ಗುರುವಾರ , ಮೇ 19, 2022
24 °C

ಜೆಡಿಯು ನಾಯಕರಿಗೆ ಶರದ್ ತಾಕೀತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ/ ಪಟ್ನಾ (ಪಿಟಿಐ/ಐಎಎನ್‌ಎಸ್): ಸಂಯುಕ್ತ ಜನತಾದಳ (ಜೆಡಿಯು)ದ ನೀತಿ, ನಿರೂಪಣೆ ಮತ್ತು ನಿಲುವುಗಳಿಗೆ ಸಂಬಂಧಿಸಿದಂತೆ ಯಾವುದೇ ಬಹಿರಂಗ ಹೇಳಿಕೆ ನೀಡುವ ಮುನ್ನ ತಮ್ಮನ್ನಾಗಲಿ ಅಥವಾ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನಾಗಲಿ ಸಂಪರ್ಕಿಸುವಂತೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಶರದ್ ಯಾದವ್ ಶನಿವಾರ ಪಕ್ಷದ ನಾಯಕರಿಗೆ ತಾಕೀತು ಮಾಡಿದ್ದಾರೆ.ಎರಡು ದಿನಗಳ ಹಿಂದೆ ಜೆಡಿಯು ಪ್ರಧಾನ ಕಾರ್ಯದರ್ಶಿ ಶಿವಾನಂದ ತಿವಾರಿ ಅವರು ಯುಪಿಎ ಸರ್ಕಾರದ ಆರ್ಥಿಕ ನಿರ್ವಹಣೆಯನ್ನು ಬಹಿರಂಗವಾಗಿ ಸಮರ್ಥಿಸಿಕೊಂಡು ವಿವಾದ ಸೃಷ್ಟಿಸಿದ ಬೆನ್ನಲ್ಲೇ ಯಾದವ್ ಪಕ್ಷದ ನಾಯಕರಿಗೆ ಈ ಎಚ್ಚರಿಕೆ ನೀಡಿದ್ದಾರೆ.ತಿವಾರಿ ವಿವಾದಾತ್ಮಕ ಹೇಳಿಕೆ ಬಿಜೆಪಿ ಮತ್ತು ಜೆಡಿಯು ನಾಯಕರ ಪರಸ್ಪರ ಸಂಘರ್ಷಕ್ಕೆ ನಾಂದಿ ಹಾಡಿದೆ. ತಿವಾರಿ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಬಿಜೆಪಿ, ಜೆಡಿಯು ನಿಲುವಿನ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದೆ.ರಾಷ್ಟ್ರಪತಿ ಚುನಾವಣೆಯಲ್ಲಿ ಯುಪಿಎ ಅಭ್ಯರ್ಥಿ ಪ್ರಣವ್ ಮುಖರ್ಜಿ ಅವರನ್ನು ಬೆಂಬಲಿಸುತ್ತೇವೆ ಎಂದ ಮಾತ್ರಕ್ಕೆ ಎನ್‌ಡಿಎ ಮೈತ್ರಿಕೂಟದಲ್ಲಿ ಬಿರುಕು ಕಾಣಿಸಿಕೊಂಡಿದೆ ಎಂದು ಭಾವಿಸಬೇಕಿಲ್ಲ ಎಂಬುದಾಗಿ ಶರದ್ ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ. `ಎನ್‌ಡಿಎನ ಎಲ್ಲ ಅಂಗಪಕ್ಷಗಳು ಒಟ್ಟಾಗಿದ್ದು, ಭವಿಷ್ಯದಲ್ಲಿ ಒಗ್ಗಟ್ಟು ಮುಂದುವರೆಯಲಿದೆ. ಈ ಬಗ್ಗೆ ಸಂಶಯ ಬೇಡ~ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.ಯುಪಿಎ ಅಭ್ಯರ್ಥಿಯನ್ನು ಬೆಂಬಲಿಸಿದ್ದೇವೆ ಎಂದ ಮಾತ್ರಕ್ಕೆ ಕಾಂಗ್ರೆಸ್ ವಿರುದ್ಧದ ತಮ್ಮ ಪಕ್ಷದ ನಿಲುವು ಬದಲಾಗದು. ದೇಶದ ಜ್ವಲಂತ ಸಮಸ್ಯೆಗಳಿಗೆ ಕಾಂಗ್ರೆಸ್ ಮತ್ತು ಯುಪಿಎ ಸರ್ಕಾರ ಕಾರಣ ಎಂಬ ಆರೋಪದಲ್ಲಿ ಯಾವುದೇ ಬದಲಾವಣೆ ಇಲ್ಲ. ಅದಕ್ಕೆ ತಾವು ಇಂದಿಗೂ ಬದ್ಧವಾಗಿರುವುದಾಗಿ ಸ್ಪಷ್ಟಪಡಿಸಿದರು. ಹಿಂದೆ 2007ರ ರಾಷ್ಟ್ರಪತಿ ಚುನಾವಣೆಯಲ್ಲೂ ಎನ್‌ಡಿಎ ಅಂಗಪಕ್ಷಗಳು ವಿಭಿನ್ನ ನಿಲುವು ತೆಗೆದುಕೊಂಡಿದ್ದವು. ಶಿವಸೇನೆ ಯುಪಿಎ ಅಭ್ಯರ್ಥಿ ಪ್ರತಿಭಾ ಪಾಟೀಲ್ ಅವರನ್ನು ಬೆಂಬಲಿಸಿತ್ತು. ಅಕಾಲಿದಳ ಕೂಡ ಈ ಹಿಂದೆ ಕಾಂಗ್ರೆಸ್ ಅಭ್ಯರ್ಥಿ ಗ್ಯಾನಿ ಜೇಲ್ ಸಿಂಗ್ ಅವರನ್ನು ಬೆಂಬಲಿಸಿತ್ತು ಎಂದು ಯಾದವ್ ಪಕ್ಷದ ನಿಲುವನ್ನು ಸಮರ್ಥಿಸಿಕೊಂಡರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.