ಮಂಗಳವಾರ, ಏಪ್ರಿಲ್ 13, 2021
30 °C

ಜೆಎಸ್‌ಎಸ್ ರಂಗೋತ್ಸವಕ್ಕೆ ಚಾಲನೆ.ಗಾಂಧಿ ಬದುಕು ರೂಪಿಸಿದ್ದು ನಾಟಕ: ಬಸವಲಿಂಗಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ‘ಸತ್ಯಹರಿಶ್ಚಂದ್ರ ಮತ್ತು ಶ್ರವಣಕುಮಾರ ನಾಟಕಗಳಿಂದಲೇ ಗಾಂಧೀಜಿ ಮನ ಪರಿವರ್ತನೆ ಯಾಗಿದ್ದು, ನಾಟಕಗಳಿಗೆ ಬದುಕು ರೂಪಿಸುವ ಶಕ್ತಿ ಇದೆ’ ಎಂದು ನಾಟಕ ನಿರ್ದೇಶಕ ಸಿ.ಬಸವಲಿಂಗಯ್ಯ ಹೇಳಿದರು.ನಗರದ ಕಲಾಮಂದಿರದಲ್ಲಿ ಸೋಮವಾರದಿಂದ ನಾಲ್ಕು ದಿನಗಳ ಕಾಲ ಆಯೋಜಿಸಲಾಗಿರುವ ಜೆಎಸ್‌ಎಸ್ ‘ರಂಗೋತ್ಸವ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.‘ಭಾರತ ಹಲವು ಭಾಷೆ, ಸಂಸ್ಕೃತಿ, ಜಾತಿಗಳಿಂದ ಕೂಡಿದ ದೇಶವಾಗಿದೆ. ಜಾತ್ಯತೀತ ಕಲ್ಪನೆಯನ್ನು ಬೆಳೆಸುವಲ್ಲಿ ರಂಗಭೂಮಿ ಆರಂಭದಿಂದಲೇ ವೇದಿಕೆಯಂತೆ ಕೆಲಸ ಮಾಡುತ್ತಿದೆ. ಜಾತೀಯತೆಯನ್ನು ಮೀರಿ ಕಲಾವಿದರು ನಾಟಕದಲ್ಲಿ ತೊಡಸಿಕೊಳ್ಳುತ್ತಿದ್ದಾರೆ. ಸಾಮಾನ್ಯವಾಗಿ ನಾಟಕ ಯಾರದು, ಯಾರು ಬರೆದಿದ್ದು ಎಂದು ಕೇಳುತ್ತೇವೆ. ಆದರೆ, ಅವರ ಜಾತಿ ಯಾವುದು ಎಂದು ಯಾರೂ ಕೇಳುವುದಿಲ್ಲ’ ಎಂದು ಅಭಿಪ್ರಾಯಪಟ್ಟರು.‘ರಂಗಭೂಮಿಯು ಜನಪರ ಮೌಲ್ಯಗಳನ್ನು ಎತ್ತಿ ಹಿಡಿದು ರಂಜನೆಯ ಜೊತೆಗೆ ಜನರನ್ನು ವಿಚಾರವಂತರನ್ನಾಗಿಯೂ ಮಾಡಿದೆ. ಸಿನೆಮಾ, ಕಿರುತೆರೆಯಿಂದ ನಾಟಕಕ್ಕೆ ಧಕ್ಕೆ ಬರುತ್ತದೆ ಎಂದು ಹೇಳಲಾಗುತ್ತಿತ್ತು. ಆದರೆ, ಅದು ಇಂದಿಗೂ ಸಾಧ್ಯವಾಗಿಲ್ಲ. ನಾಟಕ ಯಾವತ್ತಿಗೂ ಜೀವಂತ ಮಾಧ್ಯಮ’ ಎಂದರು.ರಂಗಾಯಣ ನಿರ್ದೇಶಕ ಪ್ರೊ. ಲಿಂಗದೇವರು ಹಳೆಮನೆ ಮಾತನಾಡಿ, ‘ಶೈಕ್ಷಣಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿದ್ದ ಮಠಗಳು ರಂಗಭೂಮಿಯಲ್ಲಿಯೂ ಆಸಕ್ತಿ ತೋರಿಸುತ್ತಿರುವುದು ಶ್ಲಾಘನೀಯ. ಈ ಹಿಂದೆ ಅರಮನೆ ಮತ್ತು ಗುರುಮನೆಗಳು ನಾಟಕ ಆರಂಭಕ್ಕೆ ವೇದಿಕೆ ಒದಗಿಸಿದ್ದವು. ಉತ್ತರ ಕರ್ನಾಟಕದಲ್ಲಿ ವೀರಶೈವ ಮಠಗಳು ಮತ್ತು ಜನರು ರಂಗಭೂಮಿಯನ್ನು ಪೋಷಿಸಿಕೊಂಡು ಬಂದಿದ್ದರು’ ಎಂದು ಹೇಳಿದರು.‘ರಂಗಭೂಮಿ ಮನರಂಜನೆಯ ಮಾಧ್ಯಮವಾಗಿ ಮಾತ್ರ ಉಳಿದಿಲ್ಲ. ಶೈಕ್ಷಣಿಕ ಚಟುವಟಿಕೆಗಳಲ್ಲೂ ರಂಗಭೂಮಿ ಕಲಾವಿದರಿಗೆ ಅವಕಾಶ ನೀಡಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಜೆಎಸ್‌ಎಸ್ ಶಿಕ್ಷಣ ಸಂಸ್ಥೆ ರಂಗೋತ್ಸವದ ಜೊತೆಗೆ ರಂಗ ಶಿಬಿರ ಹಾಗೂ ರಂಗ ತರಬೇತಿ ಕಾರ್ಯಕ್ರಮಗಳನ್ನೂ ಆಯೋಜಿಸಬೇಕು’ ಎಂದು ಸಲಹೆ ನೀಡಿದರು.

ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜೆಎಸ್‌ಎಸ್ ಪ್ರಕಟಣ ವಿಭಾಗದ ಉಪ ನಿರ್ದೇಶಕ ಮ.ಗು.ಸದಾನಂದಯ್ಯ ಸ್ವಾಗತಿಸಿದರು. ಚಂದ್ರಶೇಖರಾಚಾರ್ ನಿರೂಪಿಸಿ, ವಂದಿಸಿದರು.ಬಳಿಕ ಶಾಲಾ ಮಕ್ಕಳಿಂದ ‘ಮೃಚ್ಛಕಟಿಕ’ ನಾಟಕ ಜರುಗಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.