ಶುಕ್ರವಾರ, ಮಾರ್ಚ್ 5, 2021
23 °C
ಕೇಂದ್ರ ಸರ್ಕಾರದ ಅಧಿಕಾರಿಗಳ ತಂಡ ಪರಿಶೀಲನೆ

ತುಮಕೂರು: 41,222 ಹೆಕ್ಟೇರ್ ತೆಂಗು ಹಾನಿ

'ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: 41,222 ಹೆಕ್ಟೇರ್ ತೆಂಗು ಹಾನಿ

ತುಮಕೂರು: ಜಿಲ್ಲೆಯಲ್ಲಿ ತೆಂಗು ಬೆಳೆ ನಾಶವಾಗಿರುವ ಬಗ್ಗೆ ಕೇಂದ್ರ ಸರ್ಕಾರದ ತೋಟಗಾರಿಕೆ ಇಲಾಖೆ ಅಧಿಕಾರಿ ಡಾ.ಗೋರಕ್‌ಸಿಂಗ್ ನೇತೃತ್ವದ ತಂಡ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿತು. ಜಿಲ್ಲೆಯ ವಿವಿಧೆಡೆ ಶನಿವಾರ, ಭಾನುವಾರ ಪರಿಶೀಲನೆ ನಡೆಸಲಿದ್ದು, ಸೋಮವಾರ ಬೆಂಗಳೂರಿನಲ್ಲಿ ಸರ್ಕಾರ ದಿಂದ ಮಾಹಿತಿ ಪಡೆಯಲಿದೆ. ಆ ನಂತರ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ.ಶನಿವಾರ ಬೆಳಿಗ್ಗೆ ನಗರಕ್ಕೆ ಆಗಮಿಸಿದ ತಂಡದ ಸದಸ್ಯರು ಗುಬ್ಬಿ, ಚಿಕ್ಕನಾಯಕನ ಹಳ್ಳಿ, ತಿಪಟೂರು ತಾಲ್ಲೂಕು ತೆಂಗು ಬೆಳೆಯುವ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಆ ನಂತರ ಹಾಸನ ಜಿಲ್ಲೆಗೆ ತಂಡ ತೆರಳಿದೆ. ಭಾನುವಾರ ಕುಣಿಗಲ್ ತಾಲ್ಲೂಕಿನಲ್ಲಿ ಪರಿಶೀಲನೆ ನಡೆ ಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ. ಜಯಚಂದ್ರ ಮಾತನಾಡಿ, ರಾಜ್ಯದಲ್ಲಿ ಬರಗಾಲದಿಂದ ತೋಟಗಾರಿಕೆ ಬೆಳೆ ಹಾಳಾಗಿದ್ದು, ಪರಿಹಾರ ಅನುದಾನ ನೀಡುವಂತೆ ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿತ್ತು. ಕೇಂದ್ರ ಸರ್ಕಾರ ಈಗಾಗಲೇ ರಾಜ್ಯಕ್ಕೆ ರೂ.342 ಕೋಟಿ ಬೆಳೆ ಪರಿಹಾರ ಅನುದಾನ ನೀಡಿದೆ. ಇದರಲ್ಲಿರೂ.100 ಕೋಟಿಯನ್ನು ತೆಂಗು ಬೆಳೆಗಾರರಿಗೆ ಪರಿಹಾರ ನೀಡಲು ಬಳಕೆ ಮಾಡಲಾಗುವುದು ಎಂದು ತಿಳಿಸಿದರು.ಒಂದು ಹೆಕ್ಟೇರ್ ತೆಂಗು ನಾಶವಾದರೆರೂ.8 ಸಾವಿರ ಪರಿಹಾರ ನೀಡಬೇಕು ಎಂಬ ನಿಯಮವಿದೆ. ಅದನ್ನು ಸದ್ಯದಲ್ಲಿಯೇ ಹೆಚ್ಚಳ ಮಾಡಲಾಗುವುದು. ಕೇಂದ್ರ ಸರ್ಕಾರದ ತಂಡ ಪರಿಶೀಲನೆ ನಂತರ ಸೋಮವಾರ ವಿಧಾನಸೌಧಕ್ಕೆ ಭೇಟಿ ನೀಡಲಿದ್ದು, ಅಲ್ಲಿ ತಂಡಕ್ಕೆ ರಾಜ್ಯದ ತೋಟಗಾರಿಕೆ ಬೆಳೆ ನಷ್ಟದ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗುವುದು. ಅಲ್ಲದೆ ಬರಗಾಲ, ಬೆಲೆ ಕುಸಿತದ ಬಗ್ಗೆ ಸಂಪುಟ ಉಪ ಸಮಿತಿ ಸಭೆ ನಡೆಸಿ, ಪರಿಹಾರ ನೀಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.ಜಿಲ್ಲೆಯಲ್ಲಿ ಒಟ್ಟಾರೆ 41222 ಹೆಕ್ಟೇರ್ ತೆಂಗು ಬೆಳೆಗೆ ಹಾನಿಯಾಗಿದೆ. ಇದರಲ್ಲಿ 22900 ಹೆಕ್ಟೇರ್ ತೆಂಗು ಬರದಿಂದ ಒಣಗಿದೆ. 5375 ಹೆಕ್ಟೇರ್‌ನಲ್ಲಿ ಶೇ 50ರಷ್ಟು ಇಳುವರಿ ಕಡಿಮೆಯಾಗಿದೆ. 2697 ಹೆಕ್ಟೇರ್ ರೋಗದಿಂದ ನಾಶವಾಗಿದೆ. ಅಲ್ಲದೆ 10300 ಹೆಕ್ಟೇರ್ ಪ್ರದೇಶದ ತೆಂಗು ಬೆಳೆ ಭಾಗಶಃ ರೋಗದಿಂದ ನಾಶವಾಗಿದೆ. ಈ ಎಲ್ಲ ಮಾಹಿತಿಯನ್ನು ಕೇಂದ್ರ ತಂಡಕ್ಕೆ ನೀಡಲಾಗುವುದು ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಸವಿತಾ ತಿಳಿಸಿದರು.ಕೇಂದ್ರ ಸರ್ಕಾರದ ತೋಟಗಾರಿಕೆ ಇಲಾಖೆ ಆಯುಕ್ತ ಡಾ.ಗೋರಕ್‌ಸಿಂಗ್ ನೇತೃತ್ವದ ತಂಡದಲ್ಲಿ ನಿರ್ದೇಶಕ ಡಿ.ಎಲ್.ಮಹೇಶ್ವರ್, ಸಲಹೆಗಾರ ಸ್ಯಾಮುಯಲ್‌ಜೋಶ್, ವಿಜ್ಞಾನಿಗಳಾದ ಡಾ.ಬಸವರಾಜು, ಡಾ.ಸಿದ್ದಲಿಂಗಯ್ಯ ಇದ್ದಾರೆ.ಗುಬ್ಬಿ ತಾಲ್ಲೂಕಿನ ಹೇರೂರು ಗ್ರಾಮಕ್ಕೆ ಕೇಂದ್ರ ತಂಡದೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ, ಸಂಸದ ಜಿ.ಎಸ್.ಬಸವರಾಜು, ವಿಧಾನ ಪರಿಷತ್ ಸದಸ್ಯ ಡಾ.ಎಂ.ಆರ್.ಹುಲಿನಾಯ್ಕರ್, ಜಿಲ್ಲಾಧಿಕಾರಿ ಕೆ.ಎಸ್.ಸತ್ಯಮೂರ್ತಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪ್ರೇಮಾ, ಸಿಇಒ ಗೋವಿಂದರಾಜು ಭೇಟಿ ನೀಡಿದ್ದರು.ರೈತ ಸಂಘದ ಮನವಿ: ಕರ್ನಾಟಕ ರಾಜ್ಯ ರೈತ ಸಂಘದಿಂದ ತಂಡಕ್ಕೆ ಮನವಿ ಸಲ್ಲಿಸಲಾಯಿತು. ಜಿಲ್ಲೆಯಲ್ಲಿ ಶೇ 40ರಷ್ಟು ತೆಂಗು ನಾಶವಾಗಿದ್ದು, ತೆಂಗು ಬೆಳೆಗಾರರಿಗೆ ಪರಿಹಾರ ನೀಡಬೇಕು. ಸಾಲ ಮನ್ನಾ ಮಾಡಬೇಕು. ಕೊಬ್ಬರಿಗೆ ಕ್ವಿಂಟಲ್‌ಗೆರೂ.10 ಸಾವಿರ ಬೆಲೆ ನಿಗದಿ ಮಾಡಿ ಖರೀದಿಸಬೇಕು. ತೆಂಗು ಉಪ ಉತ್ಪನ್ನಗಳ ತಯಾರಿಕೆಗೆ ಸಹಾಯಧನ ನೀಡಬೇಕು. ಗೋರಖ್‌ಸಿಂಗ್ ವರದಿಯನ್ನು ರಾಜ್ಯದ ಅಡಿಕೆ ಬೆಳೆಗಾರರಿಗೂ ವಿಸ್ತರಿಸಬೇಕು ಎಂದು ಮನವಿ ಸಲ್ಲಿಸಿ ಒತ್ತಾಯಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.