ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿನ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಇದೇ ಮೊದಲ ಬಾರಿಗೆ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿರುವ ನಟ ಶಿವರಾಜ್ಕುಮಾರ್, `ಅಪ್ಪಾಜಿ ಆಸೆಗೆ ವಿರುದ್ಧವಾಗಿ ನಡೆದುಕೊಂಡಲ್ಲಿ ಸುಮ್ಮನೆ ಕೂರುವುದಿಲ್ಲ. ಒಮ್ಮೆ ಎದ್ದು ನಿಂತರೆ ಪ್ರಾಣ ಹೋದರೂ ಪರವಾಗಿಲ್ಲ, ಯಾವುದಕ್ಕೂ ಹೆದರುವುದಿಲ್ಲ. ಎಂತಹ ಹೋರಾಟಕ್ಕೂ ಸಿದ್ಧ~ ಎಂದು ಘೋಷಿಸಿದರು.

ಅಖಿಲ ಕರ್ನಾಟಕ ಡಾ.ರಾಜ್ಕುಮಾರ್ ಅಭಿಮಾನಿಗಳ ಸಂಘದ ವತಿಯಿಂದ ರಾಜ್ ಸಮಾಧಿ ಬಳಿ ಹಮ್ಮಿಕೊಂಡಿದ್ದ ಡಾ. ರಾಜ್ಕುಮಾರ್ ಅವರ 84ನೇ ಜನ್ಮ ದಿನಾಚರಣೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.

`ಅಪ್ಪಾಜಿ ಇಲ್ಲದ ಕನ್ನಡ ಚಿತ್ರೋದ್ಯಮದ ವಾತಾವರಣ ಇತ್ತೀಚಿನ ದಿನಗಳಲ್ಲಿ ಬದಲಾಗುತ್ತಿದೆ. ಅದಕ್ಕೆ ಅವಕಾಶ ಮಾಡಿಕೊಡಬಾರದು. ಹಾಗಂತ ನಾವು ಸುಮ್ಮನೆ ಕೂತಿದ್ದೇವೆ ಎಂದು ಯಾರೂ ಭಾವಿಸಬಾರದು. ಎದ್ದು ನಿಂತರೆ ಏನು ಬೇಕಾದರೂ ಮಾಡಲು ಸಿದ್ಧ. ನಾವು ಎಲ್ಲ ಭಾಷಿಕರ ಜತೆ ಇದ್ದೇವೆ. ಎಲ್ಲ ಭಾಷೆಗಳ ಸಿನಿಮಾ ನಟರನ್ನೂ ಇಷ್ಟಪಡುತ್ತೇವೆ. ಧನುಷ್ ನಟಿಸಿದ `ತ್ರಿ~ ಚಿತ್ರ ನೋಡಿ ಶುಭಾಶಯ ಹೇಳಿದ್ದೇನೆ.

ಆದರೆ, ಬೇರೆ ಭಾಷೆಯ ನಟರ ಬಗ್ಗೆ ಅಭಿಮಾನವಿಡೋಣ. ದುರಭಿಮಾನ ಬೇಡ. ಹಾಗಂತ ನಾನು ಯಾವುದೇ ಭಾಷೆಯ ವಿರೋಧಿಯೂ ಅಲ್ಲ. ಆದರೆ, ಬೇರೆ ರೀತಿ ಎಂಟ್ರಿ ಕೊಟ್ಟರೆ ನನ್ನ ತಂದೆ ಮೇಲೆ ಆಣೆ. ಪ್ರಾಣ ಹೋದರೂ ಪರವಾಗಿಲ್ಲ. ಯಾರಿಗೂ ಕೇರ್ ಮಾಡುವುದಿಲ್ಲ. ನನಗೂ ಇಬ್ಬರು ತಮ್ಮಂದಿರು ಹಾಗೂ ಮಕ್ಕಳಿದ್ದಾರೆ. ಸಾಕು~ ಎಂದು ಆಕ್ರೋಶ ಭರಿತರಾಗಿ ನುಡಿದರು.

ಡಾ.ರಾಜ್ ಅಭಿಮಾನಿಗಳನ್ನು ಕಂಡು ಪುಳಕಿತರಾದ ಶಿವಣ್ಣ, `ನಾನು ಇಂದಿನಿಂದ ಅಪ್ಪಾಜಿ ಅಭಿಮಾನಿಯಾಗಿದ್ದೇನೆ. ಅಪ್ಪಾಜಿ ಮೇಲಿಟ್ಟಿರುವ ಅಭಿಮಾನವನ್ನು ಕನ್ನಡ ಚಿತ್ರರಂಗದ ಮೇಲೂ ತೋರಿಸಿ. ಒಳ್ಳೆಯ ಕೆಲಸಕ್ಕೆ ಎಲ್ಲರೂ ಒಂದಾಗಿ ಸೇರೋಣ~ ಎಂದರು.

10ರಿಂದ 15 ದಿನಗಳಲ್ಲಿ ಸಭೆ: ಸಮಾರಂಭವನ್ನು ಉದ್ಘಾಟಿಸಿದ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ, ವರನಟ ಡಾ. ರಾಜ್ ಸಮಾಧಿ ಬಳಿ ಎರಡನೇ ಹಂತದ ಯೋಜನೆಯ ರೂಪುರೇಷೆ ಸಿದ್ಧಪಡಿಸಲು ಹಾಗೂ ಈ ಉದ್ದೇಶಕ್ಕಾಗಿ ಹೆಚ್ಚಿನ ಜಾಗ ನೀಡುವ ಸಂಬಂಧ ಇನ್ನು 10-15 ದಿನಗಳಲ್ಲಿ ಕಂಠೀರವ ಸ್ಟುಡಿಯೋ ಟ್ರಸ್ಟ್ ಹಾಗೂ ಅಖಿಲ ಕರ್ನಾಟಕ ಡಾ.ರಾಜ್ಕುಮಾರ್ ಅಭಿಮಾನಿಗಳ ಸಂಘದ ಪದಾಧಿಕಾರಿಗಳ ಸಭೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.

ಜಾಗದ ಕೊರತೆಯಿಂದ ಡಾ.ರಾಜ್ ಸಮಾಧಿ ಬಳಿ ಅಭಿಮಾನಿಗಳು ಕೂರುವುದಕ್ಕೂ ಜಾಗ ಇಲ್ಲದಿರುವ ಬಗ್ಗೆ ಸಂಘದ ಅಧ್ಯಕ್ಷ ಸಾ.ರಾ. ಗೋವಿಂದು ಮಾಡಿದ ಮನವಿಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, `ಬರುವ ವರ್ಷ ರಾಜ್ ಹುಟ್ಟು ಹಬ್ಬದ ವೇಳೆಗೆ ಅದ್ಭುತವಾದ ಕಾರ್ಯಕ್ರಮ ನಡೆಸಲು ಅವಕಾಶ ಮಾಡಿಕೊಡಲಾಗುವುದು~ ಎಂದರು.

`ಕನ್ನಡ ನಾಡು-ನುಡಿಗಾಗಿ ನಟ ರಾಜ್ಕುಮಾರ್ ಸಲ್ಲಿಸಿದ ಸೇವೆ ಅನುಪಮವಾದುದು. ಕರ್ನಾಟಕದಲ್ಲಿ ಅಂತಹ ಮತ್ತೊಬ್ಬ ಮಹಾನ್ ನಟ ಹುಟ್ಟಿ ಬರಲಾರರು. ಕನ್ನಡ ನಾಡು-ನುಡಿ, ಭಾಷೆ, ಜಲ ಸಂರಕ್ಷಣೆ ವಿಚಾರದಲ್ಲಿ ಹಾಗೂ ಕನ್ನಡಿಗರಿಗೆ ಅನ್ಯಾಯವಾದಾಗಲೆಲ್ಲಾ ರಾಜ್ಕುಮಾರ್ ಹೋರಾಟಕ್ಕಿಳಿದಿದ್ದರು. ಇನ್ನು ಮುಂದೆಯೂ ಅಂತಹ ಸಮಸ್ಯೆಗಳು ಎದುರಾದಾಗ ಕನ್ನಡಿಗರೆಲ್ಲರೂ ಒಂದಾಗಿ ಸೆಟೆದು ನಿಲ್ಲಬೇಕು~ ಎಂದು ಕರೆ ನೀಡಿದರು.

ಇದಕ್ಕೂ ಮುನ್ನ ಪ್ರಾಸ್ತಾವಿಕವಾಗಿ ಮಾತನಾಡಿದ ಸಾಹಿತಿ ಬರಗೂರು ರಾಮಚಂದ್ರಪ್ಪ, `ಡಾ.ರಾಜ್ ಸ್ಮಾರಕ ನಿರ್ಮಾಣವೊಂದೇ ಸರ್ಕಾರದ ಉದ್ದೇಶವಲ್ಲ. ರಾಜ್ ಮ್ಯೂಸಿಯಂ, ಬಹೂಪಯೋಗಿ ಸಭಾಂಗಣ, ಪುಸ್ತಕ ಭಂಡಾರ ನಿರ್ಮಾಣ ಕೆಲಸ ನೆನೆಗುದಿಗೆ ಬಿದ್ದಿದೆ. ಜಾಗದ ಕೊರತೆಯಿಂದ ಇದುವರೆಗೆ ಎರಡನೇ ಹಂತದ ಯೋಜನೆಯನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಕೂಡಲೇ ಹೆಚ್ಚಿನ ಜಾಗ ಒದಗಿಸಲು ಸರ್ಕಾರ ಮುಂದಾಗಬೇಕು~ ಎಂದು ವೇದಿಕೆಯಲ್ಲಿದ್ದ ಮುಖ್ಯಮಂತ್ರಿಗಳನ್ನು ಕೋರಿದರು.

ಸಾ.ರಾ. ಗೋವಿಂದು ಸ್ವಾಗತಿಸಿದರು. ರಾಜ್ ಪುತ್ರರಾದ ರಾಘವೇಂದ್ರ ರಾಜ್ಕುಮಾರ್, ಪುನೀತ್ ರಾಜ್ಕುಮಾರ್, ರಾಜ್ ಅಳಿಯ ಎಸ್.ಎ. ಗೋವಿಂದರಾಜ್, ಶಾಸಕ ನೆ.ಲ. ನರೇಂದ್ರಬಾಬು, ಪಾಲಿಕೆಯ ಸ್ಥಳೀಯ ಸದಸ್ಯ ಎಂ. ನಾಗರಾಜ್ ಮಾತನಾಡಿದರು. ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಕೆ.ವಿ.ಚಂದ್ರಶೇಖರ್, ಹಿರಿಯ ನಟ ಸುದರ್ಶನ್ ದಂಪತಿ, ನಟಿಯರಾದ ಶ್ರುತಿ, ಪ್ರಿಯಾಹಾಸನ್ ಇತರರು ಉಪಸ್ಥಿತರಿದ್ದರು.

ಇದಕ್ಕೂ ಮುನ್ನ ಹಿರಿಯ ಕಲಾವಿದರಾದ ಸದಾಶಿವ ಬ್ರಹ್ಮಾವರ, ಎಂ.ಎನ್. ಲಕ್ಷ್ಮೀದೇವಿ, ಶನಿ ಮಹಾದೇವಪ್ಪ, ಸುಮಾ, ಎ.ಟಿ. ರಘು, ಪತ್ರಕರ್ತ ರಾಮಚಂದ್ರ ಹಾಗೂ ಕ್ರೀಡಾಪಟು ಬಿ.ಆರ್. ಗೋಪಾಲರಾವ್ ಅವರನ್ನು ಸನ್ಮಾನಿಸಲಾಯಿತು. ರಾಜ್ ಹುಟ್ಟು ಹಬ್ಬದ ಅಂಗವಾಗಿ ನೂರಾರು ಅಭಿಮಾನಿಗಳು ರಕ್ತದಾನ ಮಾಡಿದರು. ಅಪಾರ ಸಂಖ್ಯೆಯ ಅಭಿಮಾನಿಗಳು ಸಮಾಧಿ ಬಳಿ ಆಗಮಿಸಿ ವರ ನಟನಿಗೆ ಗೌರವ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.