ಮಂಗಳವಾರ, ಜೂನ್ 22, 2021
27 °C

ಡಿಜಿಪಿ ನೇಮಕಾತಿ ವಿವಾದ: ಕೇವಿಯಟ್ ಸಲ್ಲಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಶಂಕರ ಬಿದರಿ ಅವರನ್ನು ರಾಜ್ಯ ಪೊಲೀಸ್ ಮಹಾನಿರ್ದೇಶಕರ ಹುದ್ದೆಗೆ ನೇಮಕ ಮಾಡಿರುವ ಆದೇಶವನ್ನು ರದ್ದು ಮಾಡಿ ಕೇಂದ್ರ ಆಡಳಿತ ನ್ಯಾಯಮಂಡಳಿ (ಸಿಎಟಿ) ನೀಡಿರುವ ಆದೇಶಕ್ಕೆ ಸಂಬಂಧಿಸಿದಂತೆ ತಮ್ಮ ವಾದವನ್ನು ಆಲಿಸದೇ ಯಾವುದೇ ತೀರ್ಮಾನ ಕೈಗೊಳ್ಳಬಾರದು ಎಂದು ಕೋರಿ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಡಿಜಿಪಿ ಎ.ಆರ್.ಇನ್ಫೆಂಟ್ ಶನಿವಾರ ಹೈಕೋರ್ಟ್‌ಗೆ ಕೇವಿಯಟ್ ಅರ್ಜಿ ಸಲ್ಲಿಸಿದ್ದಾರೆ.ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸಿದ್ದ ಇನ್ಫೆಂಟ್ ಅವರು, ಬಿದರಿ ಅವರನ್ನು ರಾಜ್ಯ ಪೊಲೀಸ್ ಮಹಾನಿರ್ದೇಶಕರ ಹುದ್ದೆಗೆ ನೇಮಕ ಮಾಡಿ ಕಳೆದ ಡಿಸೆಂಬರ್ 1ರಂದು ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮಂಡಳಿ, ಬಿದರಿ ನೇಮಕಾತಿಯನ್ನು ರದ್ದುಮಾಡಿ ಶುಕ್ರವಾರ ಆದೇಶ ಹೊರಡಿಸಿತ್ತು.ಸಿಎಟಿ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಬಿದರಿ ಸಿದ್ಧತೆ ನಡೆಸಿದ್ದಾರೆ.  ಈ ಹಿನ್ನೆಲೆಯಲ್ಲಿ ಶನಿವಾರ ವಕೀಲರ ಮೂಲಕ ಹೈಕೋರ್ಟ್‌ಗೆ ಕೇವಿಯಟ್ ಅರ್ಜಿ ಸಲ್ಲಿಸಿರುವ ಇನ್ಫೆಂಟ್, ಸಿಎಟಿ ಆದೇಶಕ್ಕೆ ಸಂಬಂಧಿಸಿದಂತೆ ಯಾವುದೇ ತೀರ್ಮಾನ ಕೈಗೊಳ್ಳುವ ಮುನ್ನ ತಮ್ಮ ವಾದ ಆಲಿಸಬೇಕು ಎಂದು ಕೋರಿದ್ದಾರೆ.

ಕೈಸೇರದ ಆದೇಶದ ಪ್ರತಿ: ಸಿಎಟಿ ಶುಕ್ರವಾರ ಪ್ರಕಟಿಸಿರುವ ಆದೇಶದ ಪ್ರತಿ ಅರ್ಜಿದಾರ ಇನ್ಫೆಂಟ್ ಮತ್ತು ಪ್ರತಿವಾದಿ ಬಿದರಿ ಅವರಿಗೆ ಇನ್ನೂ ದೊರೆತಿಲ್ಲ.ಸೋಮವಾರ ಇಬ್ಬರಿಗೂ ಆದೇಶದ ಪ್ರತಿ ದೊರೆಯುವ ಸಾಧ್ಯತೆ ಇದೆ. ಆ ಬಳಿಕವಷ್ಟೇ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವ ಪ್ರಕ್ರಿಯೆಯನ್ನು ಬಿದರಿ ಆರಂಭಿಸುವ ಸಂಭವವಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.