ತಗ್ಗಿದ ಹೆಸರಿನ ಆವಕ

7

ತಗ್ಗಿದ ಹೆಸರಿನ ಆವಕ

Published:
Updated:
ತಗ್ಗಿದ ಹೆಸರಿನ ಆವಕ

ಯಾದಗಿರಿ: ಅತಿ ಹೆಚ್ಚು ಹೆಸರು ಬೆಳೆಯುವ ಜಿಲ್ಲೆ ಎಂಬ ಖ್ಯಾತಿ ಗಳಿಸಿರುವ ಯಾದಗಿರಿಯಲ್ಲಿ ಈ ಬಾರಿ ಹೆಸರಿನ ಬಿತ್ತನೆ ಪ್ರಮಾಣ ಕುಂಠಿತಗೊಂಡಿದ್ದು, ಆವಕದಲ್ಲಿ ಗಣನೀಯ ಇಳಿಕೆಯಾಗಿದೆ. ಇದರ ಪರಿಣಾಮ ಹೆಸರಿಗೆ ಎಲ್ಲಿಲ್ಲದ ಬೇಡಿಕೆ ಬಂದಿದ್ದು, ಬೆಲೆಯೂ ಹೆಚ್ಚಾಗಿದೆ.



ಈ ಬಾರಿ ಮುಂಗಾರು ಆರಂಭದಲ್ಲಿ ಮಳೆ ಕೈಕೊಟ್ಟಿದ್ದರಿಂದ ಬಹುತೇಕ ರೈತರು ಹೆಸರು ಬಿತ್ತನೆ ಮಾಡಲು ಸಾಧ್ಯವಾಗಲಿಲ್ಲ. ಹೀಗಾಗಿ ಹೆಸರಿನ ಇಳುವರಿಯೂ ಕಡಿಮೆ ಆಗಿದೆ. ಕಳೆದ ವರ್ಷಕ್ಕಿಂತ ಶೇ. 25 ರಷ್ಟು ಕಡಿಮೆ ಪ್ರಮಾಣದಲ್ಲಿ ಹೆಸರು ಆವಕವಾಗುವ ಸಾಧ್ಯತೆಗಳಿವೆ ಎಂದು ಇಲ್ಲಿಯ ಎಪಿಎಂಸಿಯ ವರ್ತಕರು ಅಂದಾಜು ಮಾಡುತ್ತಿದ್ದಾರೆ.



ಇದೀಗ ಹೆಸರಿನ ಕಟಾವು ಮುಗಿದಿದ್ದು, ರೈತರು ತುಂಬಿದ ಚೀಲಗಳೊಂದಿಗೆ ಕೃಷಿ ಉತ್ಪನ್ನ ಮಾರುಕಟ್ಟೆಯತ್ತ ಹೆಜ್ಜೆ ಹಾಕುತ್ತಿದ್ದಾರೆ. ದಿನದಿಂದ ದಿನಕ್ಕೆ ಹೆಸರಿನ ಬೆಲೆ ಹೆಚ್ಚಳವಾಗುತ್ತಿರುವುದರಿಂದ ಕೆಲ ರೈತರು ಇನ್ನೂ ಸ್ವಲ್ಪ ಕಾದು ನೋಡುವ ತಂತ್ರ ಅನುಸರಿಸುತ್ತಿದ್ದಾರೆ.



ಕಳೆದ ವರ್ಷ ಆಗಸ್ಟ್ ಆರಂಭದಲ್ಲಿಯೇ ಹೆಸರಿನ ಆವಕ ಆಗಿತ್ತು. ಆದರೆ ಈ ಬಾರಿ ಆಗಸ್ಟ್ ಅಂತ್ಯದಲ್ಲಿ ಹೆಸರು ಕೃಷಿ ಉತ್ಪನ್ನ ಮಾರುಕಟ್ಟೆಗೆ ಬರುತ್ತಿದೆ. ಆರಂಭದಿಂದಲೂ ಹೆಸರಿಗೆ ಉತ್ತಮ ಬೆಲೆ ಸಿಗುತ್ತಿದೆ. ಆ. 26 ರಂದು ಯಾದಗಿರಿಯ ಎಪಿಎಂಸಿಯಲ್ಲಿ ರೂ.3029 ರಿಂದ ರೂ. 4672 ಬೆಲೆ ಸಿಕ್ಕಿತ್ತು. ವಾರದ ನಂತರವೂ ಹೆಸರಿನ ಬೆಲೆಯಲ್ಲಿ ಗಣನೀಯವಾದ ಏರಿಕೆ ಕಂಡು ಬರುತ್ತಿದೆ. ಸೆ. 6 ರಂದು ರೂ. 3411 ರಿಂದ ರೂ. 4802 ಬೆಲೆ ಇತ್ತು. ಈ ಬೆಲೆ ಇನ್ನೂ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ರೈತರು ಹೇಳುತ್ತಿದ್ದಾರೆ.



ಕುಸಿದ ಆವಕ: ಕಳೆದ ವರ್ಷಕ್ಕೆ ಹೋಲಿಸಿದರೆ, ಈ ಬಾರಿ ಹೆಸರಿನ ಆವಕ ಸಾಕಷ್ಟು ಕಡಿಮೆ ಆಗಿದೆ. ಆ.26 ರಂದು 5,416 ಕ್ವಿಂಟಲ್, ಆ.27ರಂದು 9,895 ಕ್ವಿಂಟಲ್, ಸೆ.30 ರಂದು 8,836 ಕ್ವಿಂಟಲ್, ಸೆ.1 ರಂದು 9,212 ಕ್ವಿಂಟಲ್, ಸೆ.3 ರಂದು 12,255 ಕ್ವಿಂಟಲ್, ಸೆ.5 ರಂದು 8,827 ಕ್ವಿಂಟಲ್, ಸೆ.6 ರಂದು 15,115 ಕ್ವಿಂಟಲ್ ಹೆಸರು ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಮಾರಾಟವಾಗಿದೆ ಎಂದು ಎಪಿಎಂಸಿ ಅಧಿಕಾರಿಗಳು ತಿಳಿಸಿದ್ದಾರೆ.



ಈ ವರ್ಷ ಒಟ್ಟಾರೆ ಒಂದು ಲಕ್ಷ ಕ್ವಿಂಟಲ್ ಹೆಸರು ಎಪಿಎಂಸಿಗೆ ಬರುವ ಸಾಧ್ಯತೆ ಇದೆ. ಕಳೆದ ಬಾರಿ ಸುಮಾರು 2.5 ಲಕ್ಷ ಕ್ವಿಂಟಲ್‌ನಷ್ಟು ಹೆಸರು ಇಲ್ಲಿನ ಎಪಿಎಂಸಿಗೆ ಬಂದಿತ್ತು. ಈ ಅಂಕಿ-ಅಂಶಗಳನ್ನು ನೋಡಿದರೆ ಹೆಸರಿನ ಪ್ರಮಾಣದಲ್ಲಿ ಸಾಕಷ್ಟು ಇಳಿಕೆಯಾಗಿರುವುದು ಸ್ಪಷ್ಟವಾಗುತ್ತದೆ ಎಂದು ವರ್ತಕ ವಿನೋದ ಜೈನ್ ಹೇಳುತ್ತಾರೆ.



“ಈಗ ಏನೋ ರೇಟ್ ಛೋಲೋ ಬಂದೈತ್ರಿ. ಆದ್ರ ಮುಂದ ಹಿಂಗ ಇರ್ತೈತಿ ಅನ್ನೋ ಗ್ಯಾರಂಟಿ ಇಲ್ರಿ. ಈ ಸರ್ತಿ ಹೆಸರ ಸ್ವಲ್ಪ ಕಡಿಮಿನ ಐತಿ. ಹಿಂಗಾಗಿ ರೇಟ್ ಜಾಸ್ತಿ ಸಿಗ್ಲಾಕತೈತಿ. ಈಗ ರೂ.4,800 ರೇಟ್ ಐತಿ. ಇನ್ನೂ ಸ್ವಲ್ಪ ಹೆಚ್ಚಾದ್ರ, ಆಗಿರೋ ಲಾಸ್ ತುಂಬಿಕೊಳ್ಳಾಕ ಬರ‌್ತದ್ರಿ. ರೂ.5-5,500 ರೇಟ್ ಬಂದ್ರ ರೈತರಿಗೂ ಆಸರಿ ಆಗತೈತಿ ನೋಡ್ರಿ” ಎನ್ನುವುದು ಬಾಚವಾರದ ರೈತ ಈರಣ್ಣ ಹೇಳುವ ಮಾತು.



ಹೆಸರಿಗೆ ಎಲ್ಲಿಲ್ಲದ ಬೇಡಿಕೆ: ರಾಜ್ಯದಲ್ಲಿಯೇ ಅತಿ ಹೆಚ್ಚು ಹೆಸರು ಆವಕವಾಗುವ ಕೃಷಿ ಉತ್ಪನ್ನ ಮಾರುಕಟ್ಟೆ ಎಂಬ ಹೆಗ್ಗಳಿಕೆ ಇಲ್ಲಿಯ ಎಪಿಎಂಸಿಯದ್ದು. ಹೀಗಾಗಿ ಇಲ್ಲಿಯ ಹೆಸರಿಗೆ ದೇಶದ ವಿವಿಧೆಡೆ ಸಾಕಷ್ಟು ಬೇಡಿಕೆ ಇದೆ. ವರ್ತಕರು, ರೈತರಿಂದ ಖರೀದಿಸುವ ಹೆಸರು, ತಮಿಳುನಾಡು, ಕೇರಳ, ಗುಜರಾತ, ರಾಜಸ್ಥಾನ, ದೆಹಲಿ, ಬಿಹಾರ, ಆಸ್ಸಾಂ ಸೇರಿದಂತೆ ದೇಶದ ವಿವಿಧೆಡೆಗಳಿಗೆ ಮಾರಾಟ ಆಗುತ್ತದೆ.



ಈಗಾಗಲೇ ಬೇರೆ ರಾಜ್ಯಗಳಿಂದ ಹೆಸರಿಗೆ ಬೇಡಿಕೆ ಬರುತ್ತಿದ್ದು, ಅದಕ್ಕೆ ಅನುಗುಣವಾಗಿ ಹೆಸರು ಸಾಗಿಸುವ ಕಾರ್ಯದಲ್ಲಿ ವರ್ತಕರು ನಿರತರಾಗಿದ್ದಾರೆ. ಈ ಬಾರಿ ಹೆಚ್ಚಿನ ಪ್ರಮಾಣದ ಹೆಸರು ಬಂದಿಲ್ಲವಾದ್ದರಿಂದ ಬೆಲೆಯೂ ತುಸು ಹೆಚ್ಚಳವಾಗಿದೆ ಎಂದು ಎಪಿಎಂಸಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry