ಮಂಗಳವಾರ, ಮೇ 11, 2021
21 °C

ದಲಿತ ಕಾವ್ಯದ ಹೊಸ ತಲೆಮಾರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಂಬೇಡ್ಕರ್‌ವಾದಿ ವಿಚಾರವಾದದ ತಾತ್ವಿಕ ನೋಟ-ಕ್ರಮವನ್ನು ಮುಂದುವರಿಸಿರುವ ಹೊಸ ತಲೆಮಾರಿನ ದಲಿತ ಕಾವ್ಯ, ಸಾಮಾಜಿಕ ಸತ್ಯಗಳಿಗೆ ದನಿಯಾಗುವ ಮೂಲಕ ತನ್ನ ಪ್ರಖರತೆ ಹೆಚ್ಚಿಸಿಕೊಂಡಿದೆ.ಕನ್ನಡ ದಲಿತ ಕಾವ್ಯವನ್ನು ಇನ್ನೂ ಸಮರ್ಥನೆಯ ಮೊದಲ ಹಂತದಲ್ಲಿಯೇ ನೋಡುತ್ತಿರುವವರಿಗೆ ಈಗಾಗಲೇ ಕನ್ನಡ ದಲಿತ ಕಾವ್ಯದ ಮೂರು ಹಾಗೂ ನಾಲ್ಕನೆಯ ತಲೆಮಾರುಗಳು ಬಂದಿವೆಯೆಂಬ ಅಂಶ ಅಚ್ಚರಿ ಹುಟ್ಟಿಸಬಹುದು. ಸಹಜವಾಗಿಯೇ ಈ ತಲೆಮಾರುಗಳ ಕಾವ್ಯದ ಕಾಳಜಿ, ಬಂಧ ಮತ್ತು ಲಯ ಮಾದರಿಗಳು ಕೂಡ ಬದಲಾಗಿವೆ.ಈ ಹೊಸ ತಲೆಮಾರುಗಳಲ್ಲಿ ಎದ್ದು ಕಾಣುವ ಸುಬ್ಬು ಹೊಲೆಯಾರ್ ತಮ್ಮ ಹಿಂದಿನ ತಲೆಮಾರುಗಳಂತೆಯೇ ದಲಿತ ಚಳವಳಿಯಿಂದ ಕಾವ್ಯಕ್ಕೆ ಬಂದು ಕ್ರಮೇಣ ಅಂಬೇಡ್ಕರ್‌ವಾದವನ್ನು ಗಾಂಧಿವಾದದ ಹಿನ್ನೆಲೆಯಲ್ಲಿ ಹೊಸದಾಗಿ ವಿವರಿಸಿಕೊಂಡ ಕವಿ.

 

ಅವರ `ಗಾಂಧಿಯನ್ನು ಪ್ರೀತಿಸಲಾರದವರು~ ಹಾಗೂ `ಗಾಂಧಿ ಬಂದಾಗ ಅಂಬೇಡ್ಕರ್ ಒಳಗಿದ್ದರು~ ಪದ್ಯಗಳು ಗಾಂಧೀಜಿಯನ್ನು ದಲಿತ ಕಾವ್ಯ ಹಾಗೂ ದಲಿತ ಚಿಂತನೆಯನ್ನು ಬೆಸೆಯಲೆತ್ನಿಸಿವೆ. ಒಟ್ಟು ಜಗತ್ತಿನ ದುಗುಡದ ಬಗೆಗೂ ಬರೆಯುವ ಸುಬ್ಬು ನವ್ಯ ಕಾಲದಂತೆ ಗದ್ಯದ ಲಯ ಮಾದರಿಗಳನ್ನು ಕಾವ್ಯಕ್ಕೆ ಒಗ್ಗಿಸಲೆತ್ನಿಸಿದ್ದಾರೆ.ಹೊಸ ತಲೆಮಾರಿನ ಅತ್ಯಂತ ಪ್ರತಿಭಾವಂತ ಕವಿಯಾಗಿದ್ದ ಎನ್.ಕೆ. ಹನುಮಂತಯ್ಯ ಸೀಮಿತ ಅರ್ಥದಲ್ಲಾದರೂ ಸಿದ್ಧಾಂತಗಳ ಪರೀಕ್ಷೆಯನ್ನು ತಮ್ಮ ಕಾವ್ಯಕ್ಕೆ ತಂದರು. ಸುಬ್ಬು, ಹನುಮಂತಯ್ಯ, ವಿ.ಎಂ.ಮಂಜುನಾಥ್, ವಿ.ಆರ್.ಕಾರ್ಪೆಂಟರ್- ಈ ನಾಲ್ವರೂ ತಾತ್ವಿಕತೆಯ ದೃಷ್ಟಿಯಿಂದ ಲಂಕೇಶರ ಪ್ರಭಾವವನ್ನು ಸ್ವೀಕರಿಸಿದವರು ಎಂಬ ಅಂಶ ಕೂಡ ಇವರ ಕಾವ್ಯದ ನುಡಿಗಟ್ಟು, ನೋಟಕ್ರಮ ಹಾಗೂ ತಾತ್ವಿಕತೆಗಳು ಭಿನ್ನವಾಗಿರಲು ಕಾರಣವಿರಬಹುದು.

 

ಇವರಲ್ಲಿ ಕೆಲವರು ತಮ್ಮ ಕಾವ್ಯದ ಒಳಗೂ ಹಾಗೂ ಹೊರಗೂ ದಲಿತ ಚಳವಳಿಯನ್ನು ಪರೀಕ್ಷೆಗೆ ಒಳಪಡಿಸಲೆತ್ನಿಸಿರುವುದು ಇವರ ಕಾವ್ಯವನ್ನು ಪ್ರವೇಶಿಸಿರುವ ಸಾಮಾಜಿಕ ವಿಮರ್ಶೆಯ ಹೊಸ ಆಯಾಮಗಳನ್ನೂ ಸೂಚಿಸುವಂತಿದೆ. ನಗರದಲ್ಲಿ ಬೆಳೆದ ಮಂಜುನಾಥ್, ಕಾರ್ಪೆಂಟರ್ ದಲಿತ ಕಾವ್ಯದ ಸಿದ್ಧ ಮಾದರಿ ಮೀರಲೆತ್ನಿಸಿದ್ದಾರೆ. ಈ ಎಲ್ಲರ ಜೊತೆಗೇ ಬರೆಯುತ್ತಿರುವ ಲಕ್ಕೂರು ಆನಂದರಲ್ಲಿ ದಲಿತ ಕಾವ್ಯದ ಈವರೆಗಿನ ಅನೇಕ ಮಾದರಿಗಳು ಮರುಕಳಿಸಿವೆ.ಮೂರು ದಶಕಕ್ಕಿಂತಲೂ ಹೆಚ್ಚು ಕಾಲ ಹರಿದಿರುವ ದಲಿತ ಕಾವ್ಯದಲ್ಲಿ ಮಹಿಳಾ ದನಿಗಳು ತೀರಾ ಕಡಿಮೆ ಎಂಬ ಅಂಶ ಏಕಕಾಲಕ್ಕೆ ಸ್ತ್ರೀವಾದಿ ಚಿಂತನೆ ಹಾಗೂ ದಲಿತ ಚಿಂತನೆಗಳೆರಡೂ ದಲಿತ ಮಹಿಳೆಯರನ್ನು ದೊಡ್ಡ ಮಟ್ಟದಲ್ಲಿ ಮುಟ್ಟಲು ಆಗದಿರುವ ಕೊರತೆಯನ್ನು ಎತ್ತಿ ಹೇಳುತ್ತದೆ.ಇಂಥ ಸನ್ನಿವೇಶದಲ್ಲಿ ಅನಸೂಯ ಕಾಂಬಳೆ ದಲಿತ ಕಾವ್ಯಕ್ಕೆ ಸ್ತ್ರೀ ದೃಷ್ಟಿಕೋನವನ್ನು ಬೆಸೆದು, ದಲಿತ ಸ್ತ್ರೀವಾದದ ಸ್ವರೂಪವನ್ನೂ ರೂಪಿಸಲೆತ್ನಿಸಿದ್ದಾರೆ. `ಹಂಚವ್ವಳ ಹಾಡು~ ಥರದ ಪದ್ಯಗಳಲ್ಲಿ ಜನಪದ ದ್ರವ್ಯವನ್ನೂ ಬಳಸಿದ್ದಾರೆ.ಈ ಮಾದರಿಯಲ್ಲಿ ಜನಪದ ಲಯ ಹಾಗೂ ವಸ್ತುಗಳನ್ನು ವಡ್ಡಗೆರೆ ನಾಗರಾಜಯ್ಯನವರೂ ತಮ್ಮ ಕಾವ್ಯದಲ್ಲಿ ಪ್ರಯೋಗಿಸಿದ್ದಾರೆ. ಇದೇ ಬಗೆಯ ಮತ್ತೊಂದು ಹಾದಿಯ ಪಯಣವನ್ನು ಬಿಂಬಿಸುವ ಮಹದೇವ ಶಂಕನಪುರ ಅವರು ಮಂಟೇಸ್ವಾಮಿ ಚೈತನ್ಯವನ್ನು ತಮ್ಮ ಪದ್ಯಗಳಿಗೆ ತಂದಿದ್ದಾರೆ.ಈ ಎಲ್ಲ ಕವಿಗಳು ತಂತಮ್ಮ ಕಾವ್ಯದಲ್ಲಿ ಒಟ್ಟಾರೆಯಾಗಿ ಅಂಬೇಡ್ಕರ್‌ವಾದಿ ವಿಚಾರವಾದದ ತಾತ್ವಿಕ ನೋಟಕ್ರಮವನ್ನು ಮುಂದುವರಿಸಿದ್ದಾರೆ. ಜೊತೆಜೊತೆಗೇ ಅವರು ಧರ್ಮವನ್ನು ಹಾಗೂ ತಂತಮ್ಮ ದೇಶೀ ಭೂತಕಾಲವನ್ನು, ದಲಿತ ಪುರಾಣಗಳ ಲೋಕವನ್ನು ಹುಡುಕಿಕೊಳ್ಳುತ್ತಿರುವ ರೀತಿ ಕೂಡ ಕುತೂಹಲಕರವಾಗಿದೆ.ಸುಬ್ಬು ಹಾಗೂ ಹನುಮಂತಯ್ಯನವರ ಕಾವ್ಯದಲ್ಲಿ ಅಂಬೇಡ್ಕರ್ ರೂಪಿಸಿಕೊಟ್ಟ ನವಬೌದ್ಧ ಮಾರ್ಗ; ವಡ್ಡಗೆರೆ ನಾಗರಾಜಯ್ಯನವರ ಕಾವ್ಯದಲ್ಲಿರುವ ಆದಿಜಾಂಬವ ಮೂಲದ ಆಸರೆ; ಮಹದೇವ ಶಂಕನಪುರ ಅವರ ಕಾವ್ಯದಲ್ಲಿ ಮಂಟೇಸ್ವಾಮಿ - ಮಲೆಮಹದೇಶ್ವರ ಪರಂಪರೆಯ ಮರುಹುಡುಕಾಟ; ಮಂಜುನಾಥರ ಪದ್ಯಗಳಲ್ಲಿ ಅಲ್ಲಲ್ಲಿ ಸುಳಿಯುವ ಕ್ರೈಸ್ತ ಧರ್ಮ ಕೊಟ್ಟ ವಿಮೋಚನೆಯ ಹಾದಿಗಳು ಕೂಡ ಈ ಹೊಸ ತಲೆಮಾರಿನ ಕಾವ್ಯಕ್ಕೆ ಭಿನ್ನ ತಾತ್ವಿಕ ಭಿತ್ತಿಗಳನ್ನೂ ಭಾಷಾಲೋಕವನ್ನೂ ಒದಗಿಸಿವೆ.ಇಷ್ಟೆಲ್ಲ ವಿಶಿಷ್ಟ ಅಂಶಗಳು ಹೊಸ ಪೀಳಿಗೆಯ ದಲಿತ ಕಾವ್ಯದಲ್ಲಿ ಕಾಣಬರುತ್ತಿದ್ದರೂ ಇವು ಅಂತಿಮವಾಗಿ ಬಹುತೇಕ ಸಾಮಾಜಿಕ ಸತ್ಯಗಳನ್ನೇ ಹೆಚ್ಚು ಹೇಳುತ್ತಿರುವಂತೆ ಕಾಣುತ್ತವೆನ್ನುವುದು ನಿಜ.ಈ ಕವಿಗಳು ಬಳಸುತ್ತಿರುವ ಚೌಕಟ್ಟುಗಳು ಹಾಗೂ ಧೋರಣೆಗಳು ತಾವು ಮಂಡಿಸುತ್ತಿರುವ ಅನುಭವಗಳ ಎಲ್ಲ ಮುಖಗಳನ್ನು ಗಾಢ ಪರೀಕ್ಷೆಗೆ ಒಳಪಡಿಸುವಲ್ಲಿ ಶಕ್ತವಾಗಿದ್ದಂತಿಲ್ಲ; ಅಥವಾ ಆ ರೀತಿಯ ನಿಷ್ಠುರ ಪರೀಕ್ಷೆಯ ಅಗತ್ಯದ ಬಗ್ಗೆ ಈ ಕವಿಗಳು ಹೆಚ್ಚು ಯೋಚಿಸಿರುವ ಸೂಚನೆಗಳು ಅವರ ಕಾವ್ಯದಲ್ಲಿ ಕಂಡು ಬರುತ್ತಿಲ್ಲ.ಹೀಗಾಗಿ ಕಾವ್ಯರಚನೆ ಒದಗಿಸುವ ಬಹುಮುಖ್ಯ ಸ್ವಾತಂತ್ರ್ಯಗಳಲ್ಲಿ ಒಂದಾದ ಸಕಲ ಅನುಭವಗಳನ್ನು ಹಾಗೂ ಘಟನೆಗಳನ್ನು ತೀವ್ರವಾಗಿ ಪರೀಕ್ಷಿಸುವ ಸ್ವಾತಂತ್ರ್ಯವನ್ನು ಈ ಕವಿಗಳು ಉಪೇಕ್ಷಿಸಿದಂತೆ ಕಾಣುತ್ತದೆ.ಜೊತೆಗೆ, ಕಾವ್ಯದ ಮೂಲ ಪ್ರಾಣಗಳಲ್ಲಿ ಒಂದಾದ ಭಾಷಿಕ ಪ್ರಯೋಗಗಳ ಸಾಧ್ಯತೆಗಳ ಬಗ್ಗೆ ಈ ಕವಿಗಳಲ್ಲಿ ಹೆಚ್ಚಿನ ಉತ್ಸಾಹ ಇದ್ದಂತಿಲ್ಲ. ಹೀಗಾಗಿ, ಕಾವ್ಯ ಪ್ರಕಾರದಲ್ಲಿ ಕನ್ನಡದ ಶ್ರೇಷ್ಠ ಕವಿಗಳು ಸಾಧಿಸಿರುವ ಭಾಷಿಕ ಪ್ರಯೋಗಗಳು ಹಾಗೂ ಅವುಗಳ ಸೌಂದರ್ಯಾತ್ಮಕ ಆನಂದವನ್ನು ಈ ಕವಿಗಳು ಸಾಧಿಸಲಾಗದೆ ಅವರ ಕಾವ್ಯ ಬಳಲಿರುವಂತೆ ಕಾಣುತ್ತದೆ.ಈಗಾಗಲೇ ಹೆಚ್ಚು ಪರಿಚಿತರಾಗಿರುವ ಹೊಸ ತಲೆಮಾರಿನ ಕವಿಗಳ ಜೊತೆಗೆ ಈಚೆಗೆ ಒಂದೊಂದು ಕವನ ಸಂಕಲನವನ್ನು ತಂದಿರುವ  ಅಥವಾ ಬಿಡಿಬಿಡಿ ಪದ್ಯಗಳನ್ನು ಬರೆದ ಕವಿಗಳು ಕೂಡ ಇದೀಗ ಕನ್ನಡ ಕಾವ್ಯರಂಗದ ಮೇಲೆ ಮಿಂಚುತ್ತಿದ್ದಾರೆ.

 

ಎಂ.ಎಸ್.ಶೇಖರ್, ಶ್ರೀನಿವಾಸರಾಜು, ಟಿ. ಯಲ್ಲಪ್ಪ, ರಾಮಪ್ಪ ಮಾದರ್, ಹರೀಶ್ ಕಟ್ಟೆಬೆಳಗುಲಿ, ಶಿವಕುಮಾರ ಕಂಪ್ಲಿ ಅವರ ಕವನ ಸಂಕಲನಗಳಲ್ಲಿ ಹಾಗೂ ಕೆಲವೇ ಪದ್ಯಗಳನ್ನು ಬರೆದರೂ ವಿಶಿಷ್ಟವಾಗಿ ಕಾಣುವ ಗಂಗಪ್ಪ ತಳವಾರ ಅವರ ಪದ್ಯಗಳಲ್ಲಿ ಕೆಲವು ಹೊಸ ಮಾದರಿಗಳು ಕಾಣುತ್ತವೆ. ಈ ಎಲ್ಲದರ ನಡುವೆ ಸಿದ್ಧ ದಲಿತ ಐಡೆಂಟಿಟಿಯ ಹಂಗಿಲ್ಲದೆ ಬರೆಯುತ್ತಿರುವ ಹೊಸ ದಲಿತ ಕವಿಗಳೂ ಇದ್ದಾರೆ.ದಲಿತ ಕಾವ್ಯದಿಂದ ಬಗೆಬಗೆಯ ಪ್ರೇರಣೆಗಳನ್ನು ಪಡೆದು ದಲಿತ ಕಾವ್ಯದ ಗಡಿಗೆರೆಗಳನ್ನು ವಿಸ್ತರಿಸಲು ಯತ್ನಿಸುತ್ತಿರುವ ದಲಿತೇತರ ಕವಿಗಳೂ ಇದ್ದಾರೆ. ಈ ಅಂಶ ದಲಿತ ಕಾವ್ಯದ ಬಂಧ ಹಾಗೂ ತಾತ್ವಿಕತೆಗಳು ಒಟ್ಟಾರೆಯಾಗಿ ಕನ್ನಡ ಕಾವ್ಯದ ಹೊಸ ತಲೆಮಾರಿನ ಕಾವ್ಯವನ್ನು ಪ್ರಭಾವಿಸುತ್ತಿರುವುದರ ಸೂಚನೆಯಂತಿದೆ.ಕ್ರಮೇಣ ದಲಿತ ಕಾವ್ಯ ಎಂಬ ಪ್ರತ್ಯೇಕ ಮಾದರಿ ಹಿನ್ನೆಲೆಗೆ ಸರಿದು `ದಲಿತ ಚಿಂತನೆ~ ಅಥವಾ `ದಲಿತ ಕಾವ್ಯಮಾರ್ಗ~ ಕೂಡ ಈವರೆಗಿನ ಎಲ್ಲ ಆಧುನಿಕ ಕಾವ್ಯಮಾರ್ಗಗಳಂತೆ ಆಧುನಿಕ ಕನ್ನಡ ಕಾವ್ಯ ಪರಂಪರೆಯೊಳಗೆ ಬೆರೆತು, ಎಲ್ಲ ಕವಿಗಳನ್ನೂ ಪ್ರಭಾವಿಸುವ ಹಾಗೂ ಎಲ್ಲರ ಪ್ರಭಾವವನ್ನೂ ಸ್ವೀಕರಿಸುವ ಕಾವ್ಯವಾಗುವ ಲಕ್ಷಣಗಳು ಹೊಸ ತಲೆಮಾರಿನ ದಲಿತ ಕಾವ್ಯದಲ್ಲಿ ನಿಚ್ಚಳವಾಗಿ ಕಾಣುತ್ತಿವೆ.           

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.