ಗುರುವಾರ , ಮಾರ್ಚ್ 4, 2021
29 °C
ಮತದಾರರ ನೋಂದಣಿಗೆ ವಿಶೇಷ ಶಿಬಿರ

ತೆರೆಯದ ಬಾಗಿಲು: ಸಿಬ್ಬಂದಿ, ಮತದಾರರ ಪರದಾಟ

ಪ್ರಜಾವಾಣಿ ವಾರ್ತೆ/ ಕೆ.ನರಸಿಂಹಮೂರ್ತಿ Updated:

ಅಕ್ಷರ ಗಾತ್ರ : | |

ತೆರೆಯದ ಬಾಗಿಲು: ಸಿಬ್ಬಂದಿ, ಮತದಾರರ ಪರದಾಟ

ಕೋಲಾರ: ಮಧ್ಯಾಹ್ನವಾದರೂ ಬಾರದ ಬೂತ್ ಮಟ್ಟದ ಅಧಿಕಾರಿಗಳು, ಅವರಿಗಾಗಿ ಕಾದು ಸುಸ್ತಾದ ಮತದಾರರು, ಬೂತ್‌ಗಳ ಬಾಗಿಲನ್ನು ಸಿಬ್ಬಂದಿ ತೆರೆಯದ ಹಿನ್ನೆಲೆಯಲ್ಲಿ ಯಾವ ಸೌಕರ್ಯವೂ ಇಲ್ಲದೆ ನಿಂತುಕೊಂಡೇ ಅರ್ಜಿಗಳನ್ನು ಸ್ವೀಕರಿಸಿದ ಅಧಿಕಾರಿಗಳು, ವರ್ಗಾವಣೆ ಅರ್ಜಿಗಳನ್ನು ಪಡೆಯಲು ನಿರಾಕರಣೆ, ಅರ್ಜಿ ಸಲ್ಲಿಸಿ ಒಂದು ವರ್ಷವಾದರೂ ಗುರುತಿನ ಚೀಟಿ ದೊರಕದೆ ಮತ್ತೆ ಅರ್ಜಿ ಸಲ್ಲಿಸಲು ಬಂದವರು...–ಲೋಕಸಭೆ ಚುನಾವಣೆ ಮತದಾರರ ಪಟ್ಟಿಯಲ್ಲಿ ನೋಂದಣಿಯಾಗದ ಹೆಸರನ್ನು ಸೇರ್ಪಡೆ ಮಾಡಲು ಅರ್ಜಿ ಸ್ವೀಕರಿಸುವುದು, ತಿದ್ದುಪಡಿ, ವರ್ಗಾವಣೆ ಅರ್ಜಿಗಳನ್ನು ಸ್ವೀಕರಿಸುವ ಸಲುವಾಗಿಯೇ ನಗರದ ಎಲ್ಲ ಬೂತ್‌ಗಳಲ್ಲಿ ನಡೆಯಬೇಕಿದ್ದ ವಿಶೇಷ ಶಿಬಿರ ಇಂಥ ಹಲವು ಅಸ್ತವ್ಯಸ್ತ ಸನ್ನಿವೇಶಗಳಿಂದ ಗಮನ ಸೆಳೆಯಿತು.ನಗರದ ಮೂರು ಬೂತ್‌ಗಳಿದ್ದ ಸರ್ಕಾರಿ ಮಹಿಳಾ ಐಟಿಐ ಸಂಜೆವರೆಗೂ ಬಾಗಿಲು ತೆರೆಯಲೇ ಇಲ್ಲ. ಹೀಗಾಗಿ ಮೂವರು ಬೂತ್ ಮಟ್ಟದ ಅಧಿಕಾರಿಗಳು ಹೊರಗೆ ನಿಂತೇ ಕಾರ್ಯನಿರ್ವಹಿಸಿದ ಘಟನೆಯೂ ನಡೆಯಿತು.ಚುನಾವಣೆ ಆಯೋಗ ಮಹತ್ವಾಕಾಂಕ್ಷೆಯಿಂದ ಹಮ್ಮಿ­ಕೊಂಡಿದ್ದ ‘ವಿಶೇಷ ಶಿಬಿರ’ ಹೇಗೆ ಕಾರ್ಯ ನಿರ್ವಹಿ­ಸುತ್ತದೆ ಎಂಬುದನ್ನು ಅರಿಯುವ ಸಲುವಾಗಿ ‘ಪ್ರಜಾವಾಣಿ’ ಭಾನು­ವಾರ ನಗರ ಸಂಚಾರ ಕೈಗೊಂಡ ಸಂದರ್ಭ ‘ಮತ­ದಾರ ಸ್ನೇಹಿ’ ವಾತಾವರಣ ಬಹುತೇಕ ಕಡೆ ಕಂಡು ಬರಲಿಲ್ಲ.ಕೆಲವು ಬೂತ್ ಮಟ್ಟದ ಅಧಿಕಾರಿಗಳು ಬೆಳಿಗ್ಗೆ 9.30­ರಿಂದಲೇ ಕಾರ್ಯನಿರ್ವಹಿಸಲಾರಂಭಿಸಿದ್ದರೆ, ಕೆಲವೆಡೆ ಸಮ­ಯಕ್ಕೆ ಸರಿಯಾಗಿ ಅಧಿಕಾರಿಗಳು ಬರಲಿಲ್ಲ. ಮತದಾರರು ಪದೇಪದೇ ದೂರವಾಣಿ ಕರೆ ಮಾಡುತ್ತಿದ್ದರೂ ಅಧಿಕಾರಿಗಳು ‘ಈಗ ಬಂದೆ, ಇದೋ ಬಂದೆ..’ ಎಂದು ಸಬೂಬು ಹೇಳುವಲ್ಲೇ ನಿರತರಾಗಿದ್ದರು. ‘ನಿಮ್ಮ ವಿಳಾಸ ನಮ್ಮ ಕಾರ್ಯ ವ್ಯಾಪ್ತಿ ಪ್ರದೇಶದ ಹೊರಗಿದೆ’ ಎಂಬ ಸಬೂಬು ಕೇಳಿದ ಕೆಲವರು ಅಧಿಕಾರಿಗಳೊಡನೆ ವಾಗ್ವಾದಕ್ಕೆ ಮುಂದಾದರು.ಮಹಿಳಾ ಐಟಿಐ: ನಗರದ ಮಹಿಳಾ ಐಟಿಐನಲ್ಲಿ 27ನೇ ವಾರ್ಡ್‌ಗೆ ಸೇರಿದ 169, 170, 171ನೇ ಬೂತ್‌ಗಳಿವೆ. ಅಲ್ಲಿ ಬೆಳಿಗ್ಗೆ 9.30ಗೆ ಬಂದಿದ್ದ 170ನೇ ಬೂತ್ ಅಧಿಕಾರಿ ಕೆ.ಎನ್.ಶ್ರೀನಿವಾಸಗೌಡ ಐಟಿಐ ಸಿಬ್ಬಂದಿಗೆ ಕರೆ ಮಾಡಿ­ದ್ದರೂ ಯಾರೂ ಬಂದಿರಲಿಲ್ಲ. ಹೀಗಾಗಿ ಆವರಣ­ದಲ್ಲಿ ನಿಂತೇ ಅವರು ಮತದಾರರ ಅರ್ಜಿಗಳನ್ನು ಸ್ವೀಕರಿಸುವ ಕೆಲಸದಲ್ಲಿ ನಿರತರಾಗಿದ್ದರು.ಹಗಲು ಪಾಳಿಯ ವಾಚ್‌ಮನ್‌ ಬರಲೇ ಇಲ್ಲ. ಸಂಜೆ ವೇಳೆಗೆ ರಾತ್ರಿ ಪಾಳಿಯ ವಾಚ್‌ಮನ್‌ ಬಂದರೂ ಶಿಬಿರದ ಅವಧಿ ಮುಗಿದುಹೋಗಿತ್ತು. 169, 171ನೇ ಬೂತ್‌ಗಳು ಇಲ್ಲೇ ಇದ್ದ ಪರಿಣಾಮವಾಗಿ ಮೂವರು ಅಧಿಕಾರಿಗಳು ಐಟಿಐ ಮುಖ್ಯದ್ವಾರದ ಮೆಟ್ಟಿಲುಗಳ ಮೇಲೆ ತಮ್ಮ ಸಾಮಗ್ರಿಗಳನ್ನು ಇಟ್ಟು ನಿಂತುಕೊಂಡೇ ಕಾರ್ಯನಿರ್ವಹಿಸಿ­ದರು. ಮತದಾರರ ಪಟ್ಟಿಯಲ್ಲಿ ಹೆಸರು ಖಚಿತಪಡಿಸಿ­ಕೊಳ್ಳಲು ಬಂದವರಿಗೂ ಮೆಟ್ಟಿಲುಗಳಲ್ಲೇ ಆಶ್ರಯ ಪಡೆ­ದರು.ಅಲೆದಾಟ: ಅದೇ ವಾರ್ಡ್‌ನ ಕಾರಂಜಿಕಟ್ಟೆ ನಿವಾಸಿ ಎಸ್.ಶ್ವೇತಾ ಮೊದಲ ಬಾರಿಗೆ ಮತದಾನ ಮಾಡಲು ಅರ್ಜಿ ಸಲ್ಲಿಸಲು ಒಂದು ವರ್ಷದಿಂದ ಅಲೆದಾಡಿದರೂ ಬೂತ್ ಮಟ್ಟದ ಅಧಿಕಾರಿಗಳ ಕಾರ್ಯವೈಖರಿ ಪರಿಣಾಮ­ವಾಗಿ ಸಾಧ್ಯವಾಗದೆ ಮತ್ತೆ ಅರ್ಜಿ ಸಲ್ಲಿಸಿದ್ದರು.ಕಾರಂಜಿಕಟ್ಟೆ 8ನೇ ಕ್ರಾಸ್‌ ನಿವಾಸಿಯಾದ ಅವರ ಅರ್ಜಿಯನ್ನು ಸ್ವೀಕರಿಸಲು ಬೂತ್‌ ಮಟ್ಟದ ಅಧಿಕಾರಿಗಳು ನಿರಾಕರಿಸುತ್ತಲೇ ಇದ್ದರು. ಅಧಿಕಾರಿ ಸಾಬುಯಲ್ಲಪ್ಪ ಎಳಸಂಗ ತಮ್ಮ ವ್ಯಾಪ್ತಿಯದಲ್ಲ ಎಂದು ಬೈರೆಡ್ಡಿ ಎಂಬ ಅಧಿಕಾರಿ ಬಳಿಗೆ ಕಳಿಸಿದ್ದರು. ಅವರು ಕೂಡ ಈ ವಿಳಾಸ ತಮ್ಮ ವ್ಯಾಪ್ತಿಯದಲ್ಲ ಎಂದು ಅರ್ಜಿ ನಿರಾಕರಿಸಿ­ದ್ದರು. ಅಲೆದಾಟ ಮಾಡಿ ಸಾಕಾಗಿದ್ದ ಈ ಯುವತಿ ತನ್ನ ತಂದೆ ಶ್ರೀನಿವಾಸ್ ಅವರೊಡನೆ ಮತ್ತೆ ಅರ್ಜಿ ಸಲ್ಲಿಸಲು ಬಂದಾಗಲೂ ಅದೇ ಸಮಸ್ಯೆ ಎದುರಾಗಿತ್ತು. ನಂತರ ಎಳಸಂಗ ಅವರಿಗೆ ದೂರವಾಣಿ ಕರೆ ಮಾಡಿದ ಯುವತಿಯ ತಾಯಿ ಅರ್ಜಿ ಸ್ವೀಕರಿಸದೇ ಹೋದರೆ ಜಿಲ್ಲಾಧಿಕಾರಿಗೆ ದೂರು ಸಲ್ಲಿಸುವುದಾಗಿ ಹೇಳಿದ ಬಳಿಕವಷ್ಟೇ ಅರ್ಜಿ ಸ್ವೀಕರಿಸಿದರು!ಗುರುತಿನ ಚೀಟಿ ಬರಲೇ ಇಲ್ಲ: ಕಳೆದ ವರ್ಷ ನಡೆದ ವಿಧಾನಸಭೆ ಚುನಾವಣೆಗಿಂತಲೂ ಮುಂಚೆಯೇ ಅರ್ಜಿ ಸಲ್ಲಿಸಿದ್ದೆ. ನನ್ನ ಪತಿಯ ಗುರುತಿನ ಚೀಟಿ ದೊರಕಿತ್ತು. ಆದರೆ ನನ್ನ ಗುರುತಿನ ಚೀಟಿ ದೊರಕಲೇ ಇಲ್ಲ. ಹೀಗಾಗಿ ಮತ್ತೊಮ್ಮೆ ಅರ್ಜಿ ಸಲ್ಲಿಸಲು ಬಂದಿರುವೆ ಎಂದು ವೈದ್ಯೆ ಆಶಾ ತಿಳಿಸಿದರು. ಆಗ ಅಲ್ಲಿಗೆ ಬಂದ ಅಧಿಕಾರಿ, ಗುರುತಿನ ಚೀಟಿ ಬಂದಿದೆ, ನಿಮಗೆ ತಲುಪಿಸಲಾಗುವುದು ಎಂದು ತಿಳಿಸಿದರು! ಅವರ ಮಾತಿಗೆ ಅಚ್ಚರಿ ಪಡಬೇಕೋ ಸಂತಸ ಪಡಬೇಕೋ ತಿಳಿಯದೇ ವೈದ್ಯೆ ಸ್ಥಳದಿಂದ ನಿರ್ಗಮಿಸಿದರು.ವರ್ಗಾವಣೆ ಕೋರಿದ ಅರ್ಜಿ­ಗಳನ್ನು ಸ್ವೀಕರಿಸಲು ಅಧಿಕಾರಿಗಳು ನಿರಕಾರಿಸಿದ ಘಟನೆಯೂ ನಡೆ­ಯಿತು. ಶಿಡ್ಲಘಟ್ಟದಿಂದ ಕೋಲಾರಕ್ಕೆ ತಮ್ಮ ಹೆಸರನ್ನು ವರ್ಗಾವಣೆ ಮಾಡಿಕೊಡಿ ಎಂದು ಕೋರಿದ ಹಲವರಿಗೆ, ಅಲ್ಲಿನ ಅಧಿಕಾರಿಯಿಂದ ದೃಢೀಕರಿಸಿದ ಪತ್ರ ತಂದರೆ ಮಾತ್ರ ಅರ್ಜಿ ಸ್ವೀಕರಿಲಾಗುವುದು ಎಂದು ಹೇಳಿದರು. ಪರಿಣಾಮವಾಗಿ, ವರ್ಗಾ­­ವಣೆ ಆಸೆ ಹೊತ್ತು ಬಂದವರು ವಾಪಸಾದರು.ಬಾರದ ಅಧಿಕಾರಿ: ನಗರದ ಕಠಾರಿಪಾಳ್ಯದ ಸರ್ಕಾರಿ ಶಾಲೆಯ ಬೂತ್‌ ಮುಂದೆ ನಿಂತ ಸುರೇಂದ್ರ­ಮೂರ್ತಿ ಅಧಿಕಾರಿಯೊಬ್ಬರಿಗೆ ದೂರ­ವಾಣಿ ಕರೆ ಮಾಡುತ್ತಲೇ ಇದ್ದರು. ಆದರೆ ಅಧಿಕಾರಿ ಸಬೂಬು ಹೇಳು­ತ್ತಲೇ ಇದ್ದರು. ಅರ್ಜಿ ಎಲ್ಲಿ ಸಲ್ಲಿಸಬೇಕು ಎಂಬ ಗೊಂದಲ ಬಗೆ­ಹರಿಯುವ ಹೊತ್ತಿಗೆ ಬಹಳ ಸಮಯ­­ವಾಗಿತ್ತು. ಮಹಿಳಾ ಸಮಾಜ ಶಾಲೆ ಬೂತ್‌ನಲ್ಲಿ ಅರ್ಜಿ ಸಲ್ಲಿಸಿರಿ ಎಂಬ ಸಲಹೆ ಮೇರೆಗೆ ಅಲ್ಲಿಗೆ ಹೋದ ಸುರೇಂದ್ರಮೂರ್ತಿ ಅವರನ್ನು ಮುಚ್ಚಿದ ಬಾಗಿಲು ಸ್ವಾಗತಿ­ಸಿತ್ತು. ಪ್ರಯತ್ನಪಟ್ಟು ಬೂತ್‌ನ ಮಹಿಳಾ ಅಧಿಕಾರಿಯ ದೂರವಾಣಿ ಸಂಖ್ಯೆಯನ್ನು ಪತ್ತೆಹಚ್ಚಿ ಅವರು ಕರೆ ಮಾಡಿದರು. ಇದೋ ಬಂದೆ, ಈಗ ಬಂದೆ ಎಂದು ಆ ಕಡೆಯಿಂದ ಅಧಿ­ಕಾರಿ ಹೇಳುತ್ತಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.