ಸೋಮವಾರ, ಮೇ 23, 2022
21 °C

ಡರ್ಟಿ ಸಿನಿಮಾಗೆ ಬಿಳಿ ಸೀರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಡರ್ಟಿ ಸಿನಿಮಾಗೆ ಬಿಳಿ ಸೀರೆ

ದಾರಗಳಿಗೆ ಪೋಣಿಸಿದ ಪ್ಲಾಸ್ಟಿಕ್ ಬಣ್ಣದ ಹಾಳೆಗಳ ಅಲಂಕಾರ. ಅಡಿಗಡಿಗೆ ಕಟೌಟುಗಳು. ನಾಯಕ ಅಕ್ಷಯ್ ಬಲಬದಿಯಲ್ಲಿ ಸಿಲ್ಕ್ ಸ್ಮಿತಾ ಚಿತ್ರ. ಎಡಬದಿಯಲ್ಲಿ ವೀಣಾ ಮಲ್ಲಿಕ್.`ಡರ್ಟಿ ಪಿಕ್ಚರ್~ ಮುಹೂರ್ತ ನಡೆದ ಕಂಠೀರವ ಸ್ಟುಡಿಯೋ ಆವರಣದಲ್ಲಿ ಜನಜಂಗುಳಿಯೇನೂ ಇರಲಿಲ್ಲ. ಆದರೆ, ವಿನೈಲ್ ಕಟೌಟ್ ಕಟ್ಟುತ್ತಿದ್ದ ಹುಡುಗರ ಕಣ್ಣುಗಳೂ ಕಾತರದಿಂದ ಯಾರಿಗೋ ಹುಡುಕಾಟ ನಡೆಸಿದ್ದವು. ಗಡಿಯಾರದ ಮುಳ್ಳು ಮುಂದೆ ಹೋಗುತ್ತಿದ್ದರೂ ನಿರೀಕ್ಷಿಸಿದ್ದ ನಟಿ ಮಾತ್ರ ಗ್ರೀನ್‌ರೂಂ ಬಿಟ್ಟು ಹೊರಬರಲೇ ಇಲ್ಲ. ಸುದ್ದಿಗೋಷ್ಠಿಯಲ್ಲೂ ಗೈರುಹಾಜರಿ.ವೀಣಾಗೆ ತಮಗೆ ಮಾಡಿದ ಮೇಕಪ್ ಅಷ್ಟಾಗಿ ಸಮಾಧಾನ ತಂದಿರಲಿಲ್ಲ. ಯಾಕೆಂದರೆ, ಅವರಿಗೆ ಸದಾ ಮೇಕಪ್ ಮಾಡುವ ವ್ಯಕ್ತಿ ಅನಾರೋಗ್ಯದಿಂದಾಗಿ ಲಭ್ಯವಿರಲಿಲ್ಲ. ಬದಲಿ ವ್ಯವಸ್ಥೆಗೆ ಬಲು ಬೇಗ ಒಗ್ಗಿಕೊಳ್ಳುವುದು ವೀಣಾ ಅವರಿಗೆ ತುಸು ಕಷ್ಟವೇ ಆಯಿತು.ಅರ್ಚಕರು ಮುಹೂರ್ತದ ಪೂಜೆ ಪ್ರಾರಂಭಿಸುವ ಹೊತ್ತಿಗೆ ಕೊನೆಗೂ ವೀಣಾ ಚಿತ್ತೈಸಿದರು. ಬಿಳಿ ಸೀರೆ ಉಟ್ಟಿದ್ದ ಅವರನ್ನು ಅತಿಥಿ, ಅಭ್ಯಾಗತರೆಲ್ಲಾ ಅಚ್ಚರಿಯಿಂದ ಕಣ್ತುಂಬಿಕೊಂಡರು.

 

ಎರಡು ಕೈಗಳನ್ನು ಮುಗಿದು ದೇವರಿಗೆ, ಅತಿಥಿಗಳಿಗೆ ನಮಸ್ಕರಿಸಿದ ನಂತರ ವೀಣಾ ಕ್ಯಾಮೆರಾ ಕಣ್ಣುಗಳನ್ನು ಎದುರುಗೊಂಡರು.ಆರು ತಿಂಗಳ ಎಡೆಬಿಡದ ಪ್ರಯತ್ನದ ನಂತರ ವೀಣಾ ಮಲ್ಲಿಕ್ ಕಾಲ್‌ಷೀಟ್ ಪಡೆದದ್ದು ನಿರ್ದೇಶಕ ತ್ರಿಶೂಲ್ ಅವರಿಗೆ ಹೆಮ್ಮೆಯ ವಿಷಯ. ನಡುವೆ ತಾವಾಗಿಯೇ ಬಂದು, ಪಾತ್ರ ಇಷ್ಟಪಟ್ಟು, ಟೂ-ಪೀಸ್ ಉಡುಗೆ ತೊಡಲೂ ಸೈ ಎಂದ ನಿಖಿತಾ ಆಮೇಲೆ ಸಣ್ಣ ತಕರಾರೆತ್ತಿದರಂತೆ. `ಸಿಲ್ಕ್ ಸಖತ್ ಹಾಟ್ ಮಗಾ~ ಎಂಬ ಶೀರ್ಷಿಕೆಯ ಅಡಿಬರಹದಲ್ಲಿ ಸಿಲ್ಕ್ ಎಂಬ ಪದವನ್ನು ತೆಗೆದುಹಾಕಬೇಕೆಂಬುದು ನಿಖಿತಾ ಪಟ್ಟು. ಅದಕ್ಕೆ ಒಪ್ಪದ ನಿರ್ದೇಶಕರು ನಿಖಿತಾರನ್ನೇ ಕೈಬಿಟ್ಟರಂತೆ. ಪೂಜಾ ಗಾಂಧಿ ಕೂಡ ಈ ಪಾತ್ರ ನಿರ್ವಹಿಸಲು ಒಪ್ಪಿದ್ದರು. ಆದರೆ, ಅವರ ಸಂಭಾವನೆ ಹೆಚ್ಚಾಯಿತೆನ್ನಿಸಿದ್ದರಿಂದ ವೀಣಾ ಮಲ್ಲಿಕ್ ಕರೆತರುವ ನಿರ್ದೇಶಕರ ಸಂಕಲ್ಪ ಇನ್ನೂ ಗಟ್ಟಿಯಾಯಿತು. ಅವರ ಪ್ರಯತ್ನವೀಗ ಫಲ ನೀಡಿದೆ. ವೀಣಾಗೆ ಪೂಜಾ ಗಾಂಧಿ ಕೇಳಿದ ನಾಲ್ಕು ಪಟ್ಟು ಹೆಚ್ಚು ಸಂಭಾವನೆ ಕೊಡುವ ಮಾತೂ ಆಗಿದೆ. ನಿರ್ಮಾಪಕ ವೆಂಕಟಪ್ಪನವರಿಗೆ ಮಗ ಅಕ್ಷಯ್‌ಗೆ ಜನಪ್ರಿಯ ನಾಯಕಿ ಸಿಕ್ಕಿದ ಖುಷಿ.ತಮ್ಮದು ಕಚ್ಚಾ ಪಾತ್ರಗಳಿಗೆ ಒಪ್ಪುವ ಚಹರೆ ಎನ್ನುವ ಅಕ್ಷಯ್, `ಇದು ಹಿಂದಿ ಡರ್ಟಿ ಪಿಕ್ಚರ್‌ನ ರೀಮೇಕ್ ಖಂಡಿತ ಅಲ್ಲ~ ಎಂದು ತಲೆಯಾಡಿಸಿದರು. ಹಳ್ಳಿಹುಡುಗಿಯೊಬ್ಬಳ ಹೋರಾಟದ ಬದುಕಿನ ಕಥಾನಕವಿದು ಎಂದು ಅಕ್ಷಯ್ ಚಿತ್ರಕ್ಕೆ ವ್ಯಾಖ್ಯಾನವನ್ನೂ ಕೊಟ್ಟರು. ಸಲ್ಮಾನ್ ಖಾನ್ ಕಟ್ಟಾ ಅಭಿಮಾನಿಯಾದ ಅವರಿಗೆ ಚಿತ್ರದ ಆಡಿಯೋ ಬಿಡುಗಡೆಗೆ  ತಮ್ಮ ಆ ನೆಚ್ಚಿನ ನಟನನ್ನೇ ಕರೆಸಬೇಕೆಂಬ ಮಹದಾಸೆ. ಅದಕ್ಕಾಗಿ ಈಗಾಗಲೇ ಪ್ರಯತ್ನ ನಡೆಸುತ್ತಿದ್ದಾರೆ.ಜೂನ್ 21ರವರೆಗೆ ಕನ್ನಡದ `ಡರ್ಟಿ ಪಿಕ್ಚರ್~ನ ಮೊದಲ ಹಂತದ ಚಿತ್ರೀಕರಣ. ಆಮೇಲೆ ಹತ್ತು ದಿನ ಬ್ರೇಕ್. ನಂತರ ಬೆಂಗಳೂರು, ಗೋವಾದಲ್ಲಿ ಹಾಡುಗಳ ಚಿತ್ರೀಕರಣ. ಒಟ್ಟು ಸುಮಾರು ಎರಡೂವರೆ ವಾರದಷ್ಟು ಕಾಲ್‌ಷೀಟನ್ನು ವೀಣಾ ಕೊಟ್ಟಿದ್ದಾರೆ. ಅಂದಹಾಗೆ, ವೀಣಾ ಅಭಿನಯದ ಎರಡು ಪಂಜಾಬಿ ಚಿತ್ರಗಳನ್ನು ನೋಡಿ ನಿರ್ದೇಶಕರು ಈ ಚಿತ್ರಕ್ಕೆ ಅವರೇ ಸೂಕ್ತ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಮೊದಲ ಬಾರಿಗೆ ಕನ್ನಡ ಚಿತ್ರದಲ್ಲಿ ನಟಿಸುತ್ತಿರುವ ಪುಳಕ ವೀಣಾ ಅವರದ್ದು.ಚಿತ್ರಗಳು: ಕೆ.ಎನ್.ನಾಗೇಶ್‌ಕುಮಾರ್ 

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.