ಮಂಗಳವಾರ, ಜನವರಿ 21, 2020
28 °C
ಮೈಸೂರಿನಲ್ಲಿ ಆಹಾರ ವಿಜ್ಞಾನಿಗಳ ಸಮ್ಮೇಳನ

ತರಕಾರಿ, ಸೊಪ್ಪಿನಿಂದ ‘ಹಸಿರು ಹಾಲು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ದೇಶವು ಎದುರಿಸುತ್ತಿ­ರುವ ಆಹಾರ ಅಪೌಷ್ಟಿಕತೆಯ ಸಮಸ್ಯೆ ತಗ್ಗಿಸಲು ಮೈಸೂರಿನ ಕೇಂದ್ರ ಆಹಾರ ಮತ್ತು ತಂತ್ರಜ್ಞಾನ ಸಂಶೋಧನ ಸಂಸ್ಥೆ (ಸಿಎಫ್‌ಟಿಆರ್‌ಐ) ‘ಹಸಿರು ಕ್ಷೀರ’ ಅಭಿವೃದ್ಧಿಪಡಿಸಿದೆ.ಬುಧವಾರದಿಂದ (ಡಿ. 18) ನಾಲ್ಕು ದಿನಗಳವರೆಗೆ ಇಲ್ಲಿ ನಡೆಯ­ಲಿರುವ 7ನೇ ಇಫ್ಕಾನ್ ಅಂತರರಾ­ಷ್ಟ್ರೀಯ ಆಹಾರ ವಿಜ್ಞಾನಿಗಳು ಹಾಗೂ ತಂತ್ರಜ್ಞರ ಸಮ್ಮೇಳನದಲ್ಲಿ ಈ ‘ಹಸಿರು ಕ್ಷೀರ’ವನ್ನು ಪರಿಚಯಿಸಲಾಗುತ್ತಿದ್ದು, ಸಾರ್ವಜನಿಕರು ಸಹ ರುಚಿ ನೋಡಬ­ಹುದು.ಏನಿದು ಹಸಿರು ಹಾಲು?

‘ಡಿಸೈನರ್ ಮಿಲ್ಕ್’ ಎಂದೂ ಕರೆಯಲಾಗುವ ಈ  ‘ಹಸಿರು ಹಾಲು’ ಹಸು, ಎಮ್ಮೆ ಮತ್ತಿತರ ಪ್ರಾಣಿಗಳ ಉತ್ಪನ್ನವಲ್ಲ. ನಮ್ಮ ಸುತ್ತಮುತ್ತ ಯಥೇಚ್ಛವಾಗಿ ಸಿಗುವ ಹಸಿರು ತರಕಾರಿ, ಸೊಪ್ಪುಗಳಿಂದ ತಯಾ­ರಿಸಿದ್ದು. ಈ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ  ‘ಸಿಎಫ್‌ಟಿಆರ್ಐ’ ನಿರ್ದೇಶಕ ಪ್ರೊ.ರಾಮ ರಾಜಶೇಖರನ್, ನುಗ್ಗೆಸೊಪ್ಪು, ಕೀರೆಸೊಪ್ಪು (ಗೋಣಿ), ಚಿಕೋರಿ, ಅಣಬೆ ಮತ್ತು ತುಳಸಿ ಬೀಜದಿಂದ ಬೇರ್ಪಡಿಸಲಾದ ಪ್ರೋಟಿನ್, ಅಮೈನೋ ಆಮ್ಲಗಳು ಸೇರಿದಂತೆ ಮತ್ತಿ­ತರ ಪೋಷಕಾಂಶ­ಗಳಿಂದ ಈ ಹಾಲು ತಯಾರಾಗಿದೆ. ಒಂದು ವರ್ಷ, ನಾಲ್ಕು ತಿಂಗಳು ನಡೆಸಿದ ಸಂಶೋಧನೆ­ಯಿಂದ ಈ ಹಾಲು ಅಭಿವೃದ್ಧಿ­ಪಡಿಸ­ಲಾಗಿದೆ. ಅದಕ್ಕಾಗಿ­ಯೇ ಇದಕ್ಕೆ ‘1.4 ಮಿಲ್ಕ್’ ಎಂದೂ ನಾಮ­ಕರಣ ಮಾಡ­ಲಾಗಿದ್ದು, ಮಕ್ಕಳಿಗೆ, ಹಿರಿ­ಯರಿಗೆ,   ಕ್ರೀಡಾ­ಪಟು­ಗಳಿಗೆ ವಿವಿಧ ಗುಣ­­ಮಟ್ಟಗಳಲ್ಲಿ ಹಾಲು ಲಭ್ಯವಿದೆ ಎಂದರು.‘ಸಹಜವಾದ ತಾಪಮಾನದಲ್ಲಿ ಒಂದು ದಿನದ ಮಟ್ಟಿಗೆ ಮಾತ್ರ ‘ಹಸಿರು ಹಾಲು’ ಕಾಯ್ದಿರಿ­ಸಬಹುದು. ರೆಫ್ರಿಜಿ­ರೇ­ಟರ್‌ನಲ್ಲಿ ನಾಲ್ಕು ದಿನಗಳವರೆಗೆ ಇಡಬಹುದು ಎಂದರು. ‘ಸಿಎಫ್‌ಟಿ­ಆರ್‌ಐ’ ತನ್ನ ಉತ್ಪನ್ನಗಳ ಮಾರುಕಟ್ಟೆ­ಗಾಗಿ  ತನ್ನದೇ ಆದ ಮಾರಾಟ ಮಳಿಗೆಗಳನ್ನು ಆರಂಭಿಸುವ ಯೋಜನೆ ಹೊಂದಿದೆ  ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಆಹಾರ ಮೇಳ

ಇಲ್ಲಿಯ ಕಲಾಮಂದಿರದಲ್ಲಿ ಬುಧ­ವಾರ ಸಂಜೆ 5 ಗಂಟೆಗೆ ಸಮ್ಮೇಳನ ಉದ್ಘಾಟನೆಯಾಗಲಿದೆ. ವಿಚಾರ ಸಂಕಿರಣ, ಆಹಾರ ಪ್ರದರ್ಶನ ಮತ್ತಿತರ ಕಾರ್ಯಕ್ರಮಗಳು ಸಿಎಫ್‌ಟಿಆರ್‌ಐ ಆವರಣದಲ್ಲಿಯೇ ನಡೆಯಲಿವೆ. ‘ಭಾರತೀಯ ಆಹಾರ ವಿಜ್ಞಾನಿಗಳು ಹಾಗೂ ತಂತ್ರಜ್ಞರ ಸಂಘವು ಸಿಎಸ್‌­ಐಆರ್‌– ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯ, ಡಿಆರ್‌ಡಿಒ ರಕ್ಷಣಾ ಖಾದ್ಯ ಪ್ರಯೋಗಶಾಲೆ, ಹರಿ­ಯಾ­ಣದ ಕುಂಡಲಿಯಲ್ಲಿರುವ ರಾಷ್ಟ್ರೀಯ ಆಹಾರ ತಂತ್ರಜ್ಞಾನ ಉದ್ಯಮ­ಶೀಲತೆ ಹಾಗೂ ನಿರ್ವಹಣಾ ಸಂಸ್ಥೆಯ ಸಹಯೋಗದೊಂದಿಗೆ   ಸಮ್ಮೇಳನವು ನಡೆಯಲಿದೆ.  ಆಹಾರ ತಂತ್ರಜ್ಞಾನ ಪ್ರದರ್ಶನವನ್ನೂ (ಫುಡ್‌ ಎಕ್ಸ್‌ಪೋ) ಆಯೋಜಿಸಲಾಗಿದೆ’ ಎಂದು ರಾಜಶೇಖರನ್ ಮಾಹಿತಿ ನೀಡಿದರು.‘ಸಮ್ಮೇಳನದಲ್ಲಿ ವಿವಿಧ ದೇಶಗಳ 100 ವಿಜ್ಞಾನಿಗಳು ಭಾಗವ­ಹಿಸು­­ವರು. ಕೈಗಾರಿಕೋ­ದ್ಯಮಿಗಳು, ಸಂಶೋ­ಧ­ಕರಿಂದ ವಿಶೇಷ ಉಪನ್ಯಾಸ­ಗಳನ್ನು ಏರ್ಪಡಿಸಲಾಗಿದೆ. ಸಮ್ಮೇಳನ­ದಲ್ಲಿ 21 ತಾಂತ್ರಿಕ ಸಭೆಗಳು ಜರುಗ­ಲಿವೆ. ಆಹಾರ ಭದ್ರತೆ, ಸುಸ್ಥಿರತೆ, ಸಂಸ್ಕರಣೆ, ಆರೋಗ್ಯ ಹಾಗೂ ಪೌಷ್ಟಿಕತೆ, ಕುರಿತ ತಾಂತ್ರಿಕ ಗೋಷ್ಠಿಗಳು ನಡೆಯಲಿವೆ.  ಹರಿಯಾಣದ ‘ನಿಫ್‌ಟೆಮ್’ ಸಂಸ್ಥೆಯ ನಿರ್ದೇಶಕ ಅಜಿತಕುಮಾರ್ ಸುದ್ದಿಗೋಷ್ಠಿಯ­ಲ್ಲಿದ್ದರು.

ಪ್ರತಿಕ್ರಿಯಿಸಿ (+)