ಮಂಗಳವಾರ, ಮೇ 11, 2021
25 °C

ಟ್ಯಾಗೋರ್-150 ವಿಚಾರ ಸಂಕಿರಣ 11ರಿಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ನೊಬೆಲ್ ಪ್ರಶಸ್ತಿ ಪುರಸ್ಕೃತ ಸಾಹಿತಿ ರವೀಂದ್ರನಾಥ ಟ್ಯಾಗೋರ್ ಅವರ 150ನೇ ಜನ್ಮದಿನೋತ್ಸವದ ಅಂಗವಾಗಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಇಂಗ್ಲಿಷ್ ಅಧ್ಯಯನ ವಿಭಾಗವು ಕೇಂದ್ರ ಸಾಹಿತ್ಯ ಅಕಾಡೆಮಿ ಆಶ್ರಯದಲ್ಲಿ ಏಪ್ರಿಲ್ 11 ಹಾಗೂ 12ರಂದು `ಟ್ಯಾಗೋರ್-150~ ರಾಷ್ಟ್ರ ಮಟ್ಟದ ವಿಚಾರ ಸಂಕಿರಣವನ್ನು ಹಮ್ಮಿಕೊಂಡಿದೆ.ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದ ಆರ್‌ಸಿಯು ಕುಲಪತಿ ಪ್ರೊ. ಬಿ.ಆರ್.ಅನಂತನ್, “ಭಾರತದ ಪುನರುಜ್ಜೀವನವನ್ನು ಸೃಷ್ಟಿಸಿದ ಅತ್ಯುದ್ಭುತ ವ್ಯಕ್ತಿತ್ವಗಳಲ್ಲಿ ರವೀಂದ್ರನಾಥ ಟ್ಯಾಗೋರ್ ಪ್ರಮುಖರಾಗಿದ್ದಾರೆ.ಐರೋಪ್ಯ ಸಂಸ್ಕೃತಿಯ ಆಕರ್ಷಣೆ ಹಾಗೂ ವಿಕರ್ಷಣೆಗೆ ಒಳಗಾಗುತ್ತಲೇ ಸಾಮ್ರಾಜ್ಯಶಾಹಿಯ ಆಕ್ರಮಶೀಲತೆಗೆ ಪ್ರತಿರೋಧ ಒಡ್ಡುವ ಮೂಲಕ ನವೋದಯಕ್ಕೆ ನಾಂದಿ ಹಾಡಿದರು. ನವವಸಾಹತುಶಾಹಿಗಳ ನೆರಳಿನಲ್ಲಿರುವ ಇಂದಿನ ಸಂದರ್ಭದಲ್ಲಿ ಟ್ಯಾಗೋರರ ಕೃತಿಗಳ ಪುನರಾವಲೋಕನ ಅಗತ್ಯವಾಗಿದೆ” ಎಂದು ಹೇಳಿದರು.“ಏಪ್ರಿಲ್ 11ರಂದು ಬೆಳಿಗ್ಗೆ 10.30 ಗಂಟೆಗೆ ವಿದ್ವಾಂಸ ಡಾ. ಅಮಿಯಾ ದೇವ್ ವಿಚಾರ ಸಂಕಿರಣವನ್ನು ಉದ್ಘಾಟಿಸಲಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿ ಕಾರ್ಯದರ್ಶಿ ಅಗ್ರಹಾರ ಕೃಷ್ಣಮೂರ್ತಿ ಆಶಯ ಭಾಷಣ ಮಾಡಲಿದ್ದಾರೆ. ಟ್ಯಾಗೋರರ ಕಾವ್ಯದ ಕುರಿತು ಕೆ.ಕೆ. ಬಿರ್ಲಾ ಫೌಂಡೇಶನ್‌ನ ನಿರ್ದೇಶಕರಾದ ಪ್ರೊ. ನಿರ್ಮಲಕಾಂತಿ ಭಟ್ಟಾಚಾರ್ಯ, ಕತೆ- ಕಾದಂಬರಿಗಳ ಕುರಿತು ಕುವೆಂಪು ವಿಶ್ವವಿದ್ಯಾಲಯದ ಇಂಗ್ಲಿಷ್ ಪ್ರಾಧ್ಯಾಪಕ ಪ್ರೊ. ರಾಜೇಂದ್ರ ಚೆನ್ನಿ ಪ್ರಬಂಧ ಮಂಡಿಸಲಿದ್ದಾರೆ. ಭಾರತೀಯ ಭಾಷೆಗಳಲ್ಲಿ ಟ್ಯಾಗೋರರು ಕುರಿತು ಹಿರಿಯ ಚಿಂತಕ ಪ್ರೊ. ಸಿ.ಎನ್. ರಾಮಚಂದ್ರನ್, ಕಾಂಚನಾ ಮುಖ್ಯೋಪಾಧ್ಯಾಯರು ಟ್ಯಾಗೋರರ ಸಂಗೀತದ ಕುರಿತು ಉಪನ್ಯಾಸ ನೀಡಲಿದ್ದಾರೆ” ಎಂದು ಹೇಳಿದರು.“ಏ. 12ರಂದು ಬೆಳಿಗ್ಗೆ 10 ಗಂಟೆಗೆ `ರವೀಂದ್ರರಿಗೆ ಸೃಜನಶೀಲ ಪ್ರತಿಕ್ರಿಯೆ~ ಗೋಷ್ಠಿ ನಡೆಯಲಿದ್ದು, ಕತೆಗಾರ ಜಯಂತ ಕಾಯ್ಕಿಣಿ, ಪ್ರಸಿದ್ಧ ಮರಾಠಿ ಬರಹಗಾರ ಲಕ್ಷ್ಮಣ ಗಾಯಕವಾಡ, ಹಂಪಿ ಕನ್ನಡ ವಿವಿಯ ಡಾ. ರಹಮತ್ ತರಿಕೆರೆ ಪಾಲ್ಗೊಳ್ಳಲಿದ್ದಾರೆ. ಅಂದು ಸಂಜೆ 4 ಗಂಟೆಗೆ ವಿಶ್ರಾಂತ ಕುಲಪತಿ ಪ್ರೊ. ಎಂ.ಐ. ಸವದತ್ತಿ ಸಮಾರೋಪ ನುಡಿಗಳನ್ನು ಆಡಲಿದ್ದಾರೆ” ಎಂದು ಕುಲಪತಿ ತಿಳಿಸಿದರು.1 ಕೋಟಿ ಮಂಜೂರು: “ಕನ್ನಡಪರ ಚಟುವಟಿಕೆಗಳನ್ನು ಕೈಗೊಳ್ಳಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ವಿವಿಯ ಶಾಸ್ತ್ರೀಯ ಕನ್ನಡ ಅಧ್ಯಯನ ವಿಭಾಗಕ್ಕೆ 1 ಕೋಟಿ ರೂಪಾಯಿ ಮಂಜೂರು ಮಾಡಿದ್ದು, ಈಗಾಗಲೇ ರೂ. 25 ಲಕ್ಷ ಬಿಡುಗಡೆ ಮಾಡಿದೆ” ಎಂದು ಪ್ರೊ. ಅನಂತನ್ ಹೇಳಿದರು.“ಯುಜಿಸಿಯ `2ಎಫ್~ ಮಾನ್ಯತೆಯು ಸಿಕ್ಕಿರುವುದರಿಂದ ಆರ್‌ಸಿಯುನಲ್ಲಿ ಓದಿದ ವಿದ್ಯಾರ್ಥಿಗಳಿಗೆ ವಿಶ್ವದಾದ್ಯಂತ ಮನ್ನಣೆ ಸಿಗುತ್ತದೆ. `12 ಬಿ~ ಮಾನ್ಯತೆ ಪಡೆದುಕೊಳ್ಳುವ ನಿಟ್ಟಿನಲ್ಲಿ ಮೂಲಸೌಲಭ್ಯ ಕಲ್ಪಿಸಲು 5 ಕೋಟಿ ರೂಪಾಯಿ ಅನುದಾನ ನೀಡಿದೆ. ಈ ಹಣದಲ್ಲಿ ಈಗಿರುವ ಕಟ್ಟಡಗಳ ಮೇಲೆ ಇನ್ನೊಂದು ಮಹಡಿ ನಿರ್ಮಿಸಲಾಗುವುದು” ಎಂದು ಹೇಳಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.