ಶುಕ್ರವಾರ, ಏಪ್ರಿಲ್ 23, 2021
22 °C

ತುಮರಿ: ರಾಜ್ಯ ಹೆದ್ದಾರಿ ಸಂಪರ್ಕ ಕಡಿತ ಭೀತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮರಿ: ಮಲೆನಾಡಿನಲ್ಲಿ ವರುಣ ತನ್ನ ಆರ್ಭಟ ಪ್ರದರ್ಶಿಸುವ ಮುನ್ನವೇ ಸಮೀಪದ ಕುದುರೂರು ಕಿರುಸೇತುವೆಯ ಒಂದು ಭಾಗದ ಮಣ್ಣು ಕುಸಿದಿರುವ ಹಿನ್ನೆಲೆಯಲ್ಲಿ ತುಮರಿ ಪಟ್ಟಣವು ಬೈಂದೂರು-ಹೊನ್ನಾಳಿ ರಾಜ್ಯ ಹೆದ್ದಾರಿ ಸಂಪರ್ಕ ಕಡಿದುಕೊಳ್ಳುವ ಆತಂಕ ಎದುರಾಗಿದೆ.ಈಗಾಗಾಲೇ, ಕರೂರು ಹೋಬಳಿ ದ್ವೀಪ ಪ್ರದೇಶದಿಂದ ಕಾರ್ಗಲ್ ಭಟ್ಕಳ ಮತ್ತು ಹೊನ್ನಾವರಕ್ಕೆ ಸಂಪರ್ಕ ಕಲ್ಪಿಸುವ ಕೋಗಾರು ಮಾರ್ಗವು ಎಣ್ಣೆ ಹೊಳೆ ಸೇತುವೆ ಮುರಿದ ಹಿನ್ನೆಲೆಯಲ್ಲಿ ವಾಹನ ಸಂಚಾರಕ್ಕೆ ಮುಕ್ತವಾಗಿಲ್ಲ.ಎಣ್ಣೆಹೊಳೆ ಸೇತುವೆ ಸ್ಥಳದಲ್ಲಿ ಭಾರೀ ಪ್ರಮಾಣದ ನೀರು ಹರಿಯುತ್ತಿರುವುದರಿಂದ ಸೇತುವೆ ನಿರ್ಮಾಣ ಪ್ರಕ್ರಿಯೆ ಅಥವಾ ಬದಲಿ ರಸ್ತೆ ನಿರ್ಮಾಣದ ಅವಕಾಶಕ್ಕೆ ಮಳೆಗಾಲ ಮುಗಿಯುವ ತನಕ ಕಾಯುವುದು ಅನಿವಾರ್ಯವಾಗಿದೆ. ಈ ಬೆನ್ನಲೇ ಕುದುರೂರು ಸೇತುವೆಯ ಮಣ್ಣು ಕುಸಿತ ಆತಂಕ ಸೃಷ್ಟಿಸಿದೆ.ಈಚೆಗೆ ಬಿದ್ದಸಣ್ಣ ಪ್ರಮಾಣದ ಮಳೆಗೆ ಕುದುರೂರು ಸೇತುವೆಯ ರಸ್ತೆಗೆ ಹೊಂದಿಕೊಂಡ ಭಾಗದಲ್ಲಿ ಭಾರೀ ಮಣ್ಣು ಕುಸಿದು ಕಂದಕ ಸೃಷ್ಟಿಯಾಗಿದೆ. ಸ್ಥಳ ಪರಿಶೀಲನೆ ಮಾಡಿದ ಎಂಜಿನಿಯರ್ ಮರಳು ತುಂಬಿದ ಚೀಲದಲ್ಲಿ ತಡೆಗೋಡೆ ನಿರ್ಮಿಸುವ ಕಾರ್ಯವನ್ನು ಕೈಗೆತ್ತಿಕೊಂಡಿದ್ದಾರೆ.ಆದರೆ, ಪರ್ಯಾಯ ಮಾರ್ಗವನ್ನು ಮಾಡಿಕೊಡಲು ಅವಕಾಶವಿಲ್ಲದ ಕಡಿದಾದ ಸ್ಥಳದಲ್ಲಿ ಸೇತುವೆ ಕುಸಿದಿರುವುದರಿಂದ ಮತ್ತು ಸೇತುವೆಯಲ್ಲಿ ದೊಡ್ಡ ಪ್ರಮಾಣದ ನೀರು ಹರಿಯುವುದರಿಂದ ಪುನಃ ಸೇತುವೆ ಕುಸಿಯುವ ಬಗ್ಗೆ ಸ್ಥಳೀಯರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.ಕರೂರು ಹೋಬಳಿ ದ್ವೀಪ ಪ್ರದೇಶದ ಸಂಪರ್ಕ ಕೊಂಡಿ ಲಾಂಚ್ ವ್ಯವಸ್ಥೆಯು ಪ್ರತಿದಿನ ಸಂಜೆ ಆರು ಗಂಟೆಗೆ ಮುಕ್ತಾಯಗೊಳ್ಳುತ್ತದೆ. ರಾತ್ರಿ ಹೊತ್ತಿನಲ್ಲಿ ಅನಾರೋಗ್ಯ ಅಥವಾ ಇತರೆ ಅವಘಡಗಳು ಸಂಭವಿಸದರೆ ಕೋಗಾರು ಭೂಮಾರ್ಗದ ಮೂಲಕ ಸಾಗರ ತಾಲ್ಲೂಕು ಕೇಂದ್ರ ತಲುಪಬಹುದು.ಎಣ್ಣೆಹೊಳೆ ಸೇತುವೆ ಮುರಿದಿರುವ ಕಾರಣ ಈ ಅವಕಾಶವು ದ್ವೀಪಕ್ಕೆ ಅಲಭ್ಯವಾಗಿದೆ. ಕೊನೆಯ ಏಕಮಾತ್ರ ಭೂಮಾರ್ಗದ ಅವಕಾಶ ಇರುವುದು ಬೈಂದೂರು-ಹೊನ್ನಾಳಿ ರಾಜ್ಯ ಹೆದ್ದಾರಿ ಸಂಪರ್ಕಿಸುವುದೇ ಆಗಿದೆ.

ಈಗಾಗಲೇ, ಒಂದು ಭಾಗದ ಮಣ್ಣು ಕುಸಿದು ಶಿಥಿಲಗೊಂಡಿರುವ ಕುದುರೂರು ಕಿರು ಸೇತುವೆ ಭಾರೀ ಮಳೆಗೆ ಆಹುತಿಯಾದರೆ ಪ್ರಸಿದ್ಧ ಸಿಗಂದೂರು ದೇವಾಲಯ ಮತ್ತು ಕೊಲ್ಲೂರು ಮಾರ್ಗ ಸಹ ಸಂಪರ್ಕ ಕಡಿದುಕೊಳ್ಳುತ್ತದೆ.ಇಂತಹ ಅನಿವಾರ್ಯ ಸಂದರ್ಭ  ಎದುರಿಸಲು ಒಂದು ಲಾಂಚ್‌ನ್ನು ದ್ವೀಪ ಭಾಗದಲ್ಲಿ ನಿಲುಗಡೆ ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.