ಶನಿವಾರ, ಆಗಸ್ಟ್ 15, 2020
26 °C

ದಶಕವಾದರೂ ಜಾರಿಯಾಗದ ನಗರ ಸಾರಿಗೆ

ಪ್ರಜಾವಾಣಿ ವಾರ್ತೆ/ ಕೆ.ನರಸಿಂಹಮೂರ್ತಿ Updated:

ಅಕ್ಷರ ಗಾತ್ರ : | |

ದಶಕವಾದರೂ ಜಾರಿಯಾಗದ ನಗರ ಸಾರಿಗೆ

ಕೋಲಾರ: ನಗರದಲ್ಲಿ ನಗರ ಸಾರಿಗೆ ಬಸ್ ವ್ಯವಸ್ಥೆ ಎಂದಿನಿಂದ ಜಾರಿಗೆ ಬರುತ್ತದೆ? -ಈ ಪ್ರಶ್ನೆಯನ್ನು ನಗರದ ಜನತೆ 10 ವರ್ಷದಿಂದ ಕೇಳುತ್ತಲೇ ಇದ್ದಾರೆ. ಇದೋ ಈಗ ಬಂತು, ಅದೋ ಆಗ ಬಂತು, ಬಂದೇ ಬಿಟ್ಟಿತು ಬಸ್ ಎಂಬ ಭರವಸೆ ಮಾತುಗಳು ಮಾತ್ರ ನಿಂತಿಲ್ಲ.ನಗರಸಾರಿಗೆಗೆಂದೇ ಇತ್ತೀಚೆಗೆ ಹೊಸ ಬಸ್‌ಗಳು ಬಂದು ರಾಜ್ಯ ರಸ್ತೆ ಸಾರಿಗೆ ಬಸ್ ಡಿಪೊದಲ್ಲಿ ನಿಂತು ಭಣಗುಡುತ್ತಿವೆ. ನಗರದಲ್ಲಿ ಸಂಚರಿಸಬೇಕಾದ ಕೆಲವು ಬಸ್‌ಗಳು ಕೋಲಾರ-ಚಿಂತಾಮಣಿ ಮತ್ತು ಮಾಲೂರು ಮಾರ್ಗಗಳಲ್ಲಿ ಸಂಚರಿಸುತ್ತಿವೆ. ಆ ಬಸ್‌ಗಳನ್ನು ನೋಡುತ್ತಾ ಮತ್ತೆ ಜನ ಅದೇ ಪ್ರಶ್ನೆ ಕೇಳುತ್ತಿದ್ದಾರೆ: ನಗರ ಸಾರಿಗೆ ಬರಲು ಇನ್ನೆಷ್ಟು ದಿನ?2001ರಿಂದಲೂ ಹೀಗೆ ಜನರಲ್ಲಿ ನಗರ ಸಾರಿಗೆ ವ್ಯವಸ್ಥೆಯೆಂಬುದು ಮರೀಚಿಕೆಯಾಗಿ ಉಳಿದಿದೆ. ಹಲವು ವರ್ಷಗಳ ಹಿಂದೆ ಕೆಲವು ದಿನಗಳ ಮಟ್ಟಿಗೆ ನಗರ ಸಾರಿಗೆ ಬಸ್‌ಗಳು ಸಂಚರಿಸಿದ್ದು ಬಿಟ್ಟರೆ ಪೂರ್ಣ ಪ್ರಮಾಣದ ಸೌಲಭ್ಯ ಇನ್ನೂ ದೊರೆತಿಲ್ಲ.ಏ.29: ನಗರಕ್ಕೆ ಏ.29ಕ್ಕೆ ಭೇಟಿ ನೀಡಿದ್ದ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಎನ್.ಮಂಜುನಾಥ ಪ್ರಸಾದ್ ಮೇ 5ರಂದು ಸಾರಿಗೆ ಸಚಿವರು ನಗರ ಸಾರಿಗೆ ವ್ಯವಸ್ಥೆಗೆ ಚಾಲನೆ ನೀಡಲಿದ್ದಾರೆ ಎಂದು ಹೇಳಿದ್ದರು. ಅವರು ಆ ಮಾತು ಹೇಳಿ 2 ತಿಂಗಳಾದರೂ ನಗರ ಸಾರಿಗೆಗೆ ಚಾಲನೆಯೇ ದೊರೆತಿಲ್ಲ. ಮತ್ತೆ ಜೂನ್ 29ರಂದು ಉದ್ಘಾಟನೆಯಾಗಲು ಎರಡನೇ ಬಾರಿಗೆ ಸಿದ್ಧತೆ ನಡೆದಿತ್ತು. ಸರ್ಕಾರದಲ್ಲಿ ಉಂಟಾದ ಬಿಕ್ಕಟ್ಟಿನ ಪರಿಣಾಮ ಕಾರ್ಯಕ್ರಮ ಮುಂದೂಡಲಾಯಿತು.16 ಬಸ್: ನಗರ ಸಾರಿಗೆಗೆಂದು ಸಾರಿಗೆ ಇಲಾಖೆಯು ಕೋಲಾರ ಘಟಕಕ್ಕೆ 16 ಬಸ್‌ಗಳನ್ನು ನೀಡಿದೆ. ಮೊದಲ ಹಂತದಲ್ಲಿ ಬಂದ 6 ಬಸ್‌ಗಳು ನಗರ ಸಾರಿಗೆಗೆಂದೇ ಉದ್ಘಾಟನೆಯಾಗಬೇಕಿತ್ತು. ಆದರೆ ಉದ್ಘಾಟನೆ ದಿಢೀರನೆ ಮುಂದೂಡಿದ ಪರಿಣಾಮ ಅವುಗಳನ್ನು ಗ್ರಾಮಾಂತರ ಸಾರಿಗೆ ಬಸ್‌ಗಳಾಗಿ ಪರಿವರ್ತಿಸಿ, ಕೋಲಾರ-ಚಿಂತಾಮಣಿ-ಮಾಲೂರು ಮಾರ್ಗದಲ್ಲಿ ಸಂಚರಿಸುತ್ತಿವೆ. ಕೆಲವು ದಿನ ಈ ಬಸ್‌ಗಳು ಕೋಲಾರ-ಕೆಜಿಎಫ್ ನಡುವೆ ಸಂಚರಿಸುತ್ತಿದ್ದವು.ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪದೇ ಪದೇ ವರ್ಗಾವಣೆ ಆಗುತ್ತಿರುವುದು ಕೂಡ ನಗರಸಾರಿಗೆ ವಿಳಂಬವಾಗಲು ಕಾರಣ ಎನ್ನುತ್ತದೆ ಒಂದು ಮೂಲ.ಆಟೊರಿಕ್ಷಾ: ನಗರ ಸಾರಿಗೆ ವ್ಯವಸ್ಥೆ ಜಾರಿಗೆ ಬಂದರೆ ಆಟೊರಿಕ್ಷಾ ಚಾಲಕರಿಗೆ ತೊಂದರೆ ಎದುರಾಗುತ್ತದೆ. ಹೀಗಾಗಿ ಅದನ್ನು ಮುಂದೂಡಿ ಎಂದು ಚಾಲಕರು, ಮಾಲೀಕರು ಮನವಿ ಮಾಡಿದ ಪರಿಣಾಮ ಉಸ್ತುವಾರಿ ಸಚಿವ ಆರ್.ವರ್ತೂರು ಪ್ರಕಾಶ್ ಉದ್ಘಾಟನೆ ಮುಂದೂಡಿದ್ದಾರೆ ಎಂಬ ಆರೋಪವೂ ಇದೆ.ಆದರೆ, ಇದು ಸುಳ್ಳು ಆರೋಪ ಎಂಬುದು ಜಿಲ್ಲಾ ಆಟೊ ಚಾಲಕರ ಮತ್ತು ಮಾಲೀಕರ ಸಂಘದ ಗೌರವಾಧ್ಯಕ್ಷ ಕೆ.ವಿ.ಸುರೇಶ್‌ಕುಮಾರ್ ನುಡಿ.ಆಟೊರಿಕ್ಷಾ ಚಾಲಕರಿಗೆ ತೊಂದರೆಯಾಗುತ್ತದೆ ಎಂದು ಸಚಿವರನ್ನು ಭೇಟಿ ಮಾಡಿಲ್ಲ. ಆರೋಗ್ಯಕರ ಸಾರಿಗೆ ವ್ಯವಸ್ಥೆ ನಗರದಲ್ಲಿ ಬರಬೇಕು ಎಂಬುದೇ ನಮ್ಮ ಉದ್ದೇಶ. ಇಲ್ಲದಿದ್ದರೆ ನಾವು ನಗರಸಾರಿಗೆ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳುತ್ತಿದ್ದೆವು ಎನ್ನುತ್ತಾರೆ ಅವರು.6 ಮಾರ್ಗಗಳಲ್ಲಿ ಸಂಚಾರಕ್ಕೆ ಪರವಾನಗಿ ಕೋರಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರಕ್ಕೆ ನಿಗಮವು ಅರ್ಜಿ ಸಲ್ಲಿಸಿದೆ. ಹಿಂದಿನ ಜಿಲ್ಲಾಧಿಕಾರಿ ಮನೋಜ್‌ಕುಮಾರ್ ಮೀನಾ ಅವರ ವರ್ಗಾವಣೆ ಬಳಿಕ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯೇ ನಡೆದಿಲ್ಲ. ಹೀಗಾಗಿ ಬಸ್‌ಗಳ ಸಂಚಾರಕ್ಕೆ ಪರ್ಮಿಟ್ ದೊರೆತಿಲ್ಲ ಎನ್ನುತ್ತವೆ ಮೂಲಗಳು.ಕಾರಣ ಏನೇ ಇರಲಿ. ನಗರದ ಮಂದಿಗೆ  ಸಾರಿಗೆ ಸೌಲಭ್ಯ ಕಲ್ಪಿಸಲೆಂದೇ ಬಸ್‌ಗಳು ಬಂದಿವೆ. ಆದರೆ ಅವುಗಳ ಉದ್ಘಾಟನೆ ಮುಂದೂಡಿ ಸೌಲಭ್ಯವನ್ನು ವಿಳಂಬಗೊಳಿಸುವುದು ಸರಿಯಲ್ಲ. ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು, ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಕೂಡಲೇ ನಿರ್ಧಾರ ಕೈಗೊಳ್ಳಬೇಕು ಎಂಬುದು ನಗರದ ನಿವಾಸಿ ನಾಗರಾಜ ಶೆಣೈ ಅವರ ಆಗ್ರಹ.ಉದ್ಘಾಟನೆಗೆಂದು 10 ದಿನದ ಹಿಂದೆ ಬಂದಿರುವ 10 ಬಸ್‌ಗಳು ಡಿಪೊದಲ್ಲಿ ಒಣಗುತ್ತಿವೆ. ಜನ ಆಟೊರಿಕ್ಷಾಗಳನ್ನೇ ಅವಲಂಬಿಸಿ ಪರದಾಡುತ್ತಿದ್ದಾರೆ. ಉದ್ದೇಶ ಈಡೇರುವುದು ಮುಖ್ಯ. ಹೀಗಾಗಿ ಯಾವುದೇ ಕಾರಣ ಇರಲಿ, ಅದನ್ನು ಬದಿಗಿಟ್ಟು ಅಥವಾ ನಿಗದಿತ ಕಾಲಮಿತಿಯೊಳಗೆ ಪರಿಹರಿಸಿ ಜನರಿಗೆ ಸೌಲಭ್ಯ ಕಲ್ಪಿಸಬೇಕು ಎಂಬುದು ನಿಗಮದ ನೌಕರರ ಸಂಘದ ಪ್ರಮುಖರೊಬ್ಬರ ನುಡಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.