ಭಾನುವಾರ, ಏಪ್ರಿಲ್ 18, 2021
23 °C

ದಲಿತ ಸಂಘಟನೆಗಳಿಂದ ಪಂಜಿನ ಮೆರವಣಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಗರಿಬೊಮ್ಮನಹಳ್ಳಿ: ಜನಸಂಖ್ಯೆಗೆ ಅನುಗುಣವಾಗಿ ದಲಿತರ ಒಳ ಮೀಸಲಾತಿ ವರ್ಗೀಕರಣ ಪ್ರತಿಪಾದಿಸುವ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಕೇಂದ್ರ ಸರಕಾರಕ್ಕೆ ಸಲ್ಲಿಸಲಾಗಿದ್ದು, ವರದಿ ಅತ್ಯಂತ ಪ್ರಾಮಾಣಿಕ ಮತ್ತು ನ್ಯಾಯಸಮ್ಮತವಾಗಿದೆ. ಕೇಂದ್ರ ಸರಕಾರ ವಿಳಂಬ ಮಾಡದೆ ಆಯೋಗದ ವರದಿಯನ್ನು ಯಥಾವತ್ತು ಅನುಷ್ಠಾನ ಗೊಳಿಸಬೇಕು ಎಂದು ಅಂಬೇಡ್ಕರ್ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಗದ್ದಿಕೇರಿ ದೊಡ್ಡಬಸಪ್ಪ ಆಗ್ರಹಿಸಿದರು.ತಾಲ್ಲೂಕು ಅಂಬೇಡ್ಕರ್ ಸಂಘ ಮತ್ತು ನಾನಾ ದಲಿತ ಸಂಘಟನೆಗಳು ಮಂಗಳವಾರ ಮಧ್ಯರಾತ್ರಿ ನ್ಯಾ.ಸದಾಶಿವ ವರದಿ ಜಾರಿಗೆ ಆಗ್ರಹಿಸಿ ಹಮ್ಮಿಕೊಂಡಿದ್ದ ವಿಶಿಷ್ಟ ಪಂಜಿನ ಮೆರವಣಿಗೆಗೆ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಚಾಲನೆ ನೀಡಿ ಬಳಿಕ ಅವರು ಮಾತನಾಡಿದರು.ಅಸ್ಪೃಷ್ಯ ದಲಿತರಿಗೆ ಮೀಸಲಾತಿ ಪ್ರತಿಪಾದಿಸಿದ ಅಂಬೇಡ್ಕರ್ ಚಿಂತನೆ ಮತ್ತು ಆಶಯಗಳಂತೆ ಪರಿಶಿಷ್ಟರಲ್ಲಿ ಆಯಾ ಜಾತಿ ಹೊಂದಿರುವ ಜನಸಂಖ್ಯೆಗನುಗುಣವಾಗಿ ಸದಾಶಿವ ವರದಿ ಮೀಸಲಾತಿ ಹಂಚಿಕೆ ಮಾಡಿದೆ. ಆದರೆ, ಕೆಲವು ಪರಿಶಿಷ್ಟ ಸ್ಪೃಷ್ಯ ಜಾತಿಯ ಸಂಘಟನೆಗಳು ಸದಾಶಿವ ವರದಿ ವಿರೋಧಿಸುವ ಮೂಲಕ ವರದಿಯಿಂದ ಅಸ್ಪೃಷ್ಯ ದಲಿತರಿಗೆ ಲಭ್ಯವಾಗುವ ಸಾಮಾಜಿಕ ಮತ್ತು ರಾಜಕೀಯ ಮೀಸಲಾತಿಯನ್ನು ಅತಂತ್ರ ಗೊಳಿಸುವ ಹುನ್ನಾರ ನಡೆಸಿ ದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಶತ ಶತಮಾನಗಳಿಂದ ತುಳಿತಕ್ಕೊಳ ಗಾಗಿರುವ ದಲಿತರಿಗೆ ಮೀಸಲಾತಿ ಅಗತ್ಯವಾಗಿದೆ. ಆದರೆ, ಪರಿಶಿಷ್ಟ ಜಾತಿಗೆ ನಮ್ಮನ್ನು ಸೇರಿಸಿ ಎಂದು ಸಮಾಜದ ಮುಂದುವರಿದ ಜನ ಸಮುದಾಯಗಳು ಕೇಂದ್ರ ಸರಕಾರಕ್ಕೆ ಬೇಡಿಕೆ ಸಲ್ಲಿಸುತ್ತಿರುವುದು ಆತಂಕಕಾರಿ ಯಾಗಿದೆ ಎಂದು ಹೇಳಿದರು.ಕೇಂದ್ರ ಸರಕಾರ ಒಳ ಮೀಸಲಾತಿ ವರ್ಗೀಕರಣ ಅನುಷ್ಠಾನಗೊಳಿಸಿದ ನಂತರ ವೀರಶೈವ ಸಹಿತ ಬ್ರಾಹ್ಮಣ ಹಾಗೂ ಇತರೆ ಜಾತಿಗಳನ್ನು ಪರಿಶಿಷ್ಟ ಜಾತಿಗೆ ಸೇರಿಸಲಿ. ಯಾರು ಬೇಕಾದರೂ ಹೊಲೆ ಮಾದಿಗರಾಗುತ್ತೇವೆ ಎಂದರೂ ನಮ್ಮ ಅಭ್ಯಂತರವಿಲ್ಲ ಎಂದು ವ್ಯಂಗವಾಡಿದರು.ದಲಿತ ಸಂಘಟನೆಗಳ ಪದಾಧಿಕಾರಿ ಗಳಾದ ಕೆಚ್ಚಿನಬಂಡಿ ದುರುಗಪ್ಪ, ಎಚ್.ಮರಿಯಪ್ಪ, ಅಂಬಳಿ ಕೊಟ್ರೇಶ್, ಹೆಗ್ಡಾಳು ರವಿ, ಕೊಟ್ರೇಶ್, ಅಂಬರೀಶ್, ವಕೀಲರಾದ ಎಚ್.ಸತ್ಯನಾರಾಯಣ, ಲಕ್ಕೆಪ್ಪ, ಓಮೇಶ, ಚಿಂತ್ರಪಳ್ಳಿ ಪರಶುರಾಮ, ರುದ್ರಪ್ಪ ಹಾಗೂ ರಮೇಶ ಮೆರವಣಿಗೆಯ ನೇತೃತ್ವ ವಹಿಸಿದ್ದರು. ಅಂಬೇಡ್ಕರ್ ಸಂಘ ಮತ್ತು ನಾನಾ ದಲಿತ ಸಂಘಟನೆಗಳ ನೂರಾರು ಕಾರ್ಯಕರ್ತರು ಅಂಬೇಡ್ಕರ್ ವೃತ್ತದಿಂದ ತಹಶೀಲ್ದಾರ್ ಕಚೇರಿ ಯವರೆಗೆ ಪಂಜಿನ ಮೆರವಣಿಗೆ ನಡೆಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.