ಭಾನುವಾರ, ಜೂಲೈ 12, 2020
22 °C

ತುಮ್ಕೋಸ್:ಅಡಿಕೆ ವಹಿವಾಟು ಸ್ಥಗಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮ್ಕೋಸ್:ಅಡಿಕೆ ವಹಿವಾಟು ಸ್ಥಗಿತ

ಚನ್ನಗಿರಿ: ಪಟ್ಟಣದ ಪ್ರಮುಖ ಅಡಿಕೆ ವಹಿವಾಟು ಸಂಸ್ಥೆ ‘ತುಮ್ಕೋಸ್’  ಕಳೆದ ಒಂದು ವಾರದಿಂದ ಅಡಿಕೆ ವಹಿವಾಟು ಸ್ಥಗಿತಗೊಳಿಸಿರುವುದರಿಂದ ಅಡಿಕೆ ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಈಡಾಗಿದ್ದಾರೆ.‘ತುಮ್ಕೋಸ್’ 30 ವರ್ಷಗಳಿಂದ ತಾಲ್ಲೂಕಿನ ಅಡಿಕೆ ಬೆಳೆಗಾರರ ಸಂಜೀವಿನಿಯಾಗಿದೆ.ಪ್ರತಿ ವರ್ಷ `100 ಕೋಟಿಗಿಂತಲೂ ಹೆಚ್ಚು ವಹಿವಾಟು ನಡೆಸುವ ಈ ಸಂಸ್ಥೆ ಪ್ರಮುಖ ಸಂಸ್ಥೆಯೆಂದು ಹೆಸರು ಪಡೆದಿದೆ. ವಾರಕ್ಕೆ ಎರಡು ಬಾರಿ ಇಲ್ಲಿ ಅಡಿಕೆ ಖರೀದಿ ನಡೆಯುತ್ತದೆ. ತಾಲ್ಲೂಕಿನಲ್ಲಿ ಸುಮಾರು 50 ಸಾವಿರ ಎಕರೆಗಿಂತಲೂ ಹೆಚ್ಚು ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿದೆ.ಸುಪ್ರೀಂಕೋರ್ಟ್ ಗುಟ್ಕಾ ಸ್ಯಾಷೆಯಲ್ಲಿನ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಿರುವುದರಿಂದ ಅಡಿಕೆ ಖರೀದಿ ನಿಂತಿದೆ. ಪ್ರಮುಖವಾಗಿ ಈ ತಾಲೂಕಿನಲ್ಲಿ ಬೆಳೆಯುತ್ತಿರುವ ಅಡಿಕೆ ಉತ್ಕೃಷ್ಟ ದರ್ಜೆಯದ್ದಾಗಿರುವ ಹಿನ್ನೆಲೆಯಲ್ಲಿ ದೇಶದ ಮುಖ್ಯ ಗುಟ್ಕಾ ಕಂಪೆನಿಗಳು ನೇರವಾಗಿ ಇಲ್ಲಿಂದ ಖರೀದಿಸುತ್ತಿದ್ದವು.ಪ್ರತಿದಿನ ಗಿಜಿಗಿಜಿ ಎನ್ನುತ್ತಿದ್ದ ‘ತುಮ್ಕೋಸ್’ನ ಅಡಿಕೆ ಖರೀದಿ ಕೇಂದ್ರ ಕಳೆದ ಒಂದು ವಾರದಿಂದ ಜನರಿಲ್ಲದೇ ಬೀಕೊ ಎನ್ನುತ್ತಿದೆ. ಇದನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದ ಹಮಾಲರು ಕೆಲಸ ಇಲ್ಲದೇ ಸುಮ್ಮನೆ ಕಾಲ ಕಳೆಯುವಂತಾಗಿದೆ. ಅಡಿಕೆ ಖರೀದಿಯನ್ನು ಯಾವಾಗ ಪ್ರಾರಂಭಿಸುತ್ತಾರೆ ಎಂದು ಬೆಳೆಗಾರರು ಹಾಗೂ ಹಮಾಲರು ಕಾಯುವಂತಾಗಿದೆ.‘ಹದಿನೈದು ವರ್ಷಗಳಿಂದ ಹಮಾಲಿ ಕೆಲಸ ಮಾಡುತ್ತಿದ್ದೇವೆ. ಇದರಿಂದಲೇ ನಮ್ಮ ಜೀವನ ಸಾಗಿಸುತ್ತಿದ್ದೇವೆ. ಆದರೆ ಖರೀದಿದಾರರು ಬಾರದೇ ಅಡಿಕೆ ವಹಿವಾಟನ್ನು ಸ್ಥಗಿತಗೊಳಿಸಲಾಗಿದೆ. ಇದರಿಂದ ನಮಗೆ ತುಂಬಾ ತೊಂದರೆಯಾಗಿದೆ’ ಎಂದು ಹಮಾಲಿಗಳಾದ ರಂಗಪ್ಪ, ಹನುಮಂತಪ್ಪ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.