ಬುಧವಾರ, ಏಪ್ರಿಲ್ 21, 2021
30 °C

ದಮನಕ್ಕೊಳಗಾದ ದವನ ಬೆಳೆಗಾರ

ಎನ್.ಎಂ.ನಟರಾಜ್ ನಾಗಸಂದ್ರ Updated:

ಅಕ್ಷರ ಗಾತ್ರ : | |

ಚಳಿಗಾಲದಲ್ಲಿ ಮಾತ್ರ ಬೆಳೆಯಬಹುದಾದ ಬೆಳೆ ದವನ ಸೊಪ್ಪು. ಆದ್ದರಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆ, ಚಿಕ್ಕಬಳ್ಳಾಪುರ ಜಿಲ್ಲೆಯ ರೈತರು ನವೆಂಬರ್ ತಿಂಗಳಿನಲ್ಲಿ ಈ ಬೆಳೆ ಬೆಳೆಯುತ್ತಾರೆ. ನೀರಿನ ಸೌಲಭ್ಯ ಇದ್ದರೆ ಡಿಸೆಂಬರ್ ನಂತರವೂ ಇದನ್ನು  ಬೆಳೆಯಬಹುದು.ಇದೊಂದು ಸುಗಂಧ ಬೀರುವ ಸಣ್ಣ ಹಸಿರು ಸಸ್ಯ. ದಕ್ಷಿಣ ಭಾರತ ಮೂಲದ ಇದರ ಸಸ್ಯ ಶಾಸ್ತ್ರದ ಹೆಸರು ಆರ‌್ಟೇಮಿಷಿಯಾ ಪಲನ್ಸ್. ದವನದ ಹೂ ಮತ್ತು ಎಲೆಗಳು ಹೂವಿನ ಅಲಂಕಾರಗಳಲ್ಲಿ ಮತ್ತು ಇದರ ಎಣ್ಣೆಯ ಉತ್ಪಾದನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ತಮಿಳು ನಾಡಿನಲ್ಲಿ ಈ ಸೊಪ್ಪನ್ನು ಹೆಚ್ಚಾಗಿ ಬೆಳೆಯಲಾಗುತ್ತಿದೆ.ತಮಿಳುನಾಡು ದವನ ಬಿತ್ತನೆ ಬೀಜ ಉತ್ಪಾದನೆಯಲ್ಲಿ ಮುಂದು. ಪ್ರಸ್ತುತ ಮಾರುಕಟ್ಟೆಯಲ್ಲಿ ಒಂದು ಕೆ.ಜಿ. ಬಿತ್ತನೆ ಬೀಜಕ್ಕೆ 1,500 ರೂಗಳಿಂದ 1,800 ರೂಗಳವರೆಗೆ ಬೆಲೆ ಇದೆ. ದುಬಾರಿ ಬೆಲೆಯ ಇದರ ಎಣ್ಣೆಯನ್ನು ನಮ್ಮ ದೇಶದಲ್ಲಷ್ಟೇ ಅಲ್ಲದೆ ಫ್ರಾನ್ಸ್, ಅಮೆರಿಕ, ಜರ್ಮನಿ, ಜಪಾನ್, ನೆದರ್‌ಲ್ಯಾಂಡ್ ದೇಶಗಳಿಗೂ ರಫ್ತು ಮಾಡಲಾಗುತ್ತಿದೆ.ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ನೀಡುವ ಈ ಬೆಳೆಗೆ ಸರ್ಕಾರ ನಿರ್ಲಕ್ಷ್ಯ ಧೋರಣೆ ತಾಳಿ ಬೆಳೆಗಾರನನ್ನು ಅತಂತ್ರಗೊಳಿಸಿದೆ. ಉಪಯೋಗಗಳು: ದವನದ ಎಣ್ಣೆ ಸುಗಂಧ ದ್ರವ್ಯವಾಗಿ ಹೆಸರುವಾಸಿ. ಇದರ ಎಣ್ಣೆ ಸುಗಂಧ ದ್ರವ್ಯ ಶಾಸ್ತ್ರದಲ್ಲಿ ಕಾಮೋತ್ತೇಜಕ ಎಂದು ಪರಿಗಣಿಸಲಾಗಿದೆ. ಇದರ ಎಣ್ಣೆ ಮಾನಸಿಕ ಒತ್ತಡ ನಿವಾರಿಸುತ್ತದೆ. ಮೆದುಳು ಹಾಗೂ ನರಮಂಡಲಗಳನ್ನು ಇದು ಸಂತೈಸುವ ಗುಣವನ್ನು ಹೊಂದಿದೆ.ಗಾಯಗಳ ಸೊಂಕು, ವೈರಸ್‌ಗಳ ಸೋಂಕಿನಿಂದ ಹರಡುವ ಕೆಮ್ಮು, ನೆಗಡಿಯನ್ನೂ ನಿವಾರಿಸುತ್ತದೆ. ಕೀಟನಾಶಕವಾಗಿಯೂ ಇದರ ಬಳಕೆಯಿದೆ. ತಲೆ ನೋವು ನಿವಾರಣೆ ಕಡಿಮೆ ರಕ್ತದ ಒತ್ತಡ ನಿವಾರಣೆಗಾಗಿ ಇದನ್ನು ಬಳಸಲಾಗುತ್ತದೆ. ಗಾಯಗಳು ನಂಜಾಗುವುದನ್ನು ಸಹ ತಡೆಗಟ್ಟುತ್ತದೆ. ಇದರ ಎಣ್ಣೆಯನ್ನು ಮೈ ಸೋಪು, ಪೌಡರ್‌ಗಳ ಉತ್ಪಾದನೆಯಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ.ಸುಗಂಧ ದ್ರವ್ಯಕ್ಕೆ ಬಳಸುವ ದವನಕ್ಕಿರುವ ಬೇಡಿಕೆಯಿಂದಾಗಿ ರಾಜ್ಯದ ವಿವಿಧಡೆಗಳಲ್ಲಿ ರೈತರು ಹೆಚ್ಚಾಗಿ ದವನ ಬೆಳೆಯುತ್ತಿದ್ದಾರೆ. ಬೆಳೆಯನ್ನು ಪ್ರೋತ್ಸಾಹಿಸಲು ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆಯಡಿ ಮೂರು ವರ್ಷಗಳಿಂದ ಇದರ ಬೆಳೆಗಾರರಿಗೆ ಒಂದು ಹೆಕ್ಟೇರ್‌ಗೆ  11,250 ಸಾವಿರ ರೂಪಾಯಿಗಳವರೆಗೆ ಪ್ರೋತ್ಸಾಹ ಧನವನ್ನು ನೀಡಲಾಗುತ್ತಿತ್ತು. ಆದರೆ ಈ ವರ್ಷ ಪ್ರೋತ್ಸಾಹ ಧನ ನೀಡುವುದನ್ನು ನಿಲ್ಲಿಸಲಾಗಿದೆ.ಪ್ರಸ್ತುತ ಒಂದು ಟನ್ ದವನದ ಬೆಲೆ 4ರಿಂದ 5 ಸಾವಿರ ರೂಪಾಯಿಗಳವರೆಗೆ ಇದೆ. ಆದರೂ ರಸಗೊಬ್ಬರದ ಬೆಲೆ ಹೆಚ್ಚಳ, ಕೂಲಿ ಕಾರ್ಮಿಕರ ಸಮಸ್ಯೆಯಿಂದಾಗಿ ಒಂದು ಎಕರೆಗೆ 8 ಟನ್ ಮೇಲ್ಪಟ್ಟು ಇಳುವರಿ ಬಂದರೆ ಮಾತ್ರ ಲಾಭ ಕಾಣಬಹುದಾಗಿದೆ. ಮಧ್ಯವರ್ತಿಗಳ ಹಿಡಿತದಿಂದಾಗಿ ರೈತರಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ.ಅಂತರರಾಷ್ಟ್ರೀಯ ಮಟ್ಟದಲ್ಲೂ ಇದರ ಎಣ್ಣೆಗೆ ಬೇಡಿಕೆ ಇದೆ. ಇಷ್ಟೆಲ್ಲಾ ಬೇಡಿಕೆ ಇರುವ ಇದರ ಸೊಪ್ಪಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲದಿರುವುದು ಬೆಳೆಗಾರರ ಆತಂಕಕ್ಕೆ ಕಾರಣವಾಗಿದೆ.ಘಮಘಮಿಸುತ್ತಿರುವ ಈ ಬೆಳೆಗೆ ಉತ್ತೇಜನದ ಕೊರತೆಯಾಗಿದ್ದು, ಸೂಕ್ತ ಉತ್ತೇಜನ ನೀಡಿದರೆ ರೈತರಿಗೆ ಅನುಕೂಲವಾಗುವುದರೊಂದಿಗೆ ದೇಶಕ್ಕೆ ವಿದೇಶಿ ವಿನಿಮಯ ಬರುವುದಕ್ಕೂ ನೆರವಾಗಲಿದೆ. ಈ ಬಗ್ಗೆ ಸರ್ಕರ ಅಗತ್ಯ ಕ್ರಮ ಕೈಗೊಳ್ಳಬೇಕು ಎನ್ನುವುದು ರೈತರ ಒತ್ತಾಯ.ಎಣ್ಣೆ ಉತ್ಪಾದಿಸುವ ವಿಧಾನ


ದವನ ಎಣ್ಣೆ ಉತ್ಪಾದನೆ ದೇಸಿ ತಾಂತ್ರಿಕತೆಯೇ ಇವತ್ತಿಗೂ ಚಾಲ್ತಿಯಲ್ಲಿದೆ. ಸುಮಾರು 10 ಅಡಿ ಎತ್ತರ, 5 ಅಡಿ ಸುತ್ತಳತೆ ಡ್ರಂನಲ್ಲಿ ಹಸಿ ಸೊಪ್ಪನ್ನು ತುಂಬಿ, ಡ್ರಂನ ಮೇಲ್ಭಾಗದ ಮುಚ್ಚಳವನ್ನು ಬಿಗಿಯಾಗಿ ಮುಚ್ಚಲಾಗುತ್ತದೆ. ಡ್ರಂ ತಳಭಾಗದಲ್ಲಿ 30 ಲೀಟರ್‌ನಷ್ಟು ನೀರು ಹಾಕಿ ನೀಲಗಿರಿ ಸೊಪ್ಪು ಅಥವಾ ಇತರೆ ಉರುವಲಿನಿಂದ ಬೆಂಕಿ ಉರಿಸಲಾಗುತ್ತದೆ.ಡ್ರಂನ ತಳಭಾಗದಲ್ಲಿನ ನೀರಿನ ಹಬೆ ಸೊಪ್ಪಿನ ಮೂಲಕ ಹಾದು ಹೋಗುತ್ತದೆ. ಈ ಸಂದರ್ಭದಲ್ಲಿ ಡ್ರಂನಿಂದ ಹೊರ ಬಂದಿರುವ ಎರಡು ಇಂಚು ಗಾತ್ರದ ಪೈಪು ಡ್ರಂ ಪಕ್ಕದಲ್ಲಿನ ತಣ್ಣನೆ ನೀರು ತುಂಬಿದ ಸುಮಾರು 8 ಅಡಿ ಸುತ್ತಳತೆಯ ತೊಟ್ಟಿ ಮೂಲಕ ಹಾದು ಹೊರಗೆ ಬಂದಿರುತ್ತದೆ. ಡ್ರಂ ಒಳಗಿನಿಂದ ಪೈಪು ಮೂಲಕ ಹಾದು ಬರುವ ಹಬೆ ತಣ್ಣನೆ ನೀರಿನ ತೊಟ್ಟಿಗೆ ಬರುತ್ತಿದ್ದಂತೆ ಎಣ್ಣೆಯಾಗಿ ಪರಿವರ್ತನೆಯಾಗಿ ಹೊರಬರುತ್ತದೆ.ನೀರಾವರಿ ಸೌಲಭ್ಯ ಇರುವ ರೈತರಿಗೆ ಈ ಸೊಪ್ಪು ಬೆಳೆಯುವುದು ಸುಲಭ. ಆದರೆ ದವನ ಸೊಪ್ಪು ಬೆಳೆದರೆ ಮುಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲ. ಇದೊಂದು ಗುತ್ತಿಗೆ ಆಧಾರಿತ ಬೆಳೆ ಪದ್ಧತಿಯಾಗಿದೆ. ಇದರ ಎಣ್ಣೆ ತೆಗೆದು ಮಾರಾಟ ಮಾಡುವ ಕೆಲ ಗುತ್ತಿಗೆದಾರರು ತಮಗೆ ಬೇಕಾದಷ್ಟು ಬಿತ್ತನೆ ಬೀಜ, ಗೊಬ್ಬರವನ್ನು ರೈತರಿಗೆ ನೀಡಿ ಸೊಪ್ಪು ಬೆಳೆಸುತ್ತಾರೆ. ಬೆಳೆ ಪೂರ್ವದಲ್ಲೇ ಒಂದು ಟನ್ ಸೊಪ್ಪಿಗೆ  5 ಸಾವಿರ ರೂಗಳವರೆಗೆ ಒಪ್ಪಂದ ಮಾಡಿಕೊಳ್ಳಲಾಗುತ್ತದೆ.ಒಂದು ಎಕರೆಗೆ 8 ರಿಂದ 10 ಟನ್‌ವರೆಗೆ ಸೊಪ್ಪು ಪಡೆಯಬಹುದಾಗಿದೆ. ಒಂದು ಟನ್ ಸೊಪ್ಪಿಗೆ ಮಣ್ಣಿನ ಗುಣಮಟ್ಟದ ಆಧಾರದ ಮೇಲೆ 500 ಗ್ರಾಂ ನಿಂದ 900 ಗ್ರಾಂ. ಎಣ್ಣೆ ಬರಲಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಒಂದು ಕೆ.ಜಿ. ದವನ ಎಣ್ಣೆ ಸುವಾಸನೆ ಸೇರಿದಂತೆ ಹಾಗೂ ಗುಣಮಟ್ಟದ ಆಧಾರದ ಮೇಲೆ 8 ರಿಂದ 16 ಸಾವಿರ ರೂಪಾಯಿಗಳವರೆಗೆ ಮಾರಾಟವಾಗುತ್ತಿದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.