ಗುರುವಾರ , ಮೇ 6, 2021
31 °C

ಡೆವಲಪರ್‌ಗಳಿಂದ ಕೋಟ್ಯಂತರ ರೂಪಾಯಿ ಲಂಚ

ಪ್ರಜಾವಾಣಿ ವಾರ್ತೆ ಎಂ. ಕೀರ್ತಿಪ್ರಸಾದ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದಲ್ಲಿ ಬಹುಮಹಡಿ ಕಟ್ಟಡಗಳ ನಿರ್ಮಾಣಕ್ಕೆ ಮಂಜೂರಾತಿ ನೀಡುವ ನಗರ ಯೋಜನೆ ವಿಭಾಗದಲ್ಲಿ ಕೋಟ್ಯಂತರ ರೂಪಾಯಿ ಹಣ ಕೈ ಬದಲಾಗುತ್ತದೆ. ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲೇ ಇರುವ ಈ ವಿಭಾಗದಲ್ಲಿ ಭಾರಿ ಮೊತ್ತದ ಲಂಚ ವ್ಯವಹಾರ ನಡೆಯುತ್ತದೆ ಎಂಬ ಗಂಭೀರ ಆರೋಪವಿದೆ.ಬಹುಮಹಡಿ ಕಟ್ಟಡ ನಿರ್ಮಾಣ ನಕ್ಷೆ ಮಂಜೂರಾತಿ ಹಾಗೂ ಆರಂಭಿಕ ಪ್ರಮಾಣ ಪತ್ರ (ಕಮೆನ್ಸ್‌ಮೆಂಟ್ ಸರ್ಟಿಫಿಕೇಟ್- ಸಿ.ಸಿ) ಪಡೆಯುವಲ್ಲಿ ಅಧಿಕಾರಿಗಳಿಗಿಂತ ಜನಪ್ರತಿನಿಧಿಗಳಿಗೆ ದೊಡ್ಡ ಮೊತ್ತದ ಹಣ ಸಂದಾಯವಾಗುತ್ತದೆ. ಅಲ್ಲದೇ ನಿಯಮ ಉಲ್ಲಂಘನೆಗೂ ಜನಪ್ರತಿನಿಧಿಗಳು ದುಬಾರಿ ಹಣ ಹಾಗೂ ಫ್ಲ್ಯಾಟ್‌ಗಳನ್ನು ಉಡುಗೊರೆಯಾಗಿ ಪಡೆಯುತ್ತಾರೆ ಎಂಬ ದೂರು ಇದೆ.ನಾಲ್ಕು ಮಹಡಿಗಿಂತ ಅಧಿಕ ಮಹಡಿಯ ಕಟ್ಟಡ ನಿರ್ಮಿಸುವವರು ಮೊದಲಿಗೆ ಅಗತ್ಯ ದಾಖಲೆಗಳೊಂದಿಗೆ ನಕ್ಷೆ ಸಹಿತ ಅರ್ಜಿಯನ್ನು ಈ ವಿಭಾಗದ ಗುಮಾಸ್ತರಿಗೆ ಸಲ್ಲಿಸಬೇಕು. ಈ ಕಡತವನ್ನು ಕಿರಿಯ/ ಸಹಾಯಕ ಎಂಜಿನಿಯರ್ (ಡ್ರಾಫ್ಟ್‌ಮನ್) ಪರಿಶೀಲನೆ ನಡೆಸಿ ನಂತರ ಸಹಾಯಕ ನಿರ್ದೇಶಕರಿಗೆ ಸಲ್ಲಿಸುತ್ತಾರೆ.ಉಪ ನಿರ್ದೇಶಕರು ಪರಿಶೀಲಿಸಿದ ನಂತರ ಜಂಟಿ ನಿರ್ದೇಶಕರು ಕಡತ ಪರೀಕ್ಷಿಸುತ್ತಾರೆ. ಆ ಬಳಿಕ ಹೆಚ್ಚುವರಿ ನಿರ್ದೇಶಕರ ಮೂಲಕ ಎಂಜಿನಿಯರಿಂಗ್ ಚೀಫ್‌ಗೆ ರವಾನೆಯಾಗುತ್ತದೆ. ಮುಂದಿನ ಹಂತದಲ್ಲಿ ವಿಶೇಷ ಆಯುಕ್ತರು ಗಮನಿಸಿ ಅನುಮೋದಿಸುತ್ತಾರೆ. ಇವರು ಅನುಮೋದಿಸಿದ ಬಳಿಕ ಅಂತಿಮವಾಗಿ ಆಯುಕ್ತರು ಅಂಕಿತ ಹಾಕುತ್ತಾರೆ. ನಂತರ ಕಡತವು ಹಿಮ್ಮುಖವಾಗಿ ಇದೇ ಹಂತಗಳನ್ನು ದಾಟಿ ಗುಮಾಸ್ತರಿಗೆ ತಲುಪುತ್ತದೆ. ಆದರೆ ಈ ಎಲ್ಲ ಹಂತಗಳನ್ನು ದಾಟುವುದು ಸಾಮಾನ್ಯದ ಮಾತಲ್ಲ.ಟೇಬಲ್‌ಗೆ ಲಕ್ಷಾಂತರ ಹಣ!:

ಡೆವಲಪರ್‌ಗಳೇ ನೇರವಾಗಿ ಮಂಜೂರಾತಿ ಪಡೆಯಲು ಮುಂದಾಗುತ್ತಾರೆ ಎಂದು ಭಾವಿಸೋಣ. ಆಗ ಸಹಾಯಕ ಎಂಜಿನಿಯರ್ ಹಂತದಿಂದ ಇಐಸಿ ವರೆಗಿನ ಹಂತದಲ್ಲಿ ಕಡತ ಅನುಮೋದನೆಯಾಗಬೇಕಾದರೆ ಲಕ್ಷಾಂತರ ರೂಪಾಯಿ ನೀಡಲೇಬೇಕು ಎಂಬ ಅಘೋಷಿತ `ನಿಯಮ~ ಜಾರಿಯಲ್ಲಿದೆ ಎನ್ನಲಾಗಿದೆ.`ಸಾಧಾರಣ ಬಹುಮಹಡಿ ಕಟ್ಟಡಕ್ಕೆ ನಕ್ಷೆ ಮಂಜೂರಾತಿ ಪಡೆಯಬೇಕಾದರೆ ಈ ಆರು ಹಂತಗಳ ಪೈಕಿ ಪ್ರತಿ ಹಂತದ ಅಧಿಕಾರಿಗೆ ಕನಿಷ್ಠ ಐದರಿಂದ 10 ಲಕ್ಷ ರೂಪಾಯಿ ನೀಡಬೇಕು. ಆದರೆ ಭಾರಿ ಕಟ್ಟಡಗಳಾದರೆ ಈ ಮೊತ್ತದ ನಾಲ್ಕೈದು ಪಟ್ಟು ಹಣ ಕೇಳುವವರು ಇದ್ದಾರೆ~ ಎಂದು ಪಾಲಿಕೆಯ ಉನ್ನತ ಮೂಲಗಳು ಹೇಳಿವೆ.ಏಜೆಂಟ್ ವ್ಯವಹಾರ:

500ಕ್ಕೂ ಅಧಿಕ ಫ್ಲ್ಯಾಟ್‌ಗಳು ಇಲ್ಲವೇ ಮಾಲ್ ಸಹಿತ ವಸತಿ ಸಮುಚ್ಚಯ ನಿರ್ಮಾಣಕ್ಕೆ ನಕ್ಷೆ ಮಂಜೂರಾತಿ ಕೊಡಿಸಲು ಏಜೆಂಟ್‌ಗಳ ದಂಡೇ ಇದೆ. ಈ ಏಜೆಂಟ್‌ಗಳು ಅಧಿಕಾರಿಗಳಿಗೆ ಆದ್ಯತೆ ನೀಡುವುದು ಕಡಿಮೆ. ಬದಲಿಗೆ ಪ್ರಭಾವಿ ರಾಜಕಾರಣಿಗಳಿಂದ ಒತ್ತಡ ತಂದು ಕೆಲಸ ಮಾಡಿಸುತ್ತಾರೆ. ಹಾಗಾಗಿ ಇವರದ್ದೆಲ್ಲ ಕೋಟಿ ವ್ಯವಹಾರ ಎನ್ನುವ ಆರೋಪಗಳಿವೆ.ಒಂದೇ ದಿನದಲ್ಲಿ ಮಂಜೂರು:


ನಗರ ಯೋಜನೆ ವಿಭಾಗದಲ್ಲಿ ಹಣ ನೀಡದಿದ್ದರೆ ಯಾವುದೇ ಕೆಲಸ ಆಗುವುದಿಲ್ಲ ಎಂಬ ಗಂಭೀರ ಆರೋಪವಿದೆ. ಹಣ ನೀಡಿದರೆ ಒಂದೇ ದಿನದಲ್ಲಿ ಆರು ಹಂತದ ಅಧಿಕಾರಿಗಳು ಅನುಮೋದನೆ ನೀಡಿದ ಉದಾಹರಣೆಗಳೂ ಇವೆ. ಆದರೆ ಹಣ ನೀಡದ ಕೆಲವು ಡೆವಲಪರ್‌ಗಳು ಸಲ್ಲಿಸಿದ ಕಡತಗಳು ವರ್ಷಗಳಿಂದ ದೂಳು ಹಿಡಿದಿರುವ ಪ್ರಕರಣಗಳು ಕೂಡ ಇವೆ.ನಕ್ಷೆ ಮಂಜೂರಾತಿ ಪಡೆದ ನಂತರ ಎಲ್ಲವೂ ಮುಗಿಯಿತು ಎಂದರ್ಥವಲ್ಲ. ಆರಂಭಿಕ ಪ್ರಮಾಣ ಪತ್ರಕ್ಕೆ (ಕಮೆನ್ಸ್‌ಮೆಂಟ್ ಸರ್ಟಿಫಿಕೇಟ್- ಸಿ.ಸಿ) ಅರ್ಜಿ ಸಲ್ಲಿಸಿದಾಗಲೂ ಸರಳವಾಗಿ ಮಂಜೂರಾತಿ ದೊರೆಯುವುದಿಲ್ಲ. ಈ ಪ್ರಕ್ರಿಯೆಯಲ್ಲಿ ಸಹಾಯಕ ಎಂಜಿನಿಯರ್‌ನಿಂದ ಜಂಟಿ ನಿರ್ದೇಶಕರ ಹಂತದವರೆಗಿನ ಅಧಿಕಾರಿಗಳು ಅನುಮೋದನೆ ನೀಡಬೇಕು. ಈ ಸಂದರ್ಭದಲ್ಲೂ ಟೇಬಲ್‌ನಿಂದ ಟೇಬಲ್‌ಗೆ ಕಡತ ಮುಂದುವರಿಯಲು ಲಕ್ಷಾಂತರ ರೂಪಾಯಿ ನೀಡಬೇಕು. ಮಂಜೂರಾದ ನೀಲನಕ್ಷೆ ಪ್ರತಿಗಳಿಗೆ ಮೊಹರು (ಸೀಲ್) ಹಾಕುವ ಸಿಬ್ಬಂದಿ ಹಾಗೂ ಇತರೆ `ವೆಚ್ಚ~ಗಳಿಗೆ 10,000ದಿಂದ 20,000 ರೂಪಾಯಿ ವಸೂಲಿ ಮಾಡುವವರಿದ್ದಾರೆ.ಇಷ್ಟಾದ ಬಳಿಕ ಕಟ್ಟಡ ನಿರ್ಮಾಣದಲ್ಲಿ ನಿಯಮ ಪಾಲನೆಯ ಮೇಲ್ವಿಚಾರಣೆ ನಡೆಸುವವರು ವಾರ್ಡ್ ಮಟ್ಟದ ಎಂಜಿನಿಯರ್‌ಗಳು. ಇವರಲ್ಲೂ ಬಹುಪಾಲು ಮಂದಿ ಮಹಡಿಗೆ ಇಂತಿಷ್ಟು ಹಣ ನೀಡುವಂತೆ ಕೇಳುತ್ತಾರೆ. ಬಹುತೇಕ ಸಂದರ್ಭದಲ್ಲಿ ಇವರು ಶಾಸಕರು ಹಾಗೂ ಪಾಲಿಕೆ ಸದಸ್ಯರ ಪ್ರತಿನಿಧಿಗಳಾಗಿ ಹಣ ವಸೂಲಿ ಮಾಡುತ್ತಾರೆ. ಇಲ್ಲಿಯೂ ಕೋಟ್ಯಂತರ ರೂಪಾಯಿ ವಿನಿಮಯವಾಗುತ್ತದೆ.ಫ್ಲ್ಯಾಟ್‌ಗೆ ಬೇಡಿಕೆ:

ಸುಮಾರು 500ಕ್ಕಿಂತಲೂ ಹೆಚ್ಚು ಫ್ಲ್ಯಾಟ್‌ಗಳನ್ನು ನಿರ್ಮಿಸುವ ಡೆವಲಪರ್‌ಗಳು ನಕ್ಷೆ ಮಂಜೂರಾತಿಗೆ ಅರ್ಜಿ ಸಲ್ಲಿಸಿದರೆ ಸ್ಥಳೀಯ ಶಾಸಕರು, ಪಾಲಿಕೆ ಸದಸ್ಯರು ಹಾಗೂ ವಲಯ ಮಟ್ಟದ ಹಿರಿಯ ಅಧಿಕಾರಿಗಳು ತಲಾ ಒಂದೊಂದು ಫ್ಲ್ಯಾಟ್ ಕೇಳಿರುವ ಉದಾಹರಣೆಗಳೂ ಇವೆ. ಒಂದೊಮ್ಮೆ ಡೆವಲಪರ್ ಈ ಬೇಡಿಕೆಗೆ ಸ್ಪಂದಿಸಿದರೆ ನಕ್ಷೆ ಹಾಗೂ ಆರಂಭಿಕ ಪ್ರಮಾಣ ಪತ್ರ ಮಂಜೂರಾತಿಗೆ ಹೆಚ್ಚಿನ ಲಂಚ ನೀಡಬೇಕಾದ ಅಗತ್ಯವಿಲ್ಲ. ಬೃಹತ್ ಅಪಾರ್ಟ್‌ಮೆಂಟ್‌ಗಳಲ್ಲಿ ಸುಮಾರು 10 ಫ್ಲ್ಯಾಟ್‌ಗಳು ಈ ರೀತಿಯ ಕಾರಣಗಳಿಗೆ ಲಂಚದ ರೂಪದಲ್ಲಿ ಹಂಚಿಕೆಯಾಗುತ್ತವೆ.ನೋಟು ಎಣಿಕೆ ಯಂತ್ರ:


ಬ್ಯಾಂಕ್, ವಾಣಿಜ್ಯ ಮಳಿಗೆ ಇತರೆ ಕಚೇರಿಗಳಲ್ಲಿ ನೋಟು ಎಣಿಕೆ ಯಂತ್ರ ಬಳಕೆ ಸಾಮಾನ್ಯ. ಆದರೆ ಪಾಲಿಕೆಯ ತಾಂತ್ರಿಕ ವಿಭಾಗದ ಅಧಿಕಾರಿಯೊಬ್ಬರು ತಮ್ಮ ಕಚೇರಿಯಲ್ಲಿ ನೋಟು ಎಣಿಕೆ ಯಂತ್ರವನ್ನಿಟ್ಟುಕೊಂಡಿದ್ದಾರೆ. ಅನಾಯಾಸವಾಗಿ ಬರುವ ಹಣವನ್ನು ಎಣಿಕೆ ಮಾಡಿ ಖಾತ್ರಿ ಪಡಿಸಿಕೊಂಡ ಬಳಿಕವಷ್ಟೇ ಕಡತಕ್ಕೆ ಸಹಿ ಹಾಕುತ್ತಾರೆ ಎಂದು ನಂಬಲರ್ಹ ಮೂಲಗಳು ತಿಳಿಸಿವೆ.ನೀವೂ ಮಾಹಿತಿ ನೀಡಿ:

ನಿಯಮಗಳ ಉಲ್ಲಂಘನೆ ಹಾಗೂ ಕಟ್ಟಡ ನಿರ್ಮಾಣದಲ್ಲಿ ನಡೆಯುವ ಅಕ್ರಮಗಳ ಕುರಿತು `ಪ್ರಜಾವಾಣಿ~ ಸರಣಿ ಲೇಖನಗಳನ್ನು ಪ್ರಕಟಿಸುತ್ತಿದೆ. ಓದುಗರು ಸಹ ಈ ರೀತಿಯ ಪ್ರಕರಣಗಳ ಬಗ್ಗೆ ಮಾಹಿತಿ ನೀಡಬಹುದು. ಅಲ್ಲದೇ ಕಟ್ಟಡ ನಿರ್ಮಾಣ ವೇಳೆ ಅಧಿಕಾರಿಗಳು ಅನಗತ್ಯ ಕಿರುಕುಳ ನೀಡುತ್ತಿದ್ದರೆ ಈ ಕುರಿತು ಮಾಹಿತಿ ನೀಡಬಹುದು. ಅದನ್ನು ಓದುಗರ ಹೆಸರಿನಲ್ಲಿಯೇ ಪ್ರಕಟಿಸಲಾಗುವುದು. ಹಾಗೆಯೇ ನಿಯಮ ಉಲ್ಲಂಘಿಸಿ ನಿರ್ಮಾಣವಾಗುತ್ತಿರುವ ಬಹುಮಹಡಿ ಕಟ್ಟಡಗಳ ಬಗ್ಗೆ ದಾಖಲೆ ಸಹಿತ ಮಾಹಿತಿಯನ್ನು ಕೆಳಕಂಡ ಇ-ಮೇಲ್ ವಿಳಾಸಕ್ಕೆ ಕಳುಹಿಸಬಹುದು. ಪ್ರತಿಕ್ರಿಯೆಯನ್ನು ಸಲ್ಲಿಸಬಹುದು. ಇ-ಮೇಲ್ ವಿಳಾಸ:

civicpv@gmail.comಉಲ್ಲಂಘನೆ ಹೇಗೆ?:

ಡೆವಲಪರ್‌ಗಳು ನಿಯಮಗಳನ್ನು ಹೇಗೆ ಉಲ್ಲಂಘಿಸುತ್ತಾರೆ ಎಂಬುದು ನಿಜಕ್ಕೂ ಕುತೂಹಲಕರ ಅಂಶ. ನಕ್ಷೆ ಮಂಜೂರಾತಿ ಪಡೆದ ಬಳಿಕ ಕಟ್ಟಡ ನಿರ್ಮಾಣ ಕಾರ್ಯ ಆರಂಭವಾಗುತ್ತದೆ.ಆಗ ನಿಯಮಬದ್ಧವಾಗಿಯೇ ಅಡಿಪಾಯ ಹಾಕಿ, ಪಿಲ್ಲರ್‌ಗಳನ್ನು ನಿರ್ಮಿಸಲಾಗುತ್ತದೆ. ನೂರಾರು ಕಾರ್ಮಿಕರು ಕೆಲಸ ಮಾಡುತ್ತಿರುತ್ತಾರೆ. ಆ ಹಂತದಲ್ಲಿ ಸಹಾಯಕ ಎಂಜಿನಿಯರ್ ಸ್ಥಳ ಪರಿಶೀಲನೆ ನಡೆಸಿ ಖಾತ್ರಿಪಡಿಸಿಕೊಳ್ಳುತ್ತಾರೆ. `ಬುದ್ಧಿವಂತ~ ಎಂಜಿನಿಯರ್ ಛಾಯಾಚಿತ್ರವನ್ನೂ ಸೆರೆಹಿಡಿಯುತ್ತಾರೆ.ಕೆಲ ದಿನಗಳ ಬಳಿಕ ಅಡಿಪಾಯ ಹಾಗೂ ಪಿಲ್ಲರ್‌ಗಳನ್ನು ತೆರವುಗೊಳಿಸಿ ನಿಯಮ ಬಾಹಿರವಾಗಿ ಹೆಚ್ಚು ಪ್ರದೇಶದಲ್ಲಿ ಅಡಿಪಾಯ ಹಾಕಿ ಪಿಲ್ಲರ್ ನಿರ್ಮಿಸಲಾಗುತ್ತದೆ. ಬಹುಪಾಲು ಪ್ರಕರಣಗಳಲ್ಲಿ ಇದು ಅಧಿಕಾರಿಯ ಗಮನಕ್ಕೆ ಬರುವುದಿಲ್ಲ ಎನ್ನುವಂತಿಲ್ಲ.ಇನ್ನು ಆರಂಭಿಕ ಪ್ರಮಾಣ ಪತ್ರ ಪಡೆದ ಬಳಿಕ ನಿಯಮಗಳನ್ನು ಗಾಳಿಗೆ ತೂರಿ ಕಟ್ಟಡ ನಿರ್ಮಿಸುತ್ತಾರೆ. ಆದರೆ ನಿರ್ಮಾಣ ಕಾರ್ಯ ಪೂರ್ಣಗೊಂಡ ಬಳಿಕವೂ ಸ್ವಾಧೀನ ಪತ್ರವನ್ನೇ ಪಡೆಯದಿರುವ ಸಾಕಷ್ಟು ಬಹುಮಹಡಿ ಕಟ್ಟಡಗಳು ನಗರದಲ್ಲಿವೆ.ಸ್ವಾಧೀನ ಪತ್ರ ಪಡೆದುಕೊಂಡ ನಂತರ ಕಟ್ಟಡದಲ್ಲಿ ನಿರ್ಮಾಣ ಕಾರ್ಯ ಕೈಗೊಳ್ಳುವಂತಿಲ್ಲ. ಆದರೆ, ಅಕ್ರಮವಾಗಿ ತಾರಸಿಯ ಪ್ರದೇಶದಲ್ಲಿ ಫ್ಲ್ಯಾಟ್‌ಗಳನ್ನು ನಿರ್ಮಿಸಿ ಹಂಚಿಕೆ ಮಾಡುತ್ತಾರೆ. ಅಂದರೆ ಹೆಚ್ಚುವರಿಯಾಗಿ ಇನ್ನೊಂದು ಮಹಡಿ ನಿರ್ಮಿಸಿ ಪಾಲಿಕೆಗೆ ವಂಚಿಸುತ್ತಾರೆ.

-ಮುಂದುವರಿಯುವುದು...

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.