ಬುಧವಾರ, ಏಪ್ರಿಲ್ 14, 2021
24 °C

ಜ್ಞಾನದ ದೀವಿಗೆ ಬೆಳಗುವ ಕಾಯಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುರುವೇಕೆರೆ: ಶಾಂತಿನಿಕೇತನದಂಥ ಮನಮೋಹಕ ಪರಿಸರ. ಸುತ್ತ ಹಚ್ಚ ಹಸಿರಿನ ಮಧ್ಯೆ ಹಕ್ಕಿಗಳ ಕಲರವ. ಈ ರಮ್ಯ ನಿಸರ್ಗದ ಮಧ್ಯೆ ವಿದ್ಯಾರ್ಥಿಗಳು ಒಂದು ಗಂಟೆಗೂ ಹೆಚ್ಚು ಅವಧಿ ತನ್ಮಯತೆಯಿಂದ ತಪಸ್ಸಿಗೆ ಕುಳಿತಿದ್ದರು. ಬುದ್ಧನಂತೆ ಜ್ಞಾನೋದಯಗೊಂಡು ಮೇಲೆದ್ದ ಒಬ್ಬೊಬ್ಬರೇ ವಿದ್ಯಾರ್ಥಿಗಳು ತಾವು ಓದಿದ ಪುಸ್ತಕದ ಸಂಕ್ಷಿಪ್ತ ಸಾರಾಂಶವನ್ನು ಪಟಪಟನೆ ಹೇಳಿ ನೆರೆದಿದ್ದವರನ್ನು ಬೆಕ್ಕಸ ಬೆರಗಾಗುವಂತೆ ಮಾಡಿದರು.ಇದು ಸಮೀಪದ ಕೊಡಗೀಹಳ್ಳಿಯಲ್ಲಿ ಬುಧವಾರ `ತೆಗೆಯಿರಿ ಪುಸ್ತಕ ಹೊರಗೆ, ಹಚ್ಚಿರಿ ಜ್ಞಾನದ ದೀವಿಗೆ~ ಕಾರ್ಯಕ್ರಮದಡಿ ಶಾಲಾ ಶ್ರದ್ಧಾ ವಾಚನಾಲಯ ಉದ್ಘಾಟನೆ ಸಂದರ್ಭ ವಿದ್ಯಾರ್ಥಿಗಳು ಗ್ರಂಥವಾಚನದ ಮಹತ್ವವನ್ನು ತಾವೂ ಅನುಭವಿಸಿ ಇತರರಿಗೂ ಉಣಬಡಿಸಿದರು.ಮಕ್ಕಳು ಟಿ.ವಿ, ಮೊಬೈಲ್, ಸಿನೆಮಾ ಎಂದು ಮಾಧ್ಯಮಗಳ ಆಕ್ರಮಣಕ್ಕೊಳಗಾಗಿ ಸಾಂಸ್ಕೃತಿಕ ನೆಲೆಯೆನಿಸಿದ ಅಕ್ಷರ ಸಂಸ್ಕೃತಿ ಮರೆಯುತ್ತಿರುವಾಗ ಕೊಡಗಿಹಳ್ಳಿ ಶಾಲೆಯ ಈ ಕಾರ್ಯಕ್ರಮ ವಿಶಿಷ್ಟ ಎನಿಸಿತ್ತು. ಕಾರ್ಯಕ್ರಮದ ಹೆಸರಿಗೆ ಅನುಗುಣವಾಗಿ ಶಾಲೆ ಗ್ರಂಥಾಲಯದ 2500ಕ್ಕೂ ಹೆಚ್ಚು ಪುಸ್ತಕಗಳನ್ನು ಹೊರ ತೆಗೆದು ಶಾಲೆ ಆವರಣದಲ್ಲಿ ಓರಣವಾಗಿ ಜೋಡಿಸಿಡಲಾಗಿತ್ತು.ಆರಂಭದಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಪುಸ್ತಕಗಳ ಹಾಗೂ ಅವುಗಳ ಲೇಖಕರ ಪರಿಚಯ ಮಾಡಿಕೊಡಲಾಯಿತು. ಪುಸ್ತಕ ಸಂರಕ್ಷಿಸುವ ಹಾಗೂ ಜೋಡಿಸಿಡುವ ಕಲೆ ಬಗ್ಗೆ ವೈಜ್ಞಾನಿಕ ಮಾಹಿತಿ ನೀಡಲಾಯಿತು. ಪ್ರತಿಯೊಬ್ಬ ವಿದ್ಯಾರ್ಥಿಗೂ ಅವನ ಅಭಿಪ್ರಾಯಕ್ಕನುಗುಣವಾಗಿ ಒಂದೊಂದು ಪುಸ್ತಕವನ್ನು ತಾವೇ ಆರಿಸಿಕೊಳ್ಳುವಂತೆ ಸೂಚಿಸಲಾಯಿತು. ವಿದ್ಯಾರ್ಥಿಗಳು ಪ್ರಕೃತಿ ಮಡಿಲಲ್ಲಿ ಕುಳಿತು ನಿಶ್ಯಬ್ಧವಾಗಿ ಈ ಪುಸ್ತಕಗಳನ್ನು ಮುಕ್ಕಾಲು ಗಂಟೆ ಓದಿದರು.ನಂತರ ಒಬ್ಬೊಬ್ಬರೇ ಎದ್ದು ತಾವು ಓದಿದ ಪುಸ್ತಕದ ಸಾರಾಂಶವನ್ನು ತಮ್ಮದೇ ತೊದಲು ಭಾಷೆಯಲ್ಲಿ ಹೇಳಿ ಸಂಭ್ರಮಿಸಿದರು. ಒಂದೇ ಪುಸ್ತಕದ ಕೆಲ ಘಟನೆಗಳನ್ನು ಎರಡು ಮೂರು ವಿದ್ಯಾರ್ಥಿಗಳಿಗೆ ಓದಿಸಿ ಅವರ ಕಲ್ಪನೆಯಲ್ಲಿ ವಿವಿಧ ಪರಿಸರ, ವ್ಯಕ್ತಿಗಳಲ್ಲಿರುವ ವ್ಯತ್ಯಾಸವನ್ನು ಗುರುತಿಸುವಂತೆ ಹೇಳಲಾಯಿತು.

 

ಪುಸ್ತಕ ಓದುವಾಗ ಹೇಗೆ ನಮ್ಮ ಕಲ್ಪನೆ ಸ್ವತಂತ್ರ, ಮುಕ್ತವಾಗಿರುತ್ತವೆ. ದೃಶ್ಯ ಮಾಧ್ಯಮ ಹೇಗೆ ನಮ್ಮ ಆಲೋಚನೆ ಹಾಗೂ ಕಲ್ಪನೆಗೆ ನಿರ್ಬಂಧ ವಿಧಿಸುತ್ತದೆ ಎನ್ನುವುದನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡಲಾಯಿತು.ಶಾಲೆ ಮುಖ್ಯೋಪಾಧ್ಯಾಯ ಗಂಗೇಗೌಡ, ಗ್ರಂಥಾಲಯ ಮೇಲ್ವಿಚಾರಕಿ ಸುಮಿತ್ರಾ, ನಂದಕಿಶೋರ್, ಸತೀಶ್, ಮಂಜುನಾಥ್, ಜಯಣ್ಣ ಮೊದಲಾದ ಶಿಕ್ಷಕರ ಈ ಪ್ರಯತ್ನ ಅಕ್ಷರಶಃ ಜ್ಞಾನದ ದೀವಿಗೆಯನ್ನು ಬೆಳಗುವ ನಿಟ್ಟಿನಲ್ಲಿ ಸಾರ್ಥಕ ಪ್ರಯತ್ನ ಎನಿಸಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.