ಮಂಗಳವಾರ, ಮೇ 24, 2022
31 °C

ತಂತ್ರಜ್ಞಾನ ಸವಾಲಿನಲ್ಲೂ ಪತ್ರಿಕೆಗಳು ಪ್ರಸ್ತುತ: ಜೇಕಬ್ ಮ್ಯಾಥ್ಯೂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಯೆನ್ನಾ (ಆಸ್ಟ್ರಿಯಾ): `ಟ್ಯಾಬ್ಲೆಟ್ ಯುಗದಲ್ಲಿ ಮಾಧ್ಯಮ ಕ್ಷೇತ್ರ ಅತಿವೇಗದಲ್ಲಿ ಬದಲಾವಣೆಗಳಿಗೆ ಒಳಗಾಗುತ್ತಿದೆ. ತಂತ್ರಜ್ಞಾನದ ಕ್ರಾಂತಿ ಮುಂದೊಡ್ಡುತ್ತಿರುವ ಸವಾಲುಗಳನ್ನು ಎದುರಿಸುವ ಶಕ್ತಿ ಇರುವ ಪತ್ರಿಕೆಗಳು ಭವಿಷ್ಯದಲ್ಲೂ ಪ್ರಸ್ತುತವಾಗಿಯೇ ಇರುತ್ತವೆ~ ಎಂದು ವ್ಯಾನ್-ಇಫ್ರಾದ ಅಧ್ಯಕ್ಷ ಹಾಗೂ ಕೇರಳದ ಮಲಯಾಳ ಮನೋರಮಾ ಬಳಗದ ಪ್ರಕಟಣೆಗಳ ಕಾರ್ಯನಿರ್ವಾಹಕ ಸಂಪಾದಕ ಜೇಕಬ್ ಮ್ಯಾಥ್ಯೂ ಅಭಿಪ್ರಾಯಪಟ್ಟರು.ಇಲ್ಲಿ ನಡೆಯುತ್ತಿರುವ ವಿಶ್ವ ವೃತ್ತ ಪತ್ರಿಕಾ ಕಾಂಗ್ರೆಸ್ ಮತ್ತು ವಿಶ್ವ ಸಂಪಾದಕರ ವೇದಿಕೆಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು `ಸುದ್ದಿಯ ಸಂಗ್ರಹ ಮತ್ತು ಪ್ರಸಾರಕ್ಕಾಗಿ ಡಿಜಿಟಲ್ ಯುಗ ಒದಗಿಸಿಕೊಟ್ಟಿರುವ ಎಲ್ಲಾ ಸಾಧ್ಯತೆಗಳನ್ನೂ ಬಳಸಿಕೊಳ್ಳುವತ್ತ ಮಾಧ್ಯಮ ಸಂಸ್ಥೆಗಳು ಗಮನಹರಿಸಬೇಕು~ ಎಂದರು.`ಪತ್ರಿಕೆಗಳು ಇಂದಿಗೂ ಇತರ ಮಾಧ್ಯಮಗಳಿಗಿಂತ ಹೆಚ್ಚು ಪ್ರಬಲ. ಜನರು ನಂಬಿಕೆಯಿಟ್ಟಿರುವುದೂ ಅವುಗಳ ಮೇಲೆಯೇ. ಪತ್ರಿಕೆಗಳು ಇಂದಿಗೂ ವಿಶ್ವದ 180 ಕೋಟಿ ಜನರನ್ನು ಪ್ರತಿನಿತ್ಯ ತಲುಪುತ್ತಿವೆ. ಇದು ಇಂಟರ್ನೆಟ್ ಬಳಕೆದಾರರ ಸಂಖ್ಯೆಗಿಂತ ಶೇಕಡಾ 20ರಷ್ಟು ಹೆಚ್ಚು ಎಂಬುದೇ ಪತ್ರಿಕೆಗಳ ಸಾಮರ್ಥ್ಯ ಮತ್ತು ಮಹತ್ವವನ್ನು ಹೇಳುತ್ತಿದೆ~ ಎಂದು ಅಭಿಪ್ರಾಯಪಟ್ಟ ಅವರು `ಬ್ರಿಟನ್‌ನಲ್ಲಿ ಸಂಭವಿಸಿದ ಫೋನ್ ಕದ್ದಾಲಿಕೆಯ ಹಿನ್ನೆಲೆಯಲ್ಲಿ ಮಾಧ್ಯಮಗಳ ಮೇಲೆ ಸರ್ಕಾರ ನಿಯಂತ್ರಣ ಹೇರಲು ಹೊರಟಿರುವುದು ಅರ್ಥಹೀನ. ಬದಲಿಗೆ ಮಾಧ್ಯಮಗಳೇ ಸ್ವಯಂ ನಿಯಂತ್ರಣದ ನೀತಿ ಸಂಹಿತೆಯೊಂದನ್ನು ಅಳವಡಿಸಿಕೊಳ್ಳಬೇಕು~ ಎಂದರು.`ಸಾಂಪ್ರದಾಯಿಕ ಮಾಧ್ಯಮಗಳ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಿದಾಗ ಜನರ ಸ್ವಾತಂತ್ರ್ಯದ ಅಭಿಲಾಷೆ ಬೇರೆ ಬೇರೆ ಸ್ವರೂಪದಲ್ಲಿ ಧ್ವನಿಸುತ್ತದೆ ಎಂಬುದಕ್ಕೆ ಅರಬ್ ದೇಶಗಳಲ್ಲಿ ಸಂಭವಿಸಿದ ಆಂದೋಲನಗಳು ಸಾಕ್ಷಿಯಾಗಿವೆ~ ಎಂದು ಜೇಕಬ್ ಮ್ಯಾಥ್ಯೂ ಹೇಳಿದರು.ಇದೇ ಸಂದರ್ಭದಲ್ಲಿ ಪತ್ರಿಕಾ ಸ್ವಾತಂತ್ರ್ಯಕ್ಕಾಗಿ ನೀಡಲಾಗುವ `ಸ್ವಾತಂತ್ರ್ಯದ ಸುವರ್ಣ ಲೇಖನಿ ಪ್ರಶಸ್ತಿ~ಯನ್ನು (ಗೋಲ್ಡನ್ ಪೆನ್ ಆಫ್ ಫ್ರೀಡಂ ಅವಾರ್ಡ್-2011) ಎರಿಟ್ರಿಯಾದಲ್ಲಿ ಕಳೆದ ಹತ್ತು ವರ್ಷಗಳಿಂದ ಕಾರಾಗೃಹ ವಾಸ ಅನುಭವಿಸುತ್ತಿರುವ ಪತ್ರಕರ್ತ ದಾವೀತ್ ಇಸಾಕ್ ಅವರಿಗೆ ನೀಡಲಾಯಿತು. ಅವರ ಪರವಾಗಿ ದಾವೀತ್ ಅವರ ಸೋದರ ಇಸಾಯಸ್ ಇಸಾಕ್ ಪ್ರಶಸ್ತಿ ಸ್ವೀಕರಿಸಿದರು.ಆಸ್ಟ್ರಿಯಾ ಸಂಸತ್‌ನ ಅಧ್ಯಕ್ಷೆ ಬಾರ್ಬರಾ ಪ್ರಾಮರ್, ವಿಶ್ವ ಸಂಪಾದಕರ ವೇದಿಕೆಯ ಎರಿಕ್ ಬಿಜ್ರೇಕರ್, ಆಸ್ಟ್ರಿಯಾದ ವೃತ್ತ ಪತ್ರಿಕಾ ಸಂಘದ ಅಧ್ಯಕ್ಷ ಡಾ. ಹ್ಯಾನ್ಸ್ ಗೇಸರ್ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.ಸಮ್ಮೇಳನದ ಪೂರ್ವಭಾವಿಯಾಗಿ ನೀಡುವ ಯಂಗ್ ರೀಡರ್ಸ್ ಪುರಸ್ಕಾರಗಳನ್ನು ವಿಶ್ವದ 24 ಪತ್ರಿಕಾ ಸಂಸ್ಥೆಗಳಿಗೆ ನೀಡಲಾಯಿತು. ಡಿಜಿಟಲ್‌ಯುಗದಲ್ಲಿ ಪತ್ರಿಕೆಗಳು ಎದುರಿಸುತ್ತಿರುವ ಸವಾಲುಗಳು, ಜಾಗತಿಕ ಆರ್ಥಿಕ ಹಿಂಜರಿತದ ಪರಿಣಾಮಗಳು ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಚರ್ಚಿಸುವ ಉದ್ದೇಶದಿಂದ ಪ್ರಪಂಚದ 102 ದೇಶಗಳ 1100 ಕ್ಕೂ ಹೆಚ್ಚು ಪ್ರಕಾಶಕರು ಮತ್ತು ಸಂಪಾದಕರು ಈ ಸಮ್ಮೇಳನದಲ್ಲಿ ಭಾಗವಹಿಸುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.