ಭಾನುವಾರ, ಮಾರ್ಚ್ 7, 2021
18 °C

ಟೆನಿಸ್‌ ಮೋಸದಾಟಕ್ಕೆ ಕಡಿವಾಣ ಹಾಕಬೇಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಟೆನಿಸ್‌ ಮೋಸದಾಟಕ್ಕೆ ಕಡಿವಾಣ ಹಾಕಬೇಕು

ಟೆನಿಸ್‌ನಲ್ಲಿ ಇದೀಗ ಸೃಷ್ಟಿಯಾಗಿರುವ ಮೋಸದಾಟ ವಿವಾದವನ್ನು ಟೆನಿಸ್‌ ಆಡಳಿತಗಾರರು ಗಂಭೀರವಾಗಿ ಪರಿಗಣಿಸಬೇಕಿದೆ. ಈ ಪಿಡುಗನ್ನು ಮೊಳಕೆಯಲ್ಲೇ ಹೊಸಕಿ ಹಾಕಬೇಕಿದೆ.ಐಪಿಎಲ್‌ ಕ್ರಿಕೆಟ್‌ನಲ್ಲಿ ಸ್ಪಾಟ್‌ ಫಿಕ್ಸಿಂಗ್‌ ಹಗರಣ, ಫಿಫಾದಲ್ಲಿ ನಡೆದ ಭಾರೀ ಪ್ರಮಾಣದ ಭ್ರಷ್ಟಾಚಾರ, ಅಥ್ಲೆಟಿಕ್ಸ್‌, ಸೈಕ್ಲಿಂಗ್‌ ಕ್ಷೇತ್ರದ ಉದ್ದೀಪನಾ ಮದ್ದು ಸೇವನೆ ಪ್ರಕರಣಗಳು ಈಚೆಗಿನ ವರ್ಷಗಳಲ್ಲಿ ಕ್ರೀಡಾ ಲೋಕವೇ ತತ್ತರಗೊಳ್ಳುವಂತೆ ಮಾಡಿವೆ. ಇದೀಗ ಟೆನಿಸ್‌ ಅಂಗಳದಲ್ಲಿಯೂ ‘ಮ್ಯಾಚ್‌ ಫಿಕ್ಸಿಂಗ್‌’ನ ಹಾವಳಿಯ ವಿವರ ಬಯಲಾಗುತ್ತಿದ್ದಂತೆಯೇ ಜಗತ್ತಿನಾದ್ಯಂತ ಟೆನಿಸ್‌ ಪ್ರಿಯರು ಬಹಳಷ್ಟು ನೊಂದುಕೊಂಡಿದ್ದಾರೆ.ಇಂತಹ ಮೋಸದಾಟದ ಸುದ್ದಿ ಲಕ್ಷಾಂತರ ಟೆನಿಸ್‌ ಪ್ರಿಯರ ನಂಬಿಕೆಗಳನ್ನೇ ಬುಡಮೇಲು ಮಾಡಿದೆ.  ‘ಇಂತಹ ಪಂದ್ಯದಲ್ಲಿ ಸೋತರೆ, ಇಷ್ಟು ಹಣ ನೀಡುತ್ತೇವೆ’ ಎಂಬ ಆಮಿಷವನ್ನು ಪಂದ್ಯಕ್ಕೆ ಮೊದಲೇ ಬುಕ್ಕಿಗಳು ಒಡ್ಡುತ್ತಿದ್ದರು ಎಂದು ಕೆಲವು ಹಿರಿಯ ಆಟಗಾರರೇ ಹೇಳಿರುವುದು ಟೆನಿಸ್‌ ರಂಗದಲ್ಲಿ ಎಲ್ಲವೂ ಸರಿ ಇಲ್ಲ ಎಂಬುದಕ್ಕೆ ನಿದರ್ಶನದಂತಿದೆ. ಬಿಬಿಸಿ ಸುದ್ದಿ ಸಂಸ್ಥೆ ಮತ್ತು ಬಜ್‌ಫೀಡ್‌ ನ್ಯೂಸ್‌ ಸಂಸ್ಥೆಗಳು ತಮ್ಮ ತನಿಖಾ ವರದಿಯಲ್ಲಿ ಈ ಹಗರಣದ ಮೇಲೆ ಬೆಳಕು ಚೆಲ್ಲಿ ಶ್ಲಾಘನಾರ್ಹ ಕೆಲಸ ಮಾಡಿವೆ. ಆದರೆ ಈ ವಿವಾದದ ಕುರಿತು ಪ್ರತಿಕ್ರಿಯೆ ನೀಡಿರುವ ಹಿರಿಯ ಆಟಗಾರ ನೊವಾಕ್‌ ಜೊಕೊವಿಚ್‌ ‘ಈ ಪಿಡುಗು ಇಂದು ನಿನ್ನೆಯದೇನಲ್ಲ. ಬಹಳ ಹಿಂದೆಯೇ ಬುಕ್ಕಿಗಳು ನನಗೂ ಆಮಿಷ ಒಡ್ಡಿದ್ದರು’ ಎಂದಿರುವುದು ಆತಂಕ ಉಂಟು ಮಾಡುವಂತಹದ್ದಾಗಿದೆ.ಭಾರತ ಮೂಲದ ಅರವಿಂದ್‌ ಪರಮಾರ್‌ ಹಿಂದೆ ಇಂಗ್ಲೆಂಡ್‌ ತಂಡದ ಪರ ಡೇವಿಸ್‌ ಕಪ್‌ನಲ್ಲಿ ಆಡಿರುವ ಅನುಭವಿ. ಇವರು ಈ ಹಗರಣದ ಬಗ್ಗೆ ಸುದ್ದಿ ಸಂಸ್ಥೆಗಳ ಜತೆ ಮಾತನಾಡಿ ‘ಹಿಂದೆ ಪಂದ್ಯವೊಂದರ ಎರಡು ಸೆಟ್‌ಗಳನ್ನು ಸೋತರೆ ಇಷ್ಟು ಹಣ ನೀಡಲಾಗುವುದು ಎಂದು ಬುಕ್ಕಿಯೊಬ್ಬರು ನನಗೆ ಪ್ರಲೋಭನೆ ಒಡ್ಡಿದ್ದರು. ಕರೆನ್ಸಿ ನೋಟುಗಳ ಕಟ್ಟುಗಳನ್ನೇ ಮುಂಗಡವಾಗಿ ನೀಡಲು ಅವರು ಮುಂದೆ ಬಂದಿದ್ದರು’ ಎಂದಿರುವುದು ಟೆನಿಸ್‌ನಲ್ಲಿ ಮೋಸದಾಟ ಪೆಡಂಭೂತವಾಗಿ ಬೆಳೆದಿರುವುದನ್ನು ಬೆಟ್ಟು ಮಾಡಿ ತೋರಿಸುವಂತಿದೆ.ಬಿಬಿಸಿಯ ಜತೆ ಅನಿಸಿಕೆ ಹಂಚಿಕೊಂಡಿರುವ ದಕ್ಷಿಣ ಅಮೆರಿಕಾದ ಆಟಗಾರರೊಬ್ಬರು ‘ಟೆನಿಸ್‌ನಲ್ಲಿ ಮೋಸದಾಟ ಎನ್ನುವುದು ಎಲ್ಲರಿಗೂ ಗೊತ್ತಿರುವ ಗುಟ್ಟು’ ಎಂದಿರುವುದೂ ಅರ್ಥಗರ್ಭಿತ. ಇದೀಗ ನಡೆಯುತ್ತಿರುವ ಆಸ್ಟ್ರೇಲಿಯ ಓಪನ್‌ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿರುವವರಲ್ಲಿ ಹದಿನಾರು ಮಂದಿ ಆಟಗಾರರು ಮೋಸದಾಟ ಆಡಿರುವವರೆಂದು ಶಂಕಿಸಲಾಗಿದೆ. ಇಂತಹ ಸಂದರ್ಭದಲ್ಲಿ ಟೆನಿಸ್‌ ಆಡಳಿತಗಾರರು ಕೈಕಟ್ಟಿ ಕುಳಿತುಕೊಳ್ಳಬಾರದು. ಎಲ್ಲಾ ಕಾನೂನು ತೊಡಕುಗಳ ನಡುವೆಯೂ ಅಂತಹ ಆಟಗಾರರ ಹೆಸರುಗಳನ್ನು ಬಹಿರಂಗಗೊಳಿಸಬೇಕು. ಈ ಸಮಸ್ಯೆಯ ಮೂಲವನ್ನು ಕೆದಕಿ, ಅದರ ಮೂಲೋತ್ಪಾಟನೆ ಮಾಡುವ ದಿಸೆಯಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು.ವೃತ್ತಿಪರ ಟೆನಿಸ್‌ ಆಟಗಾರರ ಸಂಸ್ಥೆಯ(ಎಟಿಪಿ) ಅಧ್ಯಕ್ಷ ಕ್ರಿಸ್‌ ಕರ್ಮೋಡ್‌ ಈ ಹಗರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರನ್ನು ಗುರುತಿಸುವಲ್ಲಿನ ತೊಡಕುಗಳ ಬಗ್ಗೆ ಮಾತನಾಡಿದ್ದಾರೆ. 7 ವರ್ಷಗಳಲ್ಲಿ ನಡೆದ ಸುಮಾರು 26 ಸಾವಿರ ಪಂದ್ಯಗಳನ್ನು ಸೂಕ್ಷ್ಮವಾಗಿ ಪರಿಶೀಲನೆ ನಡೆಸಿರುವ ಬಿಬಿಸಿ ತನಿಖಾ ತಂಡ ಮೋಸದಾಟವನ್ನು ಶಂಕಿಸಿದೆ. ಕೆಲವು ಪ್ರಮುಖ ಆಟಗಾರರು ಕೆಲವು ಪಂದ್ಯಗಳಲ್ಲಿ ಅನುಮಾನಾಸ್ಪದವಾಗಿ ಸೋತಿರುವುದನ್ನು ಗುರುತಿಸಿದೆ.ಒಬ್ಬ ಆಟಗಾರನಂತೂ ಸತತವಾಗಿ ಕೆಲವು ಪಂದ್ಯಗಳಲ್ಲಿ ಮೊದಲ ಸೆಟ್‌ನಲ್ಲೇ ಸೋತಿರುವುದನ್ನೂ ತನಿಖಾ ತಂಡ ಪತ್ತೆ ಹಚ್ಚಿದೆ. ಆದರೆ ಇಂತಹ ಯಾವುದೇ ಪ್ರಕರಣದಲ್ಲಿಯೂ ಮೋಸದಾಟ ನಡೆದಿದೆ ಎಂಬುದನ್ನು ನಿಖರವಾಗಿ ಹೇಳುವಂತಿಲ್ಲ. ಏಕೆಂದರೆ ಯಾವುದಕ್ಕೂ ಸಾಕ್ಷ್ಯ ಇರುವುದಿಲ್ಲ. ಅಂತರರಾಷ್ಟ್ರೀಯ ಟೆನಿಸ್‌ ಫೆಡರೇಷನ್‌ ಎರಡು ವರ್ಷಗಳ ಅಧ್ಯಯನ ಒಂದನ್ನು ನಡೆಸಿತ್ತು. ಅದರ ಪ್ರಕಾರ ವಿಶ್ವದಲ್ಲಿ ಸುಮಾರು 13 ಸಾವಿರದಷ್ಟು ನೋಂದಾಯಿತ ವೃತ್ತಿಪರ ಟೆನಿಸ್‌ ಆಟಗಾರರಿದ್ದರು. ಅವರಲ್ಲಿ ಶೇಕಡ 45ರಷ್ಟು ಮಂದಿಗೆ ಯಾವುದೇ ತೆರನಾದ ಗಳಿಕೆ ಇರಲಿಲ್ಲ.ಇವತ್ತಿನ ಪರಿಸ್ಥಿತಿ ಕೂಡಾ ಅದಕ್ಕಿಂತ ತೀರಾ ಭಿನ್ನವಾಗೇನೂ ಇಲ್ಲ. ಆಟಗಾರರ ಇಂತಹ ಅಸಹಾಯಕ ಪರಿಸ್ಥಿತಿಯ ಲಾಭ ಪಡೆದು ತಮ್ಮ ಬೇಳೆ ಬೇಯಿಸಿಕೊಳ್ಳುವ ಬೆಟ್ಟಿಂಗ್‌ ದಂಧೆಯ ಮಂದಿ ಈ ಕ್ರೀಡೆಗೆ ಕೇಡು ಎಸಗುತ್ತಿದ್ದಾರೆ. ಇಂತಹ ಕೆಡುಕುಗಳ ಕುರಿತು ಕಿರಿಯ ಆಟಗಾರರಲ್ಲಿ ಅರಿವು ಮೂಡಿಸುವ ಕೈಂಕರ್ಯ ವ್ಯಾಪಕವಾಗಿ ನಡೆಯಬೇಕಿದೆ.ಟೆನಿಸ್‌ ಲೋಕದ ಆಗುಹೋಗುಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಕೆಲವು ಬೆಟ್ಟಿಂಗ್‌ ಸಂಸ್ಥೆಗಳೇ ಆಟಗಾರರಿಗೆ ಪ್ರಾಯೋಜಕತ್ವ ನೀಡುವುದು ಮತ್ತು ಕೆಲವು ಪ್ರಮುಖ ಟೂರ್ನಿಗಳ ಸಂಘಟನೆಯಲ್ಲಿ ಸಹಭಾಗಿತ್ವ ಹೊಂದಿರುವುದನ್ನು ಕಾಣಬಹುದು. ಇಂತಹ ಪ್ರಾಯೋಜಕತ್ವ ಮತ್ತು ಮೋಸದಾಟಗಳ ನಡುವಣ ಸಂಬಂಧವನ್ನು ಟೆನಿಸ್‌ ಆಡಳಿತಗಾರರು ಗುರುತಿಸುವ ಅಗತ್ಯವಿದೆ. ಬಿಬಿಸಿ ತನಿಖಾ ವರದಿಯ ಪ್ರಕಾರ ಈ ಮೋಸದಾಟ ಪ್ರಕ್ರಿಯೆಯಲ್ಲಿ ಅನೇಕ ಮಂದಿ ಇರುವ ದೊಡ್ಡ ತಂಡವೇ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿವೆ. ಕ್ರೀಡಾಳಿತಗಾರರು ಇಂತಹ ಜಾಲದ ಬಗ್ಗೆ ಹದ್ದಿನ ಕಣ್ಣಿಡಬೇಕಾದ ಅಗತ್ಯವಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.