ಸೋಮವಾರ, ಮೇ 17, 2021
21 °C

ಡೀಸೆಲ್ ಬೆಲೆ ನಿಯಂತ್ರಣ ಮುಕ್ತ: ಕೇಂದ್ರ ತಾತ್ವಿಕ ಒಪ್ಪಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಡೀಸೆಲ್ ಬೆಲೆ ನಿಗದಿ ಅಧಿಕಾರವನ್ನು ನಿಯಂತ್ರಣ ಮುಕ್ತಗೊಳಿಸಲು  ತಾತ್ವಿಕ ಒಪ್ಪಿಗೆ ನೀಡಿರುವುದಾಗಿ ಕೇಂದ್ರ ಸರ್ಕಾರ ಮಂಗಳವಾರ ಸ್ಪಷ್ಟಪಡಿಸಿದೆ.

ಹಣಕಾಸು ಖಾತೆ ರಾಜ್ಯ ಸಚಿವ ನಮೋ ನಾರಾಯಣ ಮೀನಾ ರಾಜ್ಯಸಭೆಯಲ್ಲಿ ನೀಡಿದ ಲಿಖಿತ ಉತ್ತರದಲ್ಲಿ ಇದನ್ನು ತಿಳಿಸಿದ್ದಾರೆ.

ಡೀಸೆಲ್ ಬೆಲೆಯನ್ನು ಮಾರುಕಟ್ಟೆ ಸ್ಥಿತಿಗತಿಗೆ ಅನುಗುಣವಾಗಿ ನಿರ್ಧರಿಸುವ ಅಧಿಕಾರವನ್ನು ತೈಲ ಕಂಪನಿಗಳಿಗೇ ಬಿಡಲಾಗುವುದು ಎಂದಿರುವ ಅವರು, ಅಡುಗೆ ಅನಿಲ (ಎಲ್‌ಪಿಜಿ) ಬೆಲೆ ನಿರ್ಧಾರವನ್ನು ನಿಯಂತ್ರಣ ಮುಕ್ತಗೊಳಿಸುವ ಯಾವ ಪ್ರಸ್ತಾವವೂ ಸರ್ಕಾರದ ಮುಂದೆ ಇಲ್ಲ ಎಂದು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದ್ದಾರೆ.

ಆದರೆ, ಕಚ್ಚಾ ತೈಲ ಬೆಲೆ ಹೆಚ್ಚಳವಾದಾಗ ಅಥವಾ ಹಣದುಬ್ಬರದಿಂದಾಗಿ ಜನರ ಹೊರೆ ತಗ್ಗಿಸಬೇಕಾದ ಸಂದರ್ಭ ಎದುರಾದಾಗ ಡೀಸೆಲ್‌ನ ಚಿಲ್ಲರೆ ಮಾರಾಟ ದರ ನಿಗದಿಯಲ್ಲಿ ಮಧ್ಯಪ್ರವೇಶಿಸುವ ಅಧಿಕಾರವನ್ನು ಸರ್ಕಾರ ಹೊಂದಿರುತ್ತದೆ ಎಂದೂ ಅವರು ಹೇಳಿದ್ದಾರೆ.

ಆನಂತರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಸುದ್ದಿಗಾರರ ಜತೆ ಮಾತನಾಡಿ, ಡೀಸೆಲ್ ಬೆಲೆ ನಿಗದಿಯನ್ನು ನಿಯಂತ್ರಣ ಮುಕ್ತಗೊಳಿಸುವ ನಿರ್ಧಾರಕ್ಕೆ ಕಳೆದ ಜೂನ್‌ನಲ್ಲಿ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿತ್ತು ಎಂದು ತಿಳಿಸಿದ್ದಾರೆ.

ಆದರೆ ತನ್ನ ನಿರ್ಧಾರಕ್ಕೆ ಸರ್ಕಾರ ಅಂಟಿಕೊಳ್ಳಲಿದೆಯೇ ಎಂದು ಕೇಳಿದಾಗ ಸಚಿವರು ಏನನ್ನೂ ಹೇಳಲಿಲ್ಲ.

ಡೀಸೆಲ್  ಬೆಲೆ ನಿಗದಿಯನ್ನು ನಿಯಂತ್ರಣ ಮುಕ್ತಗೊಳಿಸಿದರೆ ಅದರ ಬೆಲೆ ಹೆಚುತ್ತದೆ ಎಂದು ಪ್ರತಿಪಕ್ಷವಾದ ಬಿಜೆಪಿ ಆಕ್ಷೇಪಿಸಿದೆ.

`ಇನ್ನು ಕೆಲವೇ ದಿನಗಳಲ್ಲಿ ಸರ್ಕಾರವು ಡೀಸೆಲ್ ಬೆಲೆ ಹೆಚ್ಚಿಸಿ ಜನರಿಗೆ ಆಘಾತ ನೀಡುವ ಲಕ್ಷಣಗಳಿವೆ. ಮುಖ್ಯ ಆರ್ಥಿಕ ಸಲಹೆಗಾರ ಕೌಶಿಕ್ ಬಸು ಅವರು ಏನು ಸುಳಿವು ನೀಡಿದ್ದರೋ ಅದನ್ನು ಈಗ ಸರ್ಕಾರವೇ ದೃಢಪಡಿಸಿದಂತಾಗಿದೆ. ಡೀಸೆಲ್ ಬೆಲೆ ಹೆಚ್ಚಳವು ಇತರೆಲ್ಲಾ ದರಗಳ ಹೆಚ್ಚಳಕ್ಕೂ ಕಾರಣವಾಗುವುದರಿಂದ ಈ ಪ್ರಸ್ತಾವವನ್ನು ವಿರೋಧಿಸುತ್ತೇವೆ~ ಎಂದು  ಬಿಜೆಪಿ ವಕ್ತಾರ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.

ಕಳೆದ ಸಾಲಿನಲ್ಲಿ, ಒಟ್ಟಾರೆ ಆಂತರಿಕ ಉತ್ಪಾದನೆಯ (ಜಿಡಿಪಿ) ಶೇ 5.9ರಷ್ಟಿದ್ದ  ರಾಷ್ಟ್ರದ ವಿತ್ತೀಯ ಕೊರತೆಯು ಪ್ರಸಕ್ತ ಸಾಲಿನಲ್ಲಿ ಶೇ 5.1ರಷ್ಟಾಗಬಹುದೆಂದು ಅಂದಾಜಿಸಲಾಗಿದೆ. ತೈಲ ಬೆಲೆಗೆ ನೀಡುತ್ತಿರುವ ಸಬ್ಸಿಡಿಯೂ ಇದಕ್ಕೆ ಪ್ರಮುಖ ಕಾರಣಗಳಲ್ಲಿ ಒಂದು ಎಂದು ಸರ್ಕಾರ ಹೇಳುತ್ತಿದೆ. ಹೀಗಾಗಿ ತೈಲಕ್ಕಾಗಿ ನೀಡುತ್ತಿರುವ ಸಬ್ಸಿಡಿ ಮೊತ್ತವನ್ನು ಜಿಡಿಪಿಯ ಶೇ 2ರಷ್ಟಕ್ಕೆ ಇಳಿಸಬೇಕೆಂಬುದು ಸರ್ಕಾರದ ಗುರಿಯಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.