಪರಮಾತ್ಮ ಮುಂತಾದ ವೈಚಾರಿಕ ವಿಡಂಬನೆಗಳ ಕೃತಿಗಳನ್ನು ರಚಿಸಿದ್ದಾರೆ.`ಕನ್ನಡದಲ್ಲಿ ವಿನೋದ ಸಾಹಿತ್ಯ', `ಹಾಸ್ಯ ಕಸ್ತೂರಿ', `ವಿನೋದ ಸಾಹಿತ್ಯ-1996' ಇವರ ಸಂಪಾದಿತ ಕೃತಿಗಳು.

ವೈದಾವೋಸಿ (ನಾಟಕ), ನವಸಾಕ್ಷರಿಗಾಗಿ `ಹಿತ್ತಲಗಿಡವೇ ಮದ್ದು, ಯಾರದು ತಪ್ಪು?, ಕರಿನಾಯಿ ಸತ್ತಾಗ ಸೇರಿದಂತೆ ಹಲವು ಕೃತಿಗಳನ್ನು ಬರೆದಿದ್ದಾರೆ.ಪ್ರಶಸ್ತಿಗಳು: ಎರಡು ಬಾರಿ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ (1972-2007) ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅಲ್ಲದೇ, ಕರ್ನಾಟಕ ಸಾಹಿತ್ಯ ಅಕಾಡೆಮಿ, ರಾಜ್ಯ ಸಂಪನ್ಮೂಲ ಕೇಂದ್ರ ಸಲಹಾ ಮಂಡಳಿ, ಮೈಸೂರು ವಿಶ್ವವಿದ್ಯಾಲಯದ ಶೈಕ್ಷಣಿಕ ಸಮಿತಿ, ಮೈಸೂರು ವಿವಿ ಸೆನೆಟ್ ಸದಸ್ಯರಾಗಿ, ನವ ಸಾಕ್ಷರರ ಪಠ್ಯ ಪುಸ್ತಕ ಆಯ್ಕೆ ಸಮಿತಿಯಲ್ಲೂ ಕೆಲಸ ನಿರ್ವಹಿಸಿದ್ದಾರೆ.

ಸಮ್ಮೇಳನದಲ್ಲಿ ಇಂದು

ಧ್ವಜಾರೋಹಣ. ಬೆಳಿಗ್ಗೆ 8 ಗಂಟೆ.

ಸಮ್ಮೇಳಾನಧ್ಯಕ್ಷರ ಮೆರವಣಿಗೆಗೆ ಜಿಲ್ಲಾಧಿಕಾರಿ ಬಿ.ಎನ್. ಕೃಷ್ಣಯ್ಯ ಅವರಿಂದ ಚಾಲನೆ.

ಬೆಳಿಗ್ಗೆ 9.30.

ಸಮ್ಮೇಳನದ ಉದ್ಘಾಟನೆ -ಸಾಹಿತಿ ಭಾನು ಮುಷ್ತಾಕ್, ಸ್ಮರಣ ಸಂಚಿಕೆ ಬಿಡುಗಡೆ -ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಆಯುಕ್ತ ಕೆ.ಆರ್.ರಾಮಕೃಷ್ಣ, ಸಮ್ಮೇಳನಾಧ್ಯಕ್ಷರ ನುಡಿ -ಪ್ರೊ. ಎಚ್.ಎಲ್.ಕೇಶವಮೂರ್ತಿ, ಪುಸ್ತಕ ಮಳಿಗೆ ಉದ್ಘಾಟನೆ -ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ನಾಗರತ್ನ ಬಸವರಾಜು. ಬೆಳಿಗ್ಗೆ 10.30.

ಗೋಷ್ಠಿ 1-ಸಾಹಿತ್ಯ ಮತ್ತು ಸಂಸ್ಕೃತಿ.    ಅಧ್ಯಕ್ಷತೆ -ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿವೃತ್ತ ನಿರ್ದೇಶಕ  ಎ.ಎಸ್. ನಾಗರಾಜು.                ಮಧ್ಯಾಹ್ನ 12.30.

ನಾಗಮಂಗಲ ಗೋವಿಂದರಾಜು ಮತ್ತು ತಂಡದಿಂದ ಗೀತ ಗಾಯನ. ಮಧ್ಯಾಹ್ನ 2.

ಗೋಷ್ಠಿ 2- ಭವಿಷ್ಯದ ಮಂಡ್ಯ ಜಿಲ್ಲೆ. ಅಧ್ಯಕ್ಷತೆ -ಬರಹಗಾರ ಡಾ. ಅರ್ಜುನಪುರಿ ಅಪ್ಪಾಜಿಗೌಡ. ಮಧ್ಯಾಹ್ನ 2.30.

ಗೋಷ್ಠಿ 3 -ಮಕ್ಕಳ ಕವಿಗೋಷ್ಠಿ. ಅಧ್ಯಕ್ಷತೆ -ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಗೌರವ ಕಾರ್ಯದರ್ಶಿ ಡಾ. ಕೋ.ವೆಂ.ರಾಮಕೃಷ್ಣೇಗೌಡ. ಸಂಜೆ 4.

ಸಾಂಸ್ಕೃತಿಕ ಸಂಜೆ: ಗೋಕರ್ಣದ ಗೌಡಸಾನಿ ನಾಟಕ ಪ್ರದರ್ಶನ. ಪ್ರಸ್ತುತಿ -ಕ್ಯಾತನಹಳ್ಳಿ ರಂಗಕೃಷಿ ಸಾಂಸ್ಕೃತಿಕ ವೇದಿಕೆ. ಸಂಜೆ 5. ಕಾರ್ಕಳದ ಮಹಾಗಣಪತಿ ಆರ್ಟ್ ಕಲ್ಚರಲ್ ಟ್ರಸ್ಟ್‌ನಿಂದ `ಮೋಹಿನಿ ಭಸ್ಮಾಸುರ' ಕಥಾ ಪ್ರಸಂಗ ಯಕ್ಷಗಾನ ಪ್ರದರ್ಶನ. ಸಂಜೆ 6.30.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.