ಶುಕ್ರವಾರ, ಫೆಬ್ರವರಿ 26, 2021
18 °C

ತುಪ್ಪದಮನೆಯಿಂದ ಆಲೆಮನೆಗೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಪ್ಪದಮನೆಯಿಂದ ಆಲೆಮನೆಗೆ!

‘ಆನೆಗೆ ಕಬ್ಬು ಸಿಗುವುದೂ ಆನಂದ್ ಪಿ.ರಾಜು ಅವರಿಗೆ ಕೆ. ಮಂಜು ಸಿಗುವುದೂ ಎರಡೂ ಒಂದೇ’!

ಹೀಗೆಂದು ನಗುವಿನ ಅಲೆ ಎಬ್ಬಿಸಿದ್ದು ಸ್ವತಃ ನಿರ್ಮಾಪಕ ಕೆ. ಮಂಜು. ಒಂದೂವರೆ ವರ್ಷದ ಹಿಂದೆ ಶುರುವಾದ ಸಿನಿಮಾ ಕೊನೆಗೂ ಬಿಡುಗಡೆ ಹಂತದಲ್ಲಿದೆ. ತಡವಾದರೂ ಕೆ.ಮಂಜು ಅವರಲ್ಲಿ ಅದರ ಬಗ್ಗೆ ಬೇಸರವಿದ್ದಂತಿರಲಿಲ್ಲ. ಚೆನ್ನಾಗಿ ಮೂಡಿಬಂದಿದೆ ಎನ್ನುತ್ತಲೇ ನಿರ್ದೇಶಕ ಆನಂದ್ ಪಿ. ರಾಜು ಅವರೊಂದಿಗೆ ಮತ್ತೊಂದು ಸಿನಿಮಾ ಮಾಡುವುದಾಗಿಯೂ ಘೋಷಿಸಿದಾಗ ಆನಂದ್‌ ರಾಜು ಮುಖದಲ್ಲಿ ಆಲೆಮನೆಯನ್ನೇ ತೆರೆದ ಸಂಭ್ರಮ.‘ಕಳ್ಳ ಮಳ್ಳ ಸುಳ್ಳ’ ಚಿತ್ರದಲ್ಲಿ ‘ತುಪ್ಪಾ ಬೇಕಾ ತುಪ್ಪಾ...’ ಎಂದು ಹಾಡಿ ಸೊಂಟ ಬಳುಕಿಸಿದ ನಟಿ ರಾಗಿಣಿಯನ್ನು ಪೊಲೀಸ್ ದಿರಿಸಿನಲ್ಲಿ ಕಾಣುವ ಬಯಕೆ ಮಂಜು ಅವರಲ್ಲಿ ಆಗಲೇ ಹುಟ್ಟಿಕೊಂಡಿತ್ತು. ಆನಂದ್ ಪಿ. ರಾಜು ತೆಗೆದುಕೊಂಡು ಬಂದ ಕಥೆಯನ್ನು ಮೆಚ್ಚಿಕೊಂಡ ಮಂಜು ಅವರು ಆ ಚಿತ್ರಕ್ಕೆ ರಾಗಿಣಿಯೇ ಸೂಕ್ತ ಎಂದು ನಿರ್ಧರಿಸಿದರು. ಅದಕ್ಕೆ ಪೂರಕವಾಗಿ ಚಿತ್ರಕಥೆ ಹೆಣೆದರು ಆನಂದ್ ರಾಜು. ಹೀಗೆ ಸಿದ್ಧವಾದ ‘ರಾಗಿಣಿ ಐಪಿಎಸ್’ ಚಿತ್ರದ ಹಾಡುಗಳನ್ನು ಹೊರತರುವ ಸಂಭ್ರಮದ ದಿನವದು.ಚಿತ್ರ ವಿಳಂಬವಾಗುವುದಕ್ಕೆ ಹತ್ತಾರು ಕಾರಣಗಳಿವೆ. ಅದರಲ್ಲಿ ತಮ್ಮದೂ ತಪ್ಪಿದೆ ಎಂದು ಒಪ್ಪಿಕೊಂಡರು ರಾಜು. ಚಿತ್ರೀಕರಣ ಶುರು ಮಾಡಿದಾಗಲೇ ದೆಹಲಿಯಲ್ಲಿ ನಿರ್ಭಯ ಪ್ರಕರಣ ಸಂಭವಿಸಿದ್ದು. ತಮ್ಮ ಸಿನಿಮಾದೊಳಗೆ ಆ ಘಟನೆಯನ್ನೂ ಸೇರಿಸಿಕೊಳ್ಳುವ ಸಲುವಾಗಿ ಚಿತ್ರಕಥೆ ಬದಲಿಸಿ ಕೆಲವು ಸನ್ನಿವೇಶಗಳನ್ನು ಮರುಚಿತ್ರೀಕರಿಸಿಕೊಳ್ಳಬೇಕಾಯಿತು. ಅಂದುಕೊಂಡಂತೆ ಚೆನ್ನಾಗಿ ಮೂಡಿಬಂದಿದೆ. ಚಿತ್ರ ಗೆಲ್ಲುತ್ತದೆ ಎಂದು ಶೇ ೧೦೦ರಷ್ಟು ನಂಬಿಕೆ ಇದೆ ಎಂದರು ಅವರು.ಕಲಾವಿದನಿಗೆ ತನ್ನದೇ ಹೆಸರಿನ ಶೀರ್ಷಿಕೆಯುಳ್ಳ ಚಿತ್ರದಲ್ಲಿ ನಟಿಸುವ ಅವಕಾಶ ಸಿಗುವುದು ತೀರಾ ಅಪರೂಪ. ಅದರಲ್ಲಿಯೂ ನಟಿಯರ ಪಾಲಿಗೆ ಅದು ಮರೀಚಿಕೆ. ಅಂಥ ಅಪೂರ್ವ ಅವಕಾಶ ತಮ್ಮದಾಗಿದೆ ಎಂಬ ಖುಷಿ ಹಂಚಿಕೊಂಡರು ರಾಗಿಣಿ. ಮೊದಲ ಬಾರಿಗೆ ನಾಯಕಿ ಪ್ರಧಾನ ಚಿತ್ರದಲ್ಲಿ ನಟಿಸುತ್ತಿರುವ ಸಂತಸ ಅವರಲ್ಲಿತ್ತು. ಚಿತ್ರದಲ್ಲಿ ಸುಮಾರು ಐದು ಸಾಹಸ ಸನ್ನಿವೇಶಗಳನ್ನು ಡೂಪ್ ಇಲ್ಲದೇ ಅವರು ನಿರ್ವಹಿಸಿದ್ದಾರಂತೆ.ನಟ ನಾರಾಯಣ ಸ್ವಾಮಿ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪೊಲೀಸ್ ಸಮವಸ್ತ್ರ ಎಲ್ಲಾ ನಟಿಯರಿಗೂ ಹೊಂದಿಕೊಳ್ಳುವುದಿಲ್ಲ. ಮಾಲಾಶ್ರೀ ಅವರ ಬಳಿಕ ರಾಗಿಣಿಗೆ ಅದು ಸೂಕ್ತವಾಗಿ ಹೊಂದಿಕೊಳ್ಳುತ್ತದೆ ಎನ್ನುವ ಅಭಿಪ್ರಾಯ ಅವರದು.

ಸಾಕಷ್ಟು ತಪ್ಪುಗಳನ್ನು ಮಾಡಿ ರೀಟೇಕ್ ತೆಗೆಯುವಂತೆ ಮಾಡಿದ್ದೇನೆ ಎಂದು ತಪ್ಪೊಪ್ಪಿಕೊಂಡರು ಛಾಯಾಗ್ರಾಹಕ ನಂದಕುಮಾರ್. ಸಂಗೀತ ನಿರ್ದೇಶಕ ರಾಜೇಶ್ ರಾಮನಾಥ್ ಮೂರು ಹಾಡುಗಳನ್ನು ಹೊಸೆಯಲು ಆರು ತಿಂಗಳು ತೆಗೆದುಕೊಂಡರಂತೆ.

ಇದೇ ತಿಂಗಳ ೨೮ಕ್ಕೆ ಚಿತ್ರವನ್ನು ತೆರೆಗಾಣಿಸುವ ಉದ್ದೇಶ ಮಂಜು ಅವರದು. ಆನಂದ್ ಆಡಿಯೊದ ಶ್ಯಾಂ, ನಿರ್ಮಾಪಕ ಎನ್. ಕುಮಾರ್ ಸೀಡಿ ಬಿಡುಗಡೆ ವೇಳೆ ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.