ಮಂಗಳವಾರ, ಜೂನ್ 22, 2021
23 °C

ದ.ಕ: ಸ್ತ್ರೀ ಅನುಪಾತ ಕುಸಿತ!:1 ಸಾವಿರ ಬಾಲಕರಿಗೆ 946 ಬಾಲೆಯರು

ಪ್ರಜಾವಾಣಿ ವಾರ್ತೆ/ನೇಸರ ಕಾಡನಕುಪ್ಪೆ Updated:

ಅಕ್ಷರ ಗಾತ್ರ : | |

ಮಂಗಳೂರು: ಪುರುಷ-ಸ್ತ್ರೀ ಜನಸಂಖ್ಯೆ ಅನುಪಾತದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸ್ತ್ರೀಯರ ಸಂಖ್ಯೆಯೇ ಹೆಚ್ಚು ಎಂದು ಹಿಂದಿನಿಂದಲೂ ಜನಗಣತಿ ಮಾಹಿತಿ ನೀಡುತ್ತಿದೆ. ಆದರೆ ವಾಸ್ತವದಲ್ಲಿ ಸ್ತ್ರೀಸಂಖ್ಯೆ ಜಿಲ್ಲೆಯಲ್ಲಿ ಪ್ರತಿವರ್ಷ ಕೆಳಮುಖವಾಗಿದೆ. ಸದ್ಯ ಜಿಲ್ಲೆಯಲ್ಲಿ 6 ವರ್ಷದೊಳಗಿನ ಹೆಣ್ಣು ಮಕ್ಕಳ ಸಂಖ್ಯೆ 1 ಸಾವಿರ ಗಂಡು ಮಕ್ಕಳಿಗೆ 946 ಪ್ರಮಾಣಕ್ಕೆ ಇಳಿದು ಕಳವಳ ಉಂಟು ಮಾಡಿದೆ.2001ರ ಗಣತಿ ಪ್ರಕಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1 ಸಾವಿರ ಪುರುಷರಿಗೆ 1022 ಮಹಿಳೆಯರಿದ್ದು ಉತ್ತಮ ಅನುಪಾತ ಎಂಬ ಹೆಗ್ಗಳಿಗೆ ಪಾತ್ರವಾಗಿತ್ತು. ಜಿಲ್ಲೆಯಲ್ಲಿ ಸಾಕ್ಷರತೆ ಪ್ರಮಾಣ ಬಹಳ ಉತ್ತಮವಾಗಿದೆ. ತಾಯಿ ಮತ್ತು ಮಗುವಿನ ಆರೋಗ್ಯದ ಕಡೆಗೂ ಈ ಭಾಗದಲ್ಲಿ ಹೆಚ್ಚಿನ ಗಮನ ನೀಡಲಾಗುತ್ತಿದೆ.

 

ಸರ್ಕಾರದಿಂದ ಆಸ್ಪತ್ರೆಗಳ ನಿರ್ವಹಣೆಯೂ ಉತ್ತಮವಾಗಿದೆ. ಇದೆಲ್ಲದರ ಪರಿಣಾಮವಾಗಿ ಪ್ರಸವಪೂರ್ವ ಶಿಶು ಮರಣ ಪ್ರಮಾಣ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತ್ಯಂತ ಕಡಿಮೆ ಇದೆ. ಹಾಗೆಯೇ ಉತ್ತರ ಭಾರತದಲ್ಲಿರುವಂತೆ ಗಂಡು ಮಕ್ಕಳನ್ನು ಮಾತ್ರ ಪಡೆಯಬೇಕೆಂಬ ಹಂಬಲ, ಅದಕ್ಕಾಗಿ ಶಿಶು ಹತ್ಯೆ ಇಲ್ಲಿ ಇಲ್ಲವೇ ಇಲ್ಲ ಎಂದೇ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮೂಲಗಳು ಹೇಳುತ್ತಿವೆ.ಆದರೆ ಇತ್ತೀಚೆಗೆ ನಡೆದ 2011ರ ಜನಗಣತಿ ಕೆಲವು ಆತಂಕಕಾರಿ ವಿಚಾರಗಳನ್ನು ಬಯಲು ಮಾಡಿದೆ. ಸದ್ಯ ಜಿಲ್ಲೆಯಲ್ಲಿ ಪುರುಷ-ಸ್ತ್ರೀ ಅನುಪಾತ 1022ರಿಂದ 1018ಕ್ಕೆ ಕುಸಿದಿದೆ.`ಪ್ರಜಾವಾಣಿ~ಯೊಂದಿಗೆ ಸೋಮವಾರ ಮಾತನಾಡಿದ ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿ ಡಾ. ಎಂ.ರುಕ್ಮಿಣಿ, `ಕಳೆದ 10 ವರ್ಷಗಳಲ್ಲಿ ಈ ಅನುಪಾತದಲ್ಲಿ ಸಾವಿರಕ್ಕೆ 4 ಮಹಿಳೆಯರ ಸಂಖ್ಯೆಯಷ್ಟೇ ಕಡಿಮೆಯಾಗಿದೆ ಎಂದು ನಿರಾಳವಾಗಿ ಕೂರಲಾಗದು.ಏಕೆಂದರೆ ಜನಸಂಖ್ಯಾ ಅನುಪಾತದಲ್ಲಿ ಅದು ಮಹತ್ವದ ಪಾತ್ರ ವಹಿಸುತ್ತದೆ. ಅಲ್ಲದೇ ಜನಗಣತಿ ವರದಿಯಲ್ಲಿ ಮುಖ್ಯವಾಗಿ ಪುರುಷ-ಮಹಿಳೆಯರ ಅನುಪಾತವನ್ನಷ್ಟೇ ನೀಡಲಾಗುತ್ತದೆ. ವಾಸ್ತವದಲ್ಲಿ ಲೆಕ್ಕಕ್ಕೆ ಬರುವುದು 6 ವರ್ಷದೊಳಗಿನ ಮಕ್ಕಳ ಅನುಪಾತ~ ಎಂದು ಗಮನ ಸೆಳೆದರು.946ಕ್ಕೆ ಕುಸಿತ!: ಜಿಲ್ಲೆಯಲ್ಲಿ 6 ವರ್ಷದೊಳಗಿನ ಗಂಡು-ಹೆಣ್ಣು ಮಕ್ಕಳ ಅನುಪಾತ ಭಾರಿ ಪ್ರಮಾಣದಲ್ಲಿಯೇ ಕುಸಿದಿದೆ. 1 ಸಾವಿರ ಗಂಡು ಮಕ್ಕಳಿಗೆ ಕೇವಲ 946 ಹೆಣ್ಣು ಮಕ್ಕಳು ಇರುವುದು ಇತ್ತೀಚಿನ ಗಣತಿಯಲ್ಲಿ ದಾಖಲಾಗಿದೆ. ಇದು ಕೇವಲ ಸಂಖ್ಯೆ ಕುಸಿತ ತೋರಿಸುವುದು ಮಾತ್ರವೇ ಅಲ್ಲದೇ ಹಲವು ಅನುಮಾನ, ಆತಂಕವನ್ನೂ ಹುಟ್ಟುಹಾಕಿದೆ.

 

50ಕ್ಕೂ ಹೆಚ್ಚು ಸಂಖ್ಯೆ ಕುಸಿದಲ್ಲಿ ಅದಕ್ಕೆ ಕಾರಣಗಳೇನು ಎಂಬುದೇ ಮುಖ್ಯ ಚಿಂತೆಯಾಗಿದೆ. ಆರೋಗ್ಯ ಇಲಾಖೆ ಸಮೀಕ್ಷೆ ಪ್ರಕಾರ, ಜಿಲ್ಲೆಯಲ್ಲಿ ಮಹಿಳಾ ಜನಸಂಖ್ಯೆ ಕುಸಿಯಲು ಸಾಧ್ಯವೇ ಇಲ್ಲ. ಅತ್ಯುತ್ತಮ ವೈದ್ಯಕೀಯ ಸೌಲಭ್ಯವಿದೆ. ಮೇಲಾಗಿ ಜನರಲ್ಲೂ ಈ ವಿಚಾರದಲ್ಲಿ ಜಾಗೃತಿ ಇದೆ ಎಂದರು.ಪುತ್ರ ವ್ಯಾಮೋಹ: `ಆದರೆ ಗಂಡು ಮಕ್ಕಳು ಬೇಕು ಎಂಬ ಹಂಬಲ ಜನರಲ್ಲಿ ಹೆಚ್ಚಿರುವುದು ನಿಜ. ಅದರಿಂದಾಗಿ ಮೊದಲ ಮಗು ಗಂಡಾದಲ್ಲಿ, ಎರಡನೇ ಮಗು ಬೇಡ ಎಂದು ನಿರ್ಧರಿಸುವವರೇ ಹೆಚ್ಚಾಗಿದ್ದಾರೆ. ಇದು ಹೆಣ್ಣು ಮಕ್ಕಳ ಜನನ ಪ್ರಮಾಣ ಕುಸಿಯಲು ಮುಖ್ಯ ಕಾರಣ. ಜಿಲ್ಲಾ ಆಸ್ಪತ್ರೆ ಹಾಗೂ ಇತರೆ ಆಸ್ಪತ್ರೆಗಳ ಜನನ ದಾಖಲೆಗಳನ್ನು ಪರಿಶೀಲಿಸಿದಾಗ ಈ ವಾದಕ್ಕೆ ತಾಳೆಯಾಗಿರುವುದು ಕಂಡು ಬಂದಿದೆ~ ಎಂದು ಡಾ. ರುಕ್ಮಿಣಿ ಹೇಳಿದರು.ಉತ್ತರ ಭಾರತದ ಹಲವೆಡೆ ಶಿಶು ಹತ್ಯೆಯ ಸಾಕಷ್ಟು ಪ್ರಕರಣಗಳು ದಾಖಲಾಗಿವೆ. ಅಲ್ಲದೆ ಇಲ್ಲಿ ಭಾರಿ ಜಾಗೃತಿ ಕಾರ್ಯಕ್ರಮಗಳ ನಂತರವೂ ಈ ಸಮಸ್ಯೆ ಇನ್ನೂ ಜೀವಂತವಾಗಿದೆ. ಇದು ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಪ್ರಾರಂಭವಾಗಿದೆಯೇ ಎಂಬ ಶಂಕೆ ಈಗ ಮೂಡಿದೆ.

 

ಹಾಗಾಗಿ ಆರೋಗ್ಯ ಇಲಾಖೆ ಸುಮ್ಮನೆ ಕುಳಿತಿಲ್ಲ. ಇಲಾಖೆ ಆರೋಗ್ಯ ತಂಡಗಳನ್ನು ರಚಿಸಿ ಪ್ರತಿ ಆಸ್ಪತ್ರೆಯಲ್ಲೂ ಪರಿಶೀಲನೆ ನಡೆಸುತ್ತಿದೆ. ಮಾಸಿಕ ಸಭೆಯನ್ನೂ ನಡೆಸಿ ಶಿಶು ಹತ್ಯೆ ಪ್ರಕರಣಗಳನ್ನು ಪತ್ತೆ ಹಚ್ಚುವ ಬಗ್ಗೆ ಕಾರ್ಯತಂತ್ರ ರೂಪಿಸಿದೆ.ರಾಜ್ಯಕ್ಕೆ ಮೊದಲು: ಇದೆಲ್ಲದರ ನಡುವೆಯೂ ಪುರುಷ-ಸ್ತ್ರೀ ಅನುಪಾತದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ರಾಜ್ಯದಲ್ಲಿಯೇ ದ್ವಿತೀಯ ಸ್ಥಾನದಲ್ಲಿದೆ. ಪ್ರಥಮ ಸ್ಥಾನದಲ್ಲಿ ಉಡುಪಿ ಇದೆ. ಶ್ರೀಕೃಷ್ಣನ ನಾಡಿನಲ್ಲಿ 1 ಸಾವಿರ ಪುರುಷರಿಗೆ 1098 ಮಹಿಳೆಯರಿದ್ದು, ರಾಜಧಾನಿ ಬೆಂಗಳೂರಿನಲ್ಲಿ 1 ಸಾವಿರ ಪುರುಷರಿಗೆ ಕೇವಲ 908 ಮಹಿಳೆಯರ ಸಂಖ್ಯೆ ದಾಖಲಾಗಿದೆ.

 

ಒಟ್ಟಾರೆ ರಾಜ್ಯದ ಅನುಪಾತ 1 ಸಾವಿರ ಪುರುಷರಿಗೆ 968 ಮಹಿಳೆಯರು ಮಾತ್ರ ಇದೆ.

ಪ್ರಥಮ ಸ್ಥಾನದಲ್ಲಿರುವ ಉಡುಪಿ ಜಿಲ್ಲೆಯಲ್ಲೂ ಕಳೆದ 10 ವರ್ಷಗಳಲ್ಲಿ ಮಹಿಳೆಯರ ಸಂಖ್ಯೆ 37ರಷ್ಟು ಕಡಿಮೆಯಾಗಿರುವುದು ಹೊಸ ಆತಂಕ ಹುಟ್ಟುಹಾಕಿದೆ.ಮುಖ್ಯಾಂಶಗಳು* ಪುರುಷ-ಸ್ತ್ರೀ ಅನುಪಾತ;    ದ.ಕ.ಜಿಲ್ಲೆ ರಾಜ್ಯಕ್ಕೆ ದ್ವಿತೀಯ* ಸ್ತ್ರೀ-ಪುರುಷ ಅನುಪಾತ: ಉಡುಪಿ ಪ್ರಥಮ* ಒಂದೇ ಮಗು ಸಾಕು ಎಂಬ ಪೋಷಕರ  

   ನಿಲುವೇ ಕುಸಿತಕ್ಕೆ ಕಾರಣ: ಮಾಹಿತಿ*ದ.ಕ: ಸಾವಿರಕ್ಕೆ 54 ಬಾಲಕಿಯರ ಕೊರತೆ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.