ಮಂಗಳವಾರ, ಜೂನ್ 15, 2021
24 °C

ತಿಂಗಳುಗಟ್ಟಲೆ ನೀರು ಕಾಣದ ನಾಗರಿಕರು: ಸ್ಪಂದಿಸದ ಅಧಿಕಾರಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದಲ್ಲಿ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ನೀರಿನ ಸಮಸ್ಯೆಗೆ ಅನೇಕ ಕಾರಣಗಳನ್ನು ನೀಡುತ್ತಿರುವ ಅಧಿಕಾರಿಗಳು ನೀರಿನ ಸಮಸ್ಯೆಯನ್ನು ನೀಗಿಸಲು ಸೋತಿದ್ದಾರೆ ಎಂಬುದು ಹಲವು ಬಡಾವಣೆಗಳ ನಿವಾಸಿಗಳ ದೂರು. ನಗರದ ವಸತಿ ಬಡಾವಣೆಗಳಲ್ಲಿಯೇ ನೀರಿನ ಸಮಸ್ಯೆ ಹೆಚ್ಚಾಗಿರುವ ಬೆನ್ನಲ್ಲಿಯೇ ಕೊಳೆಗೇರಿಗಳ ಜನರೂ ನೀರಿಲ್ಲದೇ ಅಕ್ಷರಶಃ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.ನಗರದ ಉತ್ತರ ತಾಲ್ಲೂಕಿನ ಜಲಮಂಡಳಿಯ ಪಶ್ಚಿಮ ವಲಯಗಳ ವ್ಯಾಪ್ತಿಯ ಜೈ ಭುವನೇಶ್ವರಿ ನಗರ, ಜೆ.ಸಿ.ನಗರ, ಪರಿಮಳ ನಗರಗಳ ಕೊಳೆಗೇರಿಗಳಲ್ಲಿನ ಜನತೆ ಈಗ ನೀರಿನ ಸಮಸ್ಯೆಯಿಂದ ಬಳಲುವಂತಾಗಿದೆ. ಈ ಪ್ರದೇಶಗಳ ನೀರಿನ ಸಮಸ್ಯೆ ಬಗ್ಗೆ ಅಧಿಕಾರಿಗಳು ಕಿಂಚಿತ್ತೂ ಗಮನ ಹರಿಸುತ್ತಿಲ್ಲ ಎಂಬುದು ಈ ಭಾಗದ ಜನರ ಅಳಲು.`ನಾವು ಕೊಳೆಗೇರಿ ಜನ ಅನ್ನೋ ಕಾರಣಕ್ಕೆ ನಮ್ಮ ನೀರಿನ ಸಮಸ್ಯೆಯನ್ನ ಕೇಳೋರಿಲ್ಲ. ಜಲಮಂಡಳಿ ಹಾಕಿರೋ ನಲ್ಲಿಗಳಲ್ಲಿ ನೀರು ನೋಡಿ ತಿಂಗಳುಗಳೇ ಆಗಿವೆ. ನೀರು ಬಿಟ್ಟರೂ ಒಂದು ಬಿಂದಿಗೆ ತುಂಬೋದರ ಒಳಗೇ ನಿಂತು ಹೋಗುತ್ತೆ. ಟ್ಯಾಂಕರ್ ನೀರು ತುಂಬಿಸಿಕೊಳ್ಳೋ ಅಷ್ಟು ದುಡ್ಡೂ ನಮ್ಮ ಹತ್ತಿರ ಇಲ್ಲ. ಎಲ್ಲೆಲ್ಲಿಂದಲೋ ನೀರು ತಗೊಂಡು ಬಂದು ಬದುಕು ನಡೆಸ್ತಾ ಇದ್ದೀವಿ~ ಎಂದು ತಮ್ಮ ನೀರಿನ ಬವಣೆಯನ್ನು ಹೇಳಿಕೊಂಡವರು ಜೈ ಭುವನೇಶ್ವರಿ ನಗರದ ನಿವಾಸಿ ಚೆನ್ನಮ್ಮ.

`ನೀರು ಬಿಟ್ಟರೂ ಎಲ್ಲ ಬೀದಿಗಳಿಗೂ ಸರಿಯಾಗಿ ಬರೋಲ್ಲ. ಒಂದು ಬೀದಿಗೆ ನೀರು ಬಂದ್ರೆ ಇನ್ನೊಂದು ಬೀದಿಗೆ ಬರಲ್ಲ. ನೀರು ಬಿಟ್ರೂ ಅದೂ ಜಾಸ್ತಿ ಹೊತ್ತು ಬರಲ್ಲ. ನಲ್ಲಿ ಮುಂದೆ ಬಿಂದಿಗೆ ಇಟ್ಟುಕೊಂಡು ರಾತ್ರಿ ಎಲ್ಲ ಕಾದ್ರೂ ನೀರು ಬರೋದೇ ಇಲ್ಲ. ನೀರಿನ ಸಮಸ್ಯೆ ಹೆಚ್ಚಾಗಿರೋ ಬಗ್ಗೆ ಜಲಮಂಡಳಿ ಅಧಿಕಾರಿಗಳಿಗೆ ಎಷ್ಟು ಮನವಿ ಮಾಡಿದ್ರೂ ಯಾವುದೇ ಪ್ರಯೋಜನ ಆಗಿಲ್ಲ. ದಿನದ ಬಳಕೆಗೆ ಇರಲಿ ಅಡುಗೆ ಮಾಡೋಕೆ, ಕುಡಿಯೋಕೇ ನೀರಿಲ್ಲ~ ಎಂದು ತಮ್ಮ ಬಡಾವಣೆಯ ನೀರಿನ ಸಮಸ್ಯೆಯನ್ನು ತೋಡಿಕೊಂಡವರು ಜೆ.ಸಿ.ನಗರದ ನಿವಾಸಿ ಭಾಗ್ಯಮ್ಮ.`ನೀರಿನ ಸಮಸ್ಯೆ ಹೆಚ್ಚಾಗಿದೆ ಅಂತ ದೂರು ಕೊಟ್ಟಾಗ ಬಿಬಿಎಂಪಿ ಮತ್ತು ಜಲಮಂಡಳಿಯವರು ನಾಲ್ಕೈದು ಬೋರ್‌ವೆಲ್‌ಗಳನ್ನ ಹಾಕಿಸಿದ್ರು. ಅವುಗಳಲ್ಲಿಯೂ ಒಂದಷ್ಟು ದಿನ ನೀರು ಬಂದು, ಈಗ ಅವುಗಳಲ್ಲೂ ಕೆಲವು ಕೆಟ್ಟು ಹೋಗಿದ್ದಾವೆ. ಅವುಗಳನ್ನು ಸರಿಮಾಡಿಸೋ ಗೋಜಿಗೆ ಯಾರೂ ಹೋಗಿಲ್ಲ. ಅಧಿಕಾರಿಗಳು ಬೋರ್‌ವೆಲ್ ನೀರಿನ ಸಂಕರ್ಪವನ್ನು ನಲ್ಲಿಗಳ ಪೈಪ್‌ಲೈನ್‌ಗಳಿಗೆ ಕೊಡ್ತೀವಿ ಅಂತ ಹೇಳ್ತಾನೆ ಇದ್ದಾರೆ. ಆ ಕೆಲಸ ಇಲ್ಲಿಯವರೆಗೂ ಆಗಿಲ್ಲ~ ಎಂದು ದೂರಿದವರು ಪರಿಮಳ ನಗರದ ನಿವಾಸಿ ರಂಗಣ್ಣ.

 

ಶಾಶ್ವತ ಪರಿಹಾರ ಅಗತ್ಯ

`ಮಹಾಲಕ್ಷ್ಮಿ ಬಡಾವಣೆ ವಿಧಾನಸಭಾ ಕ್ಷೇತ್ರದ ಹಲವು ಭಾಗಗಳಿಗೆ ಸರಿಯಾಗಿ ನೀರು ಪೂರೈಕೆ ಆಗ್ತಿಲ್ಲ. ನಾನೂ ನನ್ನ ಶ್ರಮ ಮೀರಿ ನೀರಿನ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸ್ತಿದ್ದೇನೆ. ಹಳೆಯ ಪೈಪ್‌ಲೈನ್‌ಗಳಿಂದ ಹಲವು ಭಾಗಗಳಿಗೆ ಸರಿಯಾಗಿ ನೀರು ಬರೋಲ್ಲ. ಪೈಪ್‌ಲೈನ್‌ಗಳ ಬದಲಾವಣೆಗೆ ಅಧಿಕಾರಿಗಳು ಹಾಗೂ ಜಲಮಂಡಳಿ ಸಚಿವರಿಗೂ ಮನವಿ ಮಾಡಿ ಆಗಿದೆ. ಬೆಂಗಳೂರು ಮಹಾನಗರ ಪಾಲಿಕೆಯನ್ನ `ಬೃಹತ್~ಗೊಳಿಸಿದ್ದೇ ಸಮಸ್ಯೆಗೆ ಮೂಲ ಕಾರಣ. 198 ವಾರ್ಡ್‌ಗಳಿಗೂ ನೀರು ಪೂರೈಕೆ ಮಾಡೋಕೆ ಜಲಮಂಡಳಿ ಅಧಿಕಾರಿಗಳ ಮೇಲೂ ಒತ್ತಡ ಇದೆ. ಹೀಗಾಗಿ ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಸರ್ಕಾರ ಮುಂದಾಗಬೇಕು~

-ನೆ.ಲ.ನರೇಂದ್ರಬಾಬು,

ಶಾಸಕ, ಮಹಾಲಕ್ಷ್ಮಿ ಬಡಾವಣೆ ವಿಧಾನಸಭಾ ಕ್ಷೇತ್ರ
ಸಮಸ್ಯೆ ಕೇಳೋರಿಲ್ಲ

`ಬಡಾವಣೆಯ ನೀರಿನ ಸಮಸ್ಯೆಯ ಬಗ್ಗೆ ತುಂಬಾ ಸಲ ಅಧಿಕಾರಿಗಳಿಗೆ ಮನವಿ ಕೊಟ್ಟಾಗಿದೆ. ಆದರೆ ಅದರಿಂದ ಯಾವ ಪ್ರಯೋಜನವೂ ಆಗಿಲ್ಲ. ನೀರು ಬಿಡೋಕೆ ಸಮಯವೂ ಇಲ್ಲ. ನೀರು ಬರೋದೆ ಅದೃಷ್ಟ ಅನ್ನೋ ಸ್ಥಿತಿ ಇದೆ. ನಮ್ಮ ನೀರಿನ ಸಮಸ್ಯೆಯನ್ನು ಕೇಳೋರೇ ಇಲ್ಲ~

-ವೆಂಕಟರಮಣಪ್ಪ, ಅಧ್ಯಕ್ಷ, ನೇತಾಜಿ ಯುವ ವೇದಿಕೆ,

ಜೈ ಭುವನೇಶ್ವರಿ ನಗರತಾರತಮ್ಯ ಇಲ್ಲ

`ಜಲಮಂಡಳಿಯ ಪಶ್ಚಿಮ ವಲಯಗಳ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಇರೋದು ನಿಜ. ಆದರೆ ಯಾವ ಭಾಗಗಳಿಗೂ ಜಲಮಂಡಳಿ ತಾರತಮ್ಯ ಮಾಡ್ತಿಲ್ಲ. ನಿಯಮಿತವಾಗಿ ಎಲ್ಲ ಬಡಾವಣೆಗಳಿಗೂ ನೀರು ಪೂರೈಸೋ ವ್ಯವಸ್ಥೆ ಮಾಡಲಾಗ್ತಿದೆ. ಕೆಲವು ಭಾಗಗಳಲ್ಲಿ ಪೈಪ್‌ಲೈನ್‌ಗಳ ಅವ್ಯವಸ್ಥೆಯಿಂದ ಸಮಸ್ಯೆ ಹೆಚ್ಚಾಗಿತ್ತು. ಪೈಪ್‌ಲೈನ್‌ಗಳನ್ನು ಬದಲಿಸೋ ಕೆಲಸ ಆರಂಭಿಸಿದ್ದೇವೆ. ಈ ಕಾರ್ಯ ಪೂರ್ಣಗೊಂಡ ನಂತರ ನೀರಿನ ಸಮಸ್ಯೆ ಪರಿಹಾರ ಆಗುತ್ತೆ~

-ಚಂದ್ರಮೌಳೇಶ್ವರ, ಸಹಾಯಕ ಎಂಜಿನಿಯರ್,

ಪಶ್ಚಿಮ ವಲಯ, ಬಿಡಬ್ಲುಎಸ್‌ಎಸ್‌ಬಿ

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.