ದಂಡನಾಯಕಿ ಪ್ರಸಂಗ!

7

ದಂಡನಾಯಕಿ ಪ್ರಸಂಗ!

Published:
Updated:
ದಂಡನಾಯಕಿ ಪ್ರಸಂಗ!

‘ದಂಡಂ ದಶಗುಣಂ’ ಚಿತ್ರದ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮ. ಇಳಿಸಂಜೆಯಲ್ಲೊಂದು ನವಿರು ಕಾರ್ಯಕ್ರಮ ಏರ್ಪಡಿಸಿದ್ದ ನಿರ್ಮಾಪಕ ಎ.ಗಣೇಶ್ ಮಾತಿನಲ್ಲಿ ಮಾತ್ರ ದಂಡದ ಬಿರುಸಿತ್ತು. ಅವರು ಸಿಟ್ಟಿಗೆದ್ದಿದ್ದರು. ಅದು, ನಿರ್ಮಾಪಕನ ಸಿಟ್ಟು!ವಿಷಯ ಇಷ್ಟು:

ಚಿತ್ರದ ನಾಯಕಿ ರಮ್ಯಾ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮಕ್ಕೆ ಗೈರುಹಾಜರಾಗಿದ್ದರು. ರಮ್ಯಾ ಅವರು ಆಗ ಬರುತ್ತಾರೆ ಈಗ ಬರುತ್ತಾರೆ ಎಂದು ಗಣೇಶ್ ಪತ್ರಕರ್ತರಿಗೆ ಹೇಳುತ್ತಲೇ ಇದ್ದರು. ಹೊತ್ತು ಮೀರುತ್ತಿದ್ದರೂ ನಾಯಕಿಯ ಪತ್ತೆಯೇ ಇಲ್ಲ. ಗಣೇಶ್ ರಮ್ಯಾ ಅವರಿಗೆ ಫೋನ್ ಮಾಡಿದಾಗ ಅತ್ತ ಕಡೆಯಿಂದ ಬಂದುದು ನಕಾರಾತ್ಮಕ ಉತ್ತರ. ನಿರ್ಮಾಪಕರು ಕೆರಳದೆ ಇನ್ನೇನು ಮಾಡಿಯಾರು?‘ರಮ್ಯಾ ಅವರ ಸಂಭಾವನೆಯನ್ನು ಪೂರ್ತಿ ಚುಕ್ತಾ ಮಾಡಿದ್ದೇವೆ. ಆದರೂ ಅವರು ಕಾರ್ಯಕ್ರಮಕ್ಕೆ ಬಂದಿಲ್ಲ. ಸಿನಿಮಾಕ್ಕೆ ಪ್ರಚಾರ ನೀಡುವ ಬಗ್ಗೆ ಅವರಿಗೆ ಆಸಕ್ತಿಯೇ ಇದ್ದಂತಿಲ್ಲ’ ಎಂದರು ಗಣೇಶ್- ಸಿಟ್ಟಿನಿಂದ, ವಿಷಾದದಿಂದ. ನಿರ್ಮಾಪಕರ ಸಿಟ್ಟು, ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಸಂತಕುಮಾರ ಪಾಟೀಲರಿಗೂ ಇಳಿಕೆ ಕ್ರಮದಲ್ಲಿ ವರ್ಗವಾಯಿತು.‘ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ನಾಯಕ - ನಾಯಕಿ ಭಾಗವಹಿಸಬೇಕೆಂದು ನಿರ್ಮಾಪಕರು ಬಯಸುವುದು ಸಹಜ. ಇದರಿಂದ ಸಿನಿಮಾದ ಪಬ್ಲಿಸಿಟಿಗೆ ನೆರವಾಗುತ್ತದೆ’ ಎಂದ ಬಸಂತರು, ಪರೋಕ್ಷವಾಗಿ ರಮ್ಯಾ ಅವರನ್ನು ತರಾಟೆಗೆ ತೆಗೆದುಕೊಂಡರು. ‘ಇನ್ನುಮುಂದೆ, ಕಲಾವಿದರು ಸಿನಿಮಾಗಳ ಪ್ರಚಾರ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ನೀತಿಸಂಹಿತೆ ರೂಪಿಸುವ ನಿಟ್ಟಿನಲ್ಲಿ ಯೋಚಿಸಲಾಗುವುದು’ ಎಂದೂ ಅವರು ಹೇಳಿದರು.ನಾಯಕಿಯ ಗೈರುಹಾಜರಿ ಚಿತ್ರದ ನಿರ್ದೇಶಕ ಮಾದೇಶ ಅವರ ಮೊಗದಲ್ಲೂ ಬೇಸರದ ಕಳೆ ಮೂಡಿಸಿತ್ತು. ಸಿನಿಮಾ ಚೆನ್ನಾಗಿ ಬಂದಿದೆ ಎಂದು ಹೇಳಿದರಾದರೂ, ಅವರು ಮಾತನಾಡುವ ಮೂಡಿನಲ್ಲಿ ಇದ್ದಂತಿರಲಿಲ್ಲ. ನಾಯಕಿ ಜೊತೆಯಲ್ಲಿ ನಿಲ್ಲದಿದ್ದರೇನು- ‘ದಂಡಂ ದಶಗುಣಂ’ನ ನಾಯಕ ಚಿರಂಜೀವಿ ಸರ್ಜಾ ಏಕಾಂಗಿವೀರನಂತೆ ಕಾರ್ಯಕ್ರಮದಲ್ಲಿ ಕಂಗೊಳಿಸುತ್ತಿದ್ದರು. ‘ಈ ಚಿತ್ರದಲ್ಲಿ ನಟಿಸಿದ್ದು ಅವಿಸ್ಮರಣೀಯ ಅನುಭವ.ಈ ಚಿತ್ರದ ಮೂಲವಾದ ತಮಿಳಿನ ‘ಕಾಕ್ಕ ಕಾಕ್ಕ’ ಅಲ್ಲಿ ಟ್ರೆಂಡ್‌ಸೆಟ್ಟರ್ ಎನ್ನಿಸಿಕೊಂಡಿತ್ತು. ಕನ್ನಡದಲ್ಲಿಯೂ ಅಷ್ಟೇ ಚೆನ್ನಾಗಿ ರೂಪಿಸಲು ಪ್ರಯತ್ನಿಸಿದ್ದೇವೆ’ ಎಂದರು ಚಿರಂಜೀವಿ. ಅವರ ಮಾತುಗಳಲ್ಲಿ ಸಿನಿಮಾ ಹಾಗೂ ತಮ್ಮ ಪಾತ್ರದ ಬಗ್ಗೆ ಖುಷಿಯಿತ್ತು. ನಿರ್ಮಾಪಕರಾದ ಬಿ.ಎನ್.ಗಂಗಾಧರ್, ಆರ್.ಎಸ್.ಗೌಡ, ದಿನೇಶ್ ಗಾಂಧಿ, ಉಮೇಶ ಬಣಕಾರ್, ನಾಯಕನಟರಾದ ರಮೇಶ್ ಅರವಿಂದ್, ಆದಿತ್ಯ, ನಟಿ ಪ್ರಿಯಾ ಹಾಸನ್, ಸಂಗೀತ ನಿರ್ದೇಶಕ ಹರಿಕೃಷ್ಣ, ಛಾಯಾಗ್ರಾಹಕ ಮನೋಹರ್ ಸೇರಿದಂತೆ ಹಲವು ಸಿನಿಮಾ ಮಂದಿ ‘ದಂಡಂ ದಶಗುಣಂ’ ಚಿತ್ರದ ಧ್ವನಿಸುರುಳಿ ಬಿಡುಗಡೆಗೆ ಸಾಕ್ಷಿಯಾಗಿದ್ದರು.ಇದೇ ಸಂದರ್ಭದಲ್ಲಿ ಚಿತ್ರದ ಗೀತೆಗಳು ಹಾಗೂ ಪ್ರೋಮೊಗಳನ್ನು ಪ್ರದರ್ಶಿಸಲಾಯಿತು. ಕಾರ್ಯಕ್ರಮಕ್ಕೆ ಬಾರದ ರಮ್ಯಾ ತೆರೆಯ ಮೇಲೆ ನಗುನಗುತ್ತಿದ್ದರು, ಮುದ್ದಾಗಿ ಕಾಣುತ್ತಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry