ಬುಧವಾರ, ಮೇ 18, 2022
28 °C

ತಂತ್ರಜ್ಞಾನ ಬಳಸಿ ಹೆಚ್ಚು ಇಳುವರಿ ಪಡೆಯಿರಿ.

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ರೈತ ಸಮುದಾಯದ ಪ್ರಗತಿಗೆ ಎಷ್ಟು ಹಣ ಬಿಡುಗಡೆ ಮಾಡುತ್ತೇವೆ ಎಂಬುದು ಮುಖ್ಯವಲ್ಲ, ಅದರ ಸದುಪಯೋಗ ಆಗಬೇಕು’ ಎಂದು ಗೃಹ ಸಚಿವ ಆರ್.ಅಶೋಕ ಶುಕ್ರವಾರ ಇಲ್ಲಿ ಅಭಿಪ್ರಾಯಪಟ್ಟರು.2008-09ನೇ ಸಾಲಿನ ‘ಕೃಷಿ ಪಂಡಿತ’ ಮತ್ತು ‘ಕೃಷಿ ಪ್ರಶಸ್ತಿ’ ವಿಜೇತ ರೈತರಿಗೆ ರಾಜ್ಯ ಸರ್ಕಾರಿ ನೌಕರರ ಸಂಘವು ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ರೈತರನ್ನು ಸನ್ಮಾನಿಸಿ ಮಾತನಾಡಿದ ಅವರು, ತಂತ್ರಜ್ಞಾನದ ಸದುಪಯೋಗ ಪಡೆದು ಹೊಸ ಹೊಸ ಅವಿಷ್ಕಾರಗಳನ್ನು ಅಳವಡಿಸಿಕೊಳ್ಳುವ ಮೂಲಕ ಹೆಚ್ಚಿನ ಇಳುವರಿ ಪಡೆಯಬೇಕು ಎಂದು ಸಲಹೆ ಮಾಡಿದರು.ಕೇಂದ್ರ ಸರ್ಕಾರಿ ನೌಕರರಿಗೆ ನೀಡುವ ಸರಿ ಸಮಾನ ವೇತನವನ್ನು ರಾಜ್ಯ ಸರ್ಕಾರಿ ನೌಕರರಿಗೂ ನೀಡಬೇಕು ಎಂಬ ಬೇಡಿಕೆಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಗಮನಕ್ಕೆ ತರಲಾಗುವುದು ಎಂದು ಅವರು ಭರವಸೆ ನೀಡಿದರು. ಕೃಷಿ ಸಚಿವ ಉಮೇಶ್ ಕತ್ತಿ ಮಾತನಾಡಿ, ಪ್ರಶಸ್ತಿ ಪುರಸ್ಕೃತ ರೈತರಿಗೆ ಗುರುತಿನ ಚೀಟಿ, ಬಸ್‌ನಲ್ಲಿ ಉಚಿತ ಪ್ರಯಾಣಕ್ಕೆ ವ್ಯವಸ್ಥೆ  ಸೇರಿದಂತೆ ರೈತರ ಬೇಡಿಕೆಗಳನ್ನು  ಈಡೇರಿಸಲಾಗುವುದು ಎಂದು ಭರವಸೆ ನೀಡಿದರು.ರಾಜ್ಯದ ಮಾದರಿಯಲ್ಲಿಯೇ ಮುಂದೆ ಕೇಂದ್ರ ಸರ್ಕಾರವೂ ಕೃಷಿಗೆ ಪ್ರತ್ಯೇಕ ಬಜೆಟ್ ಮಂಡಿಸಬಹುದು. ಕೃಷಿಗೆ ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸದಿದ್ದರೆ ಕೃಷಿ ವಲಯ ತೊಂದರೆಗೆ ಸಿಲುಕುತ್ತದೆ. ಯಾವುದೇ ಸರ್ಕಾರವಾದರೂ ಹೆಚ್ಚಿನ ಆದ್ಯತೆ ನೀಡಬೇಕಾಗುತ್ತದೆ ಎಂದರು.ಶಾಸಕ ನರಸಿಂಹ ನಾಯಕ್, ಬೆಂಗಳೂರು ದೂರದರ್ಶನ ಕೇಂದ್ರದ ಉಪ ಮಹಾನಿರ್ದೇಶಕ ಡಾ.ಮಹೇಶ್ ಜೋಷಿ, ಕೃಷಿ ಇಲಾಖೆಯ ಆಯುಕ್ತ ಬಾಬುರಾವ್ ಮುಡಬಿ, ನಿರ್ದೇಶಕ ಡಾ.ಕೆ.ವಿ.ಸರ್ವೇಶ್, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಲ್. ಭೈರಪ್ಪ ಉಪಸ್ಥಿತರಿದ್ದರು. ಸಂಘದ ಖಜಾಂಚಿ ಚೌಡಯ್ಯ ಅವರ ಕೆಂಪೇಗೌಡರ ಚರಿತ್ರೆ, ಕುಂಚಿಟಿಗರ ಸಂಸ್ಕೃತಿ, ಸಿದ್ಧರಾಮನ ಕೃತಿಗಳನ್ನು ಸಚಿವ ಅಶೋಕ ಬಿಡುಗಡೆ ಮಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.