ಭಾನುವಾರ, ಮೇ 22, 2022
28 °C

ಜಿಲ್ಲೆ ಸುಧಾರಣೆ ಹಿಂದೆ: ಶೆಟ್ಟರ್ ಅಸಮಾಧಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಿಲ್ಲೆ ಸುಧಾರಣೆ ಹಿಂದೆ: ಶೆಟ್ಟರ್ ಅಸಮಾಧಾನ

ರಾಮನಗರ: `ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ರಾಮನಗರ ಜಿಲ್ಲೆ ರಾಜ್ಯದಲ್ಲಿಯೇ 19ನೇ ಸ್ಥಾನದಲ್ಲಿದೆ.ರಾಜಧಾನಿ ಬೆಂಗಳೂರಿಗೆ ಹತ್ತಿರದಲ್ಲಿರುವ ಜಿಲ್ಲೆಯಲ್ಲಿ ಸರಿಯಾಗಿ ಸುಧಾರಣೆಗಳು ಆಗಿಲ್ಲ ಎಂಬುದು ಒಳ್ಳೆಯ ಬೆಳವಣಿಗೆಯಲ್ಲ~ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವ ಜಗದೀಶ್ ಶೆಟ್ಟರ್ ಅಸಮಾಧಾನ ವ್ಯಕ್ತಪಡಿಸಿದರು.ನಗರಸಭೆಯ ಪ್ರಶಸ್ತಿ ಭವನದಲ್ಲಿ ಬುಧವಾರ ನಡೆದ ಜಿಲ್ಲಾ ಪಂಚಾಯಿತಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.ರಾಜಧಾನಿಗೆ ಸಮೀಪ ಇರುವ ಜಿಲ್ಲೆಗಳಲ್ಲಿ ಪ್ರಗತಿಯ ವೇಗ ಹೆಚ್ಚಿರಬೇಕು. ಆದರೆ ರಾಮನಗರದಲ್ಲಿ ಹಾಗಾಗಿಲ್ಲ ಎಂದರು.

 

ರಾಜ್ಯ ಮತ್ತು ಕೇಂದ್ರ ಸರ್ಕಾರದ ಯೋಜನೆಗಳು ಸರಿಯಾಗಿ ಅನುಷ್ಠಾನವಾಗಬೇಕು ಮತ್ತು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಜನರ ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸಿ ಅದನ್ನು ನಿವಾರಿಸಲು ಶ್ರಮಿಸಬೇಕು ಎಂದು ಕಿವಿಮಾತು ಹೇಳಿದರು.ಕುಡಿಯುವ ನೀರಿಗೆ ಆದ್ಯತೆ: ಬೇಸಿಗೆ ಸಮೀಪಿಸುತ್ತಿದ್ದು, ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರುವ ಸಾಧ್ಯತೆ ಇರುವುದರಿಂದ ಈ ಸಮಸ್ಯೆ ಬಗೆಹರಿಸಲು ಪ್ರಥಮ ಆದ್ಯತೆ ನೀಡಬೇಕೆಂದು ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾ ಪಂಚವಾಯಿತಿ ಎಂಜಿನಿಯರ್ ಅವರು  69 ಕುಡಿಯುವ ನೀರಿನ ಘಟಕಗಳಿಗೆ ಬೆಸ್ಕಾಂ ವಿದ್ಯತ್ ಸಂಪರ್ಕ ಕಲ್ಪಸಿಲ್ಲ ಎಂಬುದನ್ನು ಸಚಿವರ ಗಮನಕ್ಕೆ ತಂದರು.ಅಲ್ಲದೆ ಬೆಸ್ಕಾಂ ಸಿಬ್ಬಂದಿ ಅನಗತ್ಯವಾಗಿ ಗ್ರಾಮ ಪಂಚಾಯಿತಿ ಪಿಡಿಒಗಳು, ಜಿಲ್ಲಾ ಪಂಚಾಯಿತಿ ಎಂಜಿನಿಯರ್‌ಗಳ ಮೇಲೆ ಪ್ರಕರಣಗಳನ್ನು ದಾಖಲಿಸುತ್ತಿದ್ದಾರೆ ಎಂದು ಅಲವತ್ತುಕೊಂಡರು.ಇದರಿಂದ ಸಿಡಿಮಿಡಿಗೊಂಡ ಸಚಿವರು ಬೆಸ್ಕಾಂ ಕಾರ್ಯಕಾರಿ ಎಂಜಿನಿಯರ್ ಅನ್ನು ತರಾಟೆ ತೆಗೆದುಕೊಂಡರು. ಸಾರ್ವಜನಿಕರಿಗೆ ಕುಡಿಯುವ ನೀರು ಕಲ್ಪಿಸುವ ಸರ್ಕಾರದ ಸಿಬ್ಬಂದಿಯ ಮೇಲೆ ಪ್ರಕರಣ ದಾಖಲಿಸುವುದು ಎಷ್ಟು ಸರಿ ಎಂದು ಸಚಿವರ ಪ್ರಶ್ನಿಸಿದರು. ತಿಂಗಳೊಳಗೆ ವಿದ್ಯತ್ ಸಂಪರ್ಕವಿಲ್ಲದ ಕುಡಿಯುವ ನೀರಿನ ಘಟಕಗಳಿಗೆ ಸಂಪರ್ಕ ಕಲ್ಪಿಸಲು ಅವರು ಇದೇ ಸಂದರ್ಭದಲ್ಲಿ ಆದೇಶಿಸಿದರು.ದುರಸ್ತಿಯಲ್ಲಿರುವ ಬೋರ್‌ವೆಲ್‌ಗೆ ಗುಣಮಟ್ಟದ ಪಂಪ್‌ಸೆಟ್ ಅಳವಡಿಸಬೇಕು. ಮುಂಬರುವ ಬೇಸಿಗೆಯಲ್ಲಿನ ನೀರಿನ ಸಮಸ್ಯೆಗಳನ್ನು ಪರಿಹರಿಸಲು ಈಗಲೇ ಸಜ್ಜಾಗಬೇಕು ಎಂದು ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.ಶೌಚಾಲಯ ಕಲ್ಪಿಸಿ: ಶೌಚಾಲಯ, ವೈಯಕ್ತಿಕ ಶೌಚಾಲಯಗಳ ನಿರ್ಮಾಣಕ್ಕೆ ಪಂಚಾಯಿತಿಗಳು ಹೆಚ್ಚಿನ ಗಮನ ಕೊಡಬೇಕು. ಈ ಕುರಿತು ಸರ್ಕಾರಿ ಕಾರ್ಯಕ್ರಮ ಮತ್ತು ಅನುದಾನ ಹಾಗೂ ಆರ್ಥಿಕ ನೆರವಿನ ಕುರಿತು ಜನ ಸಾಮಾನ್ಯರಲ್ಲಿ ಅರಿವು ಮೂಡಿಸಬೇಕು ಎಂದು ಅವರು ಕಿವಿಮಾತು ಹೇಳಿದರು.ಸುಪ್ರೀಂಕೋರ್ಟ್ ಆದೇಶದಂತೆ ಡಿಸೆಂಬರ್ ಒಳಗೆ ಶೌಚಾಲಯವಿಲ್ಲದ ಸರ್ಕಾರಿ ಶಾಲೆಗಳಿಗೆ ಶೀಘ್ರವೇ ಶೌಚಾಲಯ ಸೌಲಭ್ಯ ಒದಗಿಸಬೇಕು ಎಂದು ಅವರ ನಿರ್ದೇಶನ ನೀಡಿದರು.  ಗುಂಡಿಬಿದ್ದಿರುವ ರಸ್ತೆಗಳನ್ನು ದುರಸ್ತಿಗೊಳಿಸುವಂತೆ ಅವರು ಅಧಿಕಾರಿಗಳಿಗೆ ತಿಳಿಸಿದರು.ಕೇಂದ್ರ ಸರ್ಕಾರದ ನಿರ್ಮಲ ಗ್ರಾಮ ಪುರಸ್ಕಾರವನ್ನು ಇಲ್ಲಿಯವರೆಗೆ ಜಿಲ್ಲೆಯ ಒಂದೇ ಒಂದು ಗ್ರಾಮ ಪಡೆದಿದೆ ಎಂದು ಅಧಿಕಾರಿಗಳು ನೀಡಿದ ಮಾಹಿತಿಯಿಂದ ಬೇಸರ ವ್ಯಕ್ತಪಡಿಸಿದ ಸಚಿವ ಜಗದೀಶ್ ಶೆಟ್ಟರ್, ಮಂಗಳೂರು ಮತ್ತು ಉಡುಪಿಯಲ್ಲಿ ಶೇ 100ರಷ್ಟು ಗ್ರಾಮಗಳು ನಿರ್ಮಲ ಗ್ರಾಮ ಪುರಸ್ಕಾರ ಪಡೆದಿವೆ. ಆದರೆ ರಾಜಧಾನಿಗೆ ಸಮೀಪ ಇರುವ ಜಿಲ್ಲೆಯ ಸ್ಥಿತಿ ಹೀಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಕುಡಿಯುವ ನೀರಿನ ಯೋಜನೆ: ಬೆಂಗಳೂರಿನ ಕಲುಷಿತ ನೀರನ್ನು ಹೊತ್ತು ತರುವ ವೃಷಭಾವತಿ ನದಿ ಬಂದು ಸೇರುವ ಬೈರಮಂಗಲ ಜಲಾಶಯ ಸಂಪೂರ್ಣ ಕಲುಷಿತವಾಗಿದೆ. ಇದರಿಂದ ಈ ಭಾಗದ 31 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಎಲ್ಲಿ ಕೊಳವೆಬಾವಿ ಕೊರೆಸಿದರೂ ಶುದ್ದ ಕುಡಿಯುವ ನೀರು ಸಿಗುತ್ತಿಲ್ಲ.ಹಾಗಾಗಿ ತೊರೆಕಾಡನಹಳ್ಳಿಯಿಂದ ಬೆಂಗಳೂರಿಗೆ ಕಾವೇರಿ ನೀರು ಪೂರೈಕೆಯಾಗುವ ಮಾರ್ಗದಲ್ಲಿ ಅಂದಾಜು 98 ಕೋಟಿ ರೂಪಾಯಿ ವೆಚ್ಚದಲ್ಲಿ ಬೈರಮಂಗಲ ಭಾಗದ ಜನತೆಗೆ ನೀರು ಪೂರೈಸುವ ಯೋಜನೆ ಸಿದ್ಧಪಡಿಸಲಾಗಿದೆ ಎಂದು ಅಧಿಕಾರಿಗಳು ಸಭೆಯಲ್ಲಿ ಸಚಿವರಿಗೆ ಮಾಹಿತಿ ನೀಡಿದರು.ಈ ಯೋಜನೆ ಕುರಿತು ಪ್ರಸ್ತಾವವನ್ನು ಕೂಡಲೇ ಕಳುಹಿಸಿಕೊಡುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು. ಅಲ್ಲದೆ ಚನ್ನಪಟ್ಟಣದ ವಿರೂಪಾಕ್ಷ ಹೋಬಳಿ, ಕನಕಪುರದ ಕೋಡಿಹಳ್ಳಿ, ಉಯ್ಯಂಬಳ್ಳಿ ಪ್ರದೇಶದ ಕುಡಿಯುವ ನೀರಿನ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ತಿಳಿಸಿದರು.ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹೊಸದಾಗಿ ನೇಮಕಗೊಂಡಿದ್ದು, ಅವರಿಗೆ ಅನುಭವದ ಕೊರತೆ ಇರುವುದರಿಂದ ಗ್ರಾಮ ಪಂಚಾಯಿತಿ ಸದಸ್ಯರು, ಕಾರ್ಯನಿರ್ವಾಹಕ ಅಧಿಕಾರಿ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಸಲಹೆ-ಸೂಚನೆ ನೀಡಿ ಸೂಕ್ತ ಮಾರ್ಗದಲ್ಲಿ ಕೆಲಸ ನಿರ್ವಹಿಸಲು ಸಹಕರಿಸಬೇಕು ಎಂದು ಅವರು ಕಿವಿಮಾತು ಹೇಳಿದರು.ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಧನಂಜಯ ಮತ್ತು ರಾಜು ಅವರು, ಪಿಡಿಒಗಳ ವರ್ತನೆಯನ್ನು ಖಂಡಿಸಿದರು. ಎಲ್ಲದಕ್ಕೂ ಜನಪ್ರತಿನಿಧಿಗಳನ್ನು ದೂಷಿಸುವುದು ಸರಿಯಲ್ಲ. ಜನಪ್ರತಿನಿಧಿಗಳನ್ನು ಪಂಚಾಯಿತಿಯ ಪಿಡಿಒಗಳು ಮತ್ತು ಕಾರ್ಯದರ್ಶಿಗಳು ತಪ್ಪುದಾರಿಗೆ ಎಳೆಯುತ್ತಿದ್ದಾರೆ. ಅನಕ್ಷರಸ್ಥ ಸದಸ್ಯರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ದೂರಿದರು.ಮಾಗಡಿ ತಾಲ್ಲೂಕಿನ ಎರಡು ಹೋಬಳಿಗಳು ನೆಲಮಂಗಲ ವಿಧಾನಸಭಾ ಕ್ಷೇತ್ರಕ್ಕೆ ಬರುತ್ತದೆ. ಆದರೆ ಮಾಗಡಿ ತಾಲ್ಲೂಕಿನಲ್ಲಿ ನಡೆಯುವ ಯಾವ ಸಭೆಗಳಿಗೂ ನೆಲಮಂಗಲ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಹಾಜರಾಗುತ್ತಿಲ್ಲ ಎಂದು ಸದಸ್ಯ ಧನಂಜಯ ಸಚಿವರಿಗೆ ದೂರು ನೀಡಿದರು. ಆ ಅಧಿಕಾರಿಗಳಿಗೆ ನೋಟಿಸ್ ನೀಡಿ ಮುಂದಿನ ಕ್ರಮ ತೆಗೆದುಕೊಳ್ಳುವಂತೆ ಸಚಿವರು ಹಿರಿಯ ಅಧಿಕಾರಿಗಳಿಗೆ ಸೂಚಿಸಿದರು.ಜಿಲ್ಲಾ ಉಸ್ತುವಾರಿ ಸಚಿವರೂ ಆದ ಅರಣ್ಯ ಸಚಿವ ಸಿ.ಪಿ.ಯೋಗೀಶ್ವರ್ ಮಾತನಾಡಿ, ಬೇಸಿಗೆ ಎದುರಾಗುತ್ತಿರುವ ಸಂದರ್ಭದಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಅಧಿಕಾರಿಗಳು ಗಮನ ಹರಿಸಬೇಕು. ಅನಗತ್ಯವಾಗಿ ಜನತೆ ರಾಜಕಾರಣಿಗಳನ್ನು ದೂರುವಂತೆ ಮಾಡಬಾರದು ಎಂದು ತಾಕೀತು ಮಾಡಿದರು.ಶಾಸಕ ಡಿ.ಕೆ.ಶಿವಕುಮಾರ್ ಮಾತನಾಡಿ, ತಾಲ್ಲೂಕಿನ ಕೆಲ ಗ್ರಾಮಗಳಿಗೆ ನರೇಗಾ ಯೋಜನೆ ಸಂಬಂಧಿಸಿದಂತೆ 6 ತಿಂಗಳಿಂದ ಹಣ ಬಂದಿಲ್ಲ. ಕೆರೆಗಳ ಪುನಶ್ಚೇತನ ಯೋಜನೆಗಳ ಬಗ್ಗೆ ಅಧಿಕಾರಿಗಳು ಕ್ರಮ ತೆಗೆದುಕೊಂಡಿಲ್ಲ. ಗ್ರಾಮೀಣ ರಸ್ತೆಗಳು ಸುಧಾರಣೆಯಾಗಿಲ್ಲ ಎಂದು ಸಚಿವರಿಗೆ ತಿಳಿಸಿದರು.ಗ್ರಾಮೀಣ ಅಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಅಮಿತಾ ಪ್ರಸಾದ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಕಲ್ಪನಾ ಮಲ್ಲಿಕಾರ್ಜುನೇಗೌಡ, ಉಪಾಧ್ಯಕ್ಷೆ ಮಾದೇವಿ, ಸಿಇಒ ವೆಂಕಟೇಶಪ್ಪ, ಮುಖ್ಯ ಯೋಜನಾಧಿಕಾರಿ ಜಯರಾಂ, ಕಾರ್ಯದರ್ಶಿ ಸಿದ್ದರಾಮಯ್ಯ ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.ಬರ ಘೋಷಣೆಗೆ ಶಿಫಾರಸು

ಜಿಲ್ಲೆಯ ಕನಕಪುರ ಮತ್ತು ಚನ್ನಪಟ್ಟಣವನ್ನು ಬರ ಪೀಡಿತ ತಾಲ್ಲೂಕು ಎಂದು ಸರ್ಕಾರ ಘೋಷಿಸಿದೆ. ರಾಮನಗರ ಮತ್ತು ಮಾಗಡಿ ತಾಲ್ಲೂಕಿನಲ್ಲಿಯೂ ಬರದ ಛಾಯೆ ಇದೆ ಎಂದು ಜನಪ್ರತಿನಿಧಿಗಳು ಮಾಹಿತಿ ನೀಡಿದ್ದಾರೆ. ಇದನ್ನು ಆಧರಿಸಿ ಮುಖ್ಯಮಂತ್ರಿ ಅವರ ಜತೆ ಮಾತನಾಡಿ ಈ ಎರಡೂ ತಾಲ್ಲೂಕುಗಳನ್ನು ಮುಂದಿನ ಬರ ತಾಲ್ಲೂಕು ಪಟ್ಟಿಯಲ್ಲಿ ಸೇರಿಸುವಂತೆ ಶಿಫಾರಸು ಮಾಡುವುದಾಗಿ ಅವರು ಸಭೆಯಲ್ಲಿ ಹೇಳಿದರು.ಬರಗಾಲದಿಂದಾಗಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ ಸಚಿವರು, ಅಗತ್ಯ ಇರುವೆಡೆ ತುರ್ತಾಗಿ ಗೋಶಾಲೆಗಳನ್ನು ತೆರೆಯುವಂತೆ ಹೇಳಿದರು. ಮೇವು ಕೊರತೆಯಿದ್ದರೆ ಬೇರೆ ಜಿಲ್ಲೆಗಳಿಂದ ಮೇವು ತರಿಸುವ ಕೆಲಸ ಮಾಡಿ. ಕುಡಿಯುವ ನೀರಿನ ಸಮಸ್ಯೆ ಇದ್ದರೆ ಟ್ಯಾಂಕರ್ ನೀರಿನ ವ್ಯವಸ್ಥೆ ಮಾಡಿ ಎಂದು ಅಧಿಕಾರಿಗಳಿಗೆ ಅವರು ತಿಳಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.