ಶನಿವಾರ, ಮೇ 21, 2022
25 °C

ಜೇನಿನ ಮನೆಯೋ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅದು ಜೇನಿನ ಮನೆ! ಅಲ್ಲಿ ಗುಂಯ್‌ಗುಟ್ಟುವ ಜೇನುಹುಳುಗಳಿಲ್ಲ. ಅವುಗಳ ಜೀವನ ಚರಿತ್ರೆಯನ್ನು ವಿವರಿಸುವ ದಾಖಲೆಗಳಿವೆ, ಪರಿಕರಗಳಿವೆ. ಜೇನುತುಪ್ಪ ಸಂಗ್ರಹವಾಗುವ ರೀತಿ, ಬಿಡಿಸುವ ವಿಧಾನ, ಅದರ ಹಿಂದಿರುವ ವಿಜ್ಞಾನ.. ಹೀಗೆ ಸಂಪೂರ್ಣ ‘ಜೇನು ಶಿಕ್ಷಣ’ದ ಮಾಹಿತಿಯಿದೆ. ಈ ‘ಜೇನಿನ ಮನೆ’ ಅರ್ಥಾತ್ ‘ಬೀ ಮ್ಯೂಸಿಯಂ’ ನೀಲಗಿರಿಯ ಬೆಟ್ಟಗಳ ಸಾಲಿನಲ್ಲಿರುವ ತಮಿಳುನಾಡಿನ ಉದಕಮಂಡಲ(ಊಟಿ)ದಲ್ಲಿದೆ. ಇದು ದೇಶದ ಪ್ರಥಮ ‘ಜೇನಿನ ಮ್ಯೂಸಿಯಂ’. ಕೊತ್ತಗಿರಿ ಮೂಲದ ಕೀಸ್ಟೋನ್ ಪ್ರತಿಷ್ಠಾನ ಎಂಬ ಸ್ವಯಂ ಸೇವಾ ಸಂಸ್ಥೆ ನಾಲ್ಕು ವರ್ಷಗಳ ಹಿಂದೆ ಈ ಮ್ಯೂಸಿಯಂ ನಿರ್ಮಿಸಿದೆ.ಕೀಸ್ಟೋನ್ ಪ್ರತಿಷ್ಠಾನ ಜೀವವೈವಿಧ್ಯ ಸಂರಕ್ಷಣೆ, ಪಶ್ಚಿಮಘಟ್ಟ ಉಳಿಸಿ ಅಭಿಯಾನ ಸೇರಿದಂತೆ ವಿವಿಧ ಪರಿಸರ ಪೂರಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ಪರಾಗಸ್ಪರ್ಶ ಕ್ರಿಯೆ ಮೂಲಕ ಪರಿಸರ ರಕ್ಷಕರಾಗಿರುವ ಜೇನುಹುಳುಗಳ ರಕ್ಷಣೆಗಾಗಿ ಯೋಜನೆ ರೂಪಿಸಿದೆ. ಜೇನುಹುಳುಗಳ ಸಂತತಿ ಉಳಿಯಬೇಕು, ಅದಕ್ಕಾಗಿ ಜೇನು ಸಾಕಣೆ ಮಾಡುವ ಜೇನು ಕುರುಬರನ್ನು ಉತ್ತೇಜಿಸಬೇಕು. ಈ ಉದ್ದೇಶದಿಂದ ’ಬೀ ಮ್ಯೂಸಿಯಂ’ ಸ್ಥಾಪಿಸಲಾಯಿತು ಎನ್ನುತ್ತಾರೆ ಸಂಸ್ಥೆಯ ಪರಿಸರ ಶಿಕ್ಷಕಿ ಪುಷ್ಪೀಂದರ್ ಕೆ. ಖಜೂರಿಯಾ.

 

ಕೀಸ್ಟೋನ್ ಪ್ರತಿಷ್ಠಾನ ಜೇನುಹುಳುಗಳ ಜೀವನ ಚರಿತ್ರೆ ಜೊತೆಗೆ ಜೇನುಕುರುಬರ ಬದುಕಿನ ಕುರಿತು ಅಧ್ಯಯನ ನಡೆಸಿದೆ. ಹುಳುಗಳು ತುಪ್ಪ ಸಂಗ್ರಹಿಸುವ ವಿಧಾನ, ಜೇನುಕುರುಬರ ಸಾಂಪ್ರದಾಯಿಕ ಆಚರಣೆಗಳು, ಅದರೊಟ್ಟಿಗಿನ ನಂಬಿಕೆಗಳು- ಹೀಗೆ ಜೇನಿನ ಸುತ್ತಲಿರುವ ವಿವಿಧ ವಿಚಾರಗಳ ಕುರಿತ ದಾಖಲೆಗಳನ್ನು ಸಂಗ್ರಹಿಸಿದೆ. ಸತತ ಮೂರು ವರ್ಷಗಳ ಕಾಲ ಅಧ್ಯಯನ ನಡೆಸಿರುವ ಪ್ರತಿಷ್ಠಾನದ ಕಾರ್ಯಕರ್ತರು ‘ಹನಿ ಹಂಟರ್ಸ್‌ ಆಫ್ ದಿ ಬ್ಲೂ ಮೌಂಟೇನ್ಸ್’ ಎಂಬ ಸಾಕ್ಷ್ಯಚಿತ್ರವನ್ನೂ ನಿರ್ಮಿಸಿದ್ದಾರೆ.ಮ್ಯೂಸಿಯಂ ಒಳಭಾಗದಲ್ಲಿ ಪುಟ್ಟದೊಂದು ಥಿಯೇಟರ್ ಇದೆ. ಮ್ಯೂಸಿಯಂಗೆ ಭೇಟಿ ನೀಡುವವರಿಗೆ ಈ ಥಿಯೇಟರ್‌ನಲ್ಲಿ ಸಾಕ್ಷ್ಯಚಿತ್ರ ತೋರಿಸಲಾಗುತ್ತದೆ. ಅದಕ್ಕೂ ಮೊದಲು ಪರಿಸರ ಮತ್ತು ಜೇನಿನ ನಡುವಿನ ಸಂಬಂಧದ ವಿವರಣೆ, ನಂತರ ಜೇನುಗೂಡಿನ ಪರಿಚಯ. ಜೇನು ತೆಗೆಯುವ ಸಾಧನಗಳ ಪ್ರದರ್ಶನ, ಜೇನುಕುರುಬರ ಪರಿಕರಗಳಾದ ಏಣಿ, ಕುಕ್ಕೆ, ಪಾತ್ರೆಗಳು.. ಇತ್ಯಾದಿಗಳ ವಿವರಣೆ. ಮುಂದೆ, ಪಶ್ಚಿಮಘಟ್ಟದಲ್ಲಿ, ಅದರಲ್ಲೂ ಹೆಚ್ಚಾಗಿ ನೀಲಗಿರಿ ಸಾಲಿನಲ್ಲಿ ಜೇನಿನ ಸಂತತಿ ಅವುಗಳ ಕಾರ್ಯಾಚರಣೆ ಕುರಿತ ಮಾಹಿತಿ- ಹೀಗೆ, ಇಡೀ ಜೇನಿನ ಜೀವನ ಚಕ್ರವನ್ನೇ ಪುಷ್ಪೀಂದರ್ ವಿವರಿಸುತ್ತಾರೆ.ಜೇನುಕುರುಬರು, ಇರುಳಿಗರ ಸ್ವಸಹಾಯ ಸಂಘದ ನೆರವಿನಿಂದ ಜೇನಿನ ವ್ಯಾಕ್ಸ್, ಸೋಪು, ಮೇಣದಬತ್ತಿ, ಬಾಡಿ ಲೋಶನ್, ಜಾಮ್, ಉಪ್ಪಿನಕಾಯಿ ಹೀಗೆ ವಿವಿಧ ಉತ್ಪನ್ನಗಳನ್ನು ಸಂಸ್ಥೆ ತಯಾರಿಸುತ್ತಿದೆ. ಈ ಉತ್ಪನ್ನಗಳನ್ನು ಮ್ಯೂಸಿಯಂನ ಇನ್ನೊಂದು ಭಾಗವಾದ ‘ಗ್ರೀನ್‌ಶಾಪ್’ ಮಳಿಗೆಯಲ್ಲಿ ಮಾರಾಟಕ್ಕಿಟ್ಟಿದೆ. ಇವುಗಳ ಮಾರಾಟದಿಂದ ಬಂದ ಹಣವನ್ನು ಬುಡಕಟ್ಟು ಜನರ ಅಭಿವೃದ್ಧಿಗಾಗಿ ಬಳಸಲಾಗುತ್ತಿದೆ.ಜೇನುತುಪ್ಪದಲ್ಲಿ ಹಲವು ರುಚಿಗಳಿವೆ ಎಂದರೆ ನಂಬುತ್ತೀರಾ? ಬೀ ಮ್ಯೂಸಿಯಂನಲ್ಲಿರುವ ಜೇನುತುಪ್ಪ ಸವಿದ ಮೇಲೆ ನಂಬಲೇಬೇಕು. ನೀಲಗಿರಿ ಬೆಟ್ಟದ ತುದಿಗಳಿಂದ ಜೇನು ಕುರುಬರೇ ಸಂಗ್ರಹಿಸುವ ಶುದ್ಧ ಜೇನುತಪ್ಪ, ಶುಂಠಿ, ಕೇಸರಿ, ಕಾಳುಮೆಣಸು ರುಚಿಯ ಸ್ಪೈಸಿ ಹನಿ, ಜಾಮೂನು (ನೇರಳೆ) ಮರ ಹಾಗೂ ಬೇವಿನ ಮರದಿಂದ ಸಂಗ್ರಹಿಸುವ ಬಿಟ್ಟರ್ (ವಗರು) ಹನಿ- ಹೀಗೆ ನಾಲ್ಕೈದು ರುಚಿಯ ಜೇನು ವೈವಿಧ್ಯ ಈ ಮ್ಯೂಸಿಯಂನಲ್ಲಿ ಲಭ್ಯ.

 

ಶೈಕ್ಷಣಿಕ ಪ್ರವಾಸಕ್ಕಾಗಿ ಮಕ್ಕಳನ್ನು ಕರೆದೊಯ್ಯುವ ಶಿಕ್ಷಕರು ಬಟಾನಿಕಲ್ ಗಾರ್ಡ್‌ನ್ ವೀಕ್ಷಿಸಿದ ನಂತರ ಮೈಸೂರು - ಗುಡಲೂರು ರಸ್ತೆಯಲ್ಲಿ ಹಿಲ್‌ಬಂಕ್ ಎದುರಿಗಿರುವ ‘ಬೀ ಮ್ಯೂಸಿಯಂ’ಗೂ ಭೇಟಿ ನೀಡಬಹುದು. ಮ್ಯೂಸಿಯಂಗೆ ಹೋಗುವ ಮುನ್ನ ಅಲ್ಲಿನ ಅಧಿಕಾರಿಗಳನ್ನು ಸಂಪರ್ಕಿಸಿ, ಭೇಟಿಗೆ ಅನುಮತಿ ಪಡೆಯಲು ಮರೆಯದಿರಿ.ಸಂಪರ್ಕ ವಿಳಾಸ: ಬೀ ಮ್ಯೂಸಿಯಂ ಮತ್ತು ಗ್ರೀನ್ ಶಾಪ್, ಹಿಲ್ ಬಂಕ್ ಎದುರು, ಗುಡಲೂರು-ಮೈಸೂರು ರಸ್ತೆ, ಊಟಿ, ತಮಿಳುನಾಡು- 643 001, ದೂರವಾಣಿ: 0423-2441340.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.