ಡಿಸಿಎಂಗೆ ಉಪ್ಪು ನೀರು ಕುಡಿಸಿದ ನೀರೆಯರು!
ಹಿರಿಯೂರು: ಫ್ಲೋರೈಡ್ಮುಕ್ತ ನೀರು ಕೊಡುವಂತೆ ಆಗ್ರಹಿಸಿ ಬರಪರಿಸ್ಥಿತಿ ಪರಿಶೀಲನೆಗೆ ಬಂದಿದ್ದ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರಿಗೆ ಮಹಿಳೆಯರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ಘಟನೆ ತಾಲ್ಲೂಕಿನ ಐಮಂಗಲ ಗ್ರಾಮದಲ್ಲಿ ಭಾನುವಾರ ನಡೆಯಿತು.
ಕಳೆದ ಆರು ತಿಂಗಳಿನಿಂದ ಕುಡಿಯುವ ನೀರಿಗೆ ಗ್ರಾಮಸ್ಥರು ಪರದಾಡುತ್ತ್ದ್ದಿದಾರೆ. ಕೊಳವೆ ಬಾವಿಗಳಲ್ಲಿ ಉಪ್ಪುನೀರು ಬರುತ್ತಿದೆ. ಈ ನೀರು ಶೌಚಕ್ಕೂ ಬಳಸಲು ಯೋಗ್ಯವಿಲ್ಲ. ನೀವೇ ಒಮ್ಮೆ ಕುಡಿದು ನೋಡಿ ಪರೀಕ್ಷೆ ಮಾಡಿ ಎಂದು ಒತ್ತಾಯಿಸಿದ ಮಹಿಳೆಯರು ಈಶ್ವರಪ್ಪ ಅವರಿಗೆ ನೀರಿನ ರುಚಿ ಮಾಡಿಸಿಯೇ ಬಿಟ್ಟರು.
ಚಿತ್ರದುರ್ಗ ನಗರಕ್ಕೆ ವಾಣಿವಿಲಾಸ ಜಲಾಶಯದಿಂದ ನೀರು ಪೂರೈಕೆ ಮಾಡುವ ಕೊಳವೆ ಮಾರ್ಗ ಗ್ರಾಮದಲ್ಲಿಯೇ ಹಾದು ಹೋಗುತ್ತಿದ್ದು, ಆ ಮಾರ್ಗದಿಂದ ನಮಗೆ ನೀರು ಸರಬರಾಜು ಮಾಡಿ ಎಂದು ಅವರಿಗೆ ಮನವಿ ಮಾಡಿದರು.
ಗ್ರಾಮದಲ್ಲಿರುವ ಸರ್ಕಾರಿ ಪಿಯು ಕಾಲೇಜಿನಲ್ಲಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗಗಳಿದ್ದು, ಕೇವಲ ಎರಡು ಕೊಠಡಿಗಳಿವೆ. ವಿದ್ಯಾರ್ಥಿಗಳು ನೆಲದ ಮೇಲೆ ಕುಳಿತು ಪಾಠ ಕೇಳುತ್ತಿದ್ದಾರೆ. ಹೊಸದಾಗಿ ಅಗತ್ಯವಿರುವಷ್ಟು ಕೊಠಡಿಗಳನ್ನು ಸರ್ಕಾರದಿಂದ ನಿರ್ಮಿಸಿಕೊಡಿ ಎಂದು ಗ್ರಾಮದ ಮುಖಂಡರು ಬೇಡಿಕೆ ಮಂಡಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟಸ್ವಾಮಿ, ಶಾಸಕ ಡಿ. ಸುಧಾಕರ್, ಸಂಸದ ಜನಾರ್ದನಸ್ವಾಮಿ, ವಿಧಾನ ಪರಿಷತ್ ಸದಸ್ಯ ಜಿ.ಎಚ್. ತಿಪ್ಪಾರೆಡ್ಡಿ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ರವಿಕುಮಾರ್ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಈಶ್ವರಪ್ಪ ಅವರು ಕಲ್ಲಹಟ್ಟಿ, ದಾಸಣ್ಣನಮಾಳಿಗೆ ಗ್ರಾಮಗಳಿಗೆ ಭೇಟಿ ನೀಡಿ ಬರ ಸ್ಥಿತಿಯ ಪರಿಶೀಲನೆ ನಡೆಸಿದರು.
1ರಿಂದ ಗೋಶಾಲೆ: ಜಿಲ್ಲೆಯಲ್ಲಿ ಆರಂಭಿಸಿದ್ದ 15 ಗೋಶಾಲೆಗಳ ಪೈಕಿ 10 ಗೋಶಾಲೆಗಳನ್ನು ಮುಂಗಾರು ಪ್ರಾರಂಭವಾಗುತ್ತದೆ ಎಂಬ ಹಿನ್ನೆಲೆಯಲ್ಲಿ ಮುಚ್ಚಲಾಗಿದ್ದು, ಮಳೆ ವಿಫಲವಾಗಿರುವ ಕಾರಣ ಸೂಕ್ತ ಸಿದ್ಧತೆ ಮಾಡಿಕೊಂಡು ಆ. 1ರಿಂದ ಪುನಾರಂಭಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ತಿಳಿಸಿದರು.
ನಗರದ ಕೃಷಿ ಮಾರುಕಟ್ಟೆ ಸಮಿತಿ ಆವರಣದಲ್ಲಿ ನಡೆಯುತ್ತಿರುವ ಗೋಶಾಲೆ ಪರಿಶೀಲಿಸಿದ ನಂತರ, ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಈ ಹಿಂದೆ ದಿನವೊಂದಕ್ಕೆ 5 ಕೆ.ಜಿ. ಮೇವು ನೀಡಲಾಗುತ್ತಿತ್ತು. ಇದು ಸಾಲದು ಎಂಬ ಕಾರಣಕ್ಕೆ ಇನ್ನು ಮುಂದೆ ಬೆಳಿಗ್ಗೆ 4 ಮತ್ತು ಸಂಜೆ 4 ಕೆಜಿ ಮೇವು ವಿತರಣೆ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಬರ ಪರಿಸ್ಥಿತಿ ನಿಭಾಯಿಸುವ ವಿಚಾರದಲ್ಲಿ ರಾಜಕೀಯ ಮಾಡಲು ಇಚ್ಛಿಸುವುದಿಲ್ಲ. ಇಡೀ ದೇಶದಲ್ಲಿ ಬರಗಾಲವಿದೆ. ಕರ್ನಾಟಕದಲ್ಲಿ ಹೆಚ್ಚಿನ ಸಮಸ್ಯೆ ಇದ್ದು, ಪ್ರಧಾನಿ ಮತ್ತು ಕೃಷಿ ಸಚಿವರ ಗಮನಕ್ಕೆ ತಂದಿದ್ದೇವೆ. ಕೇಂದ್ರದಿಂದ ಈಗಾಗಲೇ 352 ಕೋಟಿ ಅನುದಾನ ಬಂದಿದೆ. ಹೆಚ್ಚಿನ ನೆರವು ನೀಡುವಂತೆ ಕೇಂದ್ರ ಸರ್ಕಾರವನ್ನು ಕೇಳಿದ್ದೇವೆ. ಕುಡಿಯುವ ನೀರಿಗೆ ಹಣದ ಕೊರತೆಯಿಲ್ಲ ಎಂದು ಉತ್ತರಿಸಿದರು.
ಅಧಿಕಾರಿಗೆ ತರಾಟೆ: ಜಿಲ್ಲಾ ಉಸ್ತುವಾರಿ ಸಚಿವ ಬಿ.ಜೆ. ಪುಟ್ಟಸ್ವಾಮಿ, ಗೋಶಾಲೆಯಲ್ಲಿ ರಾಸುಗಳಿಗೆ ಹಾಕಿದ್ದ ಮೇವು ಸಗಣಿಯಲ್ಲಿ ಬಿದ್ದು ಹಾಳಾಗಿದ್ದನ್ನು ಕಂಡು ಸಿಡಿಮಿಡಿಗೊಂಡರು. ಮೇವು ಹಾಳಾಗದಂತೆ ನೋಡಿಕೊಳ್ಳಲು ಆಗುವುದಿಲ್ಲವೆ? ಮೇವು ಸಿಗುವುದೇ ಕಷ್ಟವಾಗಿದೆ. ಮೇವು ಕತ್ತರಿಸಿ ಹಾಕಬೇಕು. ನಿತ್ಯ ಕೂಲಿಯವರ ಮೂಲಕ ಸ್ವಚ್ಛಗೊಳಿಸಲು ನಿಮಗೇನು ಕಷ್ಟ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಸಂಸದ ಜನಾರ್ದನಸ್ವಾಮಿ, ಶಾಸಕ ಡಿ. ಸುಧಾಕರ್, ವಿಧಾನ ಪರಿಷತ್ ಸದಸ್ಯ ಜಿ.ಎಚ್. ತಿಪ್ಪಾರೆಡ್ಡಿ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ರವಿಕುಮಾರ್, ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ಹಾಜರಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.