ಶುಕ್ರವಾರ, ಏಪ್ರಿಲ್ 16, 2021
30 °C

ತಾಳ್ಯದ ಹನುಮನ ನೋಡಿದಿರಾ

ಎಂ. ಅಹಲ್ಯ Updated:

ಅಕ್ಷರ ಗಾತ್ರ : | |

ತಾಳ್ಯದ ಹನುಮನ ನೋಡಿದಿರಾ

ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿಗೆ ಸೇರಿದ ತಾಳ್ಯ ಒಂದು ಚಿಕ್ಕ ಹಳ್ಳಿ. ಅತಿ ಪುರಾತನ ಕಾಲದಲ್ಲೇ ತಾಳ್ಯದ ಸುತ್ತಮುತ್ತಲೂ ಜನವಸತಿ ಇತ್ತೆಂದು ಅಧ್ಯಯನಗಳಿಂದ ಗೊತ್ತಾಗಿದೆ. ಮತ್ತಿ ತಿಮ್ಮಣ್ಣ ನಾಯಕನಿಂದ ಹಿಡಿದು ಕೊನೆಯ ಪಾಳೇಗಾರ ಮದಕರಿ ನಾಯಕನ ವರೆಗೆ ಪಾಳೇಗಾರರೇ ಈ ಪ್ರಾಂತ್ಯವನ್ನು ಜರ್ಬಿನಿಂದ ಆಳಿದರು.ತಾಳ್ಯಕ್ಕೆ ಖ್ಯಾತಿ ಬಂದಿರುವುದು ಮುಖ್ಯವಾಗಿ ಸತ್ಯದ ದೇವರೆಂದೇ ಪ್ರಸಿದ್ಧಿಯಾದ ಶ್ರೀ ಆಂಜನೇಯ ಸ್ವಾಮಿಯ ಗುಡಿಯಿಂದ. ಆದರೆ ದೇವಸ್ಥಾನದ ಪೂಜಾರಿ ಲಿಂಗಾಯಿತ ಸಮುದಾಯದವರು ಎಂಬುದು ವಿಶೇಷ. ಇಲ್ಲಿನ ಶ್ರೀ ವೀರಾಂಜನೇಯ ಸ್ವಾಮಿ ಸುಮಾರು 8-10 ಅಡಿ ಎತ್ತರವಿದ್ದು, ಅಭಯದ ಮುದ್ರೆಯಲ್ಲಿ ಬಲಗೈಯನ್ನು ಎತ್ತಿ ಹಿಡಿದಿದ್ದಾನೆ. ಎಡಗೈ ಸೊಂಟದ ಮೇಲೆ ಹಗುರವಾಗಿ ಕೂತಿದೆ. ಮುಖ ಪೂರ್ವ ದಿಕ್ಕಿನ ಕಡೆಗೆ ಇದೆ. ಮುಖದಲ್ಲಿ ಗಾಂಭೀರ್ಯ, ಶಕ್ತಿ ಒಂದಕ್ಕೊಂದು ಹೆಣೆದುಕೊಂಡು ದೇವರ ಪ್ರತಿಮೆಗೆ ಒಂದು ಅಪೂರ್ವ ಸೊಬಗನ್ನು ಕೊಟ್ಟಿದೆ. ಬಾಲವು ತಲೆಯ ಮೇಲೆ ಸುತ್ತುವರಿದು ಪೂರ್ವಾಭಿಮುಖವಾಗಿದೆ.

 

ಪ್ರತಿಮೆಯ ಸುತ್ತಲೂ ರಾಮಾಯಣ ಕಥೆಯ ಸಂಗತಿಗಳ ಕೆತ್ತನೆ ಇದೆ. ರಾಮ ಕೊಟ್ಟ ಉಂಗುರವನ್ನು ಮಾರುತಿ ಅಶೋಕವನದಲ್ಲಿ ಸೀತೆಗೆ ಕೊಡುತ್ತಿರುವ ಚಿತ್ರ ತುಂಬಾ ಸೊಗಸಾಗಿದೆ. ಇನ್ನೊಂದರಲ್ಲಿ ಆಗ ತಾನೇ ಹುಟ್ಟುತ್ತಿದ್ದ ಸೂರ್ಯನನ್ನು ಕೆಂಪು ಹಣ್ಣು ಎಂದು ಭ್ರಮಿಸಿ ಬಾಲಮಾರುತಿ ಹಾರಿ ನುಂಗಲು ಹೋಗುತ್ತಿರುವ ದೃಶ್ಯ ಇದೆ. ಅಭಿಷೇಕ, ಅಲಂಕಾರ ಮಾಡಿದಾಗಲಂತೂ ದೇವರು ನೋಡಲು ಇನ್ನೂ ಭವ್ಯವಾಗಿರುತ್ತದೆ.ಈ ದೇವರಿಗೆ ಬೆಳ್ಳಿಯ ಕವಚಗಳನ್ನು ತೊಡಿಸುತ್ತಾರೆ. ಚಿಕ್ಕಮೂರ್ತಿಗೆ ಚಿನ್ನದ ಒಡವೆಗಳು ಇವೆ. ಇದಲ್ಲದೆ ಮರದಲ್ಲಿ ಮಾಡಿರುವ ಒಂದು ತೇಜಿ (ಕುದುರೆ) ಇದೆ. ಇದರ ಹೊಟ್ಟೆಯಲ್ಲಿ ಸಾಲಿಗ್ರಾಮಗಳಿವೆ ಎಂಬುದು ಭಕ್ತರ ನಂಬಿಕೆ. ಗರ್ಭಗುಡಿಯ ಮೇಲೆ ಸಣ್ಣ ಗೋಪುರವಿದೆ.ನವರಂಗ ಕಂಬಗಳಿಂದ ಅಲಂಕೃತವಾಗಿದೆ. ಪ್ರವೇಶ ದ್ವಾರದ ಹತ್ತಿರ ಎರಡು ಭಾರೀ ಕಬ್ಬಿಣದ ಬಾಣಗಳು ಇವೆ. ಇವು `ಶ್ರೀರಾಮ~ ದೇವರ ಬಾಣಗಳೆಂದು ಹೇಳುತ್ತಾರೆ.ಬಾಣಪ್ಪ, ತೇಜಿ ಆಂಜನೇಯಸ್ವಾಮಿ ಬೇಟೆಯಾಡುವ ಒಂದು ಪ್ರಸಂಗ ವಾರ್ಷಿಕ ಉತ್ಸವದ ಮುಖ್ಯ ಭಾಗ. ಊರಿಗೆ ಒಂದೂ ಕಾಲು ಕಿ.ಮೀ. ದೂರದಲ್ಲಿರುವ ಮಲಸಿಂಗನಹಳ್ಳಿ ಹತ್ತಿರ ಒಂದು ಹಳ್ಳ, ಅದರಲ್ಲೊಂದು ಕಲ್ಲಿನ ಮಂಚ ಇದೆ. ಅಲ್ಲಿ `ತಿಮ್ಮಪ್ಪನನ್ನು~ ಕೂಡಿಸಿ ಬಾಣಪ್ಪ, ತೇಜಿ ಆಂಜನೇಯ ಸ್ವಾಮಿ ಕೈಯಲ್ಲಿ ಬೇಟೆಯಾಡಿಸುತ್ತಾರೆ. ಆಗ ವಾದ್ಯಗಳು ಜೋರಾಗಿ ಮೊಳಗುತ್ತಾ ಕೇಳುವವರಲ್ಲಿ ಹುಮ್ಮಸ್ಸು ಹುಟ್ಟಿಸುತ್ತವೆ. ಭೂತ ಪೂಜೆಯೂ ಇದೆ.ತಾಳ್ಯ ಎಂಬ ಹೆಸರು ಈ ಹಳ್ಳಿಗೆ ಹೇಗೆ ಬಂತು ಎಂಬುದಕ್ಕೆ ಒಂದು ಕಥೆ ಇದೆ. ಬಹಳ ಹಿಂದೆ ಮಳೆ ಇಲ್ಲದೆ ಕೆರೆ ಬತ್ತಿ ಹೋಯ್ತಂತೆ. ಕುಡಿಯುವುದಕ್ಕೆ ಸಹ ನೀರು ಇರಲಿಲ್ಲ. ಬೆಳೆಗಳು ಒಣಗಿ ಹೋದವು. ದನಕರುಗಳು ಸತ್ತವು. ಆಗ ಊರಿನವರೆಲ್ಲಾ ದೇವರಿಗೆ ಅರ್ಚನೆ ಮಾಡಿ `ಏನಪ್ಪ ನಮ್ಮ ಕೈಬಿಟ್ಟೆಯಾ~ ಎಂದು ಕೇಳುತ್ತಾರೆ.ಆ ರಾತ್ರಿ ಪಟೇಲರ ಕನಸಿನಲ್ಲಿ ಒಬ್ಬ ವೃದ್ಧರು ಬಂದು `ತಾಳ್ಯನು ಬಾಳ್ಯಾನು~ ಅಂದನಂತೆ, ಮಾರನೇ ದಿನವೇ ಆಕಾಶದ ತುಂಬಾ ಕಾರ್ಮೋಡಗಳು ತುಂಬಿ ಭಾರಿ ಮಳೆ ಬಂದು ಕೆರೆ ತುಂಬಿತಂತೆ. ಅಂದಿನಿಂದ ಕನಸಿನಲ್ಲಿ ಬಂದ ವೃದ್ಧ ಹೇಳಿದ ಮೊದಲನೇ ಎರಡಕ್ಷರಗಳಿಂದ ಊರಿಗೆ ಹೆಸರಿಟ್ಟರಂತೆ.ಮಾರ್ಗ

ಚಿತ್ರದುರ್ಗದಿಂದ ಜಾನಕಲ್ ಮೂಲಕ ಹೊಸದುರ್ಗಕ್ಕೆ ಹೋಗುವ ಮಾರ್ಗದಲ್ಲಿದೆ ತಾಳ್ಯ. ದೇವಸ್ಥಾನದಲ್ಲಿ ನಿರ್ದಿಷ್ಟ ಸೇವೆ, ಶುಲ್ಕಗಳಿಲ್ಲ. ಭಕ್ತರು ತಮ್ಮ ಅಪೇಕ್ಷೆಗೆ ಅನುಗುಣವಾಗಿ ಪೂಜೆ ಮಾಡಿಸಬಹುದು).

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.