ಬುಧವಾರ, ಮೇ 12, 2021
26 °C

ಡೇವಿಸ್ ಕಪ್: ಜಪಾನ್‌ಗೆ 2-0ರಲ್ಲಿ ಮುನ್ನಡೆ; ಭಾರತಕ್ಕೆ ನಿರಾಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಟೋಕಿಯೊ (ಐಎಎನ್‌ಎಸ್):  ಉತ್ತಮ ಹೋರಾಟ ತೋರಿದರೂ ಭಾರತದ ಸೋಮದೇವ್ ದೇವವರ್ಮನ್ ಹಾಗೂ ರೋಹನ್ ಬೋಪಣ್ಣ ಅವರಿಗೆ ಇಲ್ಲಿ ನಡೆಯುತ್ತಿರುವ ಜಪಾನ್ ವಿರುದ್ಧದ ಡೇವಿಸ್ ಕಪ್ ಟೆನಿಸ್ ಟೂರ್ನಿಯ ಸಿಂಗಲ್ಸ್‌ನ ಪಂದ್ಯಗಳಲ್ಲಿ ಗೆಲುವು ಪಡೆಯಲು ಸಾಧ್ಯವಾಗಲಿಲ್ಲ.ಶುಕ್ರವಾರ ನಡೆದ ವಿಶ್ವ ಗುಂಪಿನ ಪ್ಲೇ ಆಫ್ ಪಂದ್ಯದಲ್ಲಿ ಸೋಮದೇವ್ ಸಿಂಗಲ್ಸ್‌ನಲ್ಲಿ ಭಾರತಕ್ಕೆ ಮೊದಲ ನಿರಾಸೆ ಮೂಡಿಸಿದರು. ಭಾರತದ ಅಗ್ರ ಶ್ರೇಯಾಂಕದ ಆಟಗಾರ 3-6, 4-6, 5-7ರಲ್ಲಿ ಆತಿಥೇಯ ಜಪಾನ್‌ನ ಯುಯಿಚಿ ಸುಗಿತಾ ಎದುರು ಸೋಲು ಕಂಡರು. ಈ ಮೂಲಕ ಆತಿಥೇಯ ತಂಡ 1-0ರಲ್ಲಿ ಮುನ್ನಡೆ ಸಾಧಿಸಿತು.ಒಟ್ಟು ಐದು ಸೆಟ್‌ಗಳ ಪಂದ್ಯದಲ್ಲಿ ಮೊದಲ ಮೂರು ಸೆಟ್‌ನಲ್ಲಿ ಭಾರತದ ಆಟಗಾರ ಸೋಲು ಅನುಭವಿಸಿದರು. ಎರಡು ಹಾಗೂ ಮೂರನೇ ಸೆಟ್‌ನಲ್ಲಿ ಉತ್ತಮ ಪ್ರತಿರೋಧ ತೋರಿದರಾದರೂ ಗೆಲುವು ಪಡೆಯಲು ಸಾಧ್ಯವಾಗಲಿಲ್ಲ. ಈ ಹೋರಾಟ 92 ನಿಮಿಷಗಳ ಕಾಲ ನಡೆಯಿತು.ಎರಡನೇ ಸಿಂಗಲ್ಸ್‌ನಲ್ಲಿ ರೋಹನ್ ಬೋಪಣ್ಣ ಗಮನ ಸೆಳೆಯುವ ಪ್ರದರ್ಶನ ನೀಡಲಿಲ್ಲ. 90 ನಿಮಿಷಗಳ ಕಾಲ ನಡೆದ ಹೋರಾಟದಲ್ಲಿ ಈ ಆಟಗಾರ 3-6, 2-6, 2-6ರಲ್ಲಿ ಕೈ ನಿಷಿಕೋರಿ ಎದುರು ಪರಾಭವಗೊಂಡರು. ಭಾರತದ ಇಬ್ಬರೂ ಆಟಗಾರರಿಗೆ ಮೊದಲ ಮೂರು ಸೆಟ್‌ನಲ್ಲಿ ಒಂದೂ ಸೆಟ್ ಗೆದ್ದುಕೊಳ್ಳಲು ಆಗಲಿಲ್ಲ.ದೆಹಲಿಯಲ್ಲಿ 2008ರಲ್ಲಿ ನಡೆದ ಡೇವಿಸ್ ಕಪ್‌ನಲ್ಲಿ ಸೋಮದೇವ್ ಆಕರ್ಷಕ ಆಟವಾಡಿದ್ದರು. ಇಲ್ಲಿಯೂ ಅದೇ ಆಟವನ್ನು ಪುನರಾವರ್ತಿಸುವಲ್ಲಿ ಅವರು ವಿಫಲರಾದರು.ಭುಜದ ನೋವಿನಿಂದ ಬಳಲುತ್ತಿರುವ  ಸೋಮದೇವ್ ಮೊದಲ ಸೆಟ್‌ನಲ್ಲಿ ಸರ್ವ್ ಮಾಡಲು ಕಷ್ಟ ಪಟ್ಟರು. ಮೂರನೇ ಸೆಟ್‌ನಲ್ಲಿ ಚಿಕಿತ್ಸೆ ಪಡೆದು ಮತ್ತೆ ಆಟ ಮುಂದುವರಿಸಿದರು. ಇದು ಅವರ ಆಟದ ಮೇಲೂ ಪರಿಣಾಮ ಬೀರಿತು.ಆರಂಭದ ದಿನ ನಿರಾಸೆ ಅನುಭವಿಸಿರುವ ಭಾರತದ ಸ್ಪರ್ಧಿಗಳು, ಶನಿವಾರ ಡಬಲ್ಸ್ ವಿಭಾಗದಲ್ಲಿ ಉತ್ತಮ ಪ್ರದರ್ಶನ ನೀಡಬೇಕಿದೆ. ಗಾಯಗೊಂಡಿರುವ ಲಿಯಾಂಡರ್ ಪೇಸ್ ಅನುಪಸ್ಥಿತಿಯಲ್ಲಿ ಡಬಲ್ಸ್ ಜೋಡಿ ಮಹೇಶ್ ಭೂಪತಿ-ವಿಷ್ಣು ವರ್ಧನ ಜೋಡಿ ನಿಷಿಕೋರಿ-ಗೊ ಸೋಯಿದಾ ಅವರ ಸವಾಲನ್ನು ಎದುರಿಸಲಿದೆ.ಕಳೆದ ವರ್ಷದ ಅಪ್ಟೋಸ್ ಚಾಲೆಂಜರ್ ಟೂರ್ನಿಯಲ್ಲಿ ಭಾರತದ ಆಟಗಾರನ ಎದುರು ಸುಜಿತಾ ಸೋಲು ಕಂಡಿದ್ದರು. 2008ರಲ್ಲಿ ಭಾರತ 3-2ರಲ್ಲಿ ಜಪಾನ್ ತಂಡದ ಎದುರು ಜಯಿಸಿತ್ತು. ಆದರೆ 1966, 1974 ಹಾಗೂ 1987ರಲ್ಲಿ ಭಾರತ ತಂಡ ಡೇವಿಸ್ ಕಪ್‌ನಲ್ಲಿ ರನ್ನರ್ ಅಪ್ ಸ್ಥಾನ ಪಡೆದಿತ್ತು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.