ಮಂಗಳವಾರ, ಮೇ 18, 2021
31 °C

ತಿಪ್ಪೇಶಿಯ ಸೂರ್ಯ ಪಪ್ಪಾಯಿ

ಪ. ರಾಮಕೃಷ್ಣ ಶಾಸ್ತ್ರಿ Updated:

ಅಕ್ಷರ ಗಾತ್ರ : | |

 ತರೀಕೆರೆಯ ನಂದಿಹೊಸಳ್ಳಿ ತಿಪ್ಪೇಶ್ ಬಿಇಡಿ ತರಬೇತಿ ಪಡೆದವರು. ಹಾಗಂತ ಶಾಲಾ ಮೇಷ್ಟ್ರ ಕೆಲಸಕ್ಕೆ ಹೋಗಲಿಲ್ಲ. ಏಕೆಂದರೆ ಐದೂವರೆ ಎಕರೆ ಪಿತ್ರಾರ್ಜಿತ ಭೂಮಿ ಇತ್ತು. ಸರಿಯಾದ ಬೇಸಾಯವಿರಲಿಲ್ಲ. ಅದಕ್ಕಾಗಿ ಕೃಷಿಯನ್ನೇ ಕಾಯಕವಾಗಿ ಸ್ವೀಕರಿಸಿ ಅಡಕೆ ಗಿಡ ನೆಟ್ಟರು. ಫಸಲು ಬರುವ ತನಕ ಆದಾಯ ಪಡೆಯಲು ಅಡಕೆಯೊಂದಿಗೆ ಸೂರ್ಯ ತಳಿ ಪಪ್ಪಾಯಿ ಮಿಶ್ರ ಬೇಸಾಯಕ್ಕೆ ಮುಂದಾದರು.ಅದರ ಫಲವಾಗಿ ಈಗ ಅವರ ಮೊಗದಲ್ಲಿ ಗೆಲುವಿನ ಮಂದಹಾಸ. ಜಮೀನಿನ ಒತ್ತಿನಲ್ಲಿರುವ ನಾಲ್ಕು ಎಕರೆ ಹೊಲವನ್ನೂ ಗುತ್ತಿಗೆಗೆ ತೆಗೆದುಕೊಂಡು ಒಟ್ಟು ಆರು ಸಾವಿರ ಪಪ್ಪಾಯಿ ಗಿಡಗಳನ್ನು ನೆಟ್ಟು ಫಸಲು ಕೊಯ್ಯುತ್ತಿದ್ದಾರೆ.ತಿಪ್ಪೇಶ್ ಚಿತ್ರದುರ್ಗದಿಂದ ಹನ್ನೆರಡು ರೂಪಾಯಿಗೆ ಒಂದರಂತೆ ಸೂರ್ಯ ತಳಿ ಪಪ್ಪಾಯಿ ಸಸಿ ತರಿಸಿದರು. ಇರಲಿ ಅಂತ ಕೆಲವು ರೆಡ್‌ಲೇಡಿ ಗಿಡಗಳನ್ನೂ ನೆಟ್ಟ್ದ್ದಿದರು. ಆದರೆ ಎರಡರಲ್ಲೂ ಏಕಪ್ರಕಾರ ಫಸಲು ಸಿಗುತ್ತಿದೆ.ಗಿಡ ನೆಟ್ಟ ಪ್ರತಿ ನಲವತ್ತು ದಿನಕ್ಕೊಮ್ಮೆ ಮುನ್ನೂರು ಗ್ರಾಂ ಪ್ರಮಾಣದಲ್ಲಿ ಬೇವಿನಹಿಂಡಿ, ಹೊಂಗೆಹಿಂಡಿ ಮತ್ತು ಡಿಎಪಿ; ಪೊಟಾಷ್ ರಸಗೊಬ್ಬರಗಳನ್ನು ಹಾಕಿ ಒಂದು ಸಲ ಕೊಟ್ಟಿಗೆ ಗೊಬ್ಬರ ನೀಡಿದ್ದಾರೆ. ಕೀಟಬಾಧೆ ಇಲ್ಲವಾದರೂ ಚಿಗುರಿಗೆ ಬಸವನಹುಳದ ತೀವ್ರ ಹಾವಳಿಯಿತ್ತು. ಹುಳಗಳನ್ನೆಲ್ಲ ಹೆಕ್ಕಿ ಉಪ್ಪುನೀರಿಗೆ ಹಾಕಿ ಕ್ಲ್ಲೊಲುವುದೇ ಪರಿಣಾಮಕಾರಿ ಎಂದು ಕಂಡುಕೊಂಡರು.ಒಂಬತ್ತನೆಯ ತಿಂಗಳಲ್ಲಿ ದುಂಡಗಿನ ಗಾತ್ರದ ಹಣ್ಣುಗಳು ಕೊಯ್ಲಿಗೆ ಬಂದವು. ಒಂದೊಂದು ಹಣ್ಣು ಗರಿಷ್ಠ ಮೂರೂವರೆ ಕಿಲೋ ತೂಕವಿತ್ತು. ಮೊದಲ ವರ್ಷ ಒಂದು ಗಿಡ ಸರಾಸರಿ ಐವತ್ತರಿಂದ ಅರವತ್ತು ಕಿಲೋ ಹಣ್ಣು ನೀಡಿದೆ. ಮೂರನೆಯ ವರ್ಷದಲ್ಲಿ ಪ್ರತಿ ಗಿಡ ಎರಡು ಕ್ವಿಂಟಾಲು ಫಸಲು ಕೊಡುವ ನಿರೀಕ್ಷೆ ಅವರದು.ಸೂರ್ಯ ಪಪ್ಪಾಯಿ ಗಾತ್ರದಲ್ಲಿ ದೊಡ್ಡದಾಗಿ ಕಂಡರೂ ರೆಡ್‌ಲೇಡಿಯಷ್ಟು ಭಾರ ಇರೋದಿಲ್ಲವಂತೆ. ಹತ್ತು ದಿನಕ್ಕೊಮ್ಮೆ ಒಂದೊಂದು ಗಿಡದಿಂದ ನಾಲ್ಕು ಹಣ್ಣು ಸಿಗುತ್ತಿದೆ.ಬೇಸರದ ಸಂಗತಿ ಎಂದರೆ ಸ್ಥಳೀಯ ಮಾರುಕಟ್ಟೆಯಲ್ಲಿ ಒಳ್ಳೆಯ ಧಾರಣೆ ಇಲ್ಲ. ಕಿಲೋಗೆ ಐದು ರೂ.ಕೊಡುತ್ತಾರೆ. ಹೀಗಾಗಿ ತಿಪ್ಪೇಶ್ ಮಂಗಳೂರು ಮತ್ತು ಬೆಂಗಳೂರಿನ ಮಾರುಕಟ್ಟೆಗಳಿಗೆ ಕಳುಹಿಸಿ ಒಳ್ಳೆಯ ಆದಾಯ ಗಳಿಸುತ್ತಿದ್ದಾರೆ. ಸ್ವತಃ ಗಿಡ ತಯಾರಿಸಿ ಬೇರೆ ರೈತರಿಗೆ ವಿತರಿಸಿ ಅದರಿಂದಲೂ ಉಪ ಆದಾಯ ಸಂಪಾದಿಸುತ್ತಾರೆ.ಅವರು ಪಪ್ಪಾಯಿ ಕೃಷಿಗೆ ಆರು ಲಕ್ಷ ರೂಪಾಯಿ ಬಂಡವಾಳ ಹೂಡಿದ್ದಾರೆ. ಇದರೊಂದಿಗೆ ಬಾಯ್ಲರ್ ಕೋಳಿಗಳ ಸಾಕಣೆ ಮಾಡಿ ಪ್ರತ್ಯೇಕ ಆದಾಯದ ಮಾರ್ಗವನ್ನು ಹುಡುಕಿದ್ದಾರೆ. ಕೋಳಿಯ ಗೊಬ್ಬರ ಕೃಷಿಗೆ ಪೂರಕವಾಗಿದೆ. ಮೂರನೆಯ ವರ್ಷದಲ್ಲಿ ಅಡಕೆ ಗಿಡ ದೊಡ್ಡದಾಗುವುದರಿಂದ ಮತ್ತೆ ಪಪ್ಪಾಯಿ ಮಿಶ್ರ ಕೃಷಿ ಮುಂದುವರಿಸುವಂತಿಲ್ಲ, ಆಗ ಶುಂಠಿಯ ಮಿಶ್ರ ಕೃಷಿಯ ಯೋಚನೆ ನನ್ನದು ಎನ್ನುತ್ತಾರೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.