ಗುರುವಾರ , ಮೇ 13, 2021
35 °C

ಜಿಲ್ಲೆಯಲ್ಲಿ ಯೂರಿಯಾ ಕೊರತೆ; ಹೆಚ್ಚಿನ ದರಕ್ಕೆ ಮಾರಾಟ....

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಾಪುರ: ಜಿಲ್ಲೆಯಲ್ಲಿ ಯೂರಿಯಾ ಗೊಬ್ಬರದ ಅಭಾವ ಎದುರಾಗಿದೆ. ರೈತರಿಂದ ಮಾರಾಟಗಾರರು ಹೆಚ್ಚುವರಿ ದರ ವಸೂಲಿ ಮಾಡುತ್ತಿದ್ದಾರೆ ಎಂದು ಸ್ವತಃ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎ.ಎನ್. ಪಾಟೀಲ ಅವರೇ ಆಕ್ಷೇಪ ವ್ಯಕ್ತಪಡಿಸಿ, ಕೃಷಿ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.ಸೋಮವಾರ ಇಲ್ಲಿಯ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ ಪಾಟೀಲ,  ಯೂರಿಯಾ ಗೊಬ್ಬರ ಸಿಗದೇ ರೈತರು ತೀವ್ರ ತೊಂದರೆ ಎದುರಿಸುತ್ತಿದ್ದಾರೆ. ಮಾರಾಟಗಾರರು ಅಕ್ರಮ ದಾಸ್ತಾನು ಮಾಡಿ ಕೃತಕ ಅಭಾವ ಸೃಷ್ಟಿಸುತ್ತಿರುವ ದೂರುಗಳು ರೈತರಿಂದ ಬರುತ್ತಿವೆ.ಇಂತಹ  ಮಾರಾಟಗಾರರ ಮೇಲೆ ತೀವ್ರ ನಿಗಾ ವಹಿಸಬೇಕು ಹಾಗೂ ಅಕ್ರಮ ದಾಸ್ತಾನು ಪತ್ತೆ ಮಾಡಿ ರೈತರಿಗೆ ಹಂಚುವ ವ್ಯವಸ್ಥೆ ಮಾಡಬೇಕು ಎಂದು ಜಂಟಿ ಕೃಷಿ ನಿರ್ದೇಶಕರಿಗೆ ಸೂಚಿಸಿದರು.ಜಿಲ್ಲೆಯಲ್ಲಿ ರಸಗೊಬ್ಬರದ ಅಭಾವವಿಲ್ಲ. 1500 ಮೆಟ್ರಿಕ್ ಟನ್ ಡಿಎಪಿ ಹಾಗೂ ಕಾಂಪ್ಲೆಕ್ಸ್ ಗೊಬ್ಬರ ದಾಸ್ತಾನು ಇದೆ. ಅಕ್ರಮವಾಗಿ ದಾಸ್ತಾನು ಮಾಡಿದ್ದ 100 ಟನ್ ಯೂರಿಯಾ ಗೊಬ್ಬರವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಡಾ.ಸಿ. ಭೈರಪ್ಪ ಹೇಳಿದರು.ಸೆ.15ರೊಳಗೆ ಎರಡು ರೇಕ್ ಯೂರಿಯಾ ಗೊಬ್ಬರ ಜಿಲ್ಲೆಗೆ ಬರಲಿದೆ. ರೈತರಿಗೆ ಸಮರ್ಪಕವಾಗಿ ಗೊಬ್ಬರ ವಿತರಿಸಲು ಕ್ರಮ ಕೈಗೊಳ್ಳಲಾಗುವುದು. ಅಕ್ರಮವಾಗಿ ಗೊಬ್ಬರ ದಾಸ್ತಾನು ಮಾಡಿಕೊಂಡುಕಾಳಸಂತೆಯಲ್ಲಿ ಬೇರೆ ಜಿಲ್ಲೆಗೆ ಮಾರಾಟ ಮಾಡುವವರ ಹಾಗೂ ನಿಗದಿತ ದರಕ್ಕಿಂತ ಹೆಚ್ಚು ದರ ವಸೂಲಿ ಮಾಡುವ ಮಾರಾಟಗಾರರ ಮೇಲೆ ತೀವ್ರ ನಿಗಾ ಇಡಲಾಗಿದೆ. ಇದಕ್ಕಾಗಿ ಜಿಲ್ಲೆಯಲ್ಲಿ ಮೂರು ವಿಚಕ್ಷಣ ದಳ ರಚಿಸಲಾಗಿದೆ ಎಂದರು.ಜಿಲ್ಲೆಯಲ್ಲಿ ಈ ವರೆಗೆ ವಾಡಿಕೆಯ 333 ಮಿ.ಮೀ. ಮಳೆಯಾಗಬೇಕಿತ್ತು. ಕೇವಲ 288 ಮಿ.ಮೀ. ಆಗಿದೆ. ಮುಂದಿನ ಒಂದು ವಾರದಲ್ಲಿ ಮಳೆಯಾಗದಿದ್ದರೆ ತೇವಾಂಶದ ಕೊರತೆಯಿಂದ ಬೆಳೆಗಳು ಬಾಡಿಹೋಗುವ ಸಂಭವವಿದೆ. 4.30 ಲಕ್ಷ ಹೆಕ್ಟೇರ್ ಮುಂಗಾರು ಬಿತ್ತನೆ ಕ್ಷೇತ್ರದಲ್ಲಿ, 3.26 ಲಕ್ಷ ಹೆಕ್ಟೆರ್ (ಶೇ.76 ರಷ್ಟು)ನಲ್ಲಿ ಬಿತ್ತನೆಯಾಗಿದೆ.ಹಿಂಗಾರಿನಲ್ಲಿ ಬಿತ್ತನೆ ಕಾರ್ಯ ಸೆಪ್ಟೆಂಬರ್ 15ರಿಂದ ಆರಂಭಗೊಳ್ಳಲಿದ್ದು, ಹಿಂಗಾರು ಬಿತ್ತನೆಗಾಗಿ 10 ಸಾವಿರ ಕ್ವಿಂಟಲ್ ಕಡಲೆ, ತಲಾ ಒಂದು ಸಾವಿರ ಕ್ವಿಂಟಲ್ ಗೋಧಿ, ಬಿಳಿ ಜೋಳವನ್ನು ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.ಜಿಲ್ಲೆಯಲ್ಲಿ ಚಿಕುನ್ ಗುನ್ಯಾ ರೋಗ ಕಾಣಿಸಿಕೊಂಡಿದ್ದು, ನಿಯಂತ್ರಣಕ್ಕೆ ತುರ್ತು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗೆ ಸೂಚಿಸಲಾಯಿತು.ಮುದ್ದೇಬಿಹಾಳ ಮತ್ತು ಬಸವನ ಬಾಗೇವಾಡಿ ತಾಲ್ಲೂಕುಗಳಲ್ಲಿ ಚಿಕುನ್ ಗುನ್ಯಾ ಪ್ರಕರಣ ಪತ್ತೆಯಾಗಿದ್ದು, ತಕ್ಷಣವೇ ವೈದ್ಯರ ತಂಡ ನಿಯೋಜಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಡಿಎಚ್‌ಓ ಡಾ.ವಿಶ್ವನಾಥ ಹೇಳಿದರು.ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿ ಮಂಜೂರು ಮಾಡುವಾಗ ಎಲ್ಲ ತಾಲ್ಲೂಕುಗಳಿಗೆ ಸಮಾನವಾಗಿ ಹಂಚಬೇಕು. ಒಂದೇ ಗ್ರಾಮದ ಫಲಾನುಭವಿಗಳನ್ನು ಆಯ್ಕೆ ಮಾಡದೆ ಬೇರೆ ಬೇರೆ ಗ್ರಾಮಗಳ ಫಲಾನುಭಗಳನ್ನು ಆಯ್ಕೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.ಈ ವರ್ಷ ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ 196, ಡಿ.ದೇವರಾಜ್ ಅರಸು ಹಿಂದುಳಿದ ಅಭಿವೃದ್ಧಿ ನಿಗಮದಿಂದ 129, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ 75 ಕೊಳವೆ ಬಾವಿ ಕೊರೆಸುವ ಗುರಿ ಹೊಂದಲಾಗಿದೆ ಎಂದು ಅಧಿಕಾರಿಗಳು ವಿವರಿಸಿದರು.ಕುಡಿಯುವ ನೀರಿನ ವಿವಿಧ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ವಿಭಾಗದವರಿಗೆ ಸೂಚಿಸಲಾಯಿತು.ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಈ ವರ್ಷ 80.62 ಕೋಟಿ ರೂಪಾಯಿ ಬಿಡುಗಡೆಯಾಗಿದ್ದು, ಈ ವರೆಗೆ 80ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ. 101 ಕೃಷಿ ಹೊಂಡ ನಿರ್ಮಿಸಲಾಗಿದೆ. 99 ಸಣ್ಣ ಕೈಗಾರಿಕಾ ಘಟಕಗಳನ್ನು ನೋಂದಣಿ ಮಾಡಲಾಗಿದೆ.ಸಣ್ಣ ನೀರಾವರಿ ಇಲಾಖೆಯಿಂದ 873 ಹೆಕ್ಟೇರ್ ನೀರಾವರಿ ಸಾಮರ್ಥ್ಯ ಹೆಚ್ಚಿಸಲಾಗಿದೆ. ಈ ವರೆಗೆ ಕೆಎಂಎಫ್‌ನಿಂದ 13.14ಲಕ್ಷ ಲೀಟರ್ ಹಾಲು ಸಂಗ್ರಹಿಸಲಾಗಿದೆ. ಜಿಲ್ಲೆಯಲ್ಲಿ 117 ಕೆರೆಗಳಲ್ಲಿ ಮೀನು ಕೃಷಿ ಕೈಗೊಳ್ಳಲಾಗಿದೆ, 348 ಪರಿಶಿಷ್ಟ ಜಾತಿ ನಿರುದ್ಯೋಗಿಗಳಿಗೆ ವಾಹನ ತರಬೇತಿ ನೀಡುವ ಗುರಿ ಹೊಂದಲಾಗಿದೆ, ಅರಣ್ಯ ಇಲಾಖೆಯಿಂದ 154 ಹೆಕ್ಟೇರ್‌ನಲ್ಲಿ ಅರಣ್ಯ ಬೆಳೆಸಲು ಸಸಿ ವಿತರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದರು.ಪಡಿತರ ಸೀಮೆ ಎಣ್ಣೆಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವ ದೂರುಗಳು ವ್ಯಾಪಕವಾಗಿ ಕೇಳಿ ಬರುತ್ತಿದ್ದು, ಈ ಕುರಿತಂತೆ ತೀವ್ರ ನಿಗಾ ವಹಿಸುವಂತೆ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪ ನಿರ್ದೇಶಕರಿಗೆ ಸೂಚಿಸಲಾಯಿತು.ಜಿಲ್ಲಾ ಪಂಚಾಯಿತಿ ಅಧ್ಯಕ್ಷತೆ ಶಂಕ್ರುಬಾಯಿ ಚಲವಾದಿ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಾನಂದ ಅವಟಿ, ಯೋಜನಾಧಿಕಾರಿ ನಿಂಗಪ್ಪ, ಉಪ ಕಾರ್ಯದರ್ಶಿ ಅಮರೇಶ ನಾಯಕ ಇತರರು ಸಭೆಯಲ್ಲಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.