ಬುಧವಾರ, ಮೇ 12, 2021
18 °C

ಜೈಲಿನಲ್ಲಿ ಮೊಬೈಲ್ ಬಳಸುತ್ತಿದ್ದ ಉಗ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಸ್ಲಾಮಾಬಾದ್ (ಪಿಟಿಐ):  ತಾಲಿಬಾನ್ ಉಗ್ರರು ನಡೆಸಿದ ದಾಳಿಯ ಸಂದರ್ಭದಲ್ಲಿ ಪಾಕಿಸ್ತಾನದ ಜೈಲಿನಿಂದ ತಪ್ಪಿಸಿಕೊಂಡಿದ್ದ, ಪಾಕ್ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಅವರ ಹತ್ಯೆಗೆ ಯತ್ನಿಸಿದ ಆರೋಪದಲ್ಲಿ ಮರಣದಂಡನೆಗೆ ಗುರಿಯಾಗಿರುವ ಉಗ್ರ ಅದ್ನಾನ್ ರಶೀದ್ ಹೊರ ಜಗತ್ತಿನೊಂದಿಗೆ ಸಂಪರ್ಕದಲ್ಲಿರಲು ಜೈಲಿನಲ್ಲಿ ಮೊಬೈಲ್ ಹಾಗೂ ಫೇಸ್‌ಬುಕ್‌ನ್ನು ಬಳಸುತ್ತಿದ್ದ ಎಂಬ ಮಾಹಿತಿ ಈಗ ಹೊರ ಬಿದ್ದಿದೆ.ತಾಲಿಬಾನ್ ಉಗ್ರರು ಭಾನುವಾರ ನಡೆಸಿದ ದಾಳಿಯ ಸಂದರ್ಭದಲ್ಲಿ ಪಾಕಿಸ್ತಾನದ ಖೈಬರ್-ಪಂಖ್ತುಂಕ್ವಾ ಪ್ರಾಂತ್ಯದ ಬನ್ನುವಿನಲ್ಲಿರುವ ಸೆಂಟ್ರಲ್ ಜೈಲಿನಿಂದ ರಶೀದ್ ಸೇರಿದಂತೆ ಒಟ್ಟು 380 ಕೈದಿಗಳು ಪರಾರಿಯಾಗಿದ್ದರು.ಮರಣದಂಡನೆಗೆ ಗುರಿಯಾಗಿರುವ ಅದ್ನಾನ್ ರಶೀದ್‌ನನ್ನು ಜೈಲಿನಿಂದ ಬಿಡುಗಡೆಗೊಳಿಸುವ ಉದ್ದೇಶದಿಂದ ಉಗ್ರರು ಈ ದಾಳಿ ನಡೆಸಿದ್ದಾರೆ ಎಂದು ಭದ್ರತಾ ಅಧಿಕಾರಿಗಳು ಹೇಳಿದ್ದಾರೆ. ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಅವರನ್ನು 2003ರಲ್ಲಿ ಹತ್ಯೆ ಮಾಡಲು ಯತ್ನಿಸಿದ್ದಕ್ಕಾಗಿ ಸೇನಾ ನ್ಯಾಯಾಲಯ ರಶೀದ್‌ಗೆ ಗಲ್ಲು ಶಿಕ್ಷೆ ವಿಧಿಸಿತ್ತು.ನ್ಯಾಯಾಲಯ ಶಿಕ್ಷೆ ಪ್ರಕಟಿಸಿದ ಬಳಿಕ  ರಶೀದ್‌ನನ್ನು ಇರಿಸಲಾಗಿದ್ದ ವಿವಿಧ ಜೈಲುಗಳಲ್ಲಿ ಆತ ಮೊಬೈಲ್ ಬಳಸುತ್ತಿದ್ದ ಎಂದು ಮೂಲಗಳ ಹೇಳಿಕೆಗಳನ್ನು ಉಲ್ಲೇಖಿಸಿ `ದಿ ಡಾನ್~ ಪತ್ರಿಕೆ ಸೋಮವಾರ ವರದಿ ಮಾಡಿದೆ.ಪಾಕ್‌ನ ವಾಯುಪಡೆಯ ಮಾಜಿ ಕಿರಿಯ ತಂತ್ರಜ್ಞನಾಗಿರುವ ರಶೀದ್ ಜೈಲಿನಿಂದಲೇ ಫೇಸ್‌ಬುಕ್‌ನಂತಹ ಸಾಮಾಜಿಕ ಸಂವಹನ ತಾಣಗಳು, ಬ್ಲಾಗ್‌ಗಳಲ್ಲಿಯೂ ತನ್ನನ್ನು ತೊಡಗಿಸಿಕೊಂಡಿದ್ದ ಎಂದು ಪತ್ರಿಕೆ ಬರೆದಿದೆ.ಪತ್ರಕರ್ತರು ಸೇರಿದಂತೆ ಹಲವು ಜನರೊಂದಿಗೆ ರಶೀದ್ ಕಾರಾಗೃಹದಿಂದಲೇ ಸಂಪರ್ಕವಿರಿಸಿಕೊಂಡಿದ್ದ. ಪತ್ರಿಕಾ ವರದಿಗಾರರಿಗೆ ಆತ ಮೊಬೈಲ್ ಮೂಲಕ ಸಂದೇಶಗಳನ್ನೂ ರವಾನಿಸುತ್ತಿದ್ದ ಎಂದೂ ಪತ್ರಿಕೆ ವರದಿ ಹೇಳಿದೆ.ಮರಣದಂಡನೆಗೆ ಗುರಿಯಾಗಿರುವ 21 ಕೈದಿಗಳು ಸೇರಿದಂತೆ ಒಟ್ಟು 384 ಮಂದಿ ಭಾನುವಾರ ಬನ್ನು ಸೆಂಟ್ರಲ್ ಜೈಲಿನಿಂದ ಪರಾರಿಯಾಗಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.