ಶನಿವಾರ, ಮೇ 21, 2022
23 °C

ತೀರ್ಪು ಕಾಯ್ದಿರಿಸಿದ ಕೋರ್ಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಕೇರಳದ ಕೋರ್ಟ್‌ನಲ್ಲಿ ಭ್ರಷ್ಟಾಚಾರ ಪ್ರಕರಣ ಎದುರಿಸುತ್ತಿರುವ ಮಾಜಿ ಅಧಿಕಾರಿ ಪಿ.ಜೆ. ಥಾಮಸ್ ಅವರನ್ನು ಕೇಂದ್ರ ಜಾಗೃತ ಆಯುಕ್ತರಾಗಿ ನೇಮಕ ಮಾಡಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳ ಮೇಲಿನ ತೀರ್ಪನ್ನು ಸುಪ್ರಿಂ ಕೋರ್ಟ್ ಗುರುವಾರ ಕಾಯ್ದಿರಿಸಿತು.ಅರ್ಜಿದಾರರ ಪರ ವಕೀಲ ಪ್ರಶಾಂತ್ ಭೂಷಣ್, ಥಾಮಸ್ ಪರ ವಕೀಲ ಕೆ.ಕೆ. ವೇಣುಗೋಪಾಲ್ ಮತ್ತು ಅಟಾರ್ನಿ ಜನರಲ್ ಜೆ.ಇ. ವಹನ್ವತಿ ಸೇರಿ ವಿವಿಧ ಕಡೆಗಳಿಂದ ವಾದಗಳನ್ನು ಆಲಿಸಿದ ಬಳಿಕ ನ್ಯಾಯಮೂರ್ತಿ ಎಸ್.ಎಚ್. ಕಪಾಡಿಯಾ ಅವರನ್ನು ಒಳಗೊಂಡ ಪೀಠವು ತೀರ್ಪನ್ನು ಕಾಯ್ದಿರಿಸಿತು. ವಿಚಾರಣೆ ವೇಳೆ ಪೀಠವು, ಸಿವಿಸಿಯ ನೇಮಕಾತಿ ಪ್ರಕ್ರಿಯೆಯಲ್ಲಿ ಪ್ರತಿಪಕ್ಷದ ನಾಯಕರು ನೇಮಕ ನಿರಾಕರಿಸುವ ಅಧಿಕಾರವೇನಾದರೂ ಹೊಂದಿದ್ದಾರೆಯೇ ಎಂಬುದನ್ನು ತಿಳಿಯಲು ಬಯಸಿತು.ಸಿವಿಸಿ ನೇಮಕ ಮಾಡಲು ಪ್ರಧಾನಿ ನೇತೃತ್ವದ ಮೂರು ಮಂದಿ ಸದಸ್ಯರ ಉನ್ನತಾಧಿಕಾರದ ಸಮಿತಿಯಲ್ಲಿ ಪ್ರತಿಪಕ್ಷದ ನಾಯಕರು ಮತ್ತು ಗೃಹ ಸಚಿವರು ಸದಸ್ಯರಾಗಿರುತ್ತಾರೆ. ಹಿರಿಯ ವಕೀಲ ವೇಣುಗೋಪಾಲ್ ಅವರು, ಸಮಿತಿ ಮುಂದೆ ಎಲ್ಲಾ ಮಾಹಿತಿಗಳನ್ನು ಮಂಡಿಸಿದ ನಂತರ ನೇಮಕದ ಪ್ರಕ್ರಿಯೆಯನ್ನು ದುರ್ಬಲಗೊಳಿಸಬಾರದು ಎಂದರು. ಆಯುಕ್ತರ ನೇಮಕವು ಸಚಿವರುಗಳ ಸಮಿತಿಯ ಶಿಫಾರಸ್ಸನ್ನು ಮತ್ತು ಸಮಿತಿಯ ಸ್ವತಂತ್ರ ನಿರ್ಧಾರವನ್ನು ಆಧರಿಸಿಲ್ಲ ಎಂದು ವೇಣುಗೋಪಾಲ್ ವಾದಿಸಿದರು.ಪಾಮೊಲಿನ್ ಆಮದು ಪ್ರಕರಣದಲ್ಲಿ ಥಾಮಸ್ ವಿರುದ್ಧ ಯಾವುದೇ ಪ್ರಕರಣ ಇಲ್ಲ ಎಂದು ಕೇರಳ ಸರ್ಕಾರದ ಆದೇಶ ಸ್ಪಷ್ಟವಾಗಿ ಹೇಳಿರುವುದರಿಂದ ಅವರ ನೇಮಕ ಸಮರ್ಥನೀಯವಾಗಿದೆ ಎಂದು ಅವರು ಹೇಳಿದರು. ಚುನಾವಣಾ ಕಾಯಿದೆ ಪ್ರಸ್ತಾಪಿಸಿದ ಅವರು, ಭ್ರಷ್ಟಾಚಾರ ಅಥವಾ ಕ್ರಿಮಿನಲ್ ಪ್ರಕರಣಗಳಲ್ಲಿ ದೋಷಾರೋಪಣ ಪಟ್ಟಿ ಸಲ್ಲಿಸಿದ ಮಾತ್ರಕ್ಕೆ ವ್ಯಕ್ತಿ ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ತಡೆಯಲಾಗುವುದಿಲ್ಲ.ಪ್ರಕರಣದಲ್ಲಿ ತಪ್ಪಿತಸ್ಥ ಎಂದು ಸಾಬೀತಾದ ಬಳಿಕ ಮಾತ್ರ ಸ್ಪರ್ಧಿಸಲು ಸಾಧ್ಯವಿಲ್ಲ ಎಂದು ಹೇಳಿದರು. ‘ಪ್ರಧಾನಿ ಅವರಿಂದ ಶಿಫಾರಸು ಹೋದರೆ, ಅದನ್ನು ರಾಷ್ಟ್ರಪತಿ ಅವರು ಒಪ್ಪಲೇಬೇಕಾಗುತ್ತದೆ’ ಎಂದು ತಿಳಿಸಿದರು. ಆದರೆ ಅರ್ಜಿದಾರರ (ಸಿಪಿಐಎಲ್) ಪರ ವಕೀಲ ಪ್ರಶಾಂತ್ ಭೂಷಣ್ ಅವರು ಥಾಮಸ್ ಪರ ವಕೀಲರ ಮತ್ತು ಸರ್ಕಾರದ ಸಮರ್ಥನೆಯನ್ನು ವಿರೋಧಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.