ಭಾನುವಾರ, ಜೂನ್ 20, 2021
20 °C

ಡಿ.ಸಿ ಕಚೇರಿಗೆ ಶ್ವೇತ ವರ್ಣದ ಮೆರುಗು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: ‘ಈ ಕಟ್ಟಡ ಹಳೆಯದಾಗಿದ್ದು, ಅದನ್ನು ಕೆಡವಿ ಹೊಸ ಜಿಲ್ಲಾಧಿಕಾರಿ ಕಚೇರಿ ಕಟ್ಟಡ ನಿರ್ಮಿಸಬೇಕು’ ಎಂದು ಒಂದು– ಒಂದೂವರೆ ವರ್ಷದ ಹಿಂದೆ ಅಂದಿನ ಜಿಲ್ಲಾಧಿಕಾರಿ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಿದ್ದರು. ಜೊತೆಗೆ 40 ಕೋಟಿ ರೂಪಾಯಿಯ ಯೋಜನೆಯನ್ನೂ ಸಿದ್ಧಪಡಿಸಿ ಕಳುಹಿಸಲಾಗಿತ್ತು.ಈಗ ಅದೇ ಹಳೆಯ ಕಟ್ಟಡ ಪ್ರಸ್ತಾವ ಸಲ್ಲಿಸಿದವರನ್ನೇ ಅಣಕಿಸುವಂತೆ ಸಿಂಗಾರಗೊಂಡಿದೆ. ‘ನನಗಿಂತ ಸುಂದರವಾದ ಕಟ್ಟಡ ಜಿಲ್ಲೆಯಲ್ಲಿದ್ದರೆ ತೋರಿಸಿ’ ಎಂದು ಸವಾಲೆಸೆಯುವಂತೆ ಕಾಣಿಸುತ್ತಿದೆ.ಕಳೆದ ಸುಮಾರು ಎರಡು ತಿಂಗಳಿಂದ ಜಿಲ್ಲಾಧಿಕಾರಿ ಕಚೇರಿ ಕಟ್ಟಡದ ದುರಸ್ತಿ ಕಾರ್ಯ ನಡೆಯುತ್ತಿದೆ. ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾಗಿದ್ದ, ಸುಮಾರು ಒಂದು ಶತಮಾನದಷ್ಟು ಹಳೆಯದಾಗಿರುವ ಈ ಕಟ್ಟಡ ಈಗ ‘ರಾಯಲ್‌ ವೈಟ್‌’ ಬಣ್ಣದಿಂದ ನಳನಳಿಸುತ್ತಿದೆ.ಇತ್ತೀಚಿನವರೆಗೂ ಜಿಲ್ಲಾಧಿಕಾರಿ ಕಚೇರಿ ಕಟ್ಟಡ ಹಾಗೆಯೇ ಇತ್ತು. ಸ್ವತಃ ಜಿಲ್ಲಾಧಿಕಾರಿ ಚೇಂಬರ್‌ ಮೇಲೆ ಮೊದಲ ಮಹಡಿಯ ಛಾವಣಿಯಿಂದ ಸಿಮೆಂಟ್‌ ಉದುರುತ್ತಿತ್ತು. ಅಸ್ಥಿಪಂಜರ­ದಂತೆ ಕಂಬಿಗಳು ಕಾಣಿಸುತ್ತಿದ್ದವು. ಮಳೆಗಾಲದಲ್ಲಿ ಗೋಡೆಗಳೆಲ್ಲ ಹಸಿಯಾಗಿ ಯಾವುದೇ ಕ್ಷಣದಲ್ಲಿ ಕಟ್ಟಡ ಬೀಳಬಹುದೇನೋ ಎಂಬ ಭಾವನೆ ಮೂಡಿಸುವಂತಿತ್ತು.  ಶೌಚಾಲಯದ ಪೈಪ್‌ಗಳಲ್ಲಿ ಸೋರಿಕೆ, ಛಾವಣಿಯಿಂದ ಸರಿಯಾಗಿ ನೀರು ಹರಿಯದೆ ಗೋಡೆಗಳು ಸದಾ ಶೀತಪೀಡಿತ ಪ್ರದೇಶದ ಕಟ್ಟಡಗಳಂತೆ ಕಾಣಿಸುತ್ತಿದ್ದವು.ಈಗ ಪರಿಸ್ಥಿತಿ ಬದಲಾಗಿದೆ. ಹಿಂದೆ ಯಾವ ಕಟ್ಟಡವನ್ನು ಕೆಡವಬೇಕು ಎಂಬ ಪ್ರಸ್ತಾವ ಕಳುಹಿಸಲಾಗಿತ್ತೋ ಅದೇ ಕಟ್ಟಡ ಈಗ ಜಿಲ್ಲೆಯ ಅತಿ ಸುಂದರ ಕಟ್ಟಡ ಎನ್ನಿಸುವ ಹಂತಕ್ಕೆ ಬಂದು ನಿಂತಿದೆ. ಇನ್ನು ಒಂದು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳುವುದು ಎಂದು ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್‌ ತಿಳಿಸಿದ್ದಾರೆ.ಛಾವಣಿಯ ನೀರು ಹರಿದು ಹೋಗಲು ಹೊಸ ಪೈಪ್‌ ಅಳವಡಿಸ ಲಾಗಿದೆ. ಇಡೀ ಛಾವಣಿಗೆ ಶೀಟ್‌ಗಳನ್ನು ಅಳವಡಿಸಿ ನೀರು ಸೋರದಂತೆ ವ್ಯವಸ್ಥೆ ಮಾಡಲಾಗಿದೆ. ಶೌಚಾಲಯಗಳ ಸೋರಿಕೆ ತಡೆಗೆ ಕ್ರಮ ವಹಿಸಲಾಗಿದೆ. ಅತ್ಯುತ್ತಮ ಗುಣಮಟ್ಟದ ಪೇಂಟ್‌ ಬಳಸಲಾಗಿದೆ... ಒಟ್ಟಾರೆ ಸುಮಾರು 60 ರಿಂದ 70 ಲಕ್ಷ ರೂಪಾಯಿ ವೆಚ್ಚದಲ್ಲಿ ಇಡೀ ಕಟ್ಟಡವನ್ನು ದುರಸ್ತಿ ಮಾಡಲಾಗಿದೆ. ಹಲವು ವರ್ಷಗಳಿಂದ ದುರಸ್ತಿಗಾಗಿ ಕಾಯುತ್ತ, ಸುಣ್ಣಬಣ್ಣ ಕಾಣದೆ ಪೇಲವವಾಗಿ ಕಾಣುತ್ತಿದ್ದ ಕಟ್ಟಡ ಈಗ ನಗರದ ಆಕರ್ಷಣೆ ಎನಿಸುತ್ತಿದೆ. ಸದ್ಯದಲ್ಲೇ ಈ ಕಟ್ಟಡದ ಮುಂದೆ ‘ಜಿಲ್ಲಾಧಿಕಾರಿ ಕಾರ್ಯಾಲಯ – ಹಾಸನ’ ಎಂಬ ಫಲಕವೂ ಕಾಣಿಸಲಿದೆ.ಸಾರ್ವಜನಿಕರಿಗೆ ಸೌಲಭ್ಯ: ಇಡೀ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲ. ಇದನ್ನು ಮನಗಂಡ ಜಿಲ್ಲಾಧಿಕಾರಿ ಮೊದಲ ಮಹಡಿಯ ಪೋರ್ಟಿಕೋದಲ್ಲಿ ಫಿಲ್ಟರ್‌ ಹಾಕಿಸಲು ನಿರ್ಧರಿಸಿದ್ದಾರೆ. ಅಲ್ಲಿಯೇ ಸಾರ್ವಜನಿಕರಿಗೆ ಕೂರಲು ವ್ಯವಸ್ಥೆ ಆಗಲಿದೆ.ಇತ್ತ ಕಚೇರಿ ಮುಂದೆ ಖಾಲಿ ಜಾಗಕ್ಕೆ ಅರ್ಧ ಭಾಗದಲ್ಲಿ ಡಾಂಬರೀಕರಣ ಆಗಿದೆ. ಕಾಂಪೌಂಡ್‌ ಪಕ್ಕದಲ್ಲಿ ಗಿಡಗಳನ್ನು ನೆಡಲಾಗಿದೆ. ಮೂರು ಕಡೆ ಗಾರ್ಡನ್‌ ಮಾಡಲಿದ್ದಾರೆ. ಖಾಲಿ ಜಾಗದಲ್ಲಿ ಮಾರ್ಕಿಂಗ್‌ ಮಾಡಿ ವಾಹನಗಳ ಪಾರ್ಕಿಂಗ್‌ಗೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಅಧಿಕಾರಿ ತಿಳಿಸಿದ್ದಾರೆ.ಕಟ್ಟಡದ ಮೊದಲ ಮಹಡಿಗೆ ಹೋಗುವ ಮೆಟ್ಟಿಲುಗಳ ಪಕ್ಕದ ಗೋಡೆಗಳಲ್ಲಿ ಜಿಲ್ಲೆಯ ಯಾವುದಾದರೂ ಸ್ಥಳದ ಆಕರ್ಷಕ ಮತ್ತು ದೊಡ್ಡ ಗಾತ್ರದ ಚಿತ್ರಗಳನ್ನು ಹಾಕುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.ಹೊಸ ಕಚೇರಿ: ಜಿಲ್ಲಾಧಿಕಾರಿ ಕಚೇರಿ ಕಟ್ಟಡದಲ್ಲಿರುವ ಚುನಾವಣಾ ಶಾಖೆಗೆ ಸ್ಥಳಾವಕಾಶದ ಕೊರತೆ ಇತ್ತು. ಜೊತೆಗೆ ಇದಕ್ಕಾಗಿಯೇ ಹಿಂಭಾಗದಲ್ಲಿ ನಿರ್ಮಿಸಿದ್ದ ಕಟ್ಟಡದಿಂದಾಗಿ ನೀರಿನ ಹರಿವಿಗೆ ತೊಂದರೆಯಾಗಿ ಜಿಲ್ಲಾಧಿಕಾರಿ ಕಚೇರಿಗೇ ಅಪಾಯ ಉಂಟಾಗುವ ಸ್ಥಿತಿಗೆ ಬಂದಿತ್ತು. ಈಗ ಚುನಾವಣಾ ಶಾಖೆಗೆ ಬೇರೆ ಕಟ್ಟಡ ನಿರ್ಮಾಣವಾಗುತ್ತಿದೆ. ಇದರಿಂದ ದೊಡ್ಡ ಸಮಸ್ಯೆ ನಿವಾರಣೆಯಾಗುತ್ತದೆ ಎಂಬುದು ಜಿಲ್ಲಾಧಿಕಾರಿ ಅಭಿಪ್ರಾಯ.ಒಟ್ಟಿನಲ್ಲಿ ಕೆಡವಬೇಕು ಎಂದು ತೀರ್ಮಾನಿಸಿದ್ದ ಕಟ್ಟಡವೊಂದು ಈಗ ನಗರದ ಸೌಂದರ್ಯವನ್ನು ಹೆಚ್ಚಿಸುವ ಮಟ್ಟಕ್ಕೆ ಬಂದು ನಿಂತಿದೆ. ಇದು ಬ್ರಿಟೀಷರ ಕಾಲದ ಕಟ್ಟಡವಾಗಿದ್ದರಿಂದ ಇದನ್ನು ಪಾರಂಪರಿಕ ಕಟ್ಟಡಗಳ ಸಾಲಿಗೆ ಸೇರಿಸಬೇಕು ಎಂಬ ಜಿಜ್ಞಾಸೆಯೂ ಈಗ ನಡೆಯುತ್ತಿದೆ.‘ಹಳೆ ಕಟ್ಟಡ ಕೆಡವಲು ಮನಸಾಗಲಿಲ್ಲ’

‘ಬಂದ ಹೊಸದರಲ್ಲಿ ನಾನೂ ಈ ಕಟ್ಟಡ ಕೆಡವಲು ಹಿಂದೆ ತಯಾರಿಸಿ ಇಟ್ಟಿದ್ದ ಪ್ರಸ್ತಾವವನ್ನು ಪುನಃ ಸರ್ಕಾರಕ್ಕೆ ಕಳುಹಿಸಿದ್ದೆ. ಆಮೇಲೆ ಯೋಚನೆ ಮಾಡಿದಾಗ ಈ ಗುಣಮಟ್ಟದ ಕಟ್ಟಡ ನಿರ್ಮಿಸಲು ನಮ್ಮಿಂದ ಸಾಧ್ಯವಿಲ್ಲ ಎನಿಸಿತು.ಮತ್ತೆ ಬೆಂಗಳೂರಿಗೆ ಹೋಗಿ ದುರಸ್ತಿಗೆ 50 ಲಕ್ಷ ರೂಪಾಯಿ ಕೊಡಿ ಎಂದು ಮನವಿ ಮಾಡಿದೆ. ಮತ್ತೆ ಮತ್ತೆ ಒತ್ತಾಯಿಸಿದೆ. ನಮ್ಮ ಮೇಲೆ ಆರೋಪ ಬರಬಹುದು ಎಂದು ಎಲ್ಲ ಅಧಿಕಾರಿಗಳು ಎಚ್ಚರಿಕೆ ನೀಡಿದರು. ಆದರೂ ಧೈರ್ಯ ಮಾಡಿ ‘ಆರೋಪ ಬಂದರೆ ಬರಲಿ, ಈ ಕಟ್ಟಡವನ್ನು ಉಳಿಸಲೇ ಬೇಕು’ ಎಂದುಕೊಂಡು ಕೆಲಸ ಆರಂಭಿಸಿದೆ. ಈಗ ಎಲ್ಲರೂ ಪ್ರಶಂಸೆ ವ್ಯಕ್ತಪಡಿಸಿದ್ದಾರೆ’ ಎಂದು ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್‌ ಸಂತಸ ವ್ಯಕ್ತಪಡಿಸಿದರು.

‘ಕಟ್ಟಡಕ್ಕೆ ಹೊಸ ರೂಪ ನೀಡುವಲ್ಲಿ ಎಲ್ಲ ಅಧಿಕಾರಿಗಳ ಸಲಹೆ ಸೂಚನೆ ಪಡೆದಿದ್ದೇವೆ. ಕಟ್ಟಡಕ್ಕೆ ಯಾವ ಬಣ್ಣ ಬಳಿಯಬೇಕು ಎಂಬುದನ್ನು ಎಲ್ಲರೂ ಸೇರಿ ತೀರ್ಮಾನಿಸಿದ್ದಾರೆ’ ಎಂದು ಅವರು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.