ತಲ್ಲಣಗೊಂಡ ತಳವಾರಹಳ್ಳಿ
ಮೊಳಕಾಲ್ಮುರು: ತಾಲ್ಲೂಕಿನ ಹಿರೇಕೆರೆಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ತಳವಾರಹಳ್ಳಿಯಲ್ಲಿ ಮೂರು ದಿನಗಳಿಂದ ವಾಂತಿ, ಭೇದಿ ಪ್ರಕರಣಗಳು ಕಂಡುಬಂದಿದ್ದು, ಒಬ್ಬ ವೃದ್ಧೆ ಮೃತಪಟ್ಟು, ಹಲವರು ಅಸ್ವಸ್ಥರಾಗಿದ್ದಾರೆ.
ಗ್ರಾಮದ ಸಿದ್ದಮ್ಮ (70) ಎಂಬುವರು ಮೃತಪಟ್ಟಿದ್ದು, ಗೀತಾ, ಬೋರಯ್ಯ, ಓಬಕ್ಕ, ಭಾಗ್ಯವತಿ, ಪಾಲಕ್ಕ, ಮಲ್ಲೇಶ್ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸ್ಥಳೀಯ ತಾಲ್ಲೂಕು ಆರೋಗ್ಯಾಧಿಕಾರಿ ಕಚೇರಿ ಮೂಲಗಳು ತಿಳಿಸಿವೆ.
ಹಿರೇಕೆರೆಹಳ್ಳಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ 10ಕ್ಕೂ ಹೆಚ್ಚು ಮಂದಿ ಚಿಕಿತ್ಸೆ ಪಡೆದಿದ್ದಾರೆ. ಶನಿವಾರ ಗ್ರಾಮಕ್ಕೆ ತುರ್ತು ಚಿಕಿತ್ಸಾ ವಾಹನ ಜತೆ ಭೇಟಿ ನೀಡಿದ್ದ ಆರೋಗ್ಯ ಇಲಾಖೆ ಸಿಬ್ಬಂದಿ ಓಬಣ್ಣ, ಜ್ಯೋತಿ ಎಂಬುವವರಿಗೆ ಚಿಕಿತ್ಸೆ ನೀಡಿದೆ ಎಂದು ವರದಿಯಾಗಿದೆ.
ಜಿಲ್ಲಾ ಪಂಚಾಯ್ತಿ ಸದಸ್ಯೆ ನರಸಮ್ಮ ಗೋವಿಂದಪ್ಪ, ತಾಲ್ಲೂಕು ಪಂಚಾಯ್ತಿ ಇಒ ಅಂಜನ್ಕುಮಾರ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಪದ್ಮಾವತಿ, ಡಾ.ರುದ್ರೀಬಾಯಿ, ಆರೋಗ್ಯ ಶಿಕ್ಷಣಾಧಿಕಾರಿ ಡಿ. ಚಿದಾನಂದಪ್ಪ ನೇತೃತ್ವದ ತಂಡ ಶನಿವಾರ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಕುಡಿಯುವ ನೀರು ಸರಬರಾಜು ಪೈಪ್ಗಳು ನಾಲ್ಕು ಕಡೆ ಒಡೆದು ಕಲುಷಿತ ನೀರು ಸೇರಿಕೊಳ್ಳುತ್ತಿರುವುದು. ಚರಂಡಿ ಸೌಲಭ್ಯವಿಲ್ಲದೇ ಅಸ್ವಚ್ಛತೆ ಮನೆ ಮಾಡಿರುವುದು. ನೊಣ, ಸೊಳ್ಳೆಗಳ ಕಾಟ ತೀವ್ರವಾಗಿರುವುದು ಕಂಡುಬಂದಿತು.
ಈ ಹಿನ್ನೆಲೆಯಲ್ಲಿ ತಾಲ್ಲೂಕು ಪಂಚಾಯ್ತಿ ಇಒ ಹಾಗೂ ಜಿಲ್ಲಾ ಪಂಚಾಯ್ತಿ ಸಿಇಒ ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಿ, ಚರಂಡಿ ನಿರ್ಮಾಣಕ್ಕೆ ಅಗತ್ಯವಿರುವ ಕಾರ್ಯ ಕೈಗೊಳ್ಳಲು ಅನುಮತಿಯನ್ನು ತಂಡ ಪಡೆದುಕೊಂಡಿತು.
ನಂತರ ಗ್ರಾಮಸಭೆ ನಡೆಸಿ, ಶುದ್ಧ, ಕಾಯಿಸಿ ಆರಿಸಿದ ನೀರು ಕುಡಿಯಬೇಕು. ಮನೆ ಸುತ್ತಮುತ್ತ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದು ಅಧಿಕಾರಿಗಳು ಗ್ರಾಮಸ್ಥರಲ್ಲಿ ಮನವಿ ಮಾಡಿದರು.
ಪ್ರತಿ ಮನೆಗೆ ಒಂದು ಲೀಟರ್ ಫಿನಾಯಿಲ್ ನೀಡಲಾಗಿದ್ದು, ಭಾನುವಾರ ನೀರು ಶುದ್ಧೀಕರಣ ಮಾಡಲು ಹ್ಯಾಲೋಜನ್ ಮಾತ್ರೆ ವಿತರಣೆ ಮಾಡಲಾಗುವುದು ಎಂದು ಆರೋಗ್ಯ ಶಿಕ್ಷಣಾಧಿಕಾರಿ ಚಿದಾನಂದಪ್ಪ ತಿಳಿಸಿದರು.
ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕುಡಿಯುವ ನೀರು ಪೂರೈಕೆ ಮಾಡುವ ತೊಟ್ಟಿ ಮುಚ್ಚಳ ಕಿತ್ತು ಹೋಗಿದ್ದು ಕಸ, ಕಡ್ಡಿ, ತ್ಯಾಜ್ಯ ವಸ್ತುಗಳು ಬಿದ್ದು ನೀರು ಮಲಿನವಾಗುತ್ತಿವೆ. ಈ ಬಗ್ಗೆ ಕ್ರಮ ಕೈಗೊಳ್ಳಲು ಗ್ರಾಮ ಪಂಚಾಯ್ತಿಗೆ ಮನವಿ ಮಾಡಿದ್ದರೂ ನಿರ್ಲಕ್ಷ್ಯ ವಹಿಸಲಾಗಿದೆ. ಸಂಬಂಧಿಸಿದ ಇಲಾಖೆಯೂ ಇತ್ತ ಗಮನಹರಿಸಿಲ್ಲ ಎಂದು ಗೊಂಚಗಾರ್ ತಿಮ್ಮಣ್ಣ, ಗೌಡ್ರ ಓಬಣ್ಣ, ಹೊನ್ನಯ್ಯ ದೂರಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.