ಶನಿವಾರ, ಮಾರ್ಚ್ 6, 2021
19 °C

ತುಂಗೆಯಲ್ಲಿ ಮುಳುಗಿದ ದೇವಾಲಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಂಗೆಯಲ್ಲಿ ಮುಳುಗಿದ ದೇವಾಲಯ

ಸಿರುಗುಪ್ಪ: ತುಂಗಭದ್ರಾ ಜಲಾಶಯದಿಂದ ಅಧಿಕ ಪ್ರಮಾಣದ ನೀರನ್ನು ನದಿಗೆ ಬಿಟ್ಟ ಪರಿಣಾಮ ಪಟ್ಟಣ ಸಮೀಪದ ಶಂಭುಲಿಂಗೇಶ್ವರ ದೇವಸ್ಥಾನದ ಬಳಿಯ ತುಂಗಭದ್ರೆ ಎರಡೂ ದಡ ಸೋಸಿ ಉಕ್ಕಿ ಹರಿಯುತ್ತಿದೆ.ನದಿಯ ಮಧ್ಯೆ ಇರುವ ಆಂಜಿನೇಯ ಸ್ವಾಮಿಯ ಮಂಟಪ, ಮೂಲ ಶಂಭುಲಿಂಗ ದೇವಸ್ಥಾನಗಳು ಜಲಾವೃತವಾಗಿವೆ.ತಾಲ್ಲೂಕಿನ ಕೆಂಚನಗುಡ್ಡ ಗ್ರಾಮದ ಬಳಿ ನದಿಗೆ ವಿಜಯನಗರ ಅರಸರು ನಿರ್ಮಿಸಿದ ನೆಲಮಟ್ಟದ ಏಳು ಆಣೆಕಟ್ಟುಗಳು ಮುಳುಗಿ ತುಂಗಭದ್ರೆ ಎರಡು ಕವಲಾಗಿ ಉಕ್ಕಿ ಹರಿಯುತ್ತಿರುವ ವಿಹಂಗಮ ನೋಟ ಕಣ್ಮನ ಸೆಳೆಯುತ್ತಿದೆ.ತಾಲ್ಲೂಕಿನ ಮಣ್ಣೂರು ಸೂಗೂರು, ನಡುವಿ, ರುದ್ರಪಾದ, ಉಡೇಗೊಳ, ಹೆರಕಲ್, ನಿಟ್ಟೂರು, ಕೆಂಚನಗುಡ್ಡ, ದೇಶನೂರು, ಇಬ್ರಾಂಪುರ, ಬಾಗವಾಡಿ, ಬೃಂದಾವನ ಕ್ಯಾಂಪ್, ಹೊನ್ನರಹಳ್ಳಿ, ಚಿಕ್ಕಬಳ್ಳಾರಿ, ಹಚ್ಚೊಳ್ಳಿ, ಮಾಟೂರು ಗ್ರಾಮದವರೆಗೆ ಮೈದುಂಬಿ ಹರಿಯುತ್ತಿರುವ ತುಂಗಭದ್ರೆ ನದಿ ದಡದ ತಗ್ಗು ಪ್ರದೇಶದಲ್ಲಿರುವ ಏತ ನೀರಾವರಿ ಪಂಪ್‌ಹೌಸ್, ಬತ್ತದ ಗದ್ದೆಗಳಿಗೆ ನೀರು ನುಗ್ಗಿದೆ.ನದಿ ಪಾತ್ರದ ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಪಂಪ್‌ಸೆಟ್‌ಕಟ್ಟಡಗಳ ಸುತ್ತ ನೀರು ತುಂಬಿದ ಪರಿಣಾಮ ಪೂರೈಕೆ ಸ್ಥಗಿತಗೊಂಡಿದ್ದು, ನದಿ ತುಂಬಿ ಹರಿಯುತ್ತಿದ್ದರೂ ಜನರು ನೀರಿಗಾಗಿ ಪರದಾಡುವಂತಾಗಿದೆ.ದಿಢೀರನೇ ನದಿಗೆ ನೀರು ಬಿಟ್ಟಿದ್ದರಿಂದ ನದಿ ಪಾತ್ರದಲ್ಲಿರುವ ಕಸ, ಗಿಡಮರಗಳು, ತ್ಯಾಜ್ಯ ವಸ್ತುಗಳು ಕೊಚ್ಚಿಕೊಂಡು ಬಂದು ದಡವನ್ನು ಆಕ್ರಮಿಸಿದ್ದರಿಂದ ಜನರು ನೀರು ತುಂಬಿಕೊಳ್ಳಲು ದಾರಿ ಇಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದಾರೆ.ಏತ ನೀರಾವರಿಯಲ್ಲಿ ಬತ್ತ ನಾಟಿ ಮಾಡುವ ಪ್ರಕ್ರಿಯೆ ಭರದಿಂದ ಸಾಗಿದ್ದು, ಪಂಪ್‌ಸೆಟ್ ಮನೆಗಳು ಜಲಾವೃತಗೊಂಡು ನೀರೆತ್ತಲು ಅನಾನುಕೂಲವಾಗಿದೆ.ತಾಲ್ಲೂಕಿನಾದ್ಯಂತ ಮಳೆಯಿಲ್ಲದಿದ್ದರೂ ನದಿಯಲ್ಲಿ ಮಾತ್ರ ನೀರಿನ ಪ್ರವಾಹ ಉಕ್ಕಿ ಹರಿಯುತ್ತಿದೆ. ತುಂಗಭದ್ರೆಯ ಉಪ ನದಿಯಾದ ಹಗರಿ ನದಿ ನೀರಲ್ಲದೇ ಬಣಗುಡುತ್ತಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.