ಬುಧವಾರ, ಏಪ್ರಿಲ್ 21, 2021
25 °C

ಜಿಲ್ಲೆಗೆ ವಿಕೋಪ ನಿರ್ವಹಣಾ ಯೋಜನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ದೇಶದಲ್ಲಿಯೇ ಪ್ರಪ್ರಥಮ ಬಾರಿಗೆ ಸ್ವಯಂ ಚಾಲಿತ ಜಿಲ್ಲಾ ವಿಕೋಪ ನಿರ್ವಹಣಾ ಯೋಜನೆಯನ್ನು ರಾಯಚೂರು ಜಿಲ್ಲೆಯಲ್ಲಿ ಕಾರ್ಯಗತಗೊಳಿಸಲಾಗುತ್ತಿದ್ದು,  ಮೈಸೂರಿನ ಆಡಳಿತ ತರಬೇತಿ ಸಂಸ್ಥೆ ಹಾಗೂ ಕಂದಾಯ ಇಲಾಖೆ ವಿಪತ್ತು ನಿರ್ವಹಣಾ ವಿಭಾಗ ಮತ್ತು ಕೇಂದ್ರ ಸರ್ಕಾರದ ಯು.ಎನ್.ಡಿ.ಪಿ. ಯೋಜನೆಯಡಿ ಅನುಷ್ಠಾನಗೊಳ್ಳುತ್ತಿದೆ.ವಿಕೋಪ ನಿರ್ವಹಣೆಗೆ ಬೇಕಾದ ಸುರಕ್ಷಾ ಕ್ರಮಗಳು, ಪೂರ್ವಸಿದ್ಧತೆ, ಸ್ಪಂದನೆ, ಪುನಶ್ಚೇತನ, ಪುನರ್ ನಿರ್ಮಾಣ ಕಾರ್ಯ ಹಮ್ಮಿಕೊಳ್ಳುವುದು. ಪ್ರಕೃತಿ ವಿಕೋಪ ನಿರ್ವಹಣೆಯಲ್ಲಿ ಪ್ರಮುಖವಾಗಿ ಸ್ಪಂದನ ಸಮಯವು ಅತ್ಯಮೂಲ್ಯವಾಗಿದೆ. ಅತೀ ಕಡಿಮೆ ಸಮಯದಲ್ಲಿ ಹೆಚ್ಚಿನ ಸ್ಪಂದನೆ ಕಾರ್ಯವನ್ನು ನಿರ್ವಹಿಸಲು ರಾಯಚೂರು ಜಿಲ್ಲಾ ವಿಪತ್ತು ನಿರ್ವಹಣೆ ಯೋಜನೆಯನ್ನು ಸ್ವಯಂ ಚಾಲಿತವಾಗಿ ಕಾರ್ಯನಿರ್ವಹಿಸುವ ತಂತ್ರಜ್ಞಾನವನ್ನು ಅಳವಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ವಿ ಸಾವಿತ್ರಿ ಹೇಳಿದ್ದಾರೆ.ಮಾನವ ಸಂಪನ್ಮೂಲ, ವಸ್ತುಗಳು, ಉಪಕರಣಗಳು ಹಾಗೂ ಇತರ ವಿವರಗಳನ್ನು ಮೊಬೈಲ್ ತಂತ್ರಜ್ಞಾನದಿಂದ ಸಂಗ್ರಹಿಸಲಾಗಿದೆ. ಈ ಎಲ್ಲ ಮಾಹಿತಿಗಳನ್ನು ಬಳಕೆ ಮಾಡಿ ಪ್ರಕೃತಿ ವಿಕೋಪ ಸಂದರ್ಭದಲ್ಲಿ ತಕ್ಷಣದಲ್ಲಿ ಬೇಕಾಗುವ ಸಂಪನ್ಮೂಲಗಳನ್ನು ಗುರುತಿಸಿ ಸಂಬಂಧಪಟ್ಟ ಅಧಿಕಾರಿ ವರ್ಗದವರಿಗೆ ಎಸ್.ಎಂ.ಎಸ್ ಮೂಲಕ ತಕ್ಷಣ ಮಾಹಿತಿ ರವಾನಿಸಲಾಗುತ್ತದೆ.ಈ ರೀತಿ ಮಾಹಿತಿ ತಕ್ಷಣ ಲಭ್ಯವಾಗುವುದರಿಂದ ವಿಕೋಪ ಸಂದರ್ಭದಲ್ಲಿ  ಜೀವ ರಕ್ಷಣೆ, ಆಸ್ತಿ ರಕ್ಷಣೆ ಮಾಡಲು ಸಹಕಾರಿಯಾಗಲಿದೆ. ಈ ರೀತಿಯ ಸ್ವಯಂ ಚಾಲಿತ ವಿಕೋಪ ನಿರ್ವಹಣೆಯ ಮಾದರಿ ಅಧ್ಯಯನವನ್ನು ಭಾರತ ದೇಶದಲ್ಲಿಯೇ ಪ್ರಪ್ರಥಮ ಬಾರಿಗೆ ಕರ್ನಾಟಕ ರಾಜ್ಯದ ರಾಯಚೂರು ಜಿಲ್ಲೆಯಲ್ಲಿ ಕಾರ್ಯಗತಗೊಳಿಸಲಾಗುತ್ತಿದೆ.ಇದರ ಪ್ರಾರಂಭೋತ್ಸವ ಮತ್ತು ತರಬೇತಿ ಕಾರ್ಯಾಗಾರ 18ರಂದು ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ನಡೆಯಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.ಭಾರತ ದೇಶದ ಪ್ರತಿಯೊಂದು ರಾಜ್ಯ ಮತ್ತು ಜಿಲ್ಲಾ ಮಟ್ಟದ `2005 ವಿಕೋಪ ನಿರ್ವಹಣಾ ಯೋಜನೆ~ಯನ್ನು ಸಿದ್ಧಪಡಿಸಿ ಆಯಾ ಪ್ರದೇಶಗಳಲ್ಲಿ ಸಂಭವಿಸುವ ಆಪಾಯ ಸ್ಥಿತಿ, ದುರ್ಬಲ ಪ್ರದೇಶ ಮತ್ತು ಅವುಗಳಿಂದ ಸಂಭವಿಸುವ ನಷ್ಟವನ್ನು ಗುರುತಿಸಲಾಗಿದೆ.ವಿಕೋಪ ನಿರ್ವಹಣಾ ಚಕ್ರದ ಆಧಾರದ ಮೇಲೆ ವಿಕೋಪ ನಿರ್ವಹಣಾ ಯೋಜನೆಯನ್ನು ತಯಾರಿಸಿ ಅನುಷ್ಠಾನಕ್ಕೆ ತರಬೇಕಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯದ 29 ಜಿಲ್ಲೆಗಳ ವಿಪತ್ತು ನಿರ್ವಹಣಾ ಯೋಜನೆಗಳು 2009-10 ರಲ್ಲಿ ಸಿದ್ದವಾಗಿವೆ. ಇವುಗಳ ಮರು ರಚನೆಯನ್ನು ಪ್ರತಿ ವರ್ಷವೂ ಆಯಾ ಪ್ರದೇಶಗಳಲ್ಲಿ ಉಂಟಾಗುವ ವಿಕೋಪಗಳ ಆಧಾರದ ಮೇಲೆ ರಚನೆ ಮಾಡಲಾಗುತ್ತದೆ ಎಂದು ವಿವರಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.