ಬುಧವಾರ, ಏಪ್ರಿಲ್ 14, 2021
29 °C

ದಲಿತರು ಮನಸ್ಥಿತಿ ಬದಲಿಸಿಕೊಳ್ಳಿ: ರಾಧಾಕೃಷ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ದಲಿತರು ತಮ್ಮ ಜೀವನ ಪದ್ಧತಿಯನ್ನು, ಮಾನಸಿಕ ಸ್ಥಿತಿಯನ್ನು ಬದಲಿಸಿಕೊಳ್ಳದಿದ್ದರೆ ಅವರಿಗೆ ಇನ್ನೂ 100 ವರ್ಷ ಮೀಸಲಾತಿ ನೀಡಿದರೂ ಯಾವುದೇ ಉಪಯೋಗವಾಗುವುದಿಲ್ಲ ಎಂದು ಬಿಎಸ್‌ಪಿ ಜಿಲ್ಲಾ ಘಟಕ ಅಧ್ಯಕ್ಷ ಕೆ.ಟಿ.ರಾಧಾಕೃಷ್ಣ ಹೇಳಿದರು.ತಾಲ್ಲೂಕಿನ ಹೊರಕೆರೆ ಗ್ರಾಮದಲ್ಲಿ ಗುರುವಾರ ಸ್ಥಳೀಯ ಅಂಬೇಡ್ಕರ್‌ ಯುವಕ ಸಂಘ ಆಯೋಜಿಸಿದ್ದ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಸ್ವಾತಂತ್ರ ಬಂದ ನಂತರ ಇಲ್ಲಿಯವರೆಗೆ ದಲಿತರಿಗೆ ಮೀಸಲಾತಿ ನೀಡಲಾಗುತ್ತಿದೆ. ಆದರೂ ಅವರು ಉದ್ಧಾರವಾಗಿಲ್ಲ. ಇದಕ್ಕೆ ಮೂಲ ಕಾರಣ ಅವರ ಜೀವನ ಪದ್ಧತಿ. ಇನ್ನಾದರೂ ದಲಿತರು ತಮ್ಮ ಮನಸ್ಸು ಬದಲಿಸಿಕೊಂಡು ಅಭಿವೃದ್ಧಿಯತ್ತ ಚಿತ್ತ ನೆಡಬೇಕು ಎಂದು ಅವರು ಕರೆ ನೀಡಿದರು.ದಲಿತ ವರ್ಗ ಅಭಿವೃದ್ಧಿ ಹೊಂದಿ ಸಮಾಜದ ಮುಖ್ಯವಾಹಿನಿಗೆ ಅವರು ದುಶ್ಚಟಗಳನ್ನು ಮತ್ತು ಮತಕ್ಕಾಗಿ ಮಾರಾಟವಾಗುವುದನ್ನು ಬಿಟ್ಟು ಶ್ರಮದಿಂದ ದುಡಿಯಬೇಕು ಎಂದರು.ದಾಸ್ಯದಿಂದ ಮುಕ್ತರಾಗಿ ಮೇಲ್ವರ್ಗದವರ ಓಟದ ವೇಗಕ್ಕೆ ತಕ್ಕಂತೆ ದಲಿತರು ಓಡಬೇಕು. ತಮ್ಮ ಕೆಳಮಟ್ಟದ ಬದುಕನ್ನು ತಿದ್ದಿಕೊಂಡು ಅವರಿಗೆ ಸರಿ ಸಮಾನಾಗಿ ಬದುಕುವುದನ್ನು ಸ್ವತಂತ್ರವಾಗಿ ಯೋಚಿಸುವುದನ್ನು ಕಲಿಯಬೇಕು.ಎಲ್ಲದಕ್ಕೂ ಸರ್ಕಾರದತ್ತ ಮುಖಮಾಡದೇ ಇರುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಬದುಕಿನಲ್ಲಿ ಮುಂದೆ ಬರಬೇಕು ಎಂದು ಅವರು ಸಲಹೆ ನೀಡಿದರು.ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಕೆ.ಪಿ.ರಾಜರತ್ನಂ ಮಾತನಾಡಿ ಯಾವುದೇ ರಾಜಕಾರಣಿಗಳು ಅಥವಾ ಸರ್ಕಾರಗಳು ದಲಿತರನ್ನು ಸಂಪೂರ್ಣವಾಗಿ ಉದ್ಧಾರ ಮಾಡಲು ಸಾಧ್ಯವಿಲ್ಲ. ಅವರ ಅಭಿವೃದ್ಧಿಯನ್ನು ಅವರೇ ಮಾಡಿಕೊಳ್ಳಬೇಕು ಎಂದರು.ಮಲ್ಲಂದೂರು ಗ್ರಾಪಂ ಅಧ್ಯಕ್ಷ ಸಿ.ಸಿ.ಪುಟ್ಟೇಗೌಡ ಮಾತನಾಡಿ ಅಂಬೇಡ್ಕರ್‌ ಅವರ ಆದರ್ಶಗಳನ್ನು  ಅಳವಡಿಸಿಕೊಂಡು ದಲಿತರು ಮುನ್ನಡೆದರೆ ಆ ವರ್ಗದ ಉದ್ಧಾರವಾಗುತ್ತದೆ ಎಂದು ಅವರು ನುಡಿದರು.

ಸಮಾರಂಭಕ್ಕೆ ಮುನ್ನ ಅಂಬೇಡ್ಕರ್‌ ಅವರ ಭಾವಚಿತ್ರದೊಂದಿಗೆ ಗ್ರಾಮದಲ್ಲಿ ಮೆರವಣಿಗೆ ನಡೆಸಲಾಯಿತು.

ಅಂಬೇಡ್ಕರ್‌ ಯುವಕ ಸಂಘದ ಅಧ್ಯಕ್ಷ ದೇವರಾಜ್‌, ಡಿಎಸ್‌ಎಸ್‌ ಮುಖಂಡರಾದ  ಸಿ.ಬಿ.ನಾಗರಾಜ್‌, ಗಂಗಾಧರ್‌ ಗ್ರಾಪಂ ಮಾಜಿ ಅಧ್ಯಕ್ಷ ಎಂ.ಡಿ.ಮಂಜುನಾಥ್‌, ವಿನೋದ್‌ಕುಮಾರ್‌, ನವೀನ್‌, ಸುರೇಶ್‌, ಜಿಪಂ ಮಾಜಿ ಸದಸ್ಯ  ಸತೀಶ್‌, ಗ್ರಾಮದ ಹಿರಿಯರಾದ ಈರಯ್ಯ, ಕೆಂಚಯ್ಯ, ದೇವಯ್ಯ, ಸುಮಿತ್ರ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.