ಬುಧವಾರ, ಮೇ 12, 2021
19 °C

ಟಿಸಿ ದುರಸ್ತಿಗಾಗಿ ರೈತರ ಅಲೆದಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ಸುಟ್ಟಿರುವ ವಿದ್ಯುತ್ ಪರಿವರ್ತಕ ದುರಸ್ತಿ ಮಾಡಿಕೊಡುವಂತೆ ಸೆಸ್ಕ್ ಅಧಿಕಾರಿಗಳಿಗೆ ರೈತರು ಮನವಿ ಮಾಡಿದರೆ, ಚಂದಾ ಹಣ ಹಾಕಿಕೊಂಡು ಖಾಸಗಿಯವರಲ್ಲಿ ನೀವೇ ದುರಸ್ತಿ ಮಾಡಿಸಿಕೊಳ್ಳಿ ಎಂಬ ಉಚಿತ ಸಲಹೆ ನೀಡುತ್ತಾರೆ.ಇದು ಮಂಡ್ಯ ಜಿಲ್ಲೆಯ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ (ಸೆಸ್ಕ್) ಅಧಿಕಾರಿಗಳ ಕಾರ್ಯವೈಖರಿ.ಹೀಗೆ ಮಾಡಿದ ಎಂಜಿನಿಯರ್ ಒಬ್ಬರು ಬಿಲ್ ಪಾವತಿಗೆ ಸಂಬಂಧಿಸಿದಂತೆ ಸಿಕ್ಕಿ ಬಿದ್ದಿದ್ದು, ಅವರಿಗೆ ಷೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ.ಜಿಲ್ಲೆಯಲ್ಲಿ  ತಿಂಗಳಿಗೆ 200ಕ್ಕೂ ಹೆಚ್ಚು ವಿದ್ಯುತ್ ಪರಿವರ್ತಕಗಳು ಹಾಳಾಗುತ್ತಿವೆ. ಅವುಗಳಲ್ಲಿ ಬಹುತೇಕ ವಿದ್ಯುತ್ ಪರಿವರ್ತಕಗಳನ್ನು (ಟಿಸಿ) ರೈತರೇ ದುರಸ್ತಿ ಮಾಡಿಸಿಕೊಳ್ಳಬೇಕಾದ ಸ್ಥಿತಿ ಜಿಲ್ಲೆಯ ರೈತರದ್ದಾಗಿದೆ.ವಿದ್ಯುತ್ ಪರಿವರ್ತಕ ಸುಟ್ಟರೆ ಅದನ್ನು 72 ಗಂಟೆಗಳಲ್ಲಿ ಬದಲಾಯಿಸಿಕೊಡಬೇಕು ಎಂದಿದೆ. ಆದರೆ, ಜಿಲ್ಲೆಯಲ್ಲಿ ಮಾತ್ರ 15 ದಿನಗಳಾದರೂ ಬದಲಾಯಿಸುವುದಿಲ್ಲ. ಪರಿಣಾಮ ಕುಡಿಯುವ ನೀರು, ಗಿರಣಿಗೆ ಹಿಟ್ಟು ಹಾಕಿಸುವುದು, ಇಡೀ ಗ್ರಾಮವೇ ಕತ್ತಲಿನಲ್ಲಿ ಕಳೆಯುವುದು ಸೇರಿದಂತೆ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಗ್ರಾಮದಲ್ಲಿ ಈ ಸಮಸ್ಯೆಗಳಾದರೆ, ಹೊಲಗಳಲ್ಲಿ ಬೆಳೆದ ಬೆಳೆ ಕಣ್ಣು ಮುಂದೆಯೇ ಮುರುಟಿ ಹೋಗುತ್ತದೆ. ಸಾವಿರಾರು ರೂಪಾಯಿಯ ನಷ್ಟವನ್ನು ರೈತರು ಅನುಭವಿಸಬೇಕಾಗುತ್ತದೆ. ಇದರಿಂದ ಪಾರಾಗಲು ತಾವೇ ದುರಸ್ತಿ ಮಾಡಿಸಲು ರೈತರು ಮುಂದಾಗುತ್ತಿದ್ದಾರೆ.ಮಂಡ್ಯ ತಾಲ್ಲೂಕಿನ ತುಂಬಕೆರೆ, ಮಲ್ಲಗೆರೆ ಸೇರಿದಂತೆ ಹಲವು ಕಡೆಗಳಲ್ಲಿ ವಿದ್ಯುತ್ ಪರಿವರ್ತಕಗಳು ಹಾಳಾಗಿವೆ. ಹದಿನೈದು ದಿನಗಳವರೆಗೆ ದುರಸ್ತಿ ಮಾಡಲು ಆಗುವುದಿಲ್ಲ. ಖಾಸಗಿಯವರ ಬಳಿ ದುರಸ್ತಿ ಮಾಡಿಕೊಳ್ಳಿ ಎಂದು ಪುಕ್ಕಟ್ಟೆ ಸಲಹೆ ನೀಡಿ ಕಳುಹಿಸಿದ್ದಾರೆ ಎನ್ನುವುದು ರೈತರ ದೂರು.`ಇಪ್ಪತ್ತು ದಿನಗಳ ಹಿಂದೆ ಟಿಸಿ ಸುಟ್ಟಿತ್ತು. ದೂರು ನೀಡಿದ್ದೇವು. ವಿಳಂಬವಾಗುತ್ತದೆ ಎಂಬ ಕಾರಣಕ್ಕೆ ತೂಬನಕೆರೆಯಲ್ಲಿ ನಾವೇ ಹಣ ತೆತ್ತು ದುರಸ್ತಿ ಮಾಡಿಸಿಕೊಂಡು ಬಂದಿದ್ದೇವು. ಈಗ ಮತ್ತೆ ಹಾಳಾಗಿದೆ. ಅಧಿಕಾರಿಗಳನ್ನು ಕೇಳಿದರೆ, ಖಾಸಗಿಯವರಲ್ಲಿಯೇ ದುರಸ್ತಿ ಮಾಡಿಸಿಕೊಂಡು ಬರಲು ಹೇಳುತ್ತಿದ್ದಾರೆ ಎಂದು ರೈತ ಪ್ರಕಾಶ್ ದೂರುತ್ತಾರೆ.ಪ್ರತಿ ಬಾರಿ ಹೀಗಾದರೆ ನಾವೆಲ್ಲಿಂದ ಹಣ ತರುವುದು. ಹಾಗಾದರೆ ನಿಗಮ ಇರುವುದಾದರೂ ಏಕೆ ಎಂಬ ಪ್ರಶ್ನೆ ಅವರದ್ದು.ಜಿಲ್ಲೆಯ ಹಲವಾರು ರೈತರದ್ದೂ ಇದೆ ಪ್ರಶ್ನೆಯಾಗಿದೆ. ಇದಕ್ಕೆ ಉತ್ತರ ನೀಡಬೇಕಾಗಿದ್ದ ಜಿಲ್ಲಾ ಉಸ್ತುವಾರಿ ಸಚಿವರು ಇತ್ತ ಕಾಲಿಟ್ಟಿಲ್ಲ. ಜಿಲ್ಲಾಡಳಿತ ತಲೆ ಕೆಡೆಸಿಕೊಳ್ಳುತ್ತಿಲ್ಲ. ಪರಿಣಾಮ ರೈತರ ಅಲೆದಾಟ ಮುಂದುವರೆದಿದೆ.

ಸಿಕ್ಕಿ ಬಿದ್ದ ಎಂಜಿನಿಯರ್

ಮಂಡ್ಯ: ತಾಲ್ಲೂಕಿನ ಸಿದ್ದಗಂಗನವಾಡಿಯಲ್ಲಿ ನಡೆದ ವಿದ್ಯುತ್ ಪರಿವರ್ತಕ ಸುಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಜಿನಿಯರ್ ಒಬ್ಬರಿಗೆ ಷೋಕಾಸ್ ನೋಟಿಸ್ ನೀಡಲು ನಿರ್ಧರಿಸಲಾಗಿದೆ.ಸಿದ್ದಗಂಗನವಾಡಿಯಲ್ಲಿ ವಿದ್ಯುತ್ ಪರಿವರ್ತಕ ಸುಟ್ಟಿತು. ರೈತರು ರಿಪೇರಿಗೆ ಮನವಿ ಮಾಡಿದಾಗ, ನೀವೇ ಮಾಡಿಸಿಕೊಂಡು ಎಂಬ ಸಲಹೆಯನ್ನು ರೈತರು                    ನೀಡಿದರು. ಅವರು ನಾಗಮಂಗಲಕ್ಕೆ ತೆಗೆದುಕೊಂಡು ಹೋಗಿ ದುರಸ್ತಿ ಕೊಟ್ಟುಬಂದರು. 12 ಸಾವಿರ ರೂಪಾಯಿ ಬಿಲ್ ಬಂದಾಗ ರೈತರು ಕೊಡಲು ಮುಂದಾಗಲಿಲ್ಲ. ಟಿಸಿ ಅಲ್ಲಿಯೇ ಉಳಿಯಿತು.ಬಿಲ್ ಪಾವತಿಯ ವಿಷಯ ಬಂದಾಗ ಎಂಜಿನಿಯರ್ ಸಿಕ್ಕು ಬಿದ್ದಿದ್ದಾರೆ. ಅವರಿಗೆ ಕಾರಣ ಕೇಳಿ ನೋಟಿಸ್ ನೀಡಲಾಗುತ್ತಿದೆ ಎಂದು ಕಾರ್ಯನಿರ್ವಾಹಕ ಎಂಜಿನಿಯರ್ ದುರ್ಗಪ್ಪ `ಪ್ರಜಾವಾಣಿ'ಗೆ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.