ಭಾನುವಾರ, ಮೇ 22, 2022
22 °C
ಕಾಲೇಜು ಕಟ್ಟಡ ಕಾಮಗಾರಿ ಅಪೂರ್ಣ

ತಪ್ಪದ ವಿದ್ಯಾರ್ಥಿಗಳ ಪರದಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀರಂಗಪಟ್ಟಣ: ತಾಲ್ಲೂಕಿನ ಕೆಆರ್‌ಎಸ್ ಸರ್ಕಾರಿ ಪದವಿ ಪೂರ್ವ ಕಾಲೇಜು ಕಟ್ಟಡ ಕಾಮಗಾರಿ ಕಳೆದ 4 ವರ್ಷಗಳಿಂದ ಸ್ಥಗಿತಗೊಂಡಿದೆ.ಲೋಕೋಪಯೋಗಿ ಇಲಾಖೆ ರೂ.30 ಲಕ್ಷ ವೆಚ್ಚದಲ್ಲಿ ಈ ಕಟ್ಟಡ ಕಾಮಗಾರಿ ಆರಂಭಿಸಿತ್ತು. 5 ವರ್ಷಗಳ ಹಿಂದೆ ಆರಂಭವಾದ ಕಟ್ಟಡ ಕಾಮಗಾರಿಗೆ ಅಗತ್ಯ ಅನುದಾನ ಬಾರದ ಕಾರಣ ಅರ್ಧಕ್ಕೆ ನಿಂತಿದೆ. ಅಪೂರ್ಣ ಕಟ್ಟಡ ಜೂಜು, ಮದ್ಯ ಸೇವನೆಯಂತಹ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ. ನಾಯಿ, ಬೀಡಾಡಿ ದನಗಳ ಆವಾಸ ಸ್ಥಾನವಾಗಿದೆ. 4 ವರ್ಷಗಳ ಹಿಂದೆ ನಿರ್ಮಿಸಿದ ಕಟ್ಟಡದ ಗೋಡೆಯ ಇಟ್ಟಿಗೆಗಳು ಬೀಳುತ್ತಿವೆ.  ಕೆಆರ್‌ಎಸ್‌ನಲ್ಲಿ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜು ತರಗತಿಗಳು ಪಾಳಿಯ ಪ್ರಕಾರ ನಡೆಯುತ್ತಿವೆ. ಮೈಸೂರು ತಾಲ್ಲೂಕಿನ ಆನಂದೂರು, ಮಲ್ಲೇಗೌಡನಕೊಪ್ಪಲು, ಹಳೇ ಉಂಡವಾಡಿ; ಪಾಂಡವಪುರ ತಾಲ್ಲೂಕಿನ ಚಿಕ್ಕಾಯರಹಳ್ಳಿ, ನಾರ್ತ್‌ಬ್ಯಾಂಕ್; ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್, ಹೊಂಗಹಳ್ಳಿ, ಹುಲಿಕೆರೆ ಗ್ರಾಮಗಳಿಂದ 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾಲೇಜಿಗೆ ಬರುತ್ತಾರೆ.ಕೊಠಡಿಗಳ ಸಮಸ್ಯೆ ಇರುವುದರಿಂದ ಪಾಠ, ಪ್ರವಚನಗಳಿಗೆ ತೊಂದರೆಯಾಗಿದೆ. ವಿಜ್ಞಾನ ವಿಭಾಗದ ಪ್ರಯೋಗಾಲಯದ ಛಾವಣಿ ಶಿಥಿಲಗೊಂಡಿದ್ದು ಗಾರೆ ಉದುರುತ್ತಿದೆ.ಮಳೆಗಾಲದಲ್ಲಿ ನೀರು ಜಿನುಗುತ್ತಿದ್ದು, ಬೆಲೆ ಬಾಳುವ ಪರಿಕರಗಳಿಗೆ ಹಾನಿಯಾಗುತ್ತಿದೆ ಎಂದು ಕಾಲೇಜಿನ ಪ್ರಾಂಶುಪಾಲ ಕೃಷ್ಣೇಗೌಡ ಹೇಳುತ್ತಾರೆ.ಲೋಕೋಪಯೋಗಿ ಇಲಾಖೆಯಿಂದ ರೂ.30 ಲಕ್ಷ ವೆಚ್ಚದಲ್ಲಿ ಕೆಳ ಅಂತಸ್ತಿನ ಕಟ್ಟಡ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಮುಂದುವರೆದ ಕಾಮಗಾರಿಗೆ ಹಣ ಬಿಡುಗಡೆ ಮಾಡುವಂತೆ ಕಾಲೇಜು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಎರಡು ಬಾರಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುದಾನ ಬಿಡುಗಡೆ ಆಗಿಲ್ಲದ ಕಾರಣ ಕಟ್ಟಡ ಕಾಮಗಾರಿ ಸ್ಥಗಿತಗೊಂಡಿದೆ ಎಂದು ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರಮೇಶ್ `ಪ್ರಜಾವಾಣಿ'ಗೆ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.