ಭಾನುವಾರ, ಮೇ 9, 2021
25 °C
`ಮುಡಾ' ಭೂ ಖರೀದಿ (ಅ)ವ್ಯವಹಾರ ಕೆದಕಲು ನಿರ್ಧಾರ

ತೆರಿಗೆ ಹೆಚ್ಚಳ ನಿಶ್ಚಿತ: ಜನತೆಗೆ ದ್ರೋಹ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತೆರಿಗೆ ಹೆಚ್ಚಳ ನಿಶ್ಚಿತ: ಜನತೆಗೆ ದ್ರೋಹ?

ಮಂಗಳೂರು: ಅಭಿವೃದ್ಧಿ ಕಾರ್ಯಗಳಿಗಾಗಿ ಕೇಂದ್ರ ಸೂಚಿಸಿದ ರೀತಿಯಲ್ಲಿ ತೆರಿಗೆ ಆಸ್ತಿ, ನೀರಿನ ತೆರಿಗೆಗಳನ್ನು ಹೆಚ್ಚಿಸದೆ ಬೇರೆ ದಾರಿಯೇ ಇಲ್ಲ ಎಂದು ನಗರಾಭಿವೃದ್ಧಿ ಸಚಿವ ವಿನಯಕುಮಾರ್ ಸೊರಕೆ ಹೇಳುವ ಮೂಲಕ ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ಮೊದಲು ಆಸ್ತಿ ತೆರಿಗೆ, ನೀರಿನ ತೆರಿಗೆ ಸಹಿತ ಯಾವುದೇ ತೆರಿಗೆಯನ್ನು 5 ವರ್ಷ ಕಾಲ ಹೆಚ್ಚಿಸುವುದಿಲ್ಲ ಎಂಬ ತನ್ನ ಭರವಸೆಯನ್ನು ಕಾಂಗ್ರೆಸ್ ಗಾಳಿಗೆ ತೂರುವ ಲಕ್ಷಣ ಗೋಚರಿಸಿದೆ.ಸೋಮವಾರ ಪಾಲಿಕೆ ಕಚೇರಿಯಲ್ಲಿ ನಡೆದ ಪ್ರಗತಿ ಪರಿಶೀಲನೆ ಬಳಿಕ ಸಚಿವರು ಪತ್ರಕರ್ತರಿಗೆ ಈ ವಿಷಯ ತಿಳಿಸಿದರು. ಜನಸಾಮಾನ್ಯರಿಗೆ ತೆರಿಗೆ ಹೊರೆ ಬೀಳದಂತೆ ನೋಡಿಕೊಳ್ಳಲು ನೀರನ್ನು ಅತಿಯಾಗಿ ಬಳಸುವ ಉದ್ದಿಮೆಗಳಿಗೆ ಹೆಚ್ಚಿನ ತೆರಿಗೆಯ ಭಾರ ಹೊರಿಸುವ ವಿಚಾರ ಇದೆ, ಇತರ ತೆರಿಗೆಯ ವಿಚಾರದಲ್ಲೂ ಹೆಚ್ಚಿನ ಹೊರೆ ಜನರಿಗೆ ಬೀಳದ ರೀತಿಯಲ್ಲಿ ಪರ್ಯಾಯ ದಾರಿಗಳನ್ನು ಹುಡುಕಲಾಗುವುದು. ಸರ್ಕಾರದಿಂದಲೂ ಅನುದಾನ ದೊರಕಿಸಿಕೊಡಲಾಗುವುದು. ಆದರೆ ತೆರಿಗೆ ಹೆಚ್ಚಿಸದೆ ಇರಲು ಸಾಧ್ಯವಿಲ್ಲ ಎಂದರು.`ಮುಡಾ' ವತಿಯಿಂದ ಚೇಳ್ಯಾರು-ಮದ್ಯಗಳಲ್ಲಿ 20 ಕೋಟಿ ರೂಪಾಯಿ ಮೌಲ್ಯದ ನಿವೇಶನ ಖರೀದಿಯಲ್ಲಿ ನಡೆದಿರಬಹುದಾದ `ಅ'ವ್ಯವಹಾರಗಳ ಬಗ್ಗೆ ಉನ್ನತಾಧಿಕಾರಿಗಳಿಂದ ತನಿಖೆ ನಡೆಸುವುದಾಗಿ ಪ್ರಕಟಿಸಿದರು. `ಇದಕ್ಕೆಲ್ಲ ಸಿಬಿಐ ತನಿಖೆ ನಡೆಸುವ ಅಗತ್ಯವಿಲ್ಲ, ನಮಗೇ ಅಂತಹ ತನಿಖೆ ನಡೆಸುವುದು ಸಾಧ್ಯವಿದೆ' ಎಂದರು.ಸಚಿವರು ಮೊದಲಿಗೆ `ಮುಡಾ' ಕಚೇರಿಯಲ್ಲಿ ಸುಮಾರು ಮುಕ್ಕಾಲು ಗಂಟೆ ಕಾಲ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ, ಪಾಲಿಕೆಯಲ್ಲಿ ಪ್ರಗತಿ ಪರಿಶೀಲನೆ ನಡೆಸಿದರು. ಒಂಟಿ ನಿವೇಶನಗಳ ಅನುಮೋದನೆಗೆ ಇರುವ ನಿಯಮಗಳನ್ನು ಸರಳಗೊಳಿಸಿ, ಬೇಗನೆ ಅನುಮೋದನೆ ದೊರಕಿಸಿಕೊಡಬೇಕು ಎಂದು ಸೂಚಿಸಿದ ಸಚಿವರು, ಈ ಹಿಂದಿನ ಆಡಳಿತ ನಡೆಸಿದವರು ಭೂ ಖರೀದಿಯಲ್ಲಿ `ಏನೋ ಅಕ್ರಮ' ನಡೆಸಿರುವ ಸುಳಿವನ್ನು ಜಾಲಾಡಿದರು.ಶಾಸಕ ಜೆ.ಆರ್.ಲೋಬೊ ಅವರು ಸಹ ಚೇಳ್ಯಾರು-ಮದ್ಯಗಳಲ್ಲಿ 20 ಕೋಟಿ ರೂಪಾಯಿ ವೆಚ್ಚದಲ್ಲಿ ನಿವೇಶನ ಖರೀದಿಸುವುದಕ್ಕೆ ಮೊದಲು ನಿವೇಶನವನ್ನು ಪಡೆಯಲಿರುವವರು ಯಾರು ಎಂಬುದರ ಸಮೀಕ್ಷೆ ನಡೆಸಲಾಗಿದೆಯೇ ಎಂಬ ಮೂಲ ಪ್ರಶ್ನೆಯನ್ನು ಎಸೆದರು. ಅಧಿಕಾರಿಗಳ ಬಳಿ ಅದಕ್ಕೆ ಉತ್ತರ ಸಿಗದಾಗ, ನಗರದೊಳಗೆ ಮಾಡಲು ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಇರುವಾಗ ಚೇಳ್ಯಾರಿನ ಭೂ ಖರೀದಿಗೆ ಹಣ ತೊಡಗಿಸಿ ಅದನ್ನು ವ್ಯರ್ಥ ಮಾಡಿದ್ದು ಏಕೆ ಎಂದು ಸಚಿವರು ಪ್ರಶ್ನಿಸಿದರು. ಕೊನೆಗೆ ಈ ವ್ಯವಹಾರದ ಬಗ್ಗೆ ಉನ್ನತಾಧಿಕಾರಿಗಳಿಂದ ತನಿಖೆ ನಡೆಸುವ ತೀರ್ಮಾನ ಕೈಗೊಂಡರು.ಅಪಪ್ರಚಾರಕ್ಕೆ ಆಕ್ಷೇಪ

ಒಂಟಿ ನಿವೇಶನಕ್ಕೆ ಅನುಮತಿ ನೀಡುವುದನ್ನು ಸ್ಥಗಿತಗೊಳಿಸಲಾಗಿದೆ, ಇದು ನಿಜವೇ ಎಂದು ಸಭೆಯಲ್ಲಿ ಶಾಸಕ ಮೋನಪ್ಪ ಭಂಡಾರಿ ಕೇಳಿದರು. 2009-10ರಿಂದ ಒಂದೂವರೆ ಸಾವಿರಕ್ಕೂ ಅಧಿಕ ಒಂಟಿ ನಿವೇಶನಗಳಿಗೆ ಅನುಮತಿ ನೀಡಲಾಗಿದೆ ಎಂಬ ಅಧಿಕಾರಿಗಳ ವಿವರಣೆಯನ್ನು ಬೆಟ್ಟುಮಾಡಿ ತೋರಿಸಿದ ಶಾಸಕರು, ಕಳೆದ ಐದಾರು ತಿಂಗಳಿಂದ ಈ ನಿಟ್ಟಿನಲ್ಲಿ ನಡೆದ ಅಪಪ್ರಚಾರಕ್ಕೆ ಅರ್ಥವಿಲ್ಲ ಎಂದರು.ಒಂಟಿ ನಿವೇಶನಗಳಿಗೆ ಅನುಮತಿ ನೀಡುವಾಗ 8ರಿಂದ 9 ತಿಂಗಳು ಸತಾಯಿಸಲಾಗುತ್ತಿದೆ ಎಂದು ಶಾಸಕ ಲೋಬೊ ಹೇಳಿದರು. ಸಚಿವರು ಇದಕ್ಕೆ ತಕ್ಷಣ ಸ್ಪಂದಿಸಿ, ಇಂತಹ ವಿಳಂಬಕ್ಕೆ ಇನ್ನು ಮುಂದೆ ಅವಕಾಶ ನೀಡುವುದಿಲ್ಲ, ಬಡವರು ಸ್ವಂತ ಮನೆ ಕಟ್ಟಿಸಿಕೊಳ್ಳುವ ಕನಸಿಗೆ ಧಕ್ಕೆ ತರಬಾರದು ಎಂದರು.ಪಾಲಿಕೆ ಸಭೆಯಲ್ಲೂ ಈ ವಿಚಾರ ಪ್ರಸ್ತಾಪವಾಯಿತು. ನಗರ ಯೋಜನಾ ಅಧಿಕಾರಿಗಳ ಹುದ್ದೆ ಖಾಲಿ ಬಿದ್ದಿರುವುದರಿಂದ ತಾತ್ಕಾಲಿಕ ಅವಧಿಗಾಗಿ ಒಂಟಿ ನಿವೇಶನವನ್ನು ಅನುಮೋದಿಸುವ ಅಧಿಕಾರವನ್ನು ಮುಡಾಕ್ಕೆ ವರ್ಗಾಯಿಸಲಾಗಿತ್ತು ಎಂಬ ವಿವರಣೆ ದೊರೆಯಿತು. ಶೀಘ್ರ ಈ ಹುದ್ದೆಯನ್ನು ಭರ್ತಿ ಮಾಡುವ ಮೂಲಕ ಪಾಲಿಕೆಯಲ್ಲೇ ಒಂಟಿ ನಿವೇಶನಗಳಿಗೆ ಅನುಮತಿ ನೀಡುವ ಹಿಂದಿನ ಕ್ರಮವನ್ನು ಮರಳಿ ಜಾರಿಗೆ ತರುವುದಾಗಿ ಸಚಿವರು ಭರವಸೆ ನೀಡಿದರು.ಗ್ರೇಟರ್ ಮಂಗಳೂರು

ಮಂಗಳೂರು ಪಾಲಿಕೆ ವ್ಯಾಪ್ತಿಗೆ ಮೂಲ್ಕಿ, ಉಳ್ಳಾಲ ಮತ್ತು ಬಜ್ಪೆಯನ್ನು ಸೇರಿಸುವ ವಿಚಾರ ಇದೆ. ಇಲ್ಲಿನ ಸ್ಥಳೀಯಾಡಳಿತಗಳು ಒಪ್ಪಿಗೆ ಸೂಚಿಸಿದರೆ ಅದಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡುವುದು ನಿಶ್ಚಿತ. ಈ ಸಾಧ್ಯತೆಗಳನ್ನು ಅಧ್ಯಯನ ನಡೆಸಲು ಭೂ ಸಾರಿಗೆ ಪ್ರಾಧಿಕಾರಕ್ಕೆ ಸೂಚಿಸಲಾಗಿದೆ.ವಿವರವಾದ ಯೋಜನಾ ವರದಿ ಸಿದ್ಧಗೊಳಿಸಲು ತಿಳಿಸಲಾಗಿದೆ ಎಂದು ಸಚಿವರು ಸಭೆಯ ಬಳಿಕ ಪತ್ರಕರ್ತರಿಗೆ ತಿಳಿಸಿದರು.`ಜೆ ನರ್ಮ್ ಯೋಜನೆಯನ್ನು ಮಂಗಳೂರಿಗೆ ತರಲು ಆದ್ಯತೆ ನೀಡಲಾಗುವುದು. ಈಗಾಗಲೇ ಎಡಿಬಿ ಸಾಲದ ನೆರವಿನಿಂದ ಆರಂಭವಾಗಿರುವ ಕುಡ್ಸೆಂಪ್‌ನ ಎರಡನೇ ಹಂತದ ಕಾಮಗಾರಿಗಳನ್ನು ಸಹ ನಗರದಲ್ಲಿ ಕೈಗೆತ್ತಿಕೊಳ್ಳಲಾಗುವುದು. ಇದಕ್ಕೆ ಅಗತ್ಯವಾದ ಹಣಕಾಸಿನ ಮೂಲಗಳ ಬಗ್ಗೆ ಪರಿಶೀಲನೆ ನಡೆಯುತ್ತಿದೆ. ಒಟ್ಟು ಜನಸಂಖ್ಯೆಯಲ್ಲಿ ನಗರಗಳ ಪಾಲು ಇಂದು ಶೇ 37ಕ್ಕೆ ಹೆಚ್ಚಿದೆ. ಹೀಗಾಗಿ ನಗರಗಳ ಮೂಲಸೌಕರ್ಯ ಅಭಿವೃದ್ಧಿಗೂ ಹೆಚ್ಚಿನ ಗಮನ ಹರಿಸುವ ಅಗತ್ಯ ಇದೆ. ರಾಜ್ಯ ಸರ್ಕಾರ ತನ್ನ ಬಜೆಟ್‌ನಲ್ಲಿ ನಗರಾಭಿವೃದ್ಧಿಗೆ ಶೇ 20ರಷ್ಟು ಹಣವನ್ನು ಮೀಸಲಿರಿಸುವ ನಿರೀಕ್ಷೆ ಇದೆ' ಎಂದು ಸಚಿವ ಸೊರಕೆ ಹೇಳಿದರು.ತುಂಬೆ ಅಣೆಕಟ್ಟೆ: ಗುತ್ತಿಗೆ ಬದಲಾವಣೆ ಸಾಧ್ಯತೆ

ತುಂಬೆಯಲ್ಲಿ ನಿರ್ಮಿಸಲಾಗುತ್ತಿರುವ ಹೊಸ ಕಿಂಡಿ ಅಣೆಕಟ್ಟೆಯ ಕಾಮಗಾರಿ ಮುಂದಿನ ವರ್ಷವೂ ಪೂರ್ಣಗೊಳ್ಳುವ ಲಕ್ಷಣ ಕಾಣುತ್ತಿಲ್ಲ. ಹೀಗಾಗಿ ಕಾಮಗಾರಿಯ ಗುತ್ತಿಗೆಯನ್ನು ಬದಲಿಸುವ ಚಿಂತನೆ ನಡೆದಿದೆ. ನಗರ ನೀರು ಸರಬರಾಜು ಮಂಡಳಿಯ ಹಿರಿಯ ಅಧಿಕಾರಿಗಳು ಇದರ ಬಗ್ಗೆ ಪರಿಶೀಲನೆ ನಡೆಸಿ ಶೀಘ್ರ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಸಭೆಗೆ ತಿಳಿಸಲಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.