ಶನಿವಾರ, ಜೂನ್ 19, 2021
23 °C

ತ್ಯಾಜ್ಯಮಯವಾದ ಸೋಮವಾರಪೇಟೆ

ಪ್ರಜಾವಾಣಿ ವಿಶೇಷ ವರದಿ/ ಡಿ.ಪಿ. ಲೋಕೇಶ್‌ Updated:

ಅಕ್ಷರ ಗಾತ್ರ : | |

ಸೋಮವಾರಪೇಟೆ: ಪಟ್ಟಣ ಪ್ರದೇಶಗಳ ಕಸ ವಿಲೇವಾರಿಗಾಗಿ ಸರ್ಕಾರ ಲಕ್ಷಾಂತರ ರೂಪಾಯಿ ವೆಚ್ಚ ಮಾಡುತ್ತಿದೆ. ಆದರೆ, ಸೋಮವಾರಪೇಟೆ ಪಟ್ಟಣದಲ್ಲಿ ಈ ಯೋಜನೆ ಸಂಪೂರ್ಣ ವಿಫಲವಾಗಿದ್ದು, ನಗರದೆಲ್ಲೆಡೆ ಪ್ಲಾಸ್ಟಿಕ್ ಹಾಗೂ ಇನ್ನಿತರ ತ್ಯಾಜ್ಯ ರಾರಾಜಿಸುತ್ತಿದೆ. ಇದರಿಂದಾಗಿ ಇಡೀ ಪಟ್ಟಣದಲ್ಲಿ ಮಲಿನ ವಾತಾವರಣ ಉಂಟಾಗಿದೆ.ಪ್ಲಾಸ್ಟಿಕ್ ಉಪಯೋಗವನ್ನು ಕಳೆದ 3 ವರ್ಷಗಳ ಹಿಂದೆಯೇ ನಿಷೇಧಿಸಿದ್ದರೂ, ನಗರದೆಲ್ಲೆಡೆ ಪ್ಲಾಸ್ಟಿಕ್‌ ತ್ಯಾಜ್ಯ ಕಂಡುಬರುತ್ತಿದೆ. ಇಲ್ಲಿನ ಅಧಿಕಾರಿಗಳು ಶುಚಿತ್ವಕ್ಕೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ನಡೆಸಿ ಕೈ ಕಟ್ಟಿ ಕುಳಿತಿದ್ದಾರೆ. ಆದರೆ, ಇಂದು ಪಟ್ಟಣದ ಹೆಚ್ಚಿನ ವರ್ತಕರು ಪ್ಲಾಸ್ಟಿಕನ್ನು ಎಗ್ಗಿಲ್ಲದೆ ಬಳಸುತ್ತಿದ್ದಾರೆ. ಇದನ್ನು ಪಟ್ಟಣ ಪಂಚಾಯಿತಿ  ಆಡಳಿತ ಮಂಡಳಿಯಾಗಲಿ, ಅಧಿಕಾರಿಗಳಾಗಲಿ ಪ್ರಶ್ನಿಸುವ ಗೋಜಿಗೆ ಹೋಗುತ್ತಿಲ್ಲ. ಇದರಿಂದಾಗಿ ಪಟ್ಟಣ ಪ್ಲಾಸ್ಟಿಕ್‌ಮಯವಾಗಿದೆ.ಇಲ್ಲಿನ ಸಿ.ಕೆ. ಸುಬ್ಬಯ್ಯ ರಸ್ತೆಯಲ್ಲಿ ಖಾಲಿ ಜಾಗದಲ್ಲಿ ಕಾಡು ಬೆಳೆದಿದ್ದು, ಅಲ್ಲಿಯೇ ವರ್ತಕರು ಹಾಗೂ ಸಾರ್ವಜನಿಕರು ಕಸ, ಮಾಂಸ ಮತ್ತು ತರಕಾರಿ ಅಂಗಡಿಯ ತ್ಯಾಜ್ಯಗಳು, ಕ್ಷೌರದಂಗಡಿಯ ತ್ಯಾಜ್ಯಗಳು ಪ್ಲಾಸ್ಟಿಕ್ ತಟ್ಟೆ, ಲೋಟಗಳನ್ನು ಹಾಕುತ್ತಿದ್ದಾರೆ. ಇದಕ್ಕೆ ಕೆಲವು ಬಾರಿ ಬೆಂಕಿ ಕೊಡುವುದರಿಂದ ಪರಿಸರ ಹಾಳಾಗುವುದರೊಂದಿಗೆ ಇದರ ಸಮೀಪವೇ ನಿಲ್ಲಿಸಿರುವ ವಾಹನಗಳಿಗೆ ಅಪಾಯ ಎದುರಾಗಿದೆ. ಈ ತ್ಯಾಜ್ಯ ಸಂಗ್ರಹದಿಂದ ನೊಣಗಳು ಕ್ರಿಮಿಕೀಟಗಳು ಹೆಚ್ಚಾಗಿ ಆವರಿಸಿಕೊಂಡು ಸಾಂಕ್ರಾಮಿಕ ರೋಗಗಳನ್ನು ಹರಡುವ ಭೀತಿಯಲ್ಲಿವೆ. ಇಡೀ ಪರಿಸರ ದುರ್ಗಂಧಮಯವಾಗಿದ್ದು, ಜನರು ಮೂಗು ಮುಚ್ಚಿಕೊಂಡು ತಿರುಗಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ಬಗ್ಗೆ ಅಕ್ಕಪಕ್ಕದ ನಿವಾಸಿಗಳು, ವರ್ತಕರು ಹಲವು ಬಾರಿ ಪಟ್ಟಣ ಪಂಚಾಯಿತಿಗೆ ದೂರು ನೀಡಿದ್ದರೂ, ಪಂಚಾಯಿತಿ ಆಡಳಿತ ಸ್ಪಂದಿಸಿಲ್ಲ.ಪಟ್ಟಣದ ಖಾಸಗಿ ಬಸ್‌ ನಿಲ್ದಾಣದ ಪಕ್ಕ, ಸುರಭಿ ಹೋಟೆಲ್ ಬಳಿ ಕಸದ ರಾಶಿ ತುಂಬಿ ತುಳುಕುತ್ತಿದೆ. ಈ ಹಿಂದೆ ಕಸವನ್ನು ಸಂಗ್ರಹಿಸಲು ಅಲ್ಲಲ್ಲಿ ಕಸದ ತೊಟ್ಟಿಗಳನ್ನು ಇಡಲಾಗಿತ್ತು. ಆದರೆ, ಪಟ್ಟಣವನ್ನು ತೊಟ್ಟಿಮುಕ್ತ ನಗರವನ್ನಾಗಿ ಮಾಡಲು ಪಂಚಾಯಿತಿ ಮುಂದಾಗಿ ಇರುವ ತೊಟ್ಟಿಯನ್ನು ತೆಗೆಸಿದ ನಂತರ ಇನ್ನಷ್ಟು ಕಸ ವಿಲೇವಾರಿಯ ಸಮಸ್ಯೆ ಎದುರಾಗಿದೆ.ಪೌರ ಕಾರ್ಮಿಕರ ಸಂಖ್ಯೆ ಕಡಿಮೆ

ಪಟ್ಟಣ ಪಂಚಾಯಿತಿಯಲ್ಲಿ ಪೌರ ಕಾರ್ಮಿಕರ ಸಂಖ್ಯೆ ಕಡಿಮೆ ಇದ್ದು, ಜಿಲ್ಲಾಧಿಕಾರಿಗಳ ಅನುಮತಿ ಪಡೆದು ಗುತ್ತಿಗೆ ಆದಾರದ ಮೇಲೆ ಕಾರ್ಮಿಕರನ್ನು ನೇಮಿಸಿಕೊಳ್ಳ ಲಾಗುವುದು. ಇರುವ ಕಾರ್ಮಿಕರನ್ನು ಬಳಸಿಕೊಂಡು ಪಟ್ಟಣದ ಶುಚಿತ್ವಕ್ಕೆ ಗಮನ ಹರಿಸಲಾಗುವುದು.

–ರಂಜನ್, ಮುಖ್ಯಾಧಿಕಾರಿ, ಪ.ಪಂ

ತಕ್ಷಣ ಕ್ರಮ ಕೈಗೊಳ್ಳಿ

ಪಟ್ಟಣ ಪಂಚಾಯಿತಿಗೆ ಹಲವು ಬಾರಿ ಕಸ ತೆಗೆಸುವಂತೆ ಮನವಿ ಮಾಡಿದ್ದೇವೆ. ಕಸದ ರಾಶಿಯಿಂದ ಸುತ್ತಲಿನ ಪರಿಸರ ದುರ್ಗಂಧಮಯ ವಾಗಿದೆ. ವ್ಯಾಪಾರ ನಡೆಸಲು ಸಾಧ್ಯ ವಾಗುತ್ತಿಲ್ಲ. ಅಧಿಕಾರಿಗಳು ಕಸ ವಿಲೇವಾರಿ ಮಾಡುವುದರೊಂದಿಗೆ ಇಲ್ಲಿ ಕಸ ಸುರಿಯದಂತೆ ಕ್ರಮ ಕೈಗೊಳ್ಳಬೇಕು.

–ಬಿ.ಜಿ. ಪೂವಮ್ಮ, ವರ್ತಕಿ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.