ಬುಧವಾರ, ಮೇ 12, 2021
27 °C

ತೀವ್ರಗೊಂಡ ಮೋದಿ- ರಾಜ್ಯಪಾಲ ಸಂಘರ್ಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಹ್ಮದಾಬಾದ್ (ಪಿಟಿಐ): ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಮೂರು ದಿನಗಳ `ಸದ್ಭಾವನಾ~ ಉಪವಾಸಕ್ಕಾಗಿ ಮಾಡಿದ ವೆಚ್ಚದ ವಿವರಗಳನ್ನು ಒದಗಿಸುವಂತೆ ರಾಜ್ಯಪಾಲೆ ಕಮಲಾ ಬೇನಿವಾಲ್ ರಾಜ್ಯ ಸರ್ಕಾರವನ್ನು ಕೋರಿದ್ದಾರೆ.ರಾಜ್ಯಪಾಲರನ್ನು ವಾಪಸ್ ಕರೆಸಿಕೊಳ್ಳುವಂತೆ ಒತ್ತಾಯಿಸಿದ್ದ ಮುಖ್ಯಮಂತ್ರಿ ಜತೆಗೆ ಈ ಮೂಲಕ ಸಂಘರ್ಷವನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ.ಲೋಕಾಯುಕ್ತರ ನೇಮಕಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಜತೆ ಘರ್ಷಣೆಯಲ್ಲಿ ತೊಡಗಿದ್ದಾರೆಂಬ ಆರೋಪಕ್ಕೆ ಗುರಿಯಾಗಿದ್ದ ಬೇನಿವಾಲ್, ಮಹಾಗುಜರಾತ್ ಜನತಾ ಪಕ್ಷದ (ಎಂಜೆಪಿ) ಅಧ್ಯಕ್ಷ ಜದಾಫಿಯ ನೀಡಿದ ಮನವಿಯನ್ನು ಆಧರಿಸಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.ವೆಚ್ಚದ ವಿವರಗಳು ಮತ್ತು ಅದರ ಮಂಜೂರಾತಿಗಾಗಿ ಅನುಸರಿಸಿದ ಪ್ರಕ್ರಿಯೆಗಳ ವಿವರ ನೀಡಬೇಕು ಎಂದು ರಾಜ್ಯಪಾಲರು ಬಯಸಿದ್ದಾರೆ ಎಂದು ರಾಜ್ಯಪಾಲರ ಕಚೇರಿ ಮೂಲಗಳು ತಿಳಿಸಿವೆ. ಈ ಹಿಂದೆ ಮೋದಿ ಸರ್ಕಾರದಲ್ಲಿ ಸಚಿವರಾಗಿದ್ದು ನಂತರ ಬಿಜೆಪಿಯಿಂದ ಹೊರಬಂದು  ಹೊಸ ಪಕ್ಷ ಎಂಜೆಪಿ ಕಟ್ಟಿದ ಜದಾಫಿಯ ಅವರು, ಉಪವಾಸ ಸತ್ಯಾಗ್ರಹಕ್ಕಾಗಿ ಸರ್ಕಾರವು ಸಾರ್ವಜನಿಕರ ಹಣವನ್ನು ದುರುಪಯೋಗ ಪಡಿಸಿಕೊಂಡಿದೆ ಎಂದು ಆರೋಪಿಸಿದ್ದರು.ರಾಜ್ಯಪಾಲರು ತಮ್ಮ ಪ್ರಧಾನ ಕಾರ್ಯದರ್ಶಿ ಅರವಿಂದ್ ಜೋಶಿ ಅವರ ಮೂಲಕ ಸಾಮಾನ್ಯ ಆಡಳಿತ ವಿಭಾಗದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ  (ಎಸಿಎಸ್) ಈ ತಿಂಗಳ 22ರಂದು ಪತ್ರ ಬರೆಸಿದ್ದು ಜದಾಫಿಯ ಮಾಡಿರುವ ಆರೋಪದ ಬಗ್ಗೆ ಪ್ರತಿಕ್ರಿಯಿಸಲು ಹೇಳಿದ್ದಾರೆ ಎಂದು ಮೂಲಗಳು ಹೇಳಿವೆ.`ರಾಜ್ಯದಲ್ಲಿ ಶಾಂತಿ, ಏಕತೆ ಮತ್ತು ಸೌಹಾರ್ದತೆ~ಗಾಗಿ ಮೋದಿ ಈ ತಿಂಗಳ 17-19ರವರೆಗೆ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರು.ಜದಾಫಿಯ ಅವರೂ ಭಾನುವಾರದಿಂದ ಗಾಂಧಿನಗರದಲ್ಲಿ 51 ಗಂಟೆಗಳ `ಸಂವೇದನಾ~ ಉಪವಾಸ ಕೈಗೊಂಡಿದ್ದಾರೆ.ಮೋದಿ ಸರ್ಕಾರ ನಡೆಸಿದೆ ಎನ್ನಲಾದ ಭಾರಿ ಭ್ರಷ್ಟಾಚಾರದ ಆರೋಪದ ಬಗ್ಗೆ ಲೋಕಾಯುಕ್ತರಿಂದ ತನಿಖೆ ನಡೆಸಬೇಕು ಮತ್ತು ಮೋದಿ ಸರ್ಕಾರ ಸಾರ್ವಜನಿಕರ ಹಣವನ್ನು ದುರುಪಯೋಗಪಡಿಸಿಕೊಂಡಿದೆ ಎಂಬ ಆರೋಪದ ಬಗ್ಗೆಯೂ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಉಪವಾಸ ಕೈಗೊಂಡಿರುವುದಾಗಿ ಜದಾಫಿಯ ಹೇಳಿಕೊಂಡಿದ್ದಾರೆ.ರಾಜಭವನದ ಮೂಲಕ ತಮ್ಮ ಸರ್ಕಾರವನ್ನು ಕಿತ್ತೊಗೆಯಲು ಕಾಂಗ್ರೆಸ್ ಪಿತೂರಿ ನಡೆಸುತ್ತಿದೆ ಎಂದು ಮೋದಿ ಭಾನುವಾರ ಆರೋಪಿಸಿದ್ದರು ಅಲ್ಲದೆ ರಾಜ್ಯಪಾಲರನ್ನು ಹಿಂದಕ್ಕೆ ಕರೆಸಿಕೊಳ್ಳಬೇಕು ಎಂದು ಒತ್ತಾಯಿಸಿದ್ದರು.ಈ ಹಿಂದೆಯೂ ಮೋದಿ, ರಾಜ್ಯ ಲೋಕಾಯುಕ್ತ ನೇಮಕ ವಿವಾದದ ಹಿನ್ನೆಲೆಯಲ್ಲಿ ರಾಜ್ಯಪಾಲರ ವಾಪಸಿಗೆ ಕೋರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.