ಮಂಗಳವಾರ, ಮೇ 18, 2021
24 °C

ಜೋಗದ ಸಂಗೀತ ಕಾರಂಜಿಗೆ ಪ್ರಾಯೋಗಿಕ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರ್ಗಲ್: ಸಮೀಪದ ಜೋಗ ಜಲಪಾತವನ್ನು ಸರ್ವಋತು ಪ್ರವಾಸಿ ತಾಣವಾಗಿ ಮಾಡುವ ನಿಟ್ಟಿನಲ್ಲಿ ನಿರ್ಮಿಸಿರುವ ಸಂಗೀತ ಕಾರಂಜಿಯನ್ನು ಮಂಗಳವಾರ ಸಂಜೆ ಪ್ರಾಯೋಗಿಕವಾಗಿ ಚಾಲನೆ ಮಾಡಲಾಗಿದೆ ಎಂದು ಜೋಗ ಅಭಿವೃದ್ಧಿ ಪ್ರಾಧಿಕಾರದ ಸಹಾಯಕ ನಿರ್ದೇಶಕ ಮತ್ತು ಸಾಗರ ಉಪ ವಿಭಾಗಾಧಿಕಾರಿ ಡಾ.ಪ್ರವೀಣ್ ಕುಮಾರ್ ತಿಳಿಸಿದರು.ಪಶ್ಚಿಮ ಬಂಗಾಲದ ಪ್ರೀಮಿಯರ್ ವರ್ಲ್ಡ್ ಟೆಕ್ನಾಲಜಿ ಸಂಸ್ಥೆ ರೂ1.2 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಸಂಗೀತ ಕಾರಂಜಿಯನ್ನು ಅತೀ ಶೀಘ್ರದಲ್ಲಿ ಉದ್ಘಾಟನೆ ಮಾಡಲಿರುವುದಾಗಿ ಅವರು ತಿಳಿಸಿದರು. ಇಲ್ಲಿಯವರೆಗೆ ವಿಳಂಬವಾಗಲು ಕಾರಣವಾಗಿದ್ದ ವಿದ್ಯುತ್ ವ್ಯವಸ್ಥೆ ಇನ್ನಿತರ ತಾಂತ್ರಿಕ ಕಾರಣಗಳನ್ನು ಸರಿಪಡಿಸಿಕೊಂಡಿದ್ದು, ಕಾರಂಜಿಯೊಂದಿಗೆ ಒಂದೂವರೆ ಗಂಟೆಗಳ ಕಾಲ ಜತೆಗೂಡುವ ಸಂಗೀತವನ್ನು ಸಂಯೋಜನೆ ಮಾಡಲಾಗಿದೆ ಎಂದು ಅವರು ವಿವರಿಸಿದರು.ಸಂಗೀತ ಕಾರಂಜಿಯಲ್ಲಿ ಮೂಡಿಬರುವ ಚಿತ್ರಗಳಲ್ಲಿ ಪ್ರಮುಖವಾಗಿ ರಾಷ್ಟ್ರ ನಾಯಕರ ಮತ್ತು ಸ್ವಾತಂತ್ರ್ಯ ಸಂಗ್ರಾಮದ ಚಿತ್ರಣಗಳು, ದೇಶದ ಹೆಮ್ಮೆಯ ಕ್ರೀಡಾಪಟುಗಳಾದ ಸಚಿನ್ ತೆಂಡೂಲ್ಕರ್, ಪಂಕಜ್ ಅಡ್ವಾಣಿ, ಪಿ.ಟಿ. ಉಷಾ, ಇನ್ನಿತರ ಪ್ರಮುಖರ ಚಿತ್ರಗಳು, ಇತಿಹಾಸದ ಪುಟಗಳು, ಜಾನಪದ ಮತ್ತು ಭಾವಗೀತೆಗಳನ್ನು  ಜೋಡಣೆ ಮಾಡಿದ್ದು, ಶಾಲಾ ಮಕ್ಕಳಿಗೆ ಮತ್ತು ಯುವಜನರಿಗೆ ಸ್ಫೂರ್ತಿಯನ್ನು ನೀಡುವ ಕೇಂದ್ರವಾಗಿ ಇದನ್ನು ಬಳಸಲಾಗುವುದು ಎಂದರು.ಮುಂದಿನ 2ವರ್ಷ ಕಾಲ ಸಂಗೀತ ಕಾರಂಜಿಯನ್ನು ಪಶ್ಚಿಮ ಬಂಗಾಲ ಮೂಲದ ಕಂಪೆನಿಯೇ ನಿರ್ವಹಿಸಿಕೊಂಡು ಹೋಗಬೇಕೆಂದು ಒಪ್ಪಂದವಾಗಿದೆ. ಇದರ ಜತೆಗೆ, ಜೋಗ ಜಲಪಾತದಲ್ಲಿ ಈಗಾಗಲೇ ನಿರ್ಮಾಣಗೊಂಡಿರುವ ಮಕ್ಕಳ ಉದ್ಯಾನಕ್ಕೆ ಚಾಲನೆ ನೀಡಲಾಗುವುದು ಎಂದರು.ಪ್ರವಾಸಿಗರ ಹಿತದೃಷ್ಟಿಯಿಂದ ರಾತ್ರಿ ಉಳಿದುಕೊಳ್ಳಲು ವ್ಯವಸ್ಥಿತವಾದ 250 ಕೊಠಡಿಗಳು ಜಲಪಾತದ ಬಳಿ ದೊರೆಯುವಂತೆ ಯೋಜನೆ ರೂಪಿಸಲಾಗುತ್ತಿದೆ. ಇದಕ್ಕಾಗಿ ಲೋಕೋಪಯೋಗಿ ಇಲಾಖೆಯ ವಸತಿಗೃಹ, ಮಯೂರ ಹೋಟೆಲ್, ತುಂಗಾ ಕಾಟೇಜ್ ಮತ್ತು ನಿರ್ಮಾಣ ಗೊಳ್ಳಲಿರುವ ಸೋಮ ಕನ್‌ಸ್ಟ್ರಕ್ಷನ್ ಕಂಪೆನಿಯ ಪಂಚಾತಾರಾ ಹೋಟೆಲ್‌ಗಳನ್ನು ಬಳಸಿಕೊಳ್ಳ ಲಾಗುವುದು ಎಂದು  ಉಪ ವಿಭಾಗಾಧಿಕಾರಿ ಹೇಳಿದರು.ಸೋಮ ಕನ್‌ಸ್ಟ್ರಕ್ಷನ್ ಕಂಪೆನಿಯ ಪಂಚತಾರಾ ಹೋಟೆಲ್ ನಿರ್ಮಾಣಕ್ಕೆ ಉಂಟಾಗಿದ್ದ ಅಡೆತಡೆಗಳು ನಿವಾರಣೆಯಾಗಿದ್ದು, ಕೆಲಸ ಸದ್ಯದಲ್ಲಿಯೇ ನಿಶ್ಚಿಂತೆಯಿಂದ ನಡೆಯಲಿದೆ. ಜೋಗ ಜಲಪಾತದ ಮುಂಭಾಗವು ಈಗಾಗಲೇ ಅಭಿವೃದ್ಧಿಗಳನ್ನು ಹೊಂದಿದ್ದು, ಜಲಪಾತದ ನೆತ್ತಿಯ ಭಾಗವಾಗಿರುವ ಬಾಂಬೆ ಟಿಬಿ ಪ್ರದೇಶವನ್ನು ಅಭಿವೃದ್ಧಿಪಡಿಸುವ ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.