ಟೆಸೊ ಸಭೆಗೆ ಮದ್ರಾಸ್ ಹೈಕೋರ್ಟ್ ಅನುಮತಿ
ಚೆನ್ನೈ (ಪಿಟಿಐ): ಡಿಎಂಕೆ ನಾಯಕ ಎಂ. ಕರುಣಾನಿಧಿ ಅವರಿಗೆ ಕೊನೆಯ ಕ್ಷಣದಲ್ಲಿ ವಿವಾದಾತ್ಮಕ `ಟೆಸೊ~ (ಪ್ರತ್ಯೇಕ ತಮಿಳು ದೇಶ ಬೆಂಬಲಿಗರ ಸಂಘಟನೆ) ಸಭೆ ನಡೆಸಲು ಮದ್ರಾಸ್ ಹೈಕೋರ್ಟ್ ವಿಭಾಗೀಯ ಪೀಠ ಭಾನುವಾರ ಮಧ್ಯಾಹ್ನ ಅನುಮತಿ ನೀಡಿ ಆದೇಶ ಹೊರಡಿಸಿತು.
ಚೆನ್ನೈನ `ವೈಎಂಸಿಎ~ ಮೈದಾನದಲ್ಲಿ ಸಭೆ ನಡೆಸಲು ಅನುಮತಿ ನಿರಾಕರಿಸಿ ಚೆನ್ನೈ ಪೊಲೀಸ್ ಆಯುಕ್ತರು ಹೊರಡಿಸಿದ್ದ ಆದೇಶಕ್ಕೆ ನ್ಯಾಯಮೂರ್ತಿಗಳಾದ ಇ. ಧರ್ಮರಾವ್ ಹಾಗೂ ಎಂ. ವೇಣುಗೋಪಾಲ್ ತಡೆ ನೀಡಿದರು.
ಇದಕ್ಕೂ ಮುನ್ನ ಶನಿವಾರ, ಮದ್ರಾಸ್ ಹೈಕೋರ್ಟ್ನ ಏಕ ಸದಸ್ಯ ಪೀಠದ ನ್ಯಾಯಮೂರ್ತಿಗಳು ಪೊಲೀಸ್ ಆಯುಕ್ತರ ಆದೇಶ ಪ್ರಶ್ನಿಸಿ ಡಿಎಂಕೆ ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ಕೈಗೆತ್ತಿಕೊಳ್ಳಲು ನಿರಾಕರಿಸಿದ್ದರು. ಈ ಕಾರಣದಿಂದ ಅರ್ಜಿಯ ವಿಚಾರಣೆ ವಿಭಾಗೀಯ ಪೀಠದ ಮುಂದೆ ಬಂದಿತ್ತು.
ಭಾನುವಾರವಾದರೂ ವಿಭಾಗೀಯ ಪೀಠ ವಿಶೇಷ ಕಲಾಪ ನಡೆಸಿ `ಟೆಸೊ~ ಸಭೆ ನಡೆಸಲು ಅನುಮತಿ ನೀಡಿತು.
`ಟೆಸೊ~ ಸಭೆಯ ಶೀರ್ಷಿಕೆಯಲ್ಲಿ ಈಳಂ (ತಮಿಳರಿಗೆ ಪ್ರತ್ಯೇಕ ನಾಡು) ಶಬ್ದ ಬಳಸುವುದಕ್ಕೆ ವಿರೋಧ ವ್ಯಕ್ತಪಡಿಸಿ ತಮಿಳುನಾಡು ಸರ್ಕಾರ ಹಾಗೂ ಕೇಂದ್ರ ಸರ್ಕಾರ ಶುಕ್ರವಾರ ಕೋರ್ಟ್ನಲ್ಲಿ ಆಕ್ಷೇಪ ಸಲ್ಲಿಸಿದ್ದವು.
ಆದರೆ, ಕೇಂದ್ರ ಸರ್ಕಾರ ಶನಿವಾರ ಏಕಾಏಕಿ ತನ್ನ ನಿಲುವು ಬದಲಿಸಿತು. ಈಳಂ ಶಬ್ದ ಬಳಕೆಗೆ ತನ್ನ ಆಕ್ಷೇಪವಿಲ್ಲ ಎಂದು ಹೇಳಿತು.
ವಿದೇಶಾಂಗ ಸಚಿವಾಲಯ `ಟೆಸೊ~ ಸಂಘಟಕರಿಗೆ ಕಳುಹಿಸಿದ ಪತ್ರವನ್ನು ಸಹ ಡಿಎಂಕೆ ಕೋರ್ಟ್ ಮುಂದೆ ಇಟ್ಟಿತ್ತು. ಭಾರತ ರಾಜತಾಂತ್ರಿಕ ಸಂಬಂಧ ಹೊಂದಿರುವ ಯಾವುದೇ ದೇಶದ ಸಾರ್ವಭೌಮತ್ವ, ಏಕತೆಯನ್ನು ಪ್ರಶ್ನಿಸುವ ಘೋಷಣೆಯನ್ನು ಈ ಸಭೆಯಲ್ಲಿ ಮಾಡಬಾರದು ಎಂದು ವಿದೇಶಾಂಗ ಸಚಿವಾಲಯ `ಟೆಸೊ~ಗೆ ತಾಕೀತು ಮಾಡಿತು.
`ಟೆಸೊ~ಗೆ ಜೀವ ತುಂಬಲು ಯತ್ನ
1980ರಲ್ಲಿ ಶ್ರೀಲಂಕಾದಲ್ಲಿ ತಮಿಳು ನಾಗರಿಕರ ಮೇಲೆ ಸಿಂಹಳೀಯರಿಂದ ದೌರ್ಜನ್ಯ ನಡೆಯುತ್ತಿದ್ದಾಗ ಡಿಎಂಕೆ ನಾಯಕ ಕರುಣಾನಿಧಿ `ಟೆಸೊ~ (ಪ್ರತ್ಯೇಕ ತಮಿಳು ದೇಶ ಬೆಂಬಲಿಗರ ಸಂಘಟನೆ) ಸ್ಥಾಪಿಸಿದ್ದರು. ಈಗ ಮತ್ತೆ `ಟೆಸೊ~ಗೆ ಜೀವ ತುಂಬಲು ಯತ್ನಿಸುತ್ತಿದ್ದಾರೆ. ಇದೇ ಕಾರಣಕ್ಕಾಗಿ ಭಾನುವಾರ `ಈಳಂ~ ಪರ ಅಂತರರಾಷ್ಟ್ರೀಯ `ಟೆಸೊ~ ಸಭೆ ಕರೆದಿದ್ದರು.
`ಟೆಸೊ~ ಸಭೆಗೂ ಮುನ್ನ ಭಾನುವಾರ ಬೆಳಿಗ್ಗೆ ಮಾತನಾಡಿದ ಕರುಣಾನಿಧಿ, ರಾಜಕೀಯ ಪ್ರಕ್ರಿಯೆಯ ಮೂಲಕ ಮಾತ್ರ ಲಂಕಾ ತಮಿಳರ ಸಮಸ್ಯೆಗೆ ದೀರ್ಘಕಾಲೀನ ಪರಿಹಾರ ದೊರಕಲು ಸಾಧ್ಯ ಎಂದಿದ್ದಾರೆ. ಶ್ರೀಲಂಕಾ ಸೇನೆ, ಅಲ್ಲಿನ ತಮಿಳು ಪ್ರದೇಶಗಳಲ್ಲಿ `ತುರ್ತು ಪರಿಸ್ಥಿತಿ~ ಜಾರಿ ಮಾಡಿದೆ. ಇದು ತಮಿಳರ ಮಾನವ ಹಕ್ಕು ಹಾಗೂ ಘನತೆಗೆ ಸಂಬಂಧಿಸಿದ ವಿಚಾರವಾಗಿದೆ ಎಂದು ಹೇಳಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.